ಪವಿತ್ರಾತ್ಮನ ಪುನರುಜ್ಜೀವನ ಮತ್ತು ಹೊಸ ಒಡಂಬಡಿಕೆಯ ದಿನಗಳಲ್ಲಿಎಚ್ಚರಿಸುವುದು(ಎಬ್ಬಿಸು)

ಭಾಗ 2

ಅಪೊಸ್ತಲರ ಕೃತ್ಯಗಳು 6 ಸ್ತೆಫನನ ಪರಿಚಯ

8 ಸ್ತೆಫನನು ದೇವರ ಕೃಪೆಯಿಂದಲೂ ಬಲದಿಂದಲೂ ತುಂಬಿದವನಾಗಿ ಜನರಲ್ಲಿ ಮಹಾ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಾ ಇದ್ದನು. 
 
9 ಆದರೆ ಲಿಬೆರ್ತೀನರೆಂಬವರ ಸಮಾಜದವರಲ್ಲಿಯೂ ಕುರೇನ್ಯದವರ ಮತ್ತು ಅಲೆಕ್ಸಾಂದ್ರಿಯದವರ ಸಮಾಜದವರಲ್ಲಿಯೂ ಕಿಲಿಕ್ಯ ಆಸ್ಯ ಸೀಮೆಗಳಿಂದ ಬಂದವರ ಸಮಾಜದವರಲ್ಲಿಯೂ ಕೆಲವರು ಎದ್ದು ಸ್ತೆಫನನ ಸಂಗಡ ತರ್ಕಮಾಡುತ್ತಾ ಇರಲು 
 
10 ಅವನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲಾರದೆ ಹೋದರು.

{ಲೂಕ 21:12ಆದರೆ ಇವೆಲ್ಲಾ ನಡೆಯುವದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಗಳ ಅಧಿಕಾರಸ್ಥರ ವಶಕ್ಕೆ ಕೊಟ್ಟು ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ತೆಗೆದುಕೊಂಡುಹೋಗಿ ಹಿಂಸೆಪಡಿಸುವರು. 

13 ಇದು ಸಾಕ್ಷಿಹೇಳುವದಕ್ಕೆ ನಿಮಗೆ ಅನುಕೂಲವಾಗುವದು. 

14 ಆದದರಿಂದ ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ನಾವು ಮುಂದಾಗಿ ಯೋಚಿಸುವದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ. 

15 ಯಾಕಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರುನಿಲ್ಲುವದಕ್ಕೂ ಎದುರುಮಾತಾಡುವದಕ್ಕೂ ಆಗದಂಥ ಬಾಯನ್ನೂ ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ.

16 ಆದರೆ ತಂದೆತಾಯಿಗಳೂ ಅಣ್ಣತಮ್ಮಂದಿರೂ ಬಂಧುಬಾಂಧವರೂ ಸ್ನೇಹಿತರೂ ನಿಮ್ಮನ್ನು ಒಪ್ಪಿಸಿಕೊಡುವರು; ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. 

17 ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. 18ಆದರೂ ನಿಮ್ಮದೊಂದು ತಲೆಕೂದಲಾದರೂ ನಾಶವಾಗುವದಿಲ್ಲ. 

19 ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ. 

ಲೂಕ 12:11ಅವರು ನಿಮ್ಮನ್ನು ಸಭಾಮಂದಿರಗಳ ಅಧ್ಯಕ್ಷರ ಮುಂದಕ್ಕೂ ಅಧಿಕಾರಿಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ಹಿಡುಕೊಂಡು ಹೋಗುವಾಗ ಹೇಗೆ ಉತ್ತರ ಕೊಡಬೇಕು? ಏನು ಉತ್ತರಕೊಡಬೇಕು? ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ. 

12 ಯಾಕಂದರೆ ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು ಅಂದನು.}

11 ಆಗ ಅವರು ಕೆಲವು ಮನುಷ್ಯರಿಗೆ – ಇವನು ಮೋಶೆಗೆ ವಿರೋಧವಾಗಿಯೂ ದೇವರಿಗೆ ವಿರೋಧವಾಗಿಯೂ ದೂಷಣೆಯ ಮಾತುಗಳನ್ನಾಡುವದನ್ನು ಕೇಳಿದೆವೆಂದು ಹೇಳಿರಿ ಎಂಬದಾಗಿ ಬೋಧಿಸಿ 

12 ಜನರನ್ನೂ ಹಿರಿಯರನ್ನೂ ಶಾಸ್ತ್ರಿಗಳನ್ನೂ ರೇಗಿಸಿದರು; ಮತ್ತು ಬಂದು ಅವನನ್ನು ಹಿಡಿದು ಹಿರೀಸಭೆಗೆ ತೆಗೆದುಕೊಂಡು ಹೋಗಿ 

13 ಸುಳ್ಳುಸಾಕ್ಷಿಗಳನ್ನು ಕರತಂದು ನಿಲ್ಲಿಸಿದರು. ಆ ಸಾಕ್ಷಿಗಳು – ಈ ಮನುಷ್ಯನು ಈ ಪರಿಶುದ್ಧವಾದ ಸ್ಥಳಕ್ಕೆ ವಿರೋಧವಾಗಿಯೂ ಧರ್ಮಶಾಸ್ತ್ರಕ್ಕೆ ವಿರೋಧವಾಗಿಯೂ ಮಾತಾಡುವದನ್ನು ಬಿಡುವದೇ ಇಲ್ಲ. 

14 ಆ ನಜರೇತಿನ ಯೇಸು ಈ ದೇವಾಲಯವನ್ನು ಕೆಡವಿ ಮೋಶೆ ನಮಗೆ ನೇಮಿಸಿರುವ ಆಚಾರಗಳನ್ನು ಬೇರೆ ಮಾಡುವನೆಂಬದಾಗಿ ಇವನು ಹೇಳುವದನ್ನು ನಾವು ಕೇಳಿದ್ದೇವೆ ಅಂದರು. 

15 ಆಗ ಹಿರೀಸಭೆಯಲ್ಲಿ ಕೂತಿದ್ದವರೆಲ್ಲರು ಅವನನ್ನು ದೃಷ್ಟಿಸಿ ನೋಡಿ ಅವನ ಮುಖವು ದೇವದೂತನ ಮುಖದಂತೆ ಇರುವದನ್ನು ಕಂಡರು.

ಅಪೊಸ್ತಲರ ಕೃತ್ಯಗಳು 7 ಸ್ತೆಫನನ ಗುರುತು : ಅಬ್ರಹಾಮನ ಕರೆ

1 ಆಗ ಮಹಾಯಾಜಕನು – ಈ ಮಾತುಗಳು ಹೌದೋ ಎಂದು ಕೇಳಿದ್ದಕ್ಕೆ ಅವನು – ಸಹೋದರರೇ, ತಂದೆಗಳೇ, ಕೇಳಿರಿ – 
 
2 ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಪ್ರಭಾವ ಸ್ವರೂಪನಾದ ದೇವರು 
 
3 ಅವನಿಗೆ ಕಾಣಿಸಿಕೊಂಡು – ನಿನ್ನ ಸ್ವದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು ಎಂದು ಹೇಳಿದನು. 
 
4 ಆಗ ಅವನು ಕಸ್ದೀಯರ ದೇಶದಿಂದ ಹೊರಟುಹೋಗಿ ಖಾರಾನಿನಲ್ಲಿ ವಾಸವಾಗಿದ್ದನು. ಅವನ ತಂದೆ ಸತ್ತಮೇಲೆ ದೇವರು ಅವನನ್ನು ಅಲ್ಲಿಂದ ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬರಮಾಡಿದನು. 
 
5 ಇದರಲ್ಲಿ ಅವನಿಗೆ ಕಾಲಿಡುವಷ್ಟು ಭೂಮಿಯನ್ನು ಸ್ವಾಸ್ತ್ಯವಾಗಿ ಕೊಡದೆ ಅವನಿಗೆ ಮಕ್ಕಳು ಇನ್ನೂ ಇಲ್ಲದಿರುವಾಗ – ಈ ದೇಶವನ್ನು ನಿನಗೂ ನಿನ್ನ ಹಿಂದೆ ಬರುವ ನಿನ್ನ ಸಂತತಿಗೂ ಸ್ವಾಸ್ತ್ಯವಾಗಿ ಕೊಡುವೆನು ಎಂದು ಅವನಿಗೆ ವಾಗ್ದಾನ ಮಾಡಿದನು. 
 
6 ಇದಲ್ಲದೆ ದೇವರು ಹೇಳಿದ್ದೇನಂದರೆ – ನಿನ್ನ ಸಂತಾನದವರು ಅನ್ಯದೇಶದಲ್ಲಿ ಪ್ರವಾಸಿಗಳಾಗಿರುವರು. ಆ ಅನ್ಯದೇಶದವರು ಅವರನ್ನು ದಾಸರನ್ನಾಗಿ ಮಾಡಿಕೊಂಡು ನಾನೂರು ವರುಷಗಳ ತನಕ ಕ್ರೂರವಾಗಿ ನಡಿಸುವರು. 
 
7 ಮತ್ತು ನಿನ್ನ ಸಂತಾನದವರು ದಾಸರಾಗಿ ಸೇವಿಸುವ ಅನ್ಯಜನರಿಗೆ ನಾನೇ ನ್ಯಾಯತೀರಿಸುವೆನು. ಆಮೇಲೆ ಅವರು ಹೊರಟುಬಂದು ಈ ಸ್ಥಳದಲ್ಲಿ ನನ್ನನ್ನು ಆರಾಧಿಸುವರು ಎಂಬದೇ. 
 
8 ಇದಲ್ಲದೆ ದೇವರು ಅವನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡು ಅದಕ್ಕೆ ಗುರುತಾಗಿ ಸುನ್ನತಿಯನ್ನು ನೇಮಿಸಿದನು. ಅದಕ್ಕನುಸಾರವಾಗಿ ಅಬ್ರಹಾಮನು ಇಸಾಕನನ್ನು ಪಡೆದು ಎಂಟನೆಯ ದಿವಸದಲ್ಲಿ ಅವನಿಗೆ ಸುನ್ನತಿಮಾಡಿದನು. ಮುಂದೆ ಇಸಾಕನು ಯಾಕೋಬನನ್ನು ಪಡೆದನು, ಯಾಕೋಬನು ಹನ್ನೆರಡು ಮಂದಿ ಮೂಲಪಿತೃಗಳನ್ನು ಪಡೆದನು.
 

ಐಗುಪ್ತದ ಮೂಲಪಿತೃಗಳು

9 ಮೂಲಪಿತೃಗಳು ಹೊಟ್ಟೇಕಿಚ್ಚಿನಿಂದ ಯೋಸೇಫನನ್ನು ಐಗುಪ್ತದೇಶಕ್ಕೆ ಮಾರಿಬಿಟ್ಟರು. 
 
10 ಅಲ್ಲಿ ದೇವರು ಅವನ ಸಂಗಡ ಇದ್ದು ಅವನಿಗೆ ಬಂದ ಎಲ್ಲಾ ಸಂಕಟಗಳಿಂದ ಅವನನ್ನು ಬಿಡಿಸಿ ಐಗುಪ್ತದೇಶದ ಅರಸನಾದ ಫರೋಹನ ಸಮ್ಮುಖದಲ್ಲಿ ದಯಾಪಾತ್ರನೂ ಜ್ಞಾನವುಳ್ಳವನೂ ಆಗಿರುವಂತೆ ಅನುಗ್ರಹಿಸಿದನು. ಫರೋಹನು ಅವನನ್ನು ಐಗುಪ್ತದೇಶದ ಮೇಲೆಯೂ ತನ್ನ ಎಲ್ಲಾ ಮನೆಯ ಮೇಲೆಯೂ ಅಧಿಕಾರಿಯಾಗಿ ಇಟ್ಟನು. 
 
11 ಆಗ ಐಗುಪ್ತ ಕಾನಾನ್‍ದೇಶಗಳಲ್ಲಿ ಎಲ್ಲೆಲ್ಲಿಯೂ ಬರ ಬಂದು ದೊಡ್ಡ ಸಂಕಟವಾಯಿತು; ನಮ್ಮ ಪಿತೃಗಳಿಗೆ ಕಾಳುಕಡ್ಡಿ ಸಿಕ್ಕಲಿಲ್ಲ. 
 
12 ಆದರೆ ಐಗುಪ್ತದೇಶದಲ್ಲಿ ದವಸಧಾನ್ಯ ಉಂಟೆಂಬದನ್ನು ಯಾಕೋಬನು ಕೇಳಿ ನಮ್ಮ ಪಿತೃಗಳನ್ನು ಮೊದಲು ಒಂದು ಸಾರಿ ಅಲ್ಲಿಗೆ ಕಳುಹಿಸಿದನು. 
 
13 ಅವರು ಎರಡನೆಯ ಸಾರಿ ಬಂದಾಗ ಯೋಸೇಫನು ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡಿದನು. ಮತ್ತು ಯೋಸೇಫನ ವಂಶವು ಫರೋಹನಿಗೆ ತಿಳಿಯ ಬಂತು. 
 
14 ಆಮೇಲೆ ಯೋಸೇಫನು ತನ್ನ ತಂದೆಯಾದ ಯಾಕೋಬನನ್ನೂ ತನ್ನ ಎಲ್ಲಾ ಬಂಧುಬಳಗವನ್ನೂ ಒಟ್ಟಿಗೆ ಎಪ್ಪತ್ತೈದು ಮಂದಿಯನ್ನು ಕರೆಯಿಸಿಕೊಳ್ಳಲಾಗಿ ಯಾಕೋಬನು ಐಗುಪ್ತದೇಶಕ್ಕೆ ಇಳಿದುಹೋದನು. 
 
15 ಅಲ್ಲಿ ಅವನೂ ನಮ್ಮ ಪಿತೃಗಳೂ ತೀರಿಹೋದರು. 
 
16 ಅವರನ್ನು ಶೇಕೆಮಿಗೆ ತೆಗೆದುಕೊಂಡು ಹೋಗಿ ಅಲ್ಲಿ ಹಮೋರನ ಮಕ್ಕಳಿಂದ ಅಬ್ರಹಾಮನು ಬೆಳ್ಳಿಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು.
 

ಮೋಶೆಯ ಮೂಲಕ ದೇವರು ಇಸ್ರಾಯೇಲರನ್ನು ಬಿಡಿಸಿದ್ದು

17 ಆದರೆ ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ಕಾಲವು ಹತ್ತರಕ್ಕೆ ಬರುತ್ತಿರುವಾಗ ನಮ್ಮ ಜನರು ಐಗುಪ್ತದೇಶದಲ್ಲಿ ಹೆಚ್ಚಿ ಬಹಳವಾದರು. 
 
18 ಕಡೆಗೆ ಯೋಸೇಫನನ್ನು ಅರಿಯದ ಬೇರೊಬ್ಬ ಅರಸನು ಆಳಿಕೆಗೆ ಬಂದನು. 
 
19 ಈ ಅರಸನು ನಮ್ಮ ಜನರಲ್ಲಿ ಕುಯುಕ್ತಿ ಮಾಡಿ ಅವರ ಕೂಸುಗಳನ್ನು ಜೀವದಿಂದುಳಿಸಬಾರದೆಂದು ಹೊರಗೆ ಹಾಕಿಸಿ ನಮ್ಮ ಪಿತೃಗಳನ್ನು ಕ್ರೂರವಾಗಿ ನಡಿಸಿದನು. 
 
20 ಆ ಸಮಯದಲ್ಲೇ ಮೋಶೆಯು ಹುಟ್ಟಿದನು. ಅವನು ದಿವ್ಯಸುಂದರನಾಗಿದ್ದನು; ಮತ್ತು ತಂದೆಯ ಮನೆಯಲ್ಲಿ ಮೂರು ತಿಂಗಳು ಸಾಕಲ್ಪಟ್ಟನು. 
 
21 ಆಮೇಲೆ ಅವನನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಮಗನಾಗಿ ಸಾಕಿದಳು. 
 
22 ಮೋಶೆಯು ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥನಾದನು. 
 
23 ಅವನಿಗೆ ನಾಲ್ವತ್ತು ವರುಷ ವಯಸ್ಸು ತುಂಬುತ್ತಾ ಇರಲು ಇಸ್ರಾಯೇಲ್ ವಂಶಸ್ಥರಾದ ತನ್ನ ಸಹೋದರರನ್ನು ಹೋಗಿನೋಡಬೇಕೆಂಬ ಆಶೆಯು ಅವನ ಹೃದಯದಲ್ಲಿ ಹುಟ್ಟಿತು. 
 
24 ಅವರಲ್ಲಿ ಒಬ್ಬನಿಗೆ ಅನ್ಯಾಯವಾಗುವದನ್ನು ಅವನು ನೋಡಿ ಅವನಿಗೆ ಆಶ್ರಯಕೊಟ್ಟು ಪೀಡಿಸುವ ಐಗುಪ್ತ್ಯನನ್ನು ಹೊಡೆದುಹಾಕಿ ಮುಯ್ಯಿಗೆ ಮುಯ್ಯಿ ತೀರಿಸಿದನು. 
 
25 ದೇವರು ತನ್ನ ಕೈಯಿಂದ ಬಿಡುಗಡೆಯನ್ನು ಉಂಟುಮಾಡುತ್ತಾನೆಂಬದು ತನ್ನ ಸಹೋದರರಿಗೆ ತಿಳಿದುಬರುವದೆಂದು ಭಾವಿಸಿದನು; ಆದರೆ ಅವರು ಹಾಗೆ ತಿಳುಕೊಳ್ಳಲಿಲ್ಲ. 
 
26 ಮರುದಿನ ತಾವು ತಾವೇ ಹೊಡೆದಾಡಿಕೊಳ್ಳುತ್ತಿರುವಾಗ ಅವನು ಎದುರಾಗಿ ಬಂದು – ಜನರೇ, ನೀವು ಸಹೋದರರಲ್ಲವೇ? ನೀವೇಕೆ ಒಬ್ಬರಿಗೊಬ್ಬರು ಅನ್ಯಾಯಮಾಡುತ್ತೀರಿ ಎಂದು ಹೇಳಿ ಅವರನ್ನು ಸಮಾಧಾನಪಡಿಸಬೇಕೆಂದಿದ್ದನು. 
 
27 ಆದರೆ ತನ್ನ ಸ್ವಕುಲದವನಿಗೆ ಅನ್ಯಾಯಮಾಡುತ್ತಿದ್ದವನು – ನಿನ್ನನ್ನು ನಮ್ಮ ಮೇಲೆ ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರು? 
 
28 ನಿನ್ನೆ ಆ ಐಗುಪ್ತ್ಯನನ್ನು ಕೊಂದಂತೆ ನನ್ನನ್ನೂ ಕೊಲ್ಲಬೇಕೆಂದಿದ್ದೀಯೋ ಎಂದು ಅವನನ್ನು ನೂಕಿಬಿಟ್ಟನು. 
 
29 ಈ ಮಾತನ್ನು ಕೇಳಿ ಮೋಶೆಯು ಓಡಿಹೋಗಿ ಮಿದ್ಯಾನ್ ದೇಶದಲ್ಲಿ ಪ್ರವಾಸಿಯಾದನು. ಅಲ್ಲಿ ಇಬ್ಬರು ಗಂಡುಮಕ್ಕಳನ್ನು ಪಡೆದನು.
 
30 ನಾಲ್ವತ್ತು ವರುಷ ತುಂಬಿದ ಮೇಲೆ ದೇವದೂತನು ಸೀನಾಯಿಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು. 
 
31 ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ಚೆನ್ನಾಗಿ ನೋಡಬೇಕೆಂದು ಹತ್ತಿರ ಬರಲು
 
32 ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮ ಇಸಾಕ ಯಾಕೋಬರ ದೇವರು ಎಂದು ಕರ್ತನ ಶಬ್ದವುಂಟಾಯಿತು. ಆಗ ಮೋಶೆಯು ನಡುಗುತ್ತಾ ಸ್ಥಿರವಾಗಿ ನೋಡುವದಕ್ಕೆ ಧೈರ್ಯವಿಲ್ಲದವನಾದನು. 
 
33 ಮತ್ತು ಕರ್ತನು ಅವನಿಗೆ – ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿ. 
 
34 ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದುಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತದೇಶಕ್ಕೆ ಕಳುಹಿಸುತ್ತೇನೆ, ಬಾ, ಎಂದು ಹೇಳಿದನು.
 
35 ಅವರು ಯಾವ ಮೋಶೆಯನ್ನು – ನಿನ್ನನ್ನು ಅಧಿಕಾರಿಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಇಟ್ಟವರು ಯಾರೆಂದು ಹೇಳಿ ಬೇಡವೆಂದರೋ ಅವನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿಯೂ ಬಿಡುಗಡೆಮಾಡುವವನನ್ನಾಗಿಯೂ ನೇಮಿಸಿದನು. 
 
36 ಅವನೇ ಐಗುಪ್ತದೇಶದಲ್ಲಿಯೂ ಕೆಂಪು ಸಮುದ್ರದಲ್ಲಿಯೂ ನಾಲ್ವತ್ತು ವರುಷ ಅಡವಿಯಲ್ಲಿಯೂ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಾ ಅವರನ್ನು ನಡಿಸಿಕೊಂಡು ಬಂದವನು. 
 

ಇಸ್ರಾಯೇಲರು ದೇವರಿಗೆ ವಿರುದ್ದವಾದದ್ದು

37 ಆ ಮೋಶೆಯೇ – ದೇವರು ನನ್ನನ್ನು ಏರ್ಪಡಿಸಿದಂತೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಏರ್ಪಡಿಸಿಕೊಡುವನು ಎಂದು ಇಸ್ರಾಯೇಲ್ ಜನರಿಗೆ ಹೇಳಿದವನು. 
 
38 ಅವನೇ ಸೀನಾಯಿಬೆಟ್ಟದಲ್ಲಿ ತನ್ನೊಡನೆ ಮಾತಾಡಿದ ದೂತನಿಗೂ ನಮ್ಮ ಪಿತೃಗಳಿಗೂ ಅಡವಿಯಲ್ಲಿದ್ದ ಸಭೆಯೊಳಗೆ ಮಧ್ಯಸ್ಥನಾಗಿದ್ದು ಜೀವಕರವಾದ ದೇವೋಕ್ತಿಗಳನ್ನು ಹೊಂದಿ ನಮಗೆ ಕೊಟ್ಟವನು. 
 
39 ಆದರೆ ನಮ್ಮ ಪಿತೃಗಳು ಅವನ ಮಾತುಗಳನ್ನು ಕೇಳುವದಕ್ಕೆ ಮನಸ್ಸಿಲ್ಲದವರಾಗಿ ಅವನನ್ನು ತಳ್ಳಿ ಬಿಟ್ಟು ತಿರಿಗಿ ಐಗುಪ್ತದೇಶದ ಕಡೆಗೆ ಮನಸ್ಸಿಟ್ಟರು. 
 
40 ಅವರು ಆರೋನನಿಗೆ – ಐಗುಪ್ತದೇಶದಿಂದ ನಮ್ಮನ್ನು ಕರಕೊಂಡು ಬಂದ ಆ ಮೋಶೆಯು ಏನಾದನೋ ಗೊತ್ತಿಲ್ಲ, ನಮ್ಮ ಮುಂದುಗಡೆಯಲ್ಲಿ ಹೋಗುವದಕ್ಕೆ ದೇವರುಗಳನ್ನು ನಮಗೆ ಮಾಡಿಕೊಡು ಎಂದು ಹೇಳಿದರು. 
 
41 ಆ ದಿನಗಳಲ್ಲಿ ಅವರು ಒಂದು ಬಸವನನ್ನು ಮಾಡಿ ಆ ವಿಗ್ರಹಕ್ಕೆ ಬಲಿಯನ್ನರ್ಪಿಸಿ ತಮ್ಮ ಕೈಗಳಿಂದ ಮಾಡಿದ ವಸ್ತುಗಳಲ್ಲಿ ಉಲ್ಲಾಸಪಟ್ಟರು. 
 
42 ಆದರೆ ದೇವರು ಅವರಿಗೆ ವಿಮುಖನಾಗಿ ಆಕಾಶದ ನಕ್ಷತ್ರ ಗಣವನ್ನು ಪೂಜಿಸುವದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವದೇನಂದರೆ –
ಇಸ್ರಾಯೇಲ್ ವಂಶದವರೇ, ನೀವು ಅರಣ್ಯದಲ್ಲಿದ್ದ ನಾಲ್ವತ್ತು ವರುಷ
ನನಗೆ ಯಜ್ಞಗಳನ್ನೂ ಬಲಿಗಳನ್ನೂ ಅರ್ಪಿಸುತ್ತಿದ್ದಿರೋ? ಇಲ್ಲವಲ್ಲಾ;
 
43 ಅದಕ್ಕೆ ಬದಲಾಗಿ ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು
ಅಂದರೆ ಮೊಲೋಖನ ಗುಡಾರವನ್ನೂ
ರೊಂಫಾ ದೇವತೆಯ ನಕ್ಷತ್ರರೂಪವನ್ನೂ ಹೊತ್ತುಕೊಂಡು ಹೋದಿರಿ.
ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಗಡೀಪಾರು ಮಾಡುವೆನು ಎಂಬದು.

ದೇವರ ನಿಜವಾದ ಗುಡಾರ

44 ದೇವದರ್ಶನ ಗುಡಾರವು ಅಡವಿಯೊಳಗೆ ನಮ್ಮ ಪಿತೃಗಳ ಬಳಿಯಲ್ಲಿ ಇತ್ತು. ಮೋಶೆಯ ಸಂಗಡ ಮಾತಾಡಿದವನು – ನೀನು ನೋಡಿದ ಮಾದರಿಯ ಪ್ರಕಾರವೇ ಅದನ್ನು ಮಾಡಿಸಬೇಕೆಂದು ನೇಮಿಸಿದ್ದನು. 
 
45 ನಮ್ಮ ಹಿರಿಯರು ಅದನ್ನು ತಮ್ಮ ತಂದೆಗಳಿಂದ ಹೊಂದಿದರು; ಅವರು ಯೆಹೋಶುವನ ಹಿಂದೆ ಬಂದು ದೇವರು ತಮ್ಮ ಮುಂದೆ ಹೊರಡಿಸಿದ ಅನ್ಯಜನಗಳ ದೇಶವನ್ನು ಸ್ವಾಧೀನಮಾಡಿಕೊಂಡಾಗ ಆ ಗುಡಾರವನ್ನು ಕೂಡ ತಂದರು. ಅದು ದಾವೀದನ ಕಾಲದವರೆಗೂ ಇಲ್ಲೇ ಇತ್ತು. 
 
46 ದಾವೀದನು ದೇವರ ಸನ್ನಿಧಾನದಲ್ಲಿ ಕೃಪೆಹೊಂದಿ ಯಾಕೋಬನ ವಂಶದವರಿಗೋಸ್ಕರ ದೇವಾಲಯವನ್ನು ಕಟ್ಟಿಸುವದಕ್ಕೆ ಅಪ್ಪಣೆಯಾಗಬೇಕೆಂದು ಕೇಳಿಕೊಂಡನು. 
 
47 ಆದರೆ ಆತನಿಗೋಸ್ಕರ ಮನೆಯನ್ನು ಕಟ್ಟಿಸಿದವನು ಸೊಲೊಮೋನನು. 
 
48 ಆದರೂ ಪರಾತ್ಪರನು ಕೈಯಿಂದ ಕಟ್ಟಿದ ಮನೆಗಳಲ್ಲಿ ವಾಸಮಾಡುವವನಲ್ಲ.
 
49 ಆಕಾಶವು ನನಗೆ ಸಿಂಹಾಸನ,
ಭೂಮಿಯು ನನ್ನ ಪಾದಗಳಿಗೆ ಪೀಠ.
ನೀವು ನನಗೆ ಎಂಥ ಮನೆಯನ್ನು ಕಟ್ಟಿಕೊಡುವಿರಿ?
ನನ್ನ ವಿಶ್ರಾಂತಿಗೆ ತಕ್ಕ ಸ್ಥಳವು ಯಾವದು?
 
50 ಇವುಗಳನ್ನೆಲ್ಲಾ ನನ್ನ ಕೈಯೇ ನಿರ್ಮಿಸಿತಲ್ಲಾ ಎಂಬದಾಗಿ ಕರ್ತನು ಹೇಳುತ್ತಾನೆ
ಎಂದು ಪ್ರವಾದಿಯು ನುಡಿದಿದ್ದಾನೆ.
 

ಇಸ್ರಾಯೇಲರು ಪವಿತ್ರಾತ್ಮನನ್ನು ಎದುರಿಸಿದ್ದು

 
51 ಚಂಡಿಗಳೇ, ಮನಶ್ಶುದ್ಧಿಯೂ ಕರ್ಣಶುದ್ಧಿಯೂ ಇಲ್ಲದವರೇ, ನಿಮ್ಮ ಪಿತೃಗಳು ಹೇಗೋ ಹಾಗೆಯೇ ನೀವೂ ಯಾವಾಗಲೂ ಪವಿತ್ರಾತ್ಮನನ್ನು ಎದುರಿಸುವವರಾಗಿದ್ದೀರಿ. 
 
52 ಪ್ರವಾದಿಗಳಲ್ಲಿ ನಿಮ್ಮ ಪಿತೃಗಳು ಹಿಂಸೆಪಡಿಸದವರು ಯಾರಿದ್ದಾರೆ? ಅವರು ಆ ನೀತಿ ಸ್ವರೂಪನ ಆಗಮನದ ವಿಷಯದಲ್ಲಿ ಮುಂತಿಳಿಸಿದವರನ್ನು ಕೊಂದರು, ನೀವು ಈಗ ಆತನನ್ನು ಹಿಡುಕೊಟ್ಟು ಕೊಂದವರಾದಿರಿ. 
 
53 ದೇವದೂತರ ಮೂಲಕ ನೇಮಕವಾದ ಧರ್ಮಶಾಸ್ತ್ರವನ್ನು ನೀವು ಹೊಂದಿದವರಾದರೂ ಅದನ್ನು ಅನುಸರಿಸುವದಿಲ್ಲ ಎಂದು ಹೇಳಿದನು.

ಹುತಾತ್ಮ ಸ್ತೆಫನ

54 ಈ ಮಾತುಗಳನ್ನು ಕೇಳಿ ಅವರು ರೌದ್ರಮನಸ್ಸುಳ್ಳವರಾಗಿ ಅವನ ಮೇಲೆ ಹಲ್ಲು ಕಡಿದರು. 
 
55 ಆದರೆ ಅವನು ಪವಿತ್ರಾತ್ಮಭರಿತನಾಗಿ ಆಕಾಶದ ಕಡೆಗೆ ದೃಷ್ಟಿಸಿನೋಡಿ ದೇವರ ಪ್ರಭಾವವನ್ನೂ ದೇವರ ಬಲಗಡೆಯಲ್ಲಿ ನಿಂತಿದ್ದ ಯೇಸುವನ್ನೂ ಕಂಡು – 
 
56 ಅಗೋ, ಆಕಾಶವು ತೆರೆದಿರುವದನ್ನೂ ಮನುಷ್ಯಕುಮಾರನು ದೇವರ ಬಲಗಡೆಯಲ್ಲಿ ನಿಂತಿರುವದನ್ನೂ ನೋಡುತ್ತೇನೆ ಎಂದು ಹೇಳಿದನು. 
 
57 ಆದರೆ ಅವರು ಮಹಾ ಶಬ್ದದಿಂದ ಕೂಗಿ ಕಿವಿಗಳನ್ನು ಮುಚ್ಚಿಕೊಂಡು ಒಟ್ಟಾಗಿ ಅವನ ಮೇಲೆ ಬಿದ್ದು 
 
58 ಅವನನ್ನು ಊರ ಹೊರಕ್ಕೆ ನೂಕಿಕೊಂಡು ಹೋಗಿ ಕೊಲ್ಲುವದಕ್ಕೆ ಕಲ್ಲೆಸೆದರು. ಸಾಕ್ಷಿಯವರು ತಮ್ಮ ಬಟ್ಟೆಗಳನ್ನು ತೆಗೆದು ಸೌಲನೆಂಬ ಒಬ್ಬ ಯೌವನಸ್ಥನ ಕಾಲುಗಳ ಬಳಿಯಲ್ಲಿ ಇಟ್ಟರು. 
 
59 ಅವರು ಸ್ತೆಫನನ ಮೇಲೆ ಕಲ್ಲೆಸೆಯುತ್ತಾ ಇರಲು ಅವನು ಕರ್ತನ ಹೆಸರನ್ನು ಹೇಳಿ – 
 
60 ಯೇಸುಸ್ವಾಮಿಯೇ, ನನ್ನಾತ್ಮವನ್ನು ಸೇರಿಸಿಕೋ ಎಂದು ಪ್ರಾರ್ಥಿಸಿ ಮೊಣಕಾಲೂರಿ – ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡವೆಂದು ಮಹಾಶಬ್ದದಿಂದ ಕೂಗಿದನು.
 

ಅಪೊಸ್ತಲರ ಕೃತ್ಯಗಳು 8  ಸೌಲನು ಸಭೆಗೆ ಕಿರುಕುಳ ನೀಡಿದ್ದು

 
1 ಇದನ್ನು ಹೇಳಿ ನಿದ್ರೆಹೋದನು. ಸೌಲನು ಅವನ ಕೊಲೆಗೆ ಸಮ್ಮತಿಸುವವನಾಗಿದ್ದನು.
ಆ ದಿವಸದಲ್ಲಿ ಯೆರೂಸಲೇಮಿನಲ್ಲಿದ್ದ ಸಭೆಗೆ ದೊಡ್ಡ ಹಿಂಸೆ ಉಂಟಾಯಿತು. ಅಪೊಸ್ತಲರು ಹೊರತಾಗಿ ಎಲ್ಲರು ಯೂದಾಯ ಸಮಾರ್ಯ ಸೀಮೆಗಳಲ್ಲಿ ಚದರಿಹೋದರು. 
 
2 ಭಕ್ತರಾದ ಜನರು ಸ್ತೆಫನನನ್ನು ಹೂಣಿಟ್ಟು ಅವನಿಗೋಸ್ಕರ ಬಹಳವಾಗಿ ಗೋಳಾಡಿದರು. 
 
3 ಆದರೆ ಸೌಲನು ಮನೆಮನೆಗಳಲ್ಲಿ ಹೊಕ್ಕು ಗಂಡಸರನ್ನೂ ಹೆಂಗಸರನ್ನೂ ಎಳಕೊಂಡು ಬಂದು ಸೆರೆಮನೆಗೆ ಹಾಕಿಸಿ ಸಭೆಯನ್ನು ಹಾಳು ಮಾಡುತ್ತಿದ್ದನು.
ಫಿಲಿಪ್ಪನು ಸಮಾರ್ಯದಲ್ಲಿ ಸುವಾರ್ತೆಯನ್ನು ಪ್ರಸಂಗಿಸಿದ್ದು; ಸೀಮೋನನೆಂಬ ಮಂತ್ರವಾದಿಯನ್ನು ಕುರಿತದ್ದು

 ಕ್ರಿಸ್ತನ ಬಗ್ಗೆ ಸಮಾರ್ಯದಲ್ಲೆ ಭೋದಿಸಿದ್ದು

4 ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾವಾಕ್ಯವನ್ನು ಸಾರುತ್ತಿದ್ದರು. 
 
5 ಫಿಲಿಪ್ಪನು ಸಮಾರ್ಯವೆಂಬ ಪಟ್ಟಣಕ್ಕೆ ಹೋಗಿ ಕ್ರಿಸ್ತನನ್ನು ಅಲ್ಲಿರುವವರಿಗೆ ಪ್ರಕಟಿಸಿದನು. 

6
ಗುಂಪಾಗಿ ಕೂಡಿದ ಜನಗಳು ಫಿಲಿಪ್ಪನ ಮಾತುಗಳನ್ನು ಕೇಳಿ ಅವನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಅವನು ಹೇಳಿದ ಸಂಗತಿಗಳಿಗೆ ಏಕಮನಸ್ಸಾಗಿ ಲಕ್ಷ್ಯಕೊಟ್ಟರು. 
 
7ಯಾಕಂದರೆ ಅನೇಕರೊಳಗಿಂದ ದೆವ್ವಗಳು ಮಹಾಶಬ್ದದಿಂದ ಕೂಗಿ ಹೊರಗೆ ಬಂದವು; ಮತ್ತು ಅನೇಕ ಪಾರ್ಶ್ವವಾಯು ರೋಗಿಗಳೂ ಕುಂಟರೂ ಸ್ವಸ್ಥಮಾಡಲ್ಪಟ್ಟರು. 
 
8 ಆ ಪಟ್ಟಣದಲ್ಲಿ ಬಹು ಸಂತೋಷವಾಯಿತು.

ಮಾಂತ್ರಿಕನ ನಂಬಿಕೆ

9 ಆದರೆ ಕೆಲವು ಕಾಲದಿಂದ ಆ ಪಟ್ಟಣದಲ್ಲಿದ್ದ ಸೀಮೋನನೆಂಬ ಒಬ್ಬ ಮನುಷ್ಯನು ತಾನು ಏನೋ ಒಬ್ಬ ಮಹಾತ್ಮನೆಂದು ಹೇಳಿಕೊಂಡು ಮಂತ್ರತಂತ್ರಗಳನ್ನು ನಡಿಸಿ ಸಮಾರ್ಯದ ಜನರಲ್ಲಿ ಬೆರಗನ್ನು ಹುಟ್ಟಿಸುತ್ತಿದ್ದನು. 
 
10 ಚಿಕ್ಕವರು ಮೊದಲುಗೊಂಡು ದೊಡ್ಡವರ ಪರ್ಯಂತರ ಎಲ್ಲರೂ – ಇವನು ಮಹಾ ಶಕ್ತಿ ಎನಿಸಿಕೊಂಡಿರುವ ದೇವರ ಶಕ್ತಿಯೇ ಎಂದು ಹೇಳುತ್ತಾ ಅವನಿಗೆ ಲಕ್ಷ್ಯಕೊಡುತ್ತಿದ್ದರು. 
 
11 ಬಹುಕಾಲದಿಂದಲೂ ಅವನು ಮಂತ್ರತಂತ್ರಗಳನ್ನು ನಡಿಸಿ ಜನರಲ್ಲಿ ಬೆರಗನ್ನು ಹುಟ್ಟಿಸಿದ್ದ ಕಾರಣದಿಂದ ಅವರು ಅವನಿಗೆ ಲಕ್ಷ್ಯಕೊಡುತ್ತಿದ್ದರು. 
 
12 ಆದರೆ ಫಿಲಿಪ್ಪನು ದೇವರ ರಾಜ್ಯದ ವಿಷಯದಲ್ಲಿಯೂ ಯೇಸು ಕ್ರಿಸ್ತನ ಹೆಸರಿನ ವಿಷಯದಲ್ಲಿಯೂ ಶುಭವರ್ತಮಾನವನ್ನು ಸಾರಲು ಗಂಡಸರೂ ಹೆಂಗಸರೂ ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು. 
 
13 ಆಗ ಸೀಮೋನನು ಕೂಡ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡು ಫಿಲಿಪ್ಪನ ಸಂಗಡ ಯಾವಾಗಲೂ ಇದ್ದು ಸೂಚಕಕಾರ್ಯಗಳೂ ಮಹತ್ಕಾರ್ಯಗಳೂ ಉಂಟಾಗುವದನ್ನು ನೋಡಿ ಬೆರಗಾದನು.

ಮಾಂತ್ರಿಕನ ಪಾಪ

14 ಸಮಾರ್ಯದವರು ದೇವರ ವಾಕ್ಯವನ್ನು ಸ್ವೀಕರಿಸಿದ ವರ್ತಮಾನವನ್ನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಕೇಳಿ ಪೇತ್ರ ಯೋಹಾನರನ್ನು ಅವರ ಬಳಿಗೆ ಕಳುಹಿಸಿದರು. 
 
15 ಇವರು ಅಲ್ಲಿಗೆ ಬಂದು ಆ ಜನರಿಗೆ ಪವಿತ್ರಾತ್ಮವರವು ದೊರೆಯಬೇಕೆಂದು ಅವರಿಗೋಸ್ಕರ ಪ್ರಾರ್ಥನೆಮಾಡಿದರು. 
 
16 ಯಾಕಂದರೆ ಆ ವರವು ಅವರಲ್ಲಿ ಒಬ್ಬನ ಮೇಲಾದರೂ ಇನ್ನೂ ಬಂದಿರಲಿಲ್ಲ. ಅವರು ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನವನ್ನು ಮಾತ್ರ ಮಾಡಿಸಿಕೊಂಡಿದ್ದರು. 
 
17 ಅಪೊಸ್ತಲರು ಅವರ ಮೇಲೆ ಕೈಗಳನ್ನಿಡಲು ಅವರು ಪವಿತ್ರಾತ್ಮವರವನ್ನು ಹೊಂದಿದರು. 
 
18 ಅಪೊಸ್ತಲರು ಕೈಗಳನ್ನಿಡುವದರ ಮೂಲಕವಾಗಿ ಪವಿತ್ರಾತ್ಮದಾನವಾಗುವದನ್ನು ಸೀಮೋನನು ನೋಡಿ ಹಣವನ್ನು ತಂದು ಅವರ ಮುಂದಿಟ್ಟು – 
 
19 ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮ ವರವನ್ನು ಹೊಂದುವಂತೆ ಈ ಅಧಿಕಾರವನ್ನು ನನಗೂ ಕೊಡಿರಿ ಅಂದನು. 
 
20 ಆದರೆ ಪೇತ್ರನು ಅವನಿಗೆ – ನಿನ್ನ ಬೆಳ್ಳಿಯು ನಿನ್ನ ಕೂಡ ಹಾಳಾಗಿಹೋಗಲಿ. ದೇವರ ವರವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಭಾವಿಸುತ್ತೀಯೋ? 
 
21 ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ; ನಿನ್ನ ಹೃದಯವು ದೇವರ ಮುಂದೆ ಸರಿಯಿಲ್ಲ. 
 
22 ಆದದರಿಂದ ಈ ನಿನ್ನ ಕೆಟ್ಟತನವನ್ನು ಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಕರ್ತನು ನಿನ್ನ ಮನಸ್ಸಿನ ಆಲೋಚನೆಯನ್ನು ಕ್ಷಮಿಸುವನೋ ಏನೋ ಆತನನ್ನು ಬೇಡಿಕೋ. 
 
23 ಯಾಕಂದರೆ ನೀನು ಹಾನಿಕರವಾದ ವಿಷವೂ ದುಷ್ಟತ್ವದಲ್ಲಿ ಬಿಗಿಯುವ ಬಂಧನವೂ ಆಗಿರುವವನೆಂದು ಕಾಣುತ್ತದೆ ಅಂದನು. 
 
24 ಅದಕ್ಕೆ ಸೀಮೋನನು – ನೀವು ಹೇಳಿರುವ ಸಂಗತಿಗಳಲ್ಲಿ
ನನ್ನ ಮೇಲೆ ಬಾರದಂತೆ ನನಗೋಸ್ಕರ ನೀವೇ ಕರ್ತನನ್ನು ಬೇಡಿಕೊಳ್ಳಿರಿ ಎಂದು ಹೇಳಿದನು.
 
25 ಹೀಗಿರಲಾಗಿ ಅವರು ಕರ್ತನ ವಾಕ್ಯವನ್ನು ಪ್ರಮಾಣಪೂರ್ವಕವಾಗಿ ಹೇಳಿದ ಮೇಲೆ ಯೆರೂಸಲೇಮಿಗೆ ಹಿಂತಿರಿಗಿ ಹೊರಟು ಸಮಾರ್ಯದವರ ಅನೇಕ ಊರುಗಳಲ್ಲಿ ಸುವಾರ್ತೆಯನ್ನು ಸಾರಿದರು.
ಫಿಲಿಪ್ಪನು ಐಥಿಯೋಪ್ಯದವನಿಗೆ ಸುವಾರ್ತೆಯನ್ನು ತಿಳಿಸಿದ್ದು

ಐಥಿಯೋಪ್ಯದ ಒಬ್ಬ ಮನುಷ್ಯನಿಗೆ ಕ್ರಿಸ್ತನ ಬಗ್ಗೆ ಭೋದಿಸಿದ್ದು

26 ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ – ನೀನು ಎದ್ದು ದಕ್ಷಿಣ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ ಎಂದು ಹೇಳಿದನು. 
 
27 ಅವನು ಎದ್ದು ಹೊರಟುಹೋದನು; ಹೋಗುತ್ತಿರುವಾಗ ಐಥಿಯೋಪ್ಯ ದೇಶದ ಒಬ್ಬ ಮನುಷ್ಯನನ್ನು ಕಂಡನು. ಅವನು ಕಂಚುಕಿಯೂ ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾರಿಯೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದನು. 
 
28 ಅವನು ದೇವಾರಾಧನೆಗೋಸ್ಕರ ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕೂತುಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿದ್ದನು. 
 
29 ದೇವರಾತ್ಮನು ಫಿಲಿಪ್ಪನಿಗೆ – ನೀನು ಆ ರಥದ ಹತ್ತಿರ ಹೋಗಿ ಅದರ ಸಂಗಡಲೇ ನಡೆ ಎಂದು ಹೇಳಿದನು. 
 
30 ಫಿಲಿಪ್ಪನು ಓಡಿ ಹೋಗಿ ಆ ಮನುಷ್ಯನು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಿರುವದನ್ನು ಕೇಳಿ – ಎಲೈ, ನೀನು ಓದುವದು ನಿನಗೆ ತಿಳಿಯುತ್ತದೋ? ಅನ್ನಲು 
 
31 ಅವನು – ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು ಎಂದು ಹೇಳಿ – ನೀನು ರಥವನ್ನು ಹತ್ತಿ ನನ್ನ ಬಳಿಯಲ್ಲಿ ಕೂತುಕೋ ಎಂಬದಾಗಿ ಫಿಲಿಪ್ಪನನ್ನು ಕೇಳಿಕೊಂಡನು. 
 
32 ಅವನು ಓದುತ್ತಿದ್ದ ಶಾಸ್ತ್ರವಚನವು ಯಾವದಂದರೆ –
ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆ ಆತನು ಒಯ್ಯಲ್ಪಟ್ಟನು;
ಕುರಿಮರಿಯು ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವಂತೆ
ಆತನು ಬಾಯಿ ತೆರೆಯಲೇ ಇಲ್ಲ.
 
33 ಆತನಿಗುಂಟಾದ ದೀನಾವಸ್ಥೆಯಲ್ಲಿ ನ್ಯಾಯವು ಇಲ್ಲದೆಹೋಯಿತು.
ಆತನ ಸಕಾಲದವರನ್ನು ಹೇಳತಕ್ಕದ್ದೇನು?
ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದುಬಿಟ್ಟರಲ್ಲಾ ಎಂಬದೇ.
 
34 ಕಂಚುಕಿಯು ಈ ವಚನವನ್ನು ಕುರಿತು – ಪ್ರವಾದಿಯು ಇದನ್ನು ಯಾರ ವಿಷಯದಲ್ಲಿ ಹೇಳಿದ್ದಾನೆ? ತನ್ನ ವಿಷಯದಲ್ಲಿಯೋ? ಮತ್ತೊಬ್ಬನ ವಿಷಯದಲ್ಲಿಯೋ? ದಯಮಾಡಿ ಹೇಳಬೇಕು ಎಂದು ಫಿಲಿಪ್ಪನನ್ನು ಕೇಳಲು 
 
35 ಫಿಲಿಪ್ಪನು ಉಪದೇಶಿಸುವದಕ್ಕೆ ತೊಡಗಿ ಅದೇ ವಚನವನ್ನು ಆಧಾರ ಮಾಡಿಕೊಂಡು ಅವನಿಗೆ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು. 
 
36 ಅವರು ದಾರಿಯಲ್ಲಿ ಹೋಗುತ್ತಿರುವಾಗ ನೀರಿನ ಬಳಿಗೆ ಬಂದರು. ಕಂಚುಕಿಯು – ಅಗೋ, ನೀರು; ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು ಎಂದು ಹೇಳಿ ರಥವನ್ನು ನಿಲ್ಲಿಸು ಎಂದು ಅಪ್ಪಣೆಕೊಟ್ಟನು; 
 
38 ಫಿಲಿಪ್ಪನು ಕಂಚುಕಿಯು ಇಬ್ಬರೂ ನೀರಿನೊಳಗೆ ಇಳಿದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 
 
39 ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮ ಫಿಲಿಪ್ಪನನ್ನು ಎತ್ತಿಕೊಂಡುಹೋಗಲಾಗಿ ಕಂಚುಕಿಯು ಸಂತೋಷವುಳ್ಳವನಾಗಿ ತನ್ನ ದಾರಿಯನ್ನು ಹಿಡಿದು ಅವನನ್ನು ಕಾಣಲೇ ಇಲ್ಲ. 
 
40 ತರುವಾಯ ಫಿಲಿಪ್ಪನು ಅಜೋತಿನಲ್ಲಿ ಕಾಣಿಸಿಕೊಂಡು ಅಲ್ಲಿಂದ ಕೈಸರೈಯದ ತನಕ ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.
 

ಅಪೊಸ್ತಲರ ಕೃತ್ಯಗಳು 9  ದಮಸ್ಕದ ಮಾರ್ಗ: ಸೌಲನ ಪರಿವರ್ತನೆ

1 ಸೌಲನು ಇನ್ನು ಕರ್ತನ ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಶೆಪಡುತ್ತಾ ಮಹಾಯಾಜಕನ ಬಳಿಗೆ ಹೋಗಿ – 

2 ಆ ಮಾರ್ಗವನ್ನು ಹಿಡಿದವರು ಯಾರಾದರೂ ಸಿಕ್ಕಿದರೆ ಅವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ನಾನು ಅವರಿಗೆ ಬೇಡಿಹಾಕಿಸಿ ಯೆರೂಸಲೇಮಿಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರದವರಿಗೆ ನೀನು ಕಾಗದವನ್ನು ಕೊಡಬೇಕು ಎಂದು ಅವನನ್ನು ಬೇಡಿಕೊಂಡನು. 

{1 ಕೊರಿಂಥದವರಿಗೆ 15:3ನಾನು ನಿಮಗೆ ತಿಳಿಸಿದ ಮೊದಲನೆಯ ಸಂಗತಿಗಳೊಳಗೆ ಒಂದು ಸಂಗತಿಯನ್ನು ನಿಮಗೆ ತಿಳಿಸಿಕೊಟ್ಟೆನು. ಅದು ನಾನು ಸಹ ಕಲಿತುಕೊಂಡದ್ದೇ. ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; 
 
4 ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು. 
 
5 ಕೇಫನಿಗೂ ಆಮೇಲೆ ಹನ್ನೆರಡು ಮಂದಿ ಅಪೊಸ್ತಲರಿಗೂ ಕಾಣಿಸಿಕೊಂಡನು. 
 
6 ತರುವಾಯ ಒಂದೇ ಸಮಯದಲ್ಲಿ ಐನೂರು ಮಂದಿಗಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು. ಇವರಲ್ಲಿ
ಹೆಚ್ಚು ಜನರು ಇಂದಿನವರೆಗೂ ಇದ್ದಾರೆ. ಕೆಲವರು ನಿದ್ರೆಹೋಗಿದ್ದಾರೆ. 
 
7 ತರುವಾಯ ಆತನು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡನು. 
 
8 ಕಟ್ಟಕಡೆಗೆ ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು. 
 
9 ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ. 
 
10 ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ. ನನಗುಂಟಾದ ಆತನ ಕೃಪೆಯು ನಿಷ್ಫಲವಾಗಲಿಲ್ಲ; ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ. 
 
11 ಹಾಗಾದರೆ ನಾನಾದರೇನು ಅವರಾದರೇನು, ಆ ಸಂಗತಿಗಳನ್ನೇ ಸಾರುತ್ತೇವೆ; ಅವುಗಳನ್ನು ನೀವು ನಂಬಿದಿರಿ.}

3 ಅವನು ಪ್ರಯಾಣ ಮಾಡುತ್ತಾ ದಮಸ್ಕದ ಹತ್ತಿರಕ್ಕೆ ಬರಲು ಫಕ್ಕನೆ ಆಕಾಶದೊಳಗಿಂದ ಒಂದು ಬೆಳಕು ಅವನ ಸುತ್ತಲು ಮಿಂಚಿತು. 

4 ಅವನು ನೆಲಕ್ಕೆ ಬಿದ್ದು – ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆ ಪಡಿಸುತ್ತೀ ಎಂದು ಹೇಳುವ ವಾಣಿಯನ್ನು ಕೇಳಿದನು. 

5 ಅವನು – ಕರ್ತನೇ, ನೀನಾರು ಎಂದು ಕೇಳಿದ್ದಕ್ಕೆ ಕರ್ತನು – ನೀನು ಹಿಂಸೆಪಡಿಸುವ ಯೇಸುವೇ ನಾನು. 

6 ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ನಿನಗೆ ತಿಳಿಸಲ್ಪಡುವದು ಎಂದು ಹೇಳಿದನು. 

7 ಅವನ ಜೊತೆಯಲ್ಲಿ ಪ್ರಯಾಣಮಾಡುತ್ತಿದ್ದವರು ಧ್ವನಿಯನ್ನು ಮಾತ್ರ ಕೇಳಿ ಯಾರನ್ನೂ ಕಾಣದೆ ಮೂಕರಂತೆ ನಿಂತರು. 

8 ಸೌಲನು ನೆಲದಿಂದ ಎದ್ದು ಕಣ್ಣು ತೆರೆದಾಗ ಏನೂ ಕಾಣಿಸಲಿಲ್ಲ. ಆಗ ಅವರು ಅವನನ್ನು ಕೈಹಿಡಿದು ದಮಸ್ಕದೊಳಕ್ಕೆ ಕರೆದುಕೊಂಡು ಹೋದರು. 

9 ಅವನು ಮೂರು ದಿವಸ ಕಣ್ಣುಕಾಣದೆ ಏನೂ ತಿನ್ನಲಿಲ್ಲ; ಏನೂ ಕುಡಿಯಲಿಲ್ಲ.

ಅನನೀಯನು ಸೌಲನಿಗೆ ದೀಕ್ಷಾಸ್ತಾನ ಕೊಟ್ಟದ್ದು

10 ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು; ಕರ್ತನು ದರ್ಶನದಲ್ಲಿ – ಅನನೀಯನೇ, ಎಂದು ಅವನನ್ನು ಕರೆಯಲು ಅವನು – ಕರ್ತನೇ, ಇಗೋ, ಇದ್ದೇನೆ ಅಂದನು. 
 
11 ಕರ್ತನು ಅವನಿಗೆ – ನೀನೆದ್ದು ನೆಟ್ಟನೇಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬವನನ್ನು ವಿಚಾರಿಸು; ಅವನು ಪ್ರಾರ್ಥನೆ ಮಾಡುತ್ತಾನೆ. 
 
12 ಮತ್ತು ಅನನೀಯನೆಂಬ ಒಬ್ಬ ಮನುಷ್ಯನು ಒಳಗೆ ಬಂದು ತನಗೆ ತಿರಿಗಿ ಕಣ್ಣುಕಾಣುವಂತೆ ತನ್ನ ಮೇಲೆ ಕೈಯಿಡುವದನ್ನು ನೋಡಿದ್ದಾನೆ ಎಂದು ಹೇಳಿದನು. 
 
13 ಅದಕ್ಕೆ ಅನನೀಯನು – ಕರ್ತನೇ, ಆ ಮನುಷ್ಯನು ಯೆರೂಸಲೇಮಿನಲ್ಲಿ ನಿನ್ನನ್ನು ನಂಬಿದ ದೇವಜನರಿಗೆ ಎಷ್ಟೋ ಕೇಡನ್ನುಂಟುಮಾಡಿದನೆಂದು ಅವನ ವಿಷಯವಾಗಿ ಅನೇಕರಿಂದ ಕೇಳಿದ್ದೇನೆ; 
 
14 ಮತ್ತು ಇಲ್ಲಿಯೂ ನಿನ್ನ ಹೆಸರನ್ನು ಸ್ಮರಿಸುವವರೆಲ್ಲರಿಗೆ ಬೇಡಿಹಾಕಿಸುವ ಅಧಿಕಾರವನ್ನು ಮಹಾಯಾಜಕರಿಂದ ಹೊಂದಿದ್ದಾನೆ ಅಂದನು. 
 
15 ಕರ್ತನು ಅವನಿಗೆ – ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ ಅರಸುಗಳಿಗೂ ಇಸ್ರಾಯೇಲ್ಯರಿಗೂ ನನ್ನ ಹೆಸರನ್ನು ತಿಳಿಸುವದಕ್ಕಾಗಿ ನಾನು ಆರಿಸಿಕೊಂಡ ಸಾಧನವಾಗಿದ್ದಾನೆ. 
 
16 ಅವನು ನನ್ನ ಹೆಸರಿನ ನಿಮಿತ್ತ ಎಷ್ಟು ಹಿಂಸೆ ಅನುಭವಿಸಬೇಕೆಂಬದನ್ನು ನಾನೇ ಅವನಿಗೆ ತೋರಿಸುವೆನು ಎಂದು ಹೇಳಿದನು. 
 
17 ಆಗ ಅನನೀಯನು ಹೊರಟು ಆ ಮನೆಯೊಳಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು – ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣುಕಾಣುವಂತೆಯೂ ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಿದನು. 
 
18 ಕೂಡಲೆ ಅವನ ಕಣ್ಣುಗಳಿಂದ ಪರೆಗಳಂತೆ ಏನೋ ಬಿದ್ದು ಅವನ ಕಣ್ಣು ಕಾಣಿಸಿದವು. ಅವನು ಎದ್ದು ದೀಕ್ಷಾಸ್ನಾನ ಮಾಡಿಸಿಕೊಂಡನು. 
 
19 ತರುವಾಯ ಊಟಮಾಡಿ ಬಲ ಹೊಂದಿದನು.

ಸೌಲನು ಯೇಸುವಿನ ಬಗ್ಗೆ ಭೋದಿಸಿದ್ದು

20 ಮುಂದೆ ಅವನು ದಮಸ್ಕದಲ್ಲಿದ್ದ ಶಿಷ್ಯರ ಸಂಗಡ ಕೆಲವು ದಿವಸ ಇದ್ದು ತಡಮಾಡದೆ ಸಭಾಮಂದಿರಗಳಲ್ಲಿ ಯೇಸುವಿನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರುವದಕ್ಕೆ ಪ್ರಾರಂಭಮಾಡಿದನು. 
 
21 ಕೇಳಿದವರೆಲ್ಲರು ಬೆರಗಾಗಿ – ಈ ಹೆಸರು ಹೇಳುವವರನ್ನು ಯೆರೂಸಲೇಮಿನಲ್ಲಿ ಹಾಳುಮಾಡಿದವನು ಇವನಲ್ಲವೇ. ಅಂಥವರನ್ನು ಬೇಡಿಹಾಕಿಸಿ ಮಹಾಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂದೇ ಇಲ್ಲಿಗೆ ಬಂದನಲ್ಲವೇ ಎಂದು ಮಾತಾಡಿಕೊಂಡರು. 
 
22 ಆದರೆ ಸೌಲನು ಇನ್ನೂ ಅಧಿಕ ಸಾಮರ್ಥ್ಯವುಳ್ಳವನಾಗಿ ಯೇಸುವೇ ಕ್ರಿಸ್ತನೆಂದು ಸಿದ್ಧಾಂತಪಡಿಸಿ ದಮಸ್ಕದಲ್ಲಿದ್ದ ಯೆಹೂದ್ಯರನ್ನು ಉತ್ತರವಿಲ್ಲದವರಾಗ ಮಾಡಿದನು.

ಸೌಲನ ಮರಣದಿಂದ ತಪ್ಪಿಸಿಕೊಂಡಿದ್ದು

23 ಅನೇಕ ದಿವಸಗಳು ಹೋದ ಮೇಲೆ ಯೆಹೂದ್ಯರು ಅವನನ್ನು ಕೊಲ್ಲಬೇಕೆಂದು ಆಲೋಚನೆಮಾಡಿಕೊಂಡರು. 
 
24 ಅವರ ಆಲೋಚನೆಯು ಸೌಲನಿಗೆ ತಿಳಿದುಬಂತು. ಅವನನ್ನು ಕೊಲ್ಲುವದಕ್ಕಾಗಿ ಅವರು ಹಗಲಿರುಳೂ ಪಟ್ಟಣದ ಬಾಗಿಲುಗಳನ್ನು ಕಾಯುತ್ತಿದ್ದರು. 
 
25 ಆದರೆ ಅವನ ಶಿಷ್ಯರು ರಾತ್ರಿಕಾಲದಲ್ಲಿ ಅವನನ್ನು ಕರೆದುಕೊಂಡುಹೋಗಿ ಒಂದು ಹೆಡಿಗೆಯಲ್ಲಿ ಕೂಡ್ರಿಸಿ
ಗೋಡೆಯೊಳಗಿಂದ ಇಳಿಸಿದರು.

ಸೌಲನು ಯೆರುಸಲೇಮಿನಲ್ಲಿ

26 ಅವನು ಯೆರೂಸಲೇಮಿಗೆ ಬಂದು ಶಿಷ್ಯರೊಳಗೆ ಸೇರಿಕೊಳ್ಳಬೇಕೆಂದು ಪ್ರಯತ್ನ ಮಾಡಿದಾಗ ಎಲ್ಲರು ಅವನನ್ನು ಶಿಷ್ಯನೆಂದು ನಂಬದೆ ಅವನಿಗೆ ಭಯಪಟ್ಟರು. 
 
27 ಆದರೆ ಬಾರ್ನಬನು ಅವನನ್ನು ಕೈಹಿಡಿದು ಅಪೊಸ್ತಲರ ಬಳಿಗೆ ಕರೆದುಕೊಂಡುಹೋಗಿ ಅವನು ದಾರಿಯಲ್ಲಿ ಕರ್ತನನ್ನು ಕಂಡದ್ದನ್ನೂ ಕರ್ತನು ಅವನ ಸಂಗಡ ಮಾತಾಡಿದ್ದನ್ನೂ ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ಧೈರ್ಯದಿಂದ ಮಾತಾಡಿದ್ದನ್ನೂ ಅವರಿಗೆ ವಿವರವಾಗಿ ಹೇಳಿದನು. 
 
28 ಆಮೇಲೆ ಅವನು ಯೆರೂಸಲೇಮಿನಲ್ಲಿದ್ದುಕೊಂಡು ಅವರಲ್ಲಿ ಬರುತ್ತಾ ಹೋಗುತ್ತಾ ಕರ್ತನ ಹೆಸರಿನಲ್ಲಿ ಧೈರ್ಯದಿಂದ ಬೋಧಿಸಿದನು. 
 
29 ಮತ್ತು ಗ್ರೀಕ್ ಭಾಷೆಯನ್ನಾಡುವ ಯೆಹೂದ್ಯರ ಸಂಗಡ ಮಾತಾಡಿ ತರ್ಕಿಸುತ್ತಿದ್ದನು. ಆದರೆ ಅವರು ಅವನನ್ನು ಕೊಲ್ಲುವದಕ್ಕೆ ಪ್ರಯತ್ನ ಮಾಡಿದರು. 
 
30 ಇದು ಸಹೋದರರಿಗೆ ತಿಳಿದು ಬರಲು ಅವರು ಅವನನ್ನು ಕೈಸರೈಯಕ್ಕೆ ಕರಕೊಂಡು ಹೋಗಿ ಅಲ್ಲಿಂದ ತಾರ್ಸಕ್ಕೆ ಕಳುಹಿಸಿದರು.

ಸಭೆಯ ವೃದ್ದಿ

 
31 ಹೀಗಿರಲಾಗಿ ಯೂದಾಯ ಗಲಿಲಾಯ ಸಮಾರ್ಯ ಸೀಮೆಗಳಲ್ಲಿದ್ದ ಸಭೆಯು ಸಮಾಧಾನ ಹೊಂದಿತು; ಮತ್ತು ಭಕ್ತಿಯಲ್ಲಿ ಬೆಳೆದು ಕರ್ತನ ಭಯದಲ್ಲಿ ನಡೆದು ಪವಿತ್ರಾತ್ಮನಿಂದ ಪ್ರೋತ್ಸಾಹವನ್ನು ಹೊಂದಿ ಹೆಚ್ಚುತ್ತಾ ಬಂತು.
ಐನೇಯನೆಂಬ ಪಾರ್ಶ್ವವಾಯುರೋಗಿ ಅದ್ಭುತವಾಗಿ ವಾಸಿಯಾದದ್ದು
 
32 ಪೇತ್ರನು ಎಲ್ಲಾ ಕಡೆಯೂ ಸಂಚಾರಮಾಡುತ್ತಿರುವಾಗ ಲುದ್ದದಲ್ಲಿ ವಾಸಿಯಾಗಿದ್ದ ದೇವಜನರ ಬಳಿಗೂ ಬಂದನು.. 

 ಅನನೀಯನು ಸ್ವಸ್ಥವಾದದ್ದು

33 ಅಲ್ಲಿ ಪಾರ್ಶ್ವವಾಯುರೋಗಿಯಾಗಿ ಎಂಟು ವರುಷಗಳಿಂದ ದೊರ್ಕಳು ಜೀವಿತವಾಗಿದ್ದು ಹಾಸಿಗೆಯ ಮೇಲೆ ಬಿದ್ದಿದ್ದ ಐನೇಯನೆಂಬ ಒಬ್ಬ ಮನುಷ್ಯನನ್ನು ಕಂಡನು. 
 
34 ಪೇತ್ರನು ಅವನಿಗೆ – ಐನೇಯನೇ, ಯೇಸು ಕ್ರಿಸ್ತನು ನಿನ್ನನ್ನು ವಾಸಿಮಾಡುತ್ತಾನೆ; ಎದ್ದು ನಿನ್ನ ಹಾಸಿಗೆಯನ್ನು ಹಾಸಿಕೋ ಎಂದು ಹೇಳಿದನು. ಕೂಡಲೆ ಅವನು ಎದ್ದನು. 
 
35 ಮತ್ತು ಲುದ್ದದಲ್ಲಿಯೂ ಸಾರೋನಪ್ರಾಂತ್ಯದಲ್ಲಿಯೂ ವಾಸವಾಗಿದ್ದವರೆಲ್ಲರು ಅವನನ್ನು ನೋಡಿದರು, ಮತ್ತು ಅವರು ಕರ್ತನ ಕಡೆಗೆ ತಿರುಗಿಕೊಂಡರು.
 

ಸತ್ತುಹೋಗಿದ್ದ ದೊರ್ಕಳೆಂಬ ಒಬ್ಬ ಶಿಷ್ಯಳನ್ನು ಬದುಕಿಸಿದ್ದು

36 ಯೊಪ್ಪದಲ್ಲಿ ತಬಿಥಾ ಎಂಬ ಒಬ್ಬ ಶಿಷ್ಯಳಿದ್ದಳು. ಆ ಹೆಸರಿಗೆ ಗ್ರೀಕ್‍ಭಾಷೆಯಲ್ಲಿ ದೊರ್ಕ ಎಂದರ್ಥ. ಆಕೆಯು ಸತ್ಕ್ರಿಯೆಗಳನ್ನೂ ದಾನಧರ್ಮಗಳನ್ನೂ ಬಹಳವಾಗಿ ಮಾಡುತ್ತಿದ್ದಳು.
 
37 ಆ ಕಾಲದಲ್ಲಿ ಆಕೆ ರೋಗದಲ್ಲಿ ಬಿದ್ದು ಸತ್ತಳು, ಮತ್ತು ಆಕೆಯ ಶವವನ್ನು ತೊಳೆದು ಮೇಲಂತಸ್ತಿನಲ್ಲಿಟ್ಟರು. 
 
38 ಯೊಪ್ಪಕ್ಕೆ ಲುದ್ದವು ಹತ್ತಿರವಾಗಿರಲಾಗಿ ಪೇತ್ರನು ಅಲ್ಲಿ ಇದ್ದಾನೆಂದು ಶಿಷ್ಯರು ಕೇಳಿ ಇಬ್ಬರು ಮನುಷ್ಯರನ್ನು ಅವನ ಬಳಿಗೆ ಕಳುಹಿಸಿ – ತಡಮಾಡದೆ ನಮ್ಮ ತನಕ ಬರಬೇಕೆಂದು ಬೇಡಿಕೊಂಡರು. 
 
39 ಪೇತ್ರನು ಎದ್ದು ಅವರ ಜೊತೆಯಲ್ಲಿ ಹೋದನು. ಅವನು ಬಂದ ಕೂಡಲೆ ಅವರು ಅವನನ್ನು ಮೇಲಂತಸ್ತಿಗೆ ಕರೆದುಕೊಂಡು ಹೋದರು. ಅಲ್ಲಿ ವಿಧವೆಯರೆಲ್ಲರು ಅಳುತ್ತಾ ಅವನ ಹತ್ತಿರ ನಿಂತುಕೊಂಡು ದೊರ್ಕಳು ತಮ್ಮ ಸಂಗಡ ಇದ್ದಾಗ ಮಾಡಿಕೊಟ್ಟಿದ್ದ ಒಳಂಗಿಗಳನ್ನೂ ಮೇಲಂಗಿಗಳನ್ನೂ ತೋರಿಸಿದರು. 
 
40 ಪೇತ್ರನು ಅವರೆಲ್ಲರನ್ನು ಹೊರಕ್ಕೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥನೆಮಾಡಿ ಶವದ ಕಡೆಗೆ ತಿರುಗಿಕೊಂಡು – ತಬಿಥಾ, ಏಳು ಅಂದನು. ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕೂತುಕೊಂಡಳು. 
 
41 ಅವನು ಆಕೆಯನ್ನು ಕೈಕೊಟ್ಟು ಎಬ್ಬಿಸಿ ದೇವಜನರನ್ನೂ ವಿಧವೆಯರನ್ನೂ ಕರೆದು ಜೀವಿತಳಾದ ಆಕೆಯನ್ನು ಅವರೆದುರಿಗೆ ನಿಲ್ಲಿಸಿದನು. 
 
42 ಈ ಸಂಗತಿಯು ಯೊಪ್ಪದಲ್ಲೆಲ್ಲಾ ತಿಳಿಯಬಂದು ಅನೇಕರು ಕರ್ತನ ಮೇಲೆ ನಂಬಿಕೆಯಿಟ್ಟರು. 

43ಆಮೇಲೆ ಪೇತ್ರನು ಯೊಪ್ಪದಲ್ಲಿ ಚರ್ಮಕಾರನಾದ ಸೀಮೋನನೆಂಬವನ ಬಳಿಯಲ್ಲಿ ಬಹಳ ದಿವಸದವರೆಗೂ ಇದ್ದನು.

ಅಪೊಸ್ತಲರ ಕೃತ್ಯಗಳು 10  ಕೊರ್ನೆಲೇಯನು ಪ್ರತಿನಿಧಿಯನ್ನು ಕಳುಹಿಸಿದ್ದು

1 ಕೈಸರೈಯದಲ್ಲಿ ಇತಾಲ್ಯದ ಪಟಾಲಮೆನಿಸಿಕೊಳ್ಳುವ ಒಂದು ಪಟಾಲಮಿನ ಶತಾಧಿಪತಿಯಾದ ಕೊರ್ನೇಲ್ಯನೆಂಬ ಒಬ್ಬ ಮನುಷ್ಯನಿದ್ದನು. 
 
2 ಅವನು ಭಕ್ತನೂ ತನ್ನ ಮನೆಯವರೆಲ್ಲರ ಸಹಿತವಾಗಿ ದೇವರಿಗೆ ಭಯಪಡುವವನೂ ಆಗಿದ್ದು ಜನರಿಗೆ ಬಹಳವಾಗಿ ದಾನಧರ್ಮ ಮಾಡುತ್ತಾ ದೇವರಿಗೆ ನಿತ್ಯವೂ ಪ್ರಾರ್ಥನೆ ಮಾಡುತ್ತಾ ಇದ್ದನು. 
 
3 ಮಧ್ಯಾಹ್ನದ ಮೇಲೆ ಸುಮಾರು ಮೂರು ಗಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತ
ನ್ನ ಬಳಿಗೆ ಬಂದು – ಕೊರ್ನೇಲ್ಯನೇ ಎಂದು ಕರೆಯುವದನ್ನು ಅವನು ಪ್ರತ್ಯಕ್ಷವಾಗಿ ಕಂಡನು. 
 
4 ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ – ಏನು ಸ್ವಾಮೀ ಎಂದು ಕೇಳಲು ದೂತನು ಅವನಿಗೆ – ನಿನ್ನ ಪ್ರಾರ್ಥನೆಗಳೂ ನಿನ್ನ ದಾನಧರ್ಮಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿ ಬಂದವು. 
 
5 ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು. 
 
6 ಅವನು ಚರ್ಮಕಾರನಾದ ಸೀಮೋನನ ಬಳಿಯಲ್ಲಿ ಇಳುಕೊಂಡಿದ್ದಾನೆ; ಈ ಸೀಮೋನನ ಮನೆಯು ಸಮುದ್ರದ ಬಳಿಯಲ್ಲಿ ಅದೆ ಎಂದು ಹೇಳಿದನು. 
 
7 ಕೊರ್ನೇಲ್ಯನು ತನ್ನ ಸಂಗಡ ಮಾತಾಡಿದ ದೇವದೂತನು ಹೊರಟುಹೋದ ಮೇಲೆ ತನ್ನ ಪರಿಚಾರಕರಲ್ಲಿ ಇಬ್ಬರನ್ನೂ ತನ್ನ ಹತ್ತಿರ ಯಾವಾಗಲೂ ಇರುತ್ತಿದ್ದ ಸಿಪಾಯಿಗಳಲ್ಲಿ ಒಬ್ಬ ದೇವಭಕ್ತನನ್ನೂ ಕರೆದು 
 
8 ಅವರಿಗೆ ಈ ಸಂಗತಿಗಳನ್ನೆಲ್ಲಾ ವಿವರವಾಗಿ ಹೇಳಿ ಅವರನ್ನು ಯೊಪ್ಪಕ್ಕೆ ಕಳುಹಿಸಿದನು.

ಪೇತ್ರನ ದರ್ಶನ

9 ಮರುದಿನ ಅವರು ಪ್ರಯಾಣಮಾಡಿ ಆ ಊರಿನ ಹತ್ತಿರಕ್ಕೆ ಬರುತ್ತಿರುವಾಗ ಪೇತ್ರನು ಸುಮಾರು ಮಧ್ಯಾಹ್ನದಲ್ಲಿ ಪ್ರಾರ್ಥನೆ ಮಾಡುವದಕ್ಕಾಗಿ ಮಾಳಿಗೆಯನ್ನು ಹತ್ತಿದನು. 
 
10 ಅವನು ಬಹಳ ಹಸಿದು ಊಟ ಮಾಡಬೇಕೆಂದಿದ್ದನು. ಊಟಕ್ಕೆ ಸಿದ್ಧವಾಗುತ್ತಿರುವಷ್ಟರಲ್ಲಿ 
 
11 ಅವನು ಧ್ಯಾನ ಪರವಶನಾಗಿ ಆಕಾಶವು ತೆರೆದಿರುವದನ್ನೂ ನಾಲ್ಕು ಮೂಲೆಗಳನ್ನು ಹಿಡಿದಿದ್ದ ದೊಡ್ಡ ಜೋಳಿಗೆಯಂತಿರುವ ಏನೋ ಒಂದು ವಸ್ತುವು ಭೂಮಿಯ ಮೇಲೆ ಇಳಿಯುವದನ್ನೂ ಕಂಡನು. 
 
12 ಅದರೊಳಗೆ ಸಕಲ ವಿಧವಾದ ಪಶುಗಳೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೂ ಅಂತರಿಕ್ಷದಲ್ಲಿ ಹಾರಾಡುವ ಹಕ್ಕಿಗಳೂ ಇದ್ದವು. 
 
13 ಆಗ – ಪೇತ್ರನೇ, ಎದ್ದು ಕೊಯ್ದು ತಿನ್ನು ಎಂದು ಅವನಿಗೆ ಒಂದು ವಾಣಿ ಕೇಳಿಸಿತು. 
 
14 ಅದಕ್ಕೆ ಪೇತ್ರನು – ಬೇಡವೇ ಬೇಡ ಸ್ವಾಮೀ, ನಾನು ಎಂದೂ ಹೊಲೆ ಪದಾರ್ಥವನ್ನಾಗಲಿ ಅಶುದ್ಧಪದಾರ್ಥವನ್ನಾಗಲಿ ತಿಂದವನಲ್ಲ ಅಂದನು. 
 
15 ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬೇಡವೆಂದು ತಿರಿಗಿ ಎರಡನೆಯ ಸಾರಿ ಅವನಿಗೆ ವಾಣಿ ಕೇಳಿಸಿತು. 
 
16 ಹೀಗೆ ಮೂರು ಸಾರಿ ಆಯಿತು. ಆದ ಕೂಡಲೆ ಆ ವಸ್ತುವು ಆಕಾಶದೊಳಗೆ ಸೇರಿಕೊಂಡಿತು.

ಕೈಸರೈಗೆ ಕರೆ

17 ಪೇತ್ರನು ತನಗಾದ ದರ್ಶನವು ಏನಾಗಿರಬಹುದೆಂದು ತನ್ನಲ್ಲಿ ಕಳವಳ ಪಡುತ್ತಿರುವಾಗಲೇ ಕೊರ್ನೇಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋನನ ಮನೆ ಯಾವದು ಎಂದು ಕೇಳಿಕೊಂಡು ಬಂದು ಆ ಮನೆಯ ಬಾಗಿಲಲ್ಲಿ ನಿಂತು – 
 
18 ಪೇತ್ರನೆನಿಸಿಕೊಳ್ಳುವ ಸೀಮೋನನು ಇಲ್ಲಿ ಇಳುಕೊಂಡಿದ್ದಾನೋ ಎಂದು ಕೂಗಿ ಕೇಳಿದರು. 
 
19 ಪೇತ್ರನು ಆ ದರ್ಶನದ ವಿಷಯದಲ್ಲಿ ಆಲೋಚನೆ ಮಾಡುತ್ತಿರಲು ದೇವರಾತ್ಮನು ಅವನಿಗೆ – ಅಗೋ, ಇಬ್ಬರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ; 
 
20 ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು, ನಾನೇ ಅವರನ್ನು ಕಳುಹಿಸಿದ್ದೇನೆ ಎಂದು ಹೇಳಿದನು. 
 
21 ಪೇತ್ರನು ಕೆಳಗಿಳಿದು ಆ ಮನುಷ್ಯರ ಬಳಿಗೆ ಬಂದು – ಇಗೋ, ನೀವು ವಿಚಾರಿಸುವವನು ನಾನೇ; ನೀವು ಬಂದ ಕಾರಣವೇನು ಎಂದು ಕೇಳಲು 
 
22 ಅವರು – ಕೊರ್ನೇಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ ದೇವರಿಗೆ ಭಯಪಡುವವನೂ ಯೆಹೂದ್ಯ ಜನರೆಲ್ಲರಿಂದ ಒಳ್ಳೇ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಕರೇಕಳುಹಿಸಿಕೊಂಡು ನಿನ್ನಿಂದ ಬೋಧನೆಯನ್ನು ಕೇಳಬೇಕೆಂದು ದೇವದೂತನ ಮುಖಾಂತರವಾಗಿ ಅಪ್ಪಣೆ ಹೊಂದಿದನು ಎಂದು ಹೇಳಿದರು. 

23 ಪೇತ್ರನು ಇದನ್ನು ಕೇಳಿ ಅವರನ್ನು ಒಳಕ್ಕೆ ಕರೆದು ಉಪಚರಿಸಿದನು.
ಮರುದಿನ ಅವನು ಎದ್ದು ಅವರ ಜೊತೆಯಲ್ಲಿ ಹೊರಟನು; ಯೊಪ್ಪದಲ್ಲಿದ್ದ ಸಹೋದರರಲ್ಲಿ ಕೆಲವರು ಅವನ ಕೂಡ ಹೋದರು. 

ಪೇತ್ರನು ಕೊರ್ನೆಲೇಯನನ್ನು ಭೇಟಿಯಾಗಿದ್ದು

24 ಮರುದಿನ ಅವನು ಕೈಸರೈಯಕ್ಕೆ ಸೇರಿದನು. ಕೊರ್ನೇಲ್ಯನು ತನ್ನ ಬಂಧುಬಳಗದವರನ್ನೂ ಪ್ರಾಣಮಿತ್ರರನ್ನೂ ಕೂಡ ಕರಿಸಿ ಪೇತ್ರನನ್ನು ಎದುರುನೋಡುತ್ತಿದ್ದನು. 
 
25 ಅವನು ಬಂದಾಗ ಕೊರ್ನೇಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದನು. 
 
26 ಆದರೆ ಪೇತ್ರನು – ಏಳಪ್ಪಾ, ನಾನೂ ಮನುಷ್ಯನು ಎಂದು ಹೇಳಿ 
 
27 ಅವನನ್ನು ಎತ್ತಿ ಅವನ ಸಂಗಡ ಸಂಭಾಷಣೆ ಮಾಡುತ್ತಾ ಮನೆಯೊಳಕ್ಕೆ ಬಂದನು. 
 
28 ಅಲ್ಲಿ ಬಹು ಜನರು ಕೂಡಿಬಂದಿರುವದನ್ನು ಕಂಡು ಅವರಿಗೆ – ಯೆಹೂದ್ಯರು ಅನ್ಯಜನರ ಕೂಡ ಹೊಕ್ಕು ಬಳಿಕೆಮಾಡುವದು ಯೆಹೂದ್ಯರ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ನೀವು ಬಲ್ಲಿರಷ್ಟೆ. ನನಗಂತೂ ಯಾವ ಮನುಷ್ಯನನ್ನಾದರೂ ಹೊಲೆಯನು ಇಲ್ಲವೆ ಅಶುದ್ಧನು ಅನ್ನಬಾರದೆಂದು ದೇವರು ತೋರಿಸಿದ್ದಾನೆ. 
 
29 ಆದಕಾರಣ ನೀವು ನನ್ನನ್ನು ಕರೇಕಳುಹಿಸಿದಾಗ ನಾನು ಯಾವ ಎದುರು ಮಾತನ್ನೂ ಹೇಳದೆ ಬಂದೆನು. ಈಗ ನೀವು ನನ್ನನ್ನು ಕರಿಸಿದ ಉದ್ದೇಶವೇನು ನನಗೆ ತಿಳಿಸಬೇಕು ಎಂದು ಹೇಳಿದನು. 
 
30 ಅದಕ್ಕೆ ಕೊರ್ನೇಲ್ಯನು – ನಾನು ನಾಲ್ಕು ದಿವಸಗಳ ಹಿಂದೆ ಮಧ್ಯಾಹ್ನದ ಮೇಲೆ ಮೂರು ಗಂಟೆಗೆ ನಡೆಯತಕ್ಕ ದೇವರ ಪ್ರಾರ್ಥನೆಯನ್ನು ಇಷ್ಟು ಹೊತ್ತಿನವರೆಗೂ ನನ್ನ ಮನೆಯಲ್ಲಿ ಮಾಡುತ್ತಿದ್ದಾಗ ಹೊಳೆಯುವ ವಸ್ತ್ರವನ್ನು ಧರಿಸಿಕೊಂಡಿದ್ದ ಒಬ್ಬ ಮನುಷ್ಯನು ನನ್ನೆದುರಿಗೆ ನಿಂತುಕೊಂಡು – 
 
31 ಕೊರ್ನೇಲ್ಯನೇ, ನಿನ್ನ ಪ್ರಾರ್ಥನೆಯು ಕೇಳಿಬಂತು, ನಿನ್ನ ದಾನಧರ್ಮಗಳು ದೇವರ ಸನ್ನಿಧಾನದಲ್ಲಿ ನೆನಪಿಗೆ ಬಂದವು. 
 
32 ನೀನು ಯೊಪ್ಪಕ್ಕೆ ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರಿಸಬೇಕು; ಅವನು ಚರ್ಮಕಾರನಾದ ಸೀಮೋನನ ಮನೆಯಲ್ಲಿ ಇಳುಕೊಂಡಿದ್ದಾನೆ; ಆ ಮನೆ ಸಮುದ್ರದ ಬಳಿಯಲ್ಲಿ ಅದೆ ಅಂದನು. 

33 ನಾನು ತಡಮಾಡದೆ ನಿನ್ನ ಹತ್ತರ ಕಳುಹಿಸಿದೆನು. ನೀನು ಬಂದದ್ದು ಉಪಕಾರವಾಯಿತು. ಹೀಗಿರುವದರಿಂದ ಕರ್ತನು ನಿನಗೆ ಅಪ್ಪಣೆ ಕೊಟ್ಟಿರುವ ಎಲ್ಲಾ ಮಾತುಗಳನ್ನು ಕೇಳುವದಕ್ಕೆ ನಾವೆಲ್ಲರು ಈಗ ದೇವರ ಸನ್ನಿಧಾನದಲ್ಲಿ ಕೂಡಿದ್ದೇವೆ ಅಂದನು.

ಕೊರ್ನೆಲೇಯನ ಮನೆಯವರಿಗೆ ಭೋಧಿಸಿದ್ದು

34 ಆಗ ಪೇತ್ರನು ಉಪದೇಶಮಾಡಲಾರಂಭಿಸಿ ಹೇಳಿದ್ದೇನಂದರೆ – 
 
35 ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ. 
 
36 ಎಲ್ಲಾ ಜನಗಳಿಗೂ ಕರ್ತನಾಗಿರುವ ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನದ ಶುಭಸಮಾಚಾರವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ಅನುಗ್ರಹಿದ ವಾಕ್ಯವು ನಿಮಗೇ ತಿಳಿದಿರುವದು. 
 
37 ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೋಹಾನನು ಸಾರಿದ ತರುವಾಯ ಈ ವಾಕ್ಯವು ಗಲಿಲಾಯದಿಂದ ಪ್ರಾರಂಭವಾಗಿ ಯೂದಾಯದಲ್ಲೆಲ್ಲಾ ಪ್ರಬಲವಾಯಿತು. 
 
38 ದೇವರು ನಜರೇತಿನ ಯೇಸುವನ್ನು ಪವಿತ್ರಾತ್ಮದಿಂದಲೂ ಬಲದಿಂದಲೂ ಅಭಿಷೇಕಿಸಿದನು; ದೇವರು ಆತನ ಸಂಗಡ ಇದ್ದದರಿಂದ ಆತನು ಉಪಕಾರಗಳನ್ನು ಮಾಡುತ್ತಾ ಸೈತಾನನಿಂದ ಬಾಧಿಸಲ್ಪಡುತ್ತಿರುವವರೆಲ್ಲರನ್ನು ಗುಣಮಾಡುತ್ತಾ ಸಂಚರಿಸಿದನು; ಇದೆಲ್ಲಾ ನಿಮಗೆ ಗೊತ್ತಾಗಿರುವದಷ್ಟೆ. 
 
39 ಆತನು ಯೆಹೂದ್ಯರ ಸೀಮೆಯಲ್ಲಿಯೂ ಯೆರೂಸಲೇಮಿನಲ್ಲಿಯೂ ಮಾಡಿದ ಎಲ್ಲಾ ಕಾರ್ಯಗಳಿಗೆ ನಾವು ಸಾಕ್ಷಿಗಳಾಗಿದ್ದೇವೆ. 
 
40 ಆತನನ್ನು ಮರದ ಕಂಬಕ್ಕೆ ತೂಗಹಾಕಿ ಕೊಂದರು. 
 
41 ದೇವರು ಆತನನ್ನು ಮೂರನೆಯ ದಿನದಲ್ಲಿ ಎಬ್ಬಿಸಿ ಪ್ರತ್ಯಕ್ಷನಾಗುವಂತೆ ಮಾಡಿದನು; ಆತನು ಎಲ್ಲರಿಗೆ ಪ್ರತ್ಯಕ್ಷನಾಗದೆ ದೇವರು ಮುಂಚಿತವಾಗಿ ಆರಿಸಿಕೊಂಡಿದ್ದ ಸಾಕ್ಷಿಗಳಾದ ನಮಗೆ ಪ್ರತ್ಯಕ್ಷನಾದನು. ಆತನು ಸತ್ತವರೊಳಗಿಂದ ಜೀವಿತನಾಗಿ ಎದ್ದು ಬಂದ ಮೇಲೆ ನಾವು ಆತನ ಸಂಗಡ ಅನ್ನಪಾನಗಳನ್ನು ತಕ್ಕೊಂಡೆವು. 
 
42 ಆತನೇ ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬದನ್ನು ಜನರಿಗೆ ಸಾರಿ ಸಾಕ್ಷಿಹೇಳಬೇಕೆಂದು ದೇವರು ನಮಗೆ ಅಪ್ಪಣೆಕೊಟ್ಟನು. 
 
43 ಆತನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಆತನ ಹೆಸರಿನ ಮೂಲಕವಾಗಿ ಪಾಪಪರಿಹಾರವನ್ನು ಹೊಂದುವನೆಂದು ಆತನ ವಿಷಯದಲ್ಲಿ ಪ್ರವಾದಿಗಳೆಲ್ಲರು ಸಾಕ್ಷಿಹೇಳಿದ್ದಾರೆ ಅಂದನು.

ಯೆಹೂದ್ಯರ ಮೇಲೆ ಪವಿತ್ರಾತ್ಮ ಇಳಿದದ್ದು

44 ಪೇತ್ರನು ಈ ಮಾತುಗಳನ್ನು ಇನ್ನೂ ಹೇಳುತ್ತಿರುವಾಗ ಅವನ ವಾಕ್ಯವನ್ನು ಕೇಳಿದವರೆಲ್ಲರ ಮೇಲೆ ಪವಿತ್ರಾತ್ಮವರವು ಇಳಿಯಿತು. 
 
45-46 ಅವರು ನಾನಾ ಭಾಷೆಗಳನ್ನಾಡುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಪೇತ್ರನ ಸಂಗಡ ಬಂದಿದ್ದ ಯೆಹೂದ್ಯರಾದ ವಿಶ್ವಾಸಿಗಳು ಕೇಳಿದಾಗ – ಅನ್ಯಜನಗಳಿಗೂ ಪವಿತ್ರಾತ್ಮ ದಾನ ಮಾಡಲ್ಪಟ್ಟಿದೆಯಲ್ಲಾ ಎಂದು ಅತ್ಯಾಶ್ಚರ್ಯಪಟ್ಟರು. ನಡೆದ ಸಂಗತಿಯನ್ನು ಪೇತ್ರನು ನೋಡಿ – 
 
47 ನಮ್ಮ ಹಾಗೆಯೇ ಪವಿತ್ರಾತ್ಮವರವನ್ನು ಹೊಂದಿದ ಇವರಿಗೆ ನೀರಿನ ದೀಕ್ಷಾಸ್ನಾನವಾಗದಂತೆ ಯಾರಾದರೂ ಅಭ್ಯಂತರ ಮಾಡಾರೇ ಎಂದು ಹೇಳಿ 
 
48 ಅವರಿಗೆ – ನೀವು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಅಪ್ಪಣೆಕೊಟ್ಟನು. ಆಮೇಲೆ ಅವರು ಅವನನ್ನು – ಇನ್ನೂ ಕೆಲವು ದಿವಸ ಇರಬೇಕೆಂದು ಬೇಡಿಕೊಂಡರು.
 
ಎಫೆಸದವರಿಗೆ 2 ಕೃಪೆಯಿಂದ ನಂಬಿಕೆಯ ಮೂಲಕ
 
1 ಆತನು ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಸಹ ಬದುಕಿಸಿದನು. 
 
2 ನೀವು ಪೂರ್ವದಲ್ಲಿ ಅಪರಾಧಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿಗೆ, ಅಂದರೆ ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮನಿಗೆ ಅನುಸಾರವಾಗಿ ನಡೆದುಕೊಂಡಿರಿ. 
 
3 ನಾವೆಲ್ಲರೂ ಪೂರ್ವದಲ್ಲಿ ಅವಿಧೇಯರಾಗಿದ್ದು ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಫೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವಸಿದ್ಧವಾಗಿ ದೇವರ ಕೋಪಕ್ಕೆ ಗುರಿಯಾಗಿದ್ದೆವು. 
 
4 ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮ ಮೇಲೆ ಮಹಾ ಪ್ರೀತಿಯನ್ನಿಟ್ಟು 5ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ.) 
 
6 ಬದುಕಿಸಿದ್ದಲ್ಲದೆ ತಾನು ಕ್ರಿಸ್ತ ಯೇಸುವಿನಲ್ಲಿ ನಮಗೆ ಮಾಡುವ ಉಪಕಾರದ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು 
 
7 ಮುಂದಣ ಯುಗಗಳಲ್ಲಿ ತೋರಿಸಬೇಕೆಂದು ಕ್ರಿಸ್ತ ಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ ಪರಲೋಕದಲ್ಲಿ ಆತನೊಂದಿಗೆ ಕೂಡ್ರಿಸಿದ್ದಾನೆ. 
 
8 ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. 
 
9 ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ. 
 
10 ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇಮಿಸಿದನು.
ಆತನ ರಕ್ತದಿಂದ ಹತ್ತಿರವಾಗಿದ್ದೇವೆ.
11 ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ; ಶರೀರದಲ್ಲಿ ಕೈಯಿಂದ ಸುನ್ನತಿಮಾಡಿಸಿಕೊಂಡು ಸುನ್ನತಿಯವರೆನಿಸಿಕೊಳ್ಳುವವರು ನಿಮ್ಮನ್ನು ಸುನ್ನತಿಯಿಲ್ಲದವರೆಂದು ಹೇಳುತ್ತಾರೆ. 
 
12 ನೀವು ಪೂರ್ವಕಾಲದಲ್ಲಿ ಕ್ರಿಸ್ತನನ್ನು ಸೇರದವರಾಗಿದ್ದು ಇಸ್ರಾಯೇಲ್ಯ ಹಕ್ಕಿನಲ್ಲಿ ಪಾಲಿಲ್ಲದವರೂ [ಅಬ್ರಹಾಮನಿಗೆ ಉಂಟಾದ] ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಸೇರದವರೂ ಈ ಲೋಕದಲ್ಲಿ ಯಾವ ನಿರೀಕ್ಷೆಯಿಲ್ಲದವರೂ ದೇವರನ್ನರಿಯದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ. 
 

13 ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ. 

ಕ್ರಿಸ್ತನೇ ಸಮಾಧಾನಕರ್ತೃವಾಗಿದ್ದಾನೆ.
14 ನಿಮ್ಮನ್ನೂ ನಮ್ಮನ್ನೂ ಒಂದು ಮಾಡಿದವನಾದ ಆತನೇ ನಮಗೆ
ನಮಗೆ ಸಮಾಧಾನಕರ್ತೃವಾಗಿದ್ದಾನೆ. ಆತನು ತನ್ನ ಶರೀರವನ್ನು ಸಮರ್ಪಿಸಿದ್ದರಲ್ಲಿ ವಿಧಿರೂಪವಾದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ತೆಗೆದುಹಾಕಿ ಇದ್ದ ದ್ವೇಷವನ್ನು ಮುಗಿಸಿ ನಮ್ಮನ್ನು ಅಗಲಿಸಿದ ಅಡ್ಡಗೋಡೆಯನ್ನು ಕೆಡವಿಹಾಕಿದನು.
 
15 ಆತನು ಸಮಾಧಾನಮಾಡುವವನಾಗಿ ಉಭಯರನ್ನೂ ತನ್ನಲ್ಲಿ ಒಬ್ಬ ನೂತನಪುರುಷನನ್ನಾಗಿ ನಿರ್ಮಿಸಿದ್ದಾನೆ; 
 
16 ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನಪಡಿಸಿದ್ದಾನೆ. 
 
17 ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಸಮಾಧಾನವನ್ನು ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. 
 
18 ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು. 
ಕ್ರಿಸ್ತನೇ ನಮ್ಮ ಮೂಲೆಗಲ್ಲು
19 ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದೀರಿ. 
 
20 ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. 
 
21 ಯೇಸು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು; ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ. 
 
22 ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ.
 

ಅಪೊಸ್ತಲರ ಕೃತ್ಯಗಳು11 ಪೇತ್ರನು ದೇವರ ಕೃಪೆಯನ್ನು ಕಾಪಾಡಿಕೊಂಡದ್ದು

1 ಅನ್ಯಜನರು ಸಹ ದೇವರ ವಾಕ್ಯವನ್ನು ಅಂಗೀಕರಿಸಿದರೆಂಬ ಸಮಾಚಾರವನ್ನು ಅಪೊಸ್ತಲರೂ ಯೂದಾಯದಲ್ಲಿದ್ದ ಸಹೋದರರೂ ಕೇಳಿದರು. 
 
2-3 ಪೇತ್ರನು ಯೆರೂಸಲೇಮಿಗೆ ಬಂದಾಗ ಸುನ್ನತಿಯವರು – ನೀನು ಸುನ್ನತಿಯಿಲ್ಲದವರಲ್ಲಿ ಸೇರಿ ಅವರ ಸಂಗಡ ಊಟಮಾಡಿದೆಯಲ್ಲಾ ಎಂದು ಅವನ ಕೂಡ ವಿವಾದಿಸಿದರು. 
 
4 ಪೇತ್ರನು ನಡೆದ ಸಂಗತಿಯನ್ನು ಅವರಿಗೆ ಮೊದಲಿಂದ ಕ್ರಮವಾಗಿ ವಿವರಿಸಿ ಹೇಳಿದ್ದೇನಂದರೆ – 
 
5 ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆಮಾಡುತ್ತಿದ್ದಾಗ ಧ್ಯಾನಪರವಶನಾಗಿದ್ದ ನನಗೆ ಒಂದು ದರ್ಶನವಾಯಿತು; ಅದೇನಂದರೆ ಆಕಾಶದಿಂದ ನಾಲ್ಕು ಮೂಲೆಗಳನ್ನು ಹಿಡಿದಿದ್ದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಇಳಿಸಲ್ಪಟ್ಟು ನಾನಿದ್ದಲ್ಲಿಗೆ ಬಂತು. 
 
6 ಅದೇನೆಂದು ತಿಳುಕೊಳ್ಳುವದಕ್ಕೆ ನಾನು ಚೆನ್ನಾಗಿ ನೋಡಿದಾಗ ನೆಲದ ಮೇಲೆ ತಿರುಗಾಡುವ ಪಶು ಮೃಗ ಕ್ರಿಮಿಕೀಟಗಳನ್ನೂ ಅಂತರಿಕ್ಷದಲ್ಲಿ ಹಾರಾಡುವ ಹಕ್ಕಿಗಳನ್ನೂ ಕಂಡೆನು. 
 
7 ಆಗ – ಪೇತ್ರನೇ, ಎದ್ದು ಕೊಯ್ದು ತಿನ್ನು ಎಂದು ನನಗೆ ಹೇಳುವ ವಾಣಿಯನ್ನು ಕೇಳಿದೆನು. 
 
8 ನಾನು – ಬೇಡವೇ ಬೇಡ, ಸ್ವಾಮೀ, ಹೊಲೆಯಾದ ಪದಾರ್ಥವಾಗಲಿ ಅಶುದ್ಧ ಪದಾರ್ಥವಾಗಲಿ ಎಂದೂ ನನ್ನ ಬಾಯೊಳಗೆ ಸೇರಿದ್ದಿಲ್ಲ ಅಂದೆನು. 
 
9 ಅದಕ್ಕೆ – ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬಾರದು ಎಂಬದಾಗಿ ಎರಡನೆಯ ಸಾರಿ ಆಕಾಶವಾಣಿಯಾಯಿತು. 
 
10 ಹೀಗೆ ಮೂರು ಸಾರಿ ಆಯಿತು. ಆಮೇಲೆ ಎಲ್ಲವೂ ತಿರಿಗಿ ಆಕಾಶಕ್ಕೆ ಎತ್ತಲ್ಪಟ್ಟಿತು. 
 
11 ಆ ಕ್ಷಣದಲ್ಲೇ ಮೂರು ಮಂದಿ ಮನುಷ್ಯರು ನಾವಿದ್ದ ಮನೆಯ ಮುಂದೆ ನಿಂತಿದ್ದರು. ಅವರು ಕೈಸರೈಯದಿಂದ ನನ್ನ ಹತ್ತರಕ್ಕೆ ಕಳುಹಿಸಲ್ಪಟ್ಟವರು. 
 
12 ದೇವರಾತ್ಮನು – ನೀನು ಏನೂ ಭೇದಮಾಡದೆ ಅವರ ಜೊತೆಯಲ್ಲಿ ಹೋಗು ಎಂದು ನನಗೆ ಹೇಳಿದನು. ಈ ಆರು ಮಂದಿ ಸಹೋದರರು ಸಹ ನನ್ನ ಸಂಗಡ ಬಂದರು. 
 
13 ಆ ಮನುಷ್ಯನ ಮನೆಯೊಳಗೆ ನಾವು ಸೇರಲು ಅವನು ನಮಗೆ – ಒಬ್ಬ ದೇವದೂತನು ನನ್ನ ಮನೆಯಲ್ಲಿ ನಿಂತಿರುವದನ್ನು ಕಂಡೆನು. ಆ ದೂತನು – ನೀನು ಯೊಪ್ಪಕ್ಕೆ ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರಿಸು; 
 
14 ಅವನು ನಿನಗೆ ಕೆಲವು ಮಾತುಗಳನ್ನು ಹೇಳುವನು, ಆ ಮಾತುಗಳಿಂದ ನಿನಗೂ ನಿನ್ನ ಮನೆಯವರೆಲ್ಲರಿಗೂ ರಕ್ಷಣೆಯಾಗುವದು ಎಂದು ಹೇಳಿದನೆಂಬದಾಗಿ ತಿಳಿಸಿದನು. 
 
15 ನಾನು ಮಾತಾಡುವದಕ್ಕೆ ಪ್ರಾರಂಭಿಸಿದಾಗ ಪವಿತ್ರಾತ್ಮ ವರವು ಮೊದಲು ನಮ್ಮ ಮೇಲೆ ಇಳಿದಂತೆ ಅವರ ಮೇಲೆಯೂ ಇಳಿಯಿತು. 
 
16 ಆಗ – ಯೋಹಾನನಂತೂ ನೀರಿನ ದೀಕ್ಷಾಸ್ನಾನಮಾಡಿಸಿದನು; ನಿಮಗಾದರೋ ಪವಿತ್ರಾತ್ಮದಲ್ಲಿ ಸ್ನಾನವಾಗುವದು ಎಂದು ಯೇಸುಸ್ವಾಮಿ ಹೇಳಿದ ಮಾತು ನನ್ನ ನೆನಪಿಗೆ ಬಂತು. 
 
17 ದೇವರು ಕರ್ತನಾಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಮಗೆ ಕೊಟ್ಟ ವರಕ್ಕೆ ಸರಿಯಾದ ವರವನ್ನು ಅವರಿಗೂ ಕೊಟ್ಟಿರಲಾಗಿ ದೇವರನ್ನು ತಡೆಯುವದಕ್ಕೆ ನಾನು ಶಕ್ತನೋ? 
 
18 ಹೀಗೆಂದ ಮಾತುಗಳನ್ನು ಆ ಸುನ್ನತಿಯವರು ಕೇಳಿ ಆಕ್ಷೇಪಣೆ ಮಾಡುವದನ್ನು ಬಿಟ್ಟು – ಹಾಗಾದರೆ ದೇವರು ಅನ್ಯಜನರಿಗೂ ಜೀವಕೊಡಬೇಕೆಂದು ಅವರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿದ್ದಾನೆ ಎಂದು ದೇವರನ್ನು ಕೊಂಡಾಡಿದರು.
 

ಅಂತಿಯೋಕ್ಯದಲ್ಲಿ ಬಹುಜನ ಗ್ರೀಕರು ನಂಬಿದ್ದು; ಬಾರ್ನಬ ಸೌಲರು ಅಲ್ಲಿ ಬೋಧಿಸಿದ್ದು; ಆ ಪಟ್ಟಣದಲ್ಲಿ ಕ್ರೈಸ್ತರೆಂಬ ಹೆಸರು ಉತ್ಪತ್ತಿಯಾದದ್ದು

 
19 ಸ್ತೆಫನನ ವಿಷಯದಲ್ಲಿ ಉಂಟಾದ ಹಿಂಸೆಯಿಂದ ಚದರಿಹೋದವರು ಯೆಹೂದ್ಯರಿಗೇ ಹೊರತು ಮತ್ತಾರಿಗೂ ವಾಕ್ಯವನ್ನು ಹೇಳದೆ ಫೊಯಿನಿಕೆ ಕುಪ್ರ ಅಂತಿಯೋಕ್ಯ ಪ್ರಾಂತ್ಯಗಳವರೆಗೂ ಸಂಚರಿಸಿದರು. 
 
20 ಅವರಲ್ಲಿ ಕುಪ್ರದ್ವೀಪದವರು ಕೆಲವರೂ ಕುರೇನ್ಯದವರು ಕೆಲವರೂ ಅಂತಿಯೋಕ್ಯಕ್ಕೆ ಬಂದು ಗ್ರೀಕರ ಸಂಗಡಲೂ ಮಾತಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದರು. 
 
21 ಕರ್ತನ ಹಸ್ತವು ಅವರಿಗೆ ಸಹಾಯವಾದ್ದರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿಕೊಂಡರು. 
 
22 ಇವರ ವಿಷಯವಾದ ವರ್ತಮಾನವು ಯೆರೂಸಲೇಮಿನಲ್ಲಿದ್ದ ಸಭೆಯವರ ಕಿವಿಗೆ ಬಿದ್ದಾಗ ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿದರು. 
 
23-24 ಅವನು ಒಳ್ಳೆಯವನೂ ಪವಿತ್ರಾತ್ಮಭರಿತನೂ ನಂಬಿಕೆಯಿಂದ ತುಂಬಿದವನೂ ಆಗಿದ್ದನು. ಆದಕಾರಣ ಅಲ್ಲಿಗೆ ಬಂದು ದೇವರ ಕೃಪಾಕಾರ್ಯವನ್ನು ನೋಡಿದಾಗ ಸಂತೋಷಪಟ್ಟು – ನೀವು ದೃಢಮನಸ್ಸಿನಿಂದ ಕರ್ತನಲ್ಲಿ ನೆಲೆಗೊಂಡಿರ್ರಿ ಎಂದು ಅವರೆಲ್ಲರಿಗೆ ಬುದ್ಧಿ ಹೇಳಿದನು. 
 
25 ಆಗ ಬಹುಮಂದಿ ಕರ್ತನಿಗೆ ಸೇರಿಕೊಂಡರು. ತರುವಾಯ ಬಾರ್ನಬನು ಸೌಲನನ್ನು ಹುಡುಕುವದಕ್ಕಾಗಿ ತಾರ್ಸಕ್ಕೆ ಹೋಗಿ 
 

26 ಅವನನ್ನು ಕಂಡು ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಆಮೇಲೆ ಅವರು ಪೂರಾ ಒಂದು ವರುಷ ಸಭೆಯವರ ಸಂಗಡ ಕೂಡಿದ್ದು ಬಹು ಜನರಿಗೆ ಉಪದೇಶಮಾಡಿದರು. ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು ಬಂತು.

ಯೂದಾಯ ಸೀಮೆಗೆ ಬಿಡುಗಡೆ

27 ಆ ಕಾಲದಲ್ಲಿ ಪ್ರವಾದಿಗಳಾಗಿದ್ದ ಕೆಲವರು ಯೆರೂಸಲೇಮಿನಿಂದ ಅಂತಿಯೋಕ್ಯಕ್ಕೆ ಬಂದರು. 
 
28 ಅವರಲ್ಲಿ ಅಗಬನೆಂಬವನೊಬ್ಬನು ಎದ್ದು ಲೋಕಕ್ಕೆಲ್ಲಾ ದೊಡ್ಡ ಕ್ಷಾಮ ಬರುವದು ಎಂದು ಪವಿತ್ರಾತ್ಮ ಪ್ರೇರಣೆಯಿಂದ ಸೂಚಿಸಿದನು. ಅದು ಕ್ಲೌದ್ಯಚಕ್ರವರ್ತಿಯ ಕಾಲದಲ್ಲಿ ಉಂಟಾಯಿತು; 
 
29 ಆಗ ಆ ಶಿಷ್ಯರಲ್ಲಿ ಪ್ರತಿಯೊಬ್ಬರು ಯೂದಾಯ ಸೀಮೆಯಲ್ಲಿ ವಾಸವಾಗಿದ್ದ ಸಹೋದರರಿಗೆ ತಮ್ಮ ತಮ್ಮ ಶಕ್ತ್ಯನುಸಾರ ದ್ರವ್ಯ ಸಹಾಯಮಾಡಬೇಕೆಂದು ನಿಶ್ಚಯಿಸಿಕೊಂಡರು. 
 
30 ಹಾಗೆಯೇ ಮಾಡಿ ಅದನ್ನು ಬಾರ್ನಬ ಸೌಲರ ಕೈಯಿಂದ ಸಭೆಯ ಹಿರಿಯರಿಗೆ ಕಳುಹಿಸಿದರು.

ಅಪೊಸ್ತಲರ ಕೃತ್ಯಗಳು12 ಹೆರೋದನು ಸಭೆಗಳನ್ನು ಹಿಂಸೆಪಡಿಸಿದ್ದು

1 ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವದಕ್ಕೆ ಕೈಹಾಕಿ

2 ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.

3 ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ನೋಡಿ ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಹಿಡಿಸಿದನು. ಆ ಕಾಲದಲ್ಲಿ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು.

4 ಅವನನ್ನು ಪಸ್ಕಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು.

ಪೇತ್ರನು ಸೆರೆಮನೆಯಿಂದ ತಪ್ಪಿಸಲ್ಪಟ್ಟದ್ದು

5 ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ ಸಭೆಯವರು ಆತನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆಮಾಡುತ್ತಿದ್ದರು.

6 ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿವಸದ ಹಿಂದಿನ ರಾತ್ರಿಯಲ್ಲಿ ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ ಇಬ್ಬರು ಸಿಪಾಯಿಗಳ ನಡುವೆ ನಿದ್ದೆ ಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು.

7 ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು. ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ – ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು.

8 ಆ ದೂತನು ಅವನಿಗೆ – ನಡುಕಟ್ಟಿಕೊಂಡು ನಿನ್ನ ಕೆರಗಳನ್ನು ಮೆಟ್ಟಿಕೋ ಎಂದು ಹೇಳಲು ಅವನು ಹಾಗೇ ಮಾಡಿದನು. ನಿನ್ನ ಮೇಲಂಗಿಯನ್ನು ಹಾಕಿಕೊಂಡು ನನ್ನ ಹಿಂದೆ ಬಾ ಅಂದನು.

9 ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ ದೂತನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ಕನಸು ಎಂದು ನೆನಸಿದನು.

10 ಅವರು ಮೊದಲನೆಯ ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು. ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೇ ಆ ದೂತನು ಅವನನ್ನು ಬಿಟ್ಟು ಹೋದನು.

11 ಆಗ ಪೇತ್ರನು ಎಚ್ಚರವಾಗಿ – ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿದುಬಂದಿದೆ ಅಂದುಕೊಂಡನು.

12 ತರುವಾಯ ಅವನು ಯೋಚನೆಮಾಡಿಕೊಂಡು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆಮಾಡುತ್ತಿದ್ದರು.

13 ಪೇತ್ರನು ಬಾಗಿಲಿನ ಕದವನ್ನು ತಟ್ಟಲು ರೋದೆ ಎಂಬ ಒಬ್ಬ ಚಾಕರಿಯವಳು ನೋಡುವದಕ್ಕೆ ಬಂದಳು.

14 ಅವಳು ಪೇತ್ರನ ಧ್ವನಿಯನ್ನು ಗೊತ್ತುಹಿಡಿದು ಸಂತೋಷದ ನಿಮಿತ್ತದಿಂದಲೇ ಬಾಗಿಲನ್ನು ತೆರೆಯದೆ ಒಳಕ್ಕೆ ಓಡಿಹೋಗಿ – ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆ ಎಂದು ತಿಳಿಸಿದಳು. ಅವರು ಅವಳಿಗೆ – ನಿನಗೆ ಹುಚ್ಚು ಹಿಡಿದದೆ ಎಂದು ಹೇಳಿದರು.

15 ಆದರೆ ಅವಳು ತಾನು ಹೇಳಿದಂತೆಯೇ ಅದೆ ಎಂದು ದೃಢವಾಗಿ ಹೇಳುತ್ತಾ ಇರಲು ಅವನ ದೂತನಾಗಿರಬೇಕು ಅಂದರು.

16 ಅಷ್ಟರಲ್ಲಿ ಪೇತ್ರನು ಇನ್ನೂ ತಟ್ಟುತ್ತಾ ಇರಲು ಅವರು ಬಾಗಿಲನ್ನು ತೆರೆದು ಅವನನ್ನು ಕಂಡು ಬೆರಗಾದರು.

17 ಆದರೆ ಅವನು ಸುಮ್ಮಗಿರ್ರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರೆದುಕೊಂಡು ಬಂದ ರೀತಿಯನ್ನು ವಿವರಿಸಿ ಈ ಸಂಗತಿಗಳನ್ನು ಯಾಕೋಬನಿಗೂ ಸಹೋದರರೆಲ್ಲರಿಗೂ ತಿಳಿಸಿರೆಂದು ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.

18 ಬೆಳಗಾದ ಮೇಲೆ ಪೇತ್ರನು ಏನಾದನೆಂದು ಸಿಪಾಯಿಗಳಲ್ಲಿ ಬಹಳ ಕಳವಳ ಉಂಟಾಯಿತು.

19 ಹೆರೋದನು ಅವನನ್ನು ಹುಡುಕಿಸಿ ಅವನು ಸಿಕ್ಕಲಿಲ್ಲವಾದದರಿಂದ ಕಾವಲುಗಾರರನ್ನು ವಿಚಾರಣೆಮಾಡಿ ಅವರಿಗೆ ಮರಣದಂಡನೆಯನ್ನು ವಿಧಿಸಿದನು. ಬಳಿಕ ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಕೆಲವು ಕಾಲ ಇದ್ದನು.

ಹೆರೋದನ ದುರ್ಮರಣ

20 ತೂರ್ ಸೀದೋ ಪಟ್ಟಣಗಳ ನಿವಾಸಿಗಳು ತಮ್ಮ ಮೇಲೆ ಹೆರೋದನು ಬಹಳವಾಗಿ ಕೋಪಿಸಿಕೊಂಡಿರುವದನ್ನು ನೋಡಿ ಒಂದೇ ಮನಸ್ಸಿನಿಂದ ಅವನ ಸನ್ನಿಧಿಗೆ ಬಂದು ಅರಸನ ಅಂತಃಪುರದ ಮೇಲಣ ಅಧಿಕಾರಿಯಾದ ಬ್ಲಾಸ್ತನನ್ನು ಒಲಿಸಿಕೊಂಡು ಸಮಾಧಾನವಾಗಬೇಕೆಂದು ಅರಸನನ್ನು ಬೇಡಿಕೊಂಡರು. ಯಾಕಂದರೆ ಅರಸನ ಸೀಮೆಯಿಂದಲೇ ಅವರ ಸೀಮೆಗೆ ದವಸಧಾನ್ಯ ಬರುತ್ತಿತ್ತು.

21 ಗೊತ್ತುಮಾಡಿದ ಒಂದು ದಿನದಲ್ಲಿ ಹೆರೋದನು ರಾಜವಸ್ತ್ರವನ್ನು ಧರಿಸಿಕೊಂಡು ರಾಜಾಸನದ ಮೇಲೆ ಕೂತು ಅವರಿಗೆ ಉಪನ್ಯಾಸ ಮಾಡಿದನು.

22 ಕೂಡಿದ್ದ ಜನರು – ಇದು ಮನುಷ್ಯನ ನುಡಿಯಲ್ಲ, ದೇವರ ನುಡಿಯೇ ಎಂದು ಆರ್ಭಟಿಸಿದರು.

23 ಆ ಘನವನ್ನು ಅವನು ದೇವರಿಗೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಬಡಿದನು; ಅವನು ಹುಳಬಿದ್ದು ಸತ್ತನು.

24 ಆದರೆ ದೇವರ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು.

25 ಬಾರ್ನಬ ಸೌಲರು ಮಾಡಬೇಕಾದ ಧರ್ಮಕಾರ್ಯವನ್ನು ತೀರಿಸಿ ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಕರಕೊಂಡು ಯೆರೂಸಲೇಮಿನಿಂದ ಹಿಂತಿರಿಗಿ ಬಂದರು.

Related Quiz Articles