ಪ್ರವಾದಿಗಳು ಮತ್ತು ಅರಸುಗಳು

ಭಾಗ 1

1 ಸಮುವೇಲ 8

ಇಸ್ರಾಯೇಲರು ಅರಸುಗಳು ಬೇಕೆಂದು ಒತ್ತಾಯಿಸಿದ್ದು

1 ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಾಯೇಲ್ಯರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು. 
 
2 ಅವನ ಚೊಚ್ಚಲ ಮಗನ ಹೆಸರು ಯೋವೇಲ್, ಮರಚಲ ಮಗನ ಹೆಸರು ಅಬೀಯ. 
 
3 ಇವರ ನ್ಯಾಯಾಸನವು ಬೇರ್ಷೆಬದಲ್ಲಿತ್ತು. ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚತೆಗೆದುಕೊಂಡು ನ್ಯಾಯವಿರುದ್ಧವಾದ ತೀರ್ಪುಮಾಡುತ್ತಿದ್ದದರಿಂದ 
 
4 ಇಸ್ರಾಯೇಲ್ಯರ ಹಿರಿಯರೆಲ್ಲರೂ ಕೂಡಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು ಅವನಿಗೆ
 
5 ನೀನಂತೂ ಮುದುಕನಾದಿ; ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವದಿಲ್ಲ. ಆದದರಿಂದ ಬೇರೆ ಎಲ್ಲಾ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸು; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ ಅಂದರು. 
 
6 ನ್ಯಾಯಸ್ಥಾಪನೆಗೋಸ್ಕರ ನಮಗೊಬ್ಬ ಅರಸನನ್ನು ನೇಮಿಸಿಕೊಡು ಎಂಬ ಮಾತಿಗೆ ಸಮುವೇಲನು ದುಃಖಪಟ್ಟು ಯೆಹೋವನನ್ನು ಪ್ರಾರ್ಥಿಸಲು ಆತನು ಅವನಿಗೆ – 
 
7 ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳಿಕೆಗೆ ಬೇಡವೆನ್ನುತ್ತಾರೆ. 
 
8 ನಾನು ಅವರನ್ನು ಐಗುಪ್ತದಿಂದ ಬಿಡಿಸಿದಂದಿನಿಂದ ಇಂದಿನವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸಿದರು. ನನಗೆ ಹೇಗೆ ಮಾಡಿದರೋ ಹಾಗೆಯೇ ನಿನಗೂ ಮಾಡುತ್ತಾರೆ. 
 
9 ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರವೆಷ್ಟೆಂಬದನ್ನು ಅವರಿಗೆ ತಿಳಿಸಿ ಎಚ್ಚರಿಸದೆ ಇರಬೇಡ ಎಂದು ಹೇಳಿದನು.
 

ರಾಜರುಗಳ ಕುರಿತಾದ ಎಚ್ಚರಿಕೆ

10 ಸಮುವೇಲನು ಅರಸನನ್ನು ಬೇಡಿಕೊಂಡ ಜನರಿಗೆ ಯೆಹೋವನ ಮಾತುಗಳನ್ನೆಲ್ಲಾ ತಿಳಿಸಿ 
 
11 ಅವರಿಗೆ – ಅರಸನ ಅಧಿಕಾರವೆಷ್ಟೆಂದು ಕೇಳಿರಿ – ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು; ಅವರು ಅವನ ರಥಗಳ ಮುಂದೆ ಓಡುವವರಾಗಬೇಕು. 
 
12 ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ ಪೈರನ್ನು ಕೊಯ್ಯುವವರೂ ಯುದ್ಧಾಯುಧ, ರಥಸಾಹಿತ್ಯ ಇವುಗಳನ್ನು ಮಾಡುವವರೂ ಆಗಬೇಕು. 
 
13 ಇದಲ್ಲದೆ ಅವನು ನಿಮ್ಮ ಹೆಣ್ಣುಮಕ್ಕಳನ್ನು ಸುಗಂಧದ್ರವ್ಯಮಾಡುವದಕ್ಕೂ ಅಡಿಗೆ ಮಾಡುವದಕ್ಕೂ ರೊಟ್ಟಿಸುಡುವದಕ್ಕೂ ನೇಮಿಸಿಕೊಳ್ಳುವನು. 
 
14 ನಿಮ್ಮ ಉತ್ತಮವಾದ ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ಎಣ್ಣೇ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು. 
 
15 ನಿಮ್ಮ ಧಾನ್ಯದ್ರಾಕ್ಷೆಗಳಲ್ಲಿ ದಶಮಾಂಶವನ್ನು ತೆಗೆದುಕೊಂಡು ತನ್ನ ಪ್ರಧಾನರಿಗೂ ಪರಿವಾರದವರಿಗೂ ಕೊಡುವನು. 
 
16 ನಿಮ್ಮ ದಾಸದಾಸಿಯರನ್ನೂ ಉತ್ತಮವಾದ ಎತ್ತು ಕತ್ತೆಗಳನ್ನೂ ತನ್ನ ಕೆಲಸಕ್ಕೆ ಹಚ್ಚಿಕೊಳ್ಳುವನು. 
 
17 ಕುರಿಹಿಂಡುಗಳಲ್ಲಿ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು; ನೀವು ಅವನಿಗೆ ದಾಸರಾಗಿರಬೇಕು. 
 
18 ಆಗ ನೀವು ಆರಿಸಿಕೊಂಡ ಅರಸನ ದೆಸೆಯಿಂದ ಆ ದಿನದಲ್ಲಿ ಬೇಸತ್ತು ಯೆಹೋವನಿಗೆ ಮೊರೆಯಿಡುವಿರಿ; ಆಗ ಆತನು ನಿಮ್ಮನ್ನು ಲಕ್ಷಿಸುವದಿಲ್ಲ ಅಂದನು. 
 
19 ಹೀಗೆ ಸಮುವೇಲನು ಎಷ್ಟು ಹೇಳಿದರೂ ಜನರು ಕೇಳದೆ – ಅದಿರಲಿ; ನಮಗೆ ಅರಸನನ್ನು ಕೊಡು; 
 
20 ನಾವು ಇತರ ಜನಾಂಗಗಳಂತೆ ಆಗಬೇಕು. ನಮ್ಮ ನ್ಯಾಯಗಳನ್ನು ತೀರಿಸಿ ನಮಗೆ ಮುಂದಾಗಿ ಹೊರಟು ನಮಗೋಸ್ಕರ ಯುದ್ಧಮಾಡುವ ಒಬ್ಬ ಅರಸನು ಬೇಕು ಎಂದು ಹೇಳಿದರು. 
 
21 ಸಮುವೇಲನು ಜನರ ಈ ಎಲ್ಲಾ ಮಾತುಗಳನ್ನು ಯೆಹೋವನಿಗೆ ತಿಳಿಸಲಾಗಿ ಆತನು ಅವನಿಗೆ – 
 
22 ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು ಎಂದನು. ಆಗ ಸಮುವೇಲನು ಇಸ್ರಾಯೇಲ್ಯರಿಗೆ – ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ ಎಂದು ಅಪ್ಪಣೆಕೊಟ್ಟನು.
1 ಸಮುವೇಲ 9
5 ಕಡೆಗೆ ಅವರು ಚೂಫ್‍ದೇಶಕ್ಕೆ ಬಂದಾಗ ಅವನು ತನ್ನ ಆಳಿಗೆ – ಹಿಂದಿರುಗಿ ಹೋಗೋಣ ನಡಿ; ನಮ್ಮ ತಂದೆಯು ಈಗ ಕತ್ತೆಗಳ ಚಿಂತೆ ಬಿಟ್ಟು ನಮ್ಮ ಚಿಂತೆಯಲ್ಲಿದ್ದಾನು ಅನ್ನಲು ಆ ಆಳು – 
 
16 ನಾಳೆ ಇಷ್ಟು ಹೊತ್ತಿಗೆ ಬೆನ್ಯಾಮೀನ್ ದೇಶದವನೊಬ್ಬನನ್ನು ನಿನ್ನ ಬಳಿಗೆ ಬರಮಾಡುವೆನು; ನೀನು ಅವನನ್ನು ಇಸ್ರಾಯೇಲ್ಯರ ನಾಯಕನನ್ನಾಗಿ ಅಭಿಷೇಕಿಸಬೇಕು. ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು. ಅವರ ಕೂಗು ನನಗೆ ಮುಟ್ಟಿತು; ಅವರನ್ನು ಕಟಾಕ್ಷಿಸಿದ್ದೇನೆ ಎಂದು ತಿಳಿಸಿದ್ದನು. 
 
17 ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ – ನಾನು ತಿಳಿಸಿದ್ದ ಮನುಷ್ಯನು ಇವನೇ; ಇವನೇ ನನ್ನ ಪ್ರಜೆಯನ್ನು ಆಳತಕ್ಕವನು ಎಂದು ಸೂಚಿಸಿದನು. 
 
18 ಊರುಬಾಗಲಿಗೆ ಬಂದು ಸೌಲನು ಎದುರಿಗೆ ಬಂದ ಸಮುವೇಲನನ್ನು ನೋಡಿ – ದರ್ಶಿಯ ಮನೆ ಎಲ್ಲಿದೆ ಎಂಬದನ್ನು ದಯವಿಟ್ಟು ತಿಳಿಸುವಿಯೋ ಎನ್ನಲು ಸಮುವೇಲನು – 
 
19 ನಾನೇ ದರ್ಶಿಯು; ನೀನು ನನ್ನ ಜೊತೆಯಲ್ಲಿ ಗುಡ್ಡಕ್ಕೆ ಬಾ; ನೀವು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು. 
 
20 ಮೂರು ದಿವಸಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗೋಸ್ಕರ ಚಿಂತೆಮಾಡಬೇಡ; ಅವು ಸಿಕ್ಕಿವೆ. ಮತ್ತು ಇಸ್ರಾಯೇಲ್ಯರ ಶ್ರೇಷ್ಠವಸ್ತುಗಳೆಲ್ಲಾ ನಿನಗೂ ನಿನ್ನ ಕುಟುಂಬದವರಿಗೂ ಸಲ್ಲುವವಲ್ಲವೋ ಅಂದನು. 
 
21 ಅದಕ್ಕೆ ಸೌಲನು – ನಾನು ಇಸ್ರಾಯೇಲ್ ಕುಲಗಳಲ್ಲಿ ಅಲ್ಪವಾಗಿರುವ ಬೆನ್ಯಾಮೀನ್ ಕುಲದವನಲ್ಲವೋ? ಬೆನ್ಯಾಮೀನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಯಾಕೆ ಹೇಳುತ್ತೀ ಎಂದನು. 
 
22 ಸಮುವೇಲನು ಸೌಲನನ್ನೂ ಅವನ ಸೇವಕನನ್ನೂ ಮಂಟಪಕ್ಕೆ ಕರಕೊಂಡು ಹೋದನು; ಭೋಜನಕ್ಕೆ ಬಂದಿದ್ದ ಸುಮಾರು ಮೂವತ್ತು ಜನರಲ್ಲಿ ಅವರಿಬ್ಬರಿಗೂ ಮುಖ್ಯಸ್ಥಾನವನ್ನು ಕೊಟ್ಟನು. ಅನಂತರ ಸಮುವೇಲನು ಅಡಿಗೆಯವನಿಗೆ – 
 
23 ನಾನು ನಿನಗೆ ಹೇಳಿ ಪ್ರತ್ಯೇಕವಾಗಿ ಇಡಿಸಿದ್ದ ಮಾಂಸಭಾಗವನ್ನು ತಂದಿಡು ಅನ್ನಲು 
 
24 ಅವನು ಒಂದು ತೊಡೆಯ ಮಾಂಸವನ್ನೂ ಅದರ ಸಂಗಡ ಇದ್ದದ್ದನ್ನೂ ತಂದು ಸೌಲನ ಮುಂದಿಟ್ಟು ಅವನಿಗೆ – ಇಗೋ, ಇದು ನಿನಗೋಸ್ಕರ ಪ್ರತ್ಯೇಕಿಸಿದ್ದು; ಇದನ್ನು ತಿನ್ನು. ಜನರನ್ನು ಭೋಜನಕ್ಕೆ ಕರೆದಾಗಿನಿಂದ ಇದು ನಿನಗೋಸ್ಕರವಾಗಿಯೇ ಇಡಲ್ಪಟ್ಟಿತ್ತು ಎಂದು ಹೇಳಿದನು. ಸೌಲನು ಆ ದಿನ ಸಮುವೇಲನ ಸಂಗಡ ಊಟಮಾಡಿದನು. 
 
25 ಅವರು ಗುಡ್ಡದಿಂದಿಳಿದು ಪಟ್ಟಣಕ್ಕೆ ಬಂದನಂತರ ಸಮುವೇಲನು ಸೌಲನನ್ನು ತನ್ನ ಮನೇ ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅವನೊಡನೆ ಮಾತಾಡಿದನು.
ಸೌಲನಿಗೆ ರಾಜ್ಯಾಭಿಷೇಕವಾದದ್ದು
 
26 ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು – ಏಳು, ನಿನ್ನನ್ನು ಸಾಗಕಳುಹಿಸುತ್ತೇನೆ ಎಂದು ಎಬ್ಬಿಸಲು ಅವನೆದ್ದನು. ತರುವಾಯ ಅವರಿಬ್ಬರೂ ಹೊರಟು ಊರ ಹೊರಗೆ ಬಂದಾಗ 
 
27 ಸಮುವೇಲನು ಸೌಲನಿಗೆ – ನಿನ್ನ ಸೇವಕನನ್ನು ಮುಂದೆ ಕಳುಹಿಸಿ ನೀನು ಇಲ್ಲಿ ಸ್ವಲ್ಪ ನಿಲ್ಲು; ನಿನಗೆ ತಿಳಿಸಬೇಕಾದ ದೈವೋಕ್ತಿಯೊಂದುಂಟು ಎಂದನು.

1 ಸಮುವೇಲ 10

ಪ್ರವಾದಿಗಳೊಂದಿಗೆ ಸೌಲನು

1 ಆ ಆಳು ಮುಂದೆ ಹೋದಾಗ ಸಮುವೇಲನು ಎಣ್ಣೇ ಕುಪ್ಪಿಯಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು ಅವನನ್ನು ಮುದ್ದಿಟ್ಟು ಅವನಿಗೆ – ಯೆಹೋವನು ತನ್ನ ಸ್ವಾಸ್ತ್ಯದ ಮೇಲೆ ಪ್ರಭುವಾಗಿರುವದಕ್ಕೋಸ್ಕರ ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ. 
 
2 ಈ ಹೊತ್ತು ನೀನು ನನ್ನನ್ನು ಬಿಟ್ಟುಹೋದ ನಂತರ ಬೆನ್ಯಾಮೀನ್ಯರ ಮೇರೆಯೊಳಗಿರುವ ರಾಹೇಲಳ ಸಮಾಧಿಯ ಬಳಿಯಲ್ಲಿರುವಂಥ ಚೆಲ್ಚಹಿನಲ್ಲಿ ಇಬ್ಬರು ಮನುಷ್ಯರನ್ನು ಕಾಣುವಿ; ಅವರು ನಿನಗೆ – ನೀನು ಹುಡುಕುತ್ತಿರುವ ಕತ್ತೆಗಳು ಸಿಕ್ಕಿದವು; ನಿನ್ನ ತಂದೆಯು ಕತ್ತೆಗಳ ಚಿಂತೆಬಿಟ್ಟು ನನ್ನ ಮಗನೆಲ್ಲಿ ಹೋದನೋ ಎಂಬದಾಗಿ ನಿನಗೋಸ್ಕರ ಹಂಬಲಿಸುತ್ತಿರುತ್ತಾನೆ ಎಂದು ಹೇಳುವರು. 
 
3 ನೀನು ಅಲ್ಲಿಂದ ಮುಂದೆ ನಡೆದು ತಾಬೋರಿನ ಹತ್ತಿರವಿರುವ ಏಲೋನ್ ವೃಕ್ಷದ ಬಳಿಗೆ ಬಂದಾಗ ದೇವದರ್ಶನಕ್ಕಾಗಿ ಬೇತೇಲಿಗೆ ಹೋಗುವ ಮೂವರು ಜನರು ನಿನಗೆದುರಾಗುವರು. ಅವರಲ್ಲೊಬ್ಬನು ಮೂರು ಹೋತಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸದ ಒಂದು ಬುದ್ದಲಿಯನ್ನೂ ಹೊತ್ತುಕೊಂಡಿರುವರು. 
 
4 ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ ಎರಡು ರೊಟ್ಟಿಗಳನ್ನು ಕೊಡುವರು; ನೀನು ಅವುಗಳನ್ನು ತೆಗೆದುಕೊಳ್ಳಬೇಕು. 
 
5 ಅಲ್ಲಿಂದ ಫಿಲಿಷ್ಟಿಯರ ಠಾಣವಿರುವ ದೇವಗಿರಿಯನ್ನು ಮುಟ್ಟಿದಾಗ ಮುಂಗಡೆಯಲ್ಲಿ ಸ್ವರಮಂಡಲ, ದಮ್ಮಡಿ, ಕೊಳಲು, ಕಿನ್ನರಿ ಈ ವಾದ್ಯಗಾರರೊಡನೆ ಗುಡ್ಡದಿಂದಿಳಿದು ಬರುತ್ತಿರುವ ಪ್ರವಾದಿಸಮೂಹವನ್ನು ಕಾಣುವಿ. ಅವರು ಪರವಶರಾಗಿ ಪ್ರವಾದಿಸುವರು; 
 
6 ಆಗ ಯೆಹೋವನ ಆತ್ಮವು ನಿನ್ನ ಮೇಲೂ ಬರುವದರಿಂದ ನೀನೂ ಮಾರ್ಪಟ್ಟು ಪ್ರವಾದಿಸುವಿ. 
 
7 ಈ ಗುರುತುಗಳೆಲ್ಲಾ ಸಂಭವಿಸಿದಾಗ ನಿನಗೆ ಅನುಕೂಲವಿದ್ದದ್ದನ್ನು ನಡಿಸು; ದೇವರು ನಿನ್ನ ಸಂಗಡ ಇದ್ದಾನೆ. 
 
8 ನೀನು ಮುಂದಾಗಿ ಗಿಲ್ಗಾಲಿಗೆ ಹೋಗು; ಏಳು ದಿವಸಗಳಾದನಂತರ ನಾನು ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವದಕ್ಕೋಸ್ಕರ ಅಲ್ಲಿಗೆ ಬಂದು ನೀನು ಮಾಡಬೇಕಾದದ್ದನ್ನು ನಿನಗೆ ತಿಳಿಸುವೆನು; ಅಲ್ಲಿಯವರೆಗೆ ಕಾದುಕೊಂಡಿರು ಎಂದು ಹೇಳಿದನು.
 
9 ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಹೃದಯವನ್ನು ಕೊಟ್ಟನು. ಅದೇ ದಿನದಲ್ಲಿ ಆ ಎಲ್ಲಾ ಗುರುತುಗಳು ಸಂಭವಿಸಿದವು. 
 
10 ಅವನು ದೇವಗಿರಿಗೆ ಬಂದ ಕೂಡಲೆ ಪರವಶವಾದ ಪ್ರವಾದಿಸಮೂಹವು ತನ್ನೆದುರಿಗೆ ಬರುವದನ್ನು ಕಂಡನು. ದೇವರ ಆತ್ಮವು ಅವನ ಮೇಲೆ ಬಂದದರಿಂದ ಅವನೂ ಪರವಶನಾಗಿ ಅವರೊಳಗೆ ಸೇರಿ ಪ್ರವಾದಿಸಿದನು. 
 
11 ಅವನು ಪರವಶನಾಗಿ ಮಾತಾಡುವದನ್ನು ಗುರುತಿನವರು ಕಂಡು ತಮ್ಮ ತಮ್ಮೊಳಗೆ – ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿದ್ದಾನೋ ಎಂದು ಮಾತಾಡಿಕೊಳ್ಳುತ್ತಿರುವಾಗ 
 
12 ಆ ಸ್ಥಳದವನೊಬ್ಬನು – ಹಾಗಾದರೆ ಇವರ ತಂದೆ ಯಾರು ಎಂದು ಕೇಳಿದನು. ಈ ಸಂಗತಿಯಿಂದ ಸೌಲನು ಪ್ರವಾದಿಗಳಲ್ಲಿದ್ದಾನೋ ಎಂಬ ಗಾದೆ ಹುಟ್ಟಿತು. 
 
13 ಅವನು ಪ್ರವಾದಿಸಿ ಆದ ಮೇಲೆ ಪೂಜಾಸ್ಥಳಕ್ಕೆ ಬಂದನು. 
 
14 ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ – ನೀವು ಎಲ್ಲಿಗೆ ಹೋಗಿದ್ದಿರಿ ಎಂದು ಕೇಳಲು ಅವನು – ಕತ್ತೆಗಳನ್ನು ಹುಡುಕುವದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲವಾದದರಿಂದ ಸಮುವೇಲನ ಬಳಿಗೆ ಹೋದೆವು ಅಂದನು. 
 
15 ಸಮುವೇಲನು ಏನು ಹೇಳಿದನೆಂದು ಚಿಕ್ಕಪ್ಪನು ಕೇಳಲು ಸೌಲನು – 
 
16 ಕತ್ತೆಗಳು ಸಿಕ್ಕಿದವೆಂದು ತಿಳಿಸಿದನು ಎಂಬದಾಗಿ ಹೇಳಿದನೇ ಹೊರತು ಅವನು ಹೇಳಿದ ರಾಜ್ಯದ ಮಾತನ್ನು ತಿಳಿಸಲಿಲ್ಲ.

ಸೌಲನನ್ನು ಅರಸನನ್ನಾಗಿ ಆರಿಸಿಕೊಂಡದ್ದು

17 ಸಮುವೇಲನು ಇಸ್ರಾಯೇಲ್ಯರನ್ನು ಮಿಚ್ಪೆಗೆ ಕರಿಸಿ ಯೆಹೋವನ ಸನ್ನಿಧಿಯಲ್ಲಿ ಕೂಡಿಸಿಕೊಂಡು 
 
18 ಅವರಿಗೆ – ಇಸ್ರಾಯೇಲ್ ದೇವರಾದ ಯೆಹೋವನು ಹೇಳುವದನ್ನು ಕೇಳಿರಿ; ಆತನು ನಿಮಗೆ – ನೀವು ಐಗುಪ್ತ್ಯರ ಕೈಗೆ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಅವರ ದೇಶದಿಂದ ಬಿಡಿಸಿದವನೂ ಬಾಧಿಸುತ್ತಿದ್ದ ಬೇರೆ ಎಲ್ಲಾ ಜನಾಂಗಗಳಿಂದ ನಿಮ್ಮನ್ನು ರಕ್ಷಿಸಿದವನೂ ನಾನೇ. 
 
19 ನೀವಾದರೋ ನಿಮ್ಮನ್ನು ಕಷ್ಟಸಂಕಟಗಳಿಂದ ಬಿಡಿಸಿದ ನಿಮ್ಮ ದೇವರಾದ ನನ್ನನ್ನು ಈಗ ತಿರಸ್ಕರಿಸಿ ನಮಗೊಬ್ಬ ಅರಸನನ್ನು ನೇಮಿಸೆಂದು ಹೇಳುತ್ತೀರಿ ಅನ್ನುತ್ತಾನೆ. ಆದದರಿಂದ ನೀವು ಕುಲಕುಲವಾಗಿಯೂ ಗೋತ್ರಗೋತ್ರವಾಗಿಯೂ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಿರಿ ಎಂದು ಅಪ್ಪಣೆ ಮಾಡಿದನು. 
 
20 ಸಮುವೇಲನು ಇಸ್ರಾಯೇಲ್ಯರ ಎಲ್ಲಾ ಕುಲಗಳನ್ನು ಸಮೀಪಕ್ಕೆ ಕರೆದಾಗ ಬೆನ್ಯಾಮೀನ್ ಕುಲಕ್ಕೆ ಚೀಟುಬಿದ್ದಿತು. 
 
21 ಆ ಕುಲದ ಗೋತ್ರಗಳನ್ನು ಬರಮಾಡಿದಾಗ ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟು ಬಿದ್ದಿತು. ಅವನನ್ನು ಹುಡುಕಲು ಅವನು ಸಿಕ್ಕಲಿಲ್ಲ. 
 
22 ಅವರು – ಆ ಮನುಷ್ಯನು ಇಲ್ಲಿಗೆ ಬರುವನೋ ಎಂದು ಯೆಹೋವನನ್ನು ವಿಚಾರಿಸಿದಾಗ ಆತನು – ಬಂದಿದ್ದಾನೆ; ಇಗೋ, ಸಾಮಾನುಗಳಲ್ಲಿ ಅಡಗಿಕೊಂಡಿದ್ದಾನೆ ಎಂದು ಉತ್ತರಕೊಟ್ಟನು. 
 
23 ಅವರು ತಟ್ಟನೆ ಹೋಗಿ ಅವನನ್ನು ಹಿಡಿದುಕೊಂಡು ಬಂದು ಜನರ ಮಧ್ಯದಲ್ಲಿ ನಿಲ್ಲಿಸಿದರು. ಎಲ್ಲಾ ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಉನ್ನತಪುರುಷನಾಗಿದ್ದನು. 
 
24 ಆಗ ಸಮುವೇಲನು ಎಲ್ಲಾ ಜನರಿಗೆ – ನೋಡಿದಿರಾ, ಯೆಹೋವನಿಂದ ಆರಿಸಲ್ಪಟ್ಟವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ ಎನ್ನಲು ಜನರೆಲ್ಲರೂ – ಅರಸನು ಚಿರಂಜೀವಿಯಾಗಿರಲಿ ಎಂದು ಆರ್ಭಟಿಸಿದರು. 
 
25 ತರುವಾಯ ಸಮುವೇಲನು ಜನರಿಗೆ ರಾಜನೀತಿಯನ್ನು ಬೋಧಿಸಿ ಅದನ್ನು ಒಂದು ಪುಸ್ತಕದಲ್ಲಿ ಬರೆದು ಯೆಹೋವನ ಸನ್ನಿಧಿಯಲ್ಲಿಟ್ಟನು; ಆಮೇಲೆ ಜನರನ್ನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು. 
 
26 ಸೌಲನೂ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು; ಕೆಲವು ಮಂದಿ ಶೂರರು ದೇವರಿಂದ ಪ್ರೇರಿತರಾಗಿ ಅವನ ಜೊತೆಯಲ್ಲಿ ಹೋದರು. 
 
27 ಕೆಲವು ಮಂದಿ ಕಾಕಪೋಕರು – ಇವನೋ ನಮ್ಮನ್ನು ರಕ್ಷಿಸುವವನು ಎಂದು ತಿರಸ್ಕರಿಸಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.

1 ಸಮುವೇಲ 11

ಸೌಲನು ಅಮ್ಮೋನಿಯರನ್ನು ಸೋಲಿಸಿದ್ದು

1 ಅಮ್ಮೋನಿಯನಾದ ನಾಹಾಷನು ಹೊರಟುಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆಹಾಕಲು ಯಾಬೇಷಿನವರು ಅವನನ್ನು – ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿಕೋ; ನಾವು ನಿನ್ನ ಸೇವಕರಾಗಿರುವೆವು ಎಂದು ಬೇಡಿಕೊಂಡರು. 
 
2 ಅದಕ್ಕೆ ಅವನು – ಎಲ್ಲಾ ಇಸ್ರಾಯೇಲ್ಯರನ್ನು ಅವಮಾನಪಡಿಸುವದಕ್ಕಾಗಿ ನಾನು ಮೊದಲು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕುತ್ತೇನೆ. ಇದಕ್ಕೆ ನೀವು ಒಪ್ಪುವಿರಾದರೆ ನಿಮ್ಮ ಸಂಗಡ ಒಡಂಬಡಿಕೆಮಾಡಿಕೊಳ್ಳುತ್ತೇನೆ ಎಂದು ಉತ್ತರಕೊಟ್ಟನು. 
 
3 ಆಗ ಯಾಬೇಷಿನ ಹಿರಿಯರು ಅವನಿಗೆ – ಏಳು ದಿವಸಗಳವರೆಗೆ ತಡೆ; ಅಷ್ಟರೊಳಗೆ ನಾವು ಇಸ್ರಾಯೇಲ್ಯರ ಎಲ್ಲಾ ಪ್ರಾಂತ್ಯಗಳಿಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ಯಾರೂ ರಕ್ಷಿಸದಿದ್ದರೆ ನಾವು ನಿನ್ನ ಬಳಿಗೆ ಹೊರಟುಬರುವೆವು ಎಂದು ತಿಳಿಸಿದರು. 
 
4 ದೂತರು ಸೌಲನು ವಾಸವಾಗಿದ್ದ ಗಿಬೆಯಕ್ಕೆ ಬಂದು ಅಲ್ಲಿನವರಿಗೆ ಈ ವರ್ತಮಾನವನ್ನು ತಿಳಿಸಲು ಎಲ್ಲರೂ ಗಟ್ಟಿಯಾಗಿ ಅಳತೊಡಗಿದರು. 
 
5 ಅಷ್ಟರಲ್ಲಿ ಸೌಲನು ಹೊಲದಿಂದ ದನಗಳನ್ನು ಹೊಡೆದುಕೊಂಡು ಬಂದನು. ಅವನು – ಜನರು ಗೋಳಾಡುವದಕ್ಕೇನು ಕಾರಣವೆಂದು ಕೇಳಲು ಅವನಿಗೆ ಯಾಬೇಷಿನವರ ವರ್ತಮಾನವನ್ನು ತಿಳಿಸಿದರು. 
 
6 ಆಗ ಯೆಹೋವನ ಆತ್ಮವು ಅವನ ಮೇಲೆ ಬಂದಿತು. ಅವನು ಅತ್ಯಂತ ಕುಪಿತನಾಗಿ 
 
7 ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ತುಂಡು ತುಂಡು ಮಾಡಿ ಆ ತುಂಡುಗಳನ್ನು ದೂತರ ಮುಖಾಂತರ ಇಸ್ರಾಯೇಲ್ಯರ ಎಲ್ಲಾ ಪ್ರಾಂತಗಳಿಗೆ ಕಳುಹಿಸಿ – ಯಾರು ಸೌಲ ಸಮುವೇಲರನ್ನು ಹಿಂಬಾಲಿಸುವದಿಲ್ಲವೋ ಅವರ ಎತ್ತುಗಳು ಹೀಗೆಯೇ ಕಡಿಯಲ್ಪಡುವವು ಎಂದು ಹೇಳಿಸಿದನು. ಯೆಹೋವನ ಭಯಪ್ರೇರಿತರಾಗಿ ಜನರೆಲ್ಲರೂ ಏಕಮನಸ್ಸಿನಿಂದ ಕೂಡಿ ಬಂದರು. 
 
8 ಅವರನ್ನು ಬೆಜೆಕಿನಲ್ಲಿ ಕ್ರಮಪಡಿಸಿ ಲೆಕ್ಕಿಸಿದಾಗ ಇಸ್ರಾಯೇಲ್ಯರಲ್ಲಿ ಮೂರು ಲಕ್ಷ ಸೈನಿಕರೂ ಯೆಹೂದ್ಯರಲ್ಲಿ ಮೂವತ್ತು ಸಾವಿರ ಸೈನಿಕರೂ ಇದ್ದರು. 
 
9 ಇವರು ಬಂದಿದ್ದ ದೂತರಿಗೆ – ನಾಳೆ ಮಧ್ಯಾಹ್ನದಲ್ಲಿ ನಿಮಗೆ ಸಹಾಯಸಿಕ್ಕುವದೆಂದು ಯಾಬೇಷ್ ಗಿಲ್ಯಾದಿನವರಿಗೆ ತಿಳಿಸಿರಿ ಎಂದು ಹೇಳಿ ಅವರನ್ನು ಕಳುಹಿಸಿದರು. 
 
10 ದೂತರು ಹೋಗಿ ಈ ವರ್ತಮಾನವನ್ನು ತಿಳಿಸಲು ಯಾಬೇಷಿನವರು ಬಹಳವಾಗಿ ಸಂತೋಷಪಟ್ಟು ಅಮ್ಮೋನಿಯರಿಗೆ – ನಾವು ನಾಳೆ ನಿಮ್ಮ ಬಳಿಗೆ ಬರುವೆವು; ನಿಮಗೆ ಸರಿಕಾಣುವ ಪ್ರಕಾರ ಮಾಡಿರಿ ಎಂದು ಹೇಳಿದರು. 
 
11 ಸೌಲನು ಬೆಳಗಿನ ಜಾವದಲ್ಲಿ ತನ್ನ ಜನರನ್ನು ಮೂರು ಪಾಲು ಮಾಡಿ ಅಮ್ಮೋನಿಯರ ಪಾಳೆಯದೊಳಕ್ಕೆ ನುಗ್ಗಿ ಅವರನ್ನು ಮಧ್ಯಾಹ್ನದವರೆಗೆ ಹತಮಾಡಿದನು; ಉಳಿದವರನ್ನು ಒಬ್ಬರನ್ನೊಬ್ಬರು ಕೂಡದ ಹಾಗೆ ಚದರಿಸಿಬಿಟ್ಟನು.
 
12 ತರುವಾಯ ಜನರು ಸಮುವೇಲನಿಗೆ – ಸೌಲನು ನಮಗೆ ಅರಸನಾಗಬಾರದೆಂದು ಹೇಳಿದವರಾರು? ಅವರನ್ನು ನಮಗೆ ಒಪ್ಪಿಸಿರಿ; ನಾವು ಕೊಂದುಹಾಕುತ್ತೇವೆ ಎನ್ನಲು ಸೌಲನು ಅವರಿಗೆ – 
 
13 ಯೆಹೋವನು ಈ ಹೊತ್ತು ಇಸ್ರಾಯೇಲ್ಯರಿಗೆ ಜಯವನ್ನುಂಟುಮಾಡಿರುವದರಿಂದ ಯಾರನ್ನೂ ಕೊಲ್ಲಬಾರದು ಎಂದು ಹೇಳಿದನು. 
 
14 ಸಮುವೇಲನು ಜನರಿಗೆ – ಬನ್ನಿರಿ; ಗಿಲ್ಗಾಲಿಗೆ ಹೋಗಿ ಅರಸುತನವನ್ನು ಸ್ಥಿರಪಡಿಸೋಣ ಅನ್ನಲು 
 
15 ಅವರೆಲ್ಲರೂ ಅಲ್ಲಿಗೆ ಹೋಗಿ ಯೆಹೋವನ ಸನ್ನಿಧಿಯಲ್ಲಿ ಸೌಲನ ಅರಸುತನವನ್ನು ಸ್ಥಿರಪಡಿಸಿ ಯೆಹೋವನಿಗೆ ಸಮಾಧಾನಯಜ್ಞಗಳನ್ನು ಸಮರ್ಪಿಸಿ ಸೌಲನೊಡನೆ ಬಹಳವಾಗಿ ಆನಂದಿಸಿದರು.
1 ಸಮುವೇಲ 12

ಅರಸನು ದೃಡಪಟ್ಟಿದ್ದು

1 ಸಮುವೇಲನು ಎಲ್ಲಾ ಇಸ್ರಾಯೇಲ್ಯರಿಗೆ – ನೋಡಿರಿ, ನಾನು ನಿಮ್ಮ ಬಿನ್ನಹಗಳನ್ನು ಲಾಲಿಸಿ ನಿಮಗೊಬ್ಬ ಅರಸನನ್ನು ನೇಮಿಸಿದೆನು. 
 
2 ಇನ್ನು ಮುಂದೆ ಇವನೇ ನಿಮ್ಮನ್ನು ನಡಿಸುವನು. ಚಿಕ್ಕಂದಿನಿಂದ ನಿಮ್ಮ ನಾಯಕನಾಗಿದ್ದ ನಾನು ಈಗ ತಲೆನರೆತ ಮುದುಕನಾಗಿದ್ದೇನೆ; ನನ್ನ ಮಕ್ಕಳು ನಿಮ್ಮ ಮಧ್ಯದಲ್ಲಿದ್ದಾರೆ. 
 
3 ಇಲ್ಲಿ ನಿಂತುಕೊಂಡಿರುವ ನಾನು ಯಾರ ಎತ್ತನ್ನಾಗಲಿ ಕತ್ತೆಯನ್ನಾಗಲಿ ತೆಗೆದುಕೊಂಡು ಯಾರನ್ನಾದರೂ ವಂಚಿಸಿ ಪೀಡಿಸಿದ್ದೂ ಲಂಚತೆಗೆದುಕೊಂಡು ಕುರುಡನಂತೆ ತೀರ್ಪುಮಾಡಿದ್ದೂ ಉಂಟೋ? ಇದ್ದರೆ ಯೆಹೋವನ ಮುಂದೆಯೂ ಆತನ ಅಭಿಷಿಕ್ತನ ಮುಂದೆಯೂ ಹೇಳಿರಿ; ನಾನು ಅದನ್ನು ಹಿಂದಕ್ಕೆ ಕೊಡುತ್ತೇನೆ ಅನ್ನಲು ಅವರು
 
4 ನೀನು ನಮ್ಮನ್ನು ವಂಚಿಸಿ ಪೀಡಿಸಿದ್ದಾಗಲಿ ನಮ್ಮಿಂದ ಏನಾದರೂ ಕಸಕೊಂಡದ್ದಾಗಲಿ ಇರುವದಿಲ್ಲ ಎಂದು ಉತ್ತರಕೊಟ್ಟರು. 
 
5 ಸಮುವೇಲನು ತಿರಿಗಿ – ನೀವು ನನ್ನಲ್ಲಿ ಇಂಥದನ್ನೇನೂ ಕಾಣಲಿಲ್ಲವೆಂಬದಕ್ಕೆ ಯೆಹೋವನೂ ಆತನ ಅಭಿಷಿಕ್ತನೂ ಸಾಕ್ಷಿಯಾಗಿದ್ದಾರೆ ಎನ್ನಲು ಅವರು – ಹೌದು, ಸಾಕ್ಷಿಯಾಗಿದ್ದಾರೆ ಎಂದು ನುಡಿದರು. 
 
6 ಆಗ ಸಮುವೇಲನು – ನಿಮ್ಮ ಪಿತೃಗಳನ್ನು ಐಗುಪ್ತದಿಂದ ಕರತರುವದಕ್ಕಾಗಿ ಮೋಶೆ ಆರೋನರನ್ನು ಏರ್ಪಡಿಸಿದ ಯೆಹೋವನೇ ಇದಕ್ಕೆ ಸಾಕ್ಷಿ. 
 
7 ಇಲ್ಲಿ ನಿಂತುಕೊಂಡು ಕೇಳಿರಿ; ಯೆಹೋವನು ನಿಮಗೋಸ್ಕರವೂ ನಿಮ್ಮ ಪಿತೃಗಳಿಗೋಸ್ಕರವೂ ನಡಿಸಿದ ನೀತಿಕಾರ್ಯಗಳನ್ನು ಕುರಿತು ಆತನೆದುರಿನಲ್ಲಿ ನಿಮಗೆ ನೆನಪು ಹುಟ್ಟಿಸಿ ನಿಮ್ಮನ್ನು ಎಚ್ಚರಿಸುತ್ತೇನೆ. 
 
8 ಐಗುಪ್ತಕ್ಕೆ ಬಂದ ಯಾಕೋಬನ ವಂಶದವರಾದ ನಮ್ಮ ಹಿರಿಯರು ಯೆಹೋವನಿಗೆ ಮೊರೆಯಿಟ್ಟಾಗ ಆತನು ಮೋಶೆ ಆರೋನರ ಮುಖಾಂತರ ಅವರನ್ನು ಐಗುಪ್ತದಿಂದ ಬಿಡಿಸಿ ಈ ದೇಶದಲ್ಲಿ ನೆಲೆಗೊಳಿಸಿದನು. 
 
9 ಅವರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಡಲು ಆತನು ಅವರನ್ನು ಹಾಚೋರಿನ ಸೇನಾಪತಿಯಾದ ಸೀಸೆರನಿಗೂ ಫಿಲಿಷ್ಟಿಯರಿಗೂ ಮೋವಾಬ್‍ರಾಜನಿಗೂ ಮಾರಿಬಿಟ್ಟನು. ಇವರು ಬಂದು ಅವರೊಡನೆ ಯುದ್ಧಮಾಡಿದರು. 
 
10 ಆಗ ಅವರು ಆತನಿಗೆ – ನಾವು ಯೆಹೋವನಾದ ನಿನ್ನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸಿ ಪಾಪಮಾಡಿದ್ದೇವೆ. ಈಗ ಕೃಪೆಮಾಡಿ ನಮ್ಮನ್ನು ಶತ್ರುಗಳ ಕೈಯಿಂದ ಬಿಡಿಸು; ನಾವು ಇನ್ನು ಮುಂದೆ ನಿನ್ನನ್ನೇ ಸೇವಿಸುವೆವು ಎಂದು ಮೊರೆಯಿಟ್ಟರು. 
 
11 ಯೆಹೋವನು ಯೆರುಬ್ಬಾಳ್, ಬಾರಾಕ್, ಯೆಫ್ತಾಹ, ಸಮುವೇಲ್ ಇವರನ್ನು ಕಳುಹಿಸಿ ನಿಮ್ಮನ್ನು ಎಲ್ಲಾ ಶತ್ರುಗಳ ಕೈಗೆ ತಪ್ಪಿಸಿ ಸುರಕ್ಷಿತವಾಗಿ ವಾಸಿಸುವಂತೆ ಮಾಡಿದನು. 
 
12 ಅಮ್ಮೋನಿಯರ ಅರಸನಾದ ನಾಹಾಷನು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತಾನೆಂದು ನಿಮಗೆ ಗೊತ್ತಾಗಲು ನಿಮ್ಮ ದೇವರಾದ ಯೆಹೋವನು ನಿಮ್ಮ ಅರಸನಾಗಿದ್ದರೂ ನೀವು – ನಮಗೊಬ್ಬ ಅರಸನನ್ನು ನೇಮಿಸೆಂದು ನನ್ನನ್ನು ಬೇಡಿಕೊಂಡಿರಿ. 
 
13 ಇಗೋ, ನೀವು ಅಪೇಕ್ಷಿಸಿ ಆರಿಸಿಕೊಂಡ ಅರಸನು ಇವನೇ; ಯೆಹೋವನು ಇವನನ್ನು ನಿಮ್ಮ ಮೇಲೆ ಅರಸನನ್ನಾಗಿ ನೇಮಿಸಿದ್ದಾನೆ. 
 
14 ನೀವೂ ನಿಮ್ಮ ಅರಸನೂ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು ವಿಧೇಯರಾಗಿ ಆತನನ್ನು ಸೇವಿಸುತ್ತಾ ತಪ್ಪದೆ ಆತನ ಮಾತು ಕೇಳುವವರಾಗಿ ಆತನನ್ನೇ ಹೊಂದಿಕೊಂಡಿರುವದಾದರೆ ಎಷ್ಟೋ ಒಳ್ಳೇದು. 
 
15 ನೀವು ಯೆಹೋವನ ಮಾತನ್ನು ಕೇಳದೆಯೂ ಆತನ ಆಜ್ಞೆಗಳನ್ನು ಕೈಕೊಳ್ಳದೆಯೂ ಹೋದರೆ ಆತನ ಹಸ್ತವು ನಿಮ್ಮ ಹಿರಿಯರಿಗೆ ವಿರೋಧವಾಗಿದ್ದಂತೆ ನಿಮಗೂ ವಿರೋಧವಾಗಿಯೇ ಇರುವದು. 
 
16 ಈಗ ಯೆಹೋವನು ನಿಮ್ಮ ಕಣ್ಣುಮುಂದೆ ಮಾಡುವ ಮಹತ್ಕಾರ್ಯವನ್ನು ಹತ್ತಿರ ಬಂದು ನೋಡಿರಿ. 
 
17 ನಾನು ಯೆಹೋವನಿಗೆ ಮೊರೆಯಿಡುವೆನು; ಈಗ ಗೋದಿಯ ಸುಗ್ಗಿಯಿದ್ದರೂ ಆತನು ಗುಡುಗನ್ನೂ ಮಳೆಯನ್ನೂ ಕಳುಹಿಸುವದರ ಮೂಲಕ ನೀವು ಅರಸನನ್ನು ಕೇಳಿಕೊಂಡದ್ದು ತನ್ನ ದೃಷ್ಟಿಯಲ್ಲಿ ಎಷ್ಟೋ ಕೆಟ್ಟದ್ದಾಗಿದೆ ಎಂಬದನ್ನು ತೋರಿಸಿಕೊಡುವನು ಎಂದು ಅವರಿಗೆ ಹೇಳಿ ಯೆಹೋವನಿಗೆ ಮೊರೆಯಿಡಲು 
 
18 ಆತನು ಗುಡುಗು ಮಳೆಗಳನ್ನು ಕಳುಹಿಸಿದನು. ಎಲ್ಲಾ ಜನರೂ ಯೆಹೋವನಿಗೂ ಸಮುವೇಲನಿಗೂ ಬಹಳವಾಗಿ ಭಯಪಟ್ಟು ಸಮುವೇಲನನ್ನು – 
 
19 ನಮಗೊಬ್ಬ ಅರಸನು ಬೇಕೆಂದು ನಾವು ಬೇಡಿಕೊಂಡದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪವು ಕೂಡಿತು; ಆದದರಿಂದ ನಿನ್ನ ಸೇವಕರಾದ ನಾವು ಸಾಯದಂತೆ ನಿನ್ನ ದೇವರಾದ ಯೆಹೋವನನ್ನು ಬೇಡಿಕೋ ಎಂದು ವಿಜ್ಞಾಪಿಸಲು ಅವನು – 
 
20 ಭಯಪಡಬೇಡಿರಿ; ಇಷ್ಟು ಪಾಪಮಾಡಿದ ನೀವು ಇನ್ನು ಮುಂದೆಯಾದರೂ ಅದನ್ನು ಬಿಟ್ಟು ಯೆಹೋವನನ್ನು ಅಂಟಿಕೊಂಡು ಪೂರ್ಣಮನಸ್ಸಿನಿಂದ ಆತನೊಬ್ಬನನ್ನೇ ಸೇವಿಸಿರಿ. 
 
21 ದೇವರಲ್ಲದವುಗಳನ್ನು ಹಿಂಬಾಲಿಸಬೇಡಿರಿ; ಅವುಗಳಿಂದ ನಿಮಗೆ ಲಾಭವೂ ರಕ್ಷಣೆಯೂ ಸಿಕ್ಕುವದಿಲ್ಲ. ಅವು ವ್ಯರ್ಥವಾದವುಗಳೇ. 
 
22 ಯೆಹೋವನು ದಯದಿಂದ ನಿಮ್ಮನ್ನು ಸ್ವಕೀಯಜನವನ್ನಾಗಿ ಆರಿಸಿಕೊಂಡ ಮೇಲೆ ಆತನು ತನ್ನ ಮಹೋನ್ನತ ನಾಮದ ನಿಮಿತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ. 
 
23 ನಾನಾದರೋ ನಿಮಗೋಸ್ಕರವಾಗಿ ಯೆಹೋವನನ್ನು ಪ್ರಾರ್ಥಿಸುತ್ತಾ ಆತನ ಉತ್ತಮ ನೀತಿಮಾರ್ಗವನ್ನು ನಿಮಗೆ ತೋರಿಸಿಕೊಡುವದನ್ನು ಬಿಡುವದೇ ಇಲ್ಲ; ಬಿಟ್ಟರೆ ಆತನ ದೃಷ್ಟಿಯಲ್ಲಿ ಪಾಪಿಯಾಗಿರುವೆನು. 
 
24 ನೀವಾದರೋ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದು ಆತನು ನಿಮಗೋಸ್ಕರವಾಗಿ ಮಾಡಿದ ಮಹತ್ಕಾರ್ಯಗಳನ್ನು ನೆನಸಿಕೊಂಡು ಆತನನ್ನು ಸತ್ಯದಿಂದಲೂ ಪೂರ್ಣಮನಸ್ಸಿನಿಂದಲೂ ಸೇವಿಸುತ್ತಾ ಬರಬೇಕು; 

25 ನೀವು ದ್ರೋಹಿಗಳಾಗಿಯೇ ಇದ್ದರೆ ನಿಮ್ಮ ಅರಸನೊಡನೆ ನಾಶವಾಗುವಿರಿ ಎಂದು ಹೇಳಿದನು.

ಪಿಲಿಷ್ಟಿಯರ ಜೊತೆ ಯುದ್ದ

1 ಸಮುವೇಲ 13

1 ಸೌಲನು ಅರಸನಾದಾಗ [ಮೂವತ್ತು] ವರುಷದವನಾಗಿದ್ದನು. ಅವನು ಇಸ್ರಾಯೇಲ್ಯರನ್ನು ಎರಡು ವರುಷ ಆಳಿದನಂತರ 
 
2 ಅವರಿಂದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಅವರಲ್ಲಿ ಎರಡು ಸಾವಿರ ಜನರನ್ನು ಮಿಕ್ಮಾಷಿನಲ್ಲಿಯೂ ಬೇತೇಲಿನ ಗುಡ್ಡದಲ್ಲಿಯೂ ಇಟ್ಟುಕೊಂಡನು. ಉಳಿದ ಸಾವಿರ ಜನರನ್ನು ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಯೋನಾತಾನನ ವಶಕ್ಕೆ ಕೊಟ್ಟನು. 
 
3 ಬೇರೆ ಇಸ್ರಾಯೇಲ್ಯರನ್ನು ಅವರವರ ಮನೆಗಳಿಗೆ ಕಳುಹಿಸಿದನು. ಯೋನಾತಾನನು ಗೆಬದಲ್ಲಿದ್ದ ಫಿಲಿಷ್ಟಿಯರ ಠಾಣವನ್ನು ನಾಶಮಾಡಿದನು. ಈ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿತು. ಈ ಸಂಗತಿಯು ಎಲ್ಲಾ ಇಬ್ರಿಯರಿಗೂ ಗೊತ್ತಾಗುವಂತೆ ಸೌಲನು ದೇಶದಲ್ಲೆಲ್ಲಾ ಕೊಂಬೂದಿಸಿದನು. 
 
4 ಸೌಲನು ಫಿಲಿಷ್ಟಿಯರ ಠಾಣವನ್ನು ನಾಶಮಾಡಿದ್ದರಿಂದ ತಾವು ಅವರ ದ್ವೇಷಕ್ಕೆ ಗುರಿಯಾದೆವೆಂದು ಇಸ್ರಾಯೇಲ್ಯರು ತಿಳಿದು ಗಿಲ್ಗಾಲಿಗೆ ಬಂದು ಸೌಲನನ್ನು ಕೂಡಿಕೊಂಡರು. 
 
5 ಆಗ ಫಿಲಿಷ್ಟಿಯರು ಇಸ್ರಾಯೇಲ್ಯರೊಡನೆ ಯುದ್ಧಮಾಡುವದಕ್ಕೋಸ್ಕರ ಮೂವತ್ತು ಸಾವಿರ ರಥಬಲವನ್ನೂ ಆರು ಸಾವಿರ ಅಶ್ವಬಲವನ್ನೂ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಕಾಲ್ಬಲವನ್ನೂ ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯ ಮಾಡಿಕೊಂಡರು. 
 
6 ಇಸ್ರಾಯೇಲ್ಯರಿಗೆ ಕೇಡು ಬಂದಿತು. ತಾವು ಇಕ್ಕಟ್ಟಿನಲ್ಲಿದ್ದೇವೆಂದು ಅವರು ತಿಳಿದು ಗವಿ, ಕಾಡು, ಬಂಡೆ, ನೆಲಮನೆ, ಗುಂಡಿ ಇವುಗಳಲ್ಲಿ ಅಡಗಿಕೊಂಡರು. 
 
7 ಕೆಲವರು ಯೊರ್ದನ್ ಹೊಳೆದಾಟಿ ಗಾದ್ಯರ ದೇಶಕ್ಕೂ ಗಿಲ್ಯಾದ್ ಪ್ರಾಂತಕ್ಕೂ ಹೊರಟು ಹೋದರು.
ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸಂಗಡ ಇದ್ದವರು ಭಯದಿಂದ ನಡುಗುತ್ತಿದ್ದರು. 
 
8 ಸೌಲನು ಸಮುವೇಲನ ಆಜ್ಞೆಯಂತೆ ಗಿಲ್ಗಾಲಿನಲ್ಲೇ ಏಳು ದಿವಸ ಇದ್ದರೂ ಸಮುವೇಲನು ಬರಲಿಲ್ಲ; ಅಷ್ಟರಲ್ಲಿ ಜನರು ಚದರಿಹೋದರು. 
 
9 ಆಗ ಸೌಲನು ಜನರಿಂದ ಸರ್ವಾಂಗಹೋಮಕ್ಕೂ ಸಮಾಧಾನಯಜ್ಞಕ್ಕೂ ಬೇಕಾದದ್ದನ್ನು ತರಿಸಿ ಸರ್ವಾಂಗಹೋಮವನ್ನು ಅರ್ಪಿಸಿದನು. 
 
10 ಅದು ತೀರುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವದಕ್ಕೋಸ್ಕರ ಎದುರಿಗೆ ಹೋಗಲು 
 
11 ಸಮುವೇಲನು ಅವನನ್ನು – ಇದೇನು ನೀನು ಮಾಡಿದ್ದು ಎಂದು ಕೇಳಲು ಅವನು – ಜನರು ಚದರಿಹೋಗುವದನ್ನೂ ನೀನು ನಿಯಮಿತಕಾಲದಲ್ಲಿ ಬಾರದಿರುವದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವದನ್ನೂ ನೋಡಿ – 
 
12 ನಾನು ಯೆಹೋವನಿಗೆ ಶಾಂತ್ಯರ್ಪಣೆಯನ್ನು ಸಲ್ಲಿಸುವದಕ್ಕಿಂತ ಮೊದಲೇ ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ಬಿದ್ದಾರೆಂದು ಭಯಪಟ್ಟು ಸರ್ವಾಂಗಹೋಮವನ್ನು ಸಮರ್ಪಿಸುವದಕ್ಕೆ ಮುಂಗೊಂಡೆನು ಅಂದನು. 
 
13 ಆಗ ಸಮುವೇಲನು – ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು. 
 
14 ಈಗಲಾದರೋ ನಿನ್ನ ಅರಸುತನವು ನಿಲ್ಲುವದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆಹೋದದರಿಂದ ಆತನು ತನಗೆ ಒಪ್ಪುವ ಬೇರೊಬ್ಬ ಪುರುಷನನ್ನು ತನ್ನ ಪ್ರಜೆಯ ಮೇಲೆ ಪ್ರಭುವಾಗಿ ನೇಮಿಸಿದ್ದಾನೆ ಎಂದು ಹೇಳಿದನು.

1 ಸಮುವೇಲ 14

ಸೌಲನ ಯುದ್ಧಗಳೂ ಅವನ ಕುಟುಂಬವೂ

47 ಸೌಲನು ಇಸ್ರಾಯೇಲ್ಯರ ಅರಸನಾದ ಮೇಲೆ ಅವನು ಸುತ್ತಣ ವೈರಿಗಳಾದ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೋಬದ ಅರಸರು, ಫಿಲಿಷ್ಟಿಯರು ಇವರೊಡನೆ ಯುದ್ಧಮಾಡಿದನು. ಹೋದಕಡೆಯಲ್ಲೆಲ್ಲಾ ಜಯವನ್ನೇ ಹೊಂದಿದನು. 
 
48 ಇದಲ್ಲದೆ ಅವನು ಸುಲಿಗೆಮಾಡುವವರಾದ ಅಮಾಲೇಕ್ಯರಿಗೆ ವಿರೋಧವಾಗಿ ದಂಡೆತ್ತಿ ಹೋಗಿ ಅವರನ್ನು ಮುರಿಬಡಿದು ಇಸ್ರಾಯೇಲ್ಯರನ್ನು ಅವರ ಕೈಗೆ ಸಿಕ್ಕದಂತೆ ತಪ್ಪಿಸಿದನು.
 
49 ಸೌಲನ ಗಂಡು ಮಕ್ಕಳು – ಯೋನಾತಾನ್, ಇಷ್ವಿ, ಮಲ್ಕೀಷೂವ. ಅವನ ಹೆಣ್ಣು ಮಕ್ಕಳು – ಮೇರಬ್, ಮೀಕಲ್. 
 
50 ಅಹೀಮಾಚನ ಮಗಳಾದ ಅಹೀನೋವಮಳು ಅವನ ಹೆಂಡತಿ; ನೇರನ ಮಗನಾದ ಅಬ್ನೇರನು ಅವನ ಸೇನಾಪತಿಯು; ನೇರನು ಸೌಲನ ಚಿಕ್ಕಪ್ಪನು. 
 
51 ಸೌಲನ ತಂದೆಯಾದ ಕೀಷನೂ ಅಬ್ನೇರನ ತಂದೆಯಾದ ನೇರನೂ ಅಬೀಯೇಲನ ಮಕ್ಕಳು.
 
52 ಸೌಲನ ಜೀವಮಾನದಲ್ಲೆಲ್ಲಾ ಫಿಲಿಷ್ಟಿಯರಿಗೂ ಇಸ್ರಾಯೇಲ್ಯರಿಗೂ ಘೋರ ಯುದ್ಧವಿದ್ದದರಿಂದ ಅವನು ಎಲ್ಲಿಯಾದರೂ ಒಬ್ಬ ಬಲಿಷ್ಠನೂ ಪರಾಕ್ರಮಶಾಲಿಯೂ ಆದ ಮನುಷ್ಯನನ್ನು ಕಂಡರೆ ಕೂಡಲೆ ಅವನನ್ನು ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು.
1ಸಮುವೇಲ 15

ಸೌಲನು ದೇವರ ಮಾತನ್ನು ಕೇಳದೆಹೋದದರಿಂದ ಆತನು ಅವನನ್ನು ತಳ್ಳಿಬಿಟ್ಟದ್ದು

1 ಸಮುವೇಲನು ಸೌಲನಿಗೆ – ಯೆಹೋವನು ನಿನ್ನನ್ನು ತನ್ನ ಪ್ರಜೆಗಳಾದ ಇಸ್ರಾಯೇಲ್ಯರ ಮೇಲೆ ಅರಸನನ್ನಾಗಿ ಅಭಿಷೇಕಿಸುವದಕ್ಕೋಸ್ಕರ ನನ್ನನ್ನೇ ಕಳುಹಿಸಿದನಲ್ಲಾ; ಆತನು ಈಗ ಹೇಳುವದನ್ನು ಕೇಳು. 
 
2 ಸೇನಾಧೀಶ್ವರನಾದ ಯೆಹೋವನು ನಿನಗೆ – ಇಸ್ರಾಯೇಲ್ಯರು ಐಗುಪ್ತದಿಂದ ಬರುತ್ತಿರುವಾಗ ದಾರಿಯಲ್ಲಿ ಅಮಾಲೇಕ್ಯರು ಅವರಿಗೆ ವಿರೋಧವಾಗಿ ನಿಂತು ತೊಂದರೆಪಡಿಸಿದದರಿಂದ ನಾನು ಅವರಿಗೆ ಮುಯ್ಯಿತೀರಿಸುವೆನು. 
 
3 ಈಗ ನೀನು ಹೋಗಿ ಅವರನ್ನು ಸೋಲಿಸಿ ಅವರಿಗಿರುವದನ್ನೆಲ್ಲಾ ಸಂಪೂರ್ಣವಾಗಿ ಹಾಳುಮಾಡು. ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಶಿಶುಗಳನ್ನೂ ಎತ್ತು, ಕುರಿ, ಕತ್ತೆ, ಒಂಟೆ, ಇವುಗಳನ್ನೂ ಕನಿಕರವಿಲ್ಲದೆ ಕೊಂದುಹಾಕು ಎಂದು ಹೇಳುತ್ತಾನೆ ಅಂದನು.
 

{ಅರಣ್ಯಕಾಂಡ 24:20ತರುವಾಯ ಅಮಾಲೇಕ್ಯರನ್ನು ನೋಡಿ ಅವರ ವಿಷಯದಲ್ಲಿ ನುಡಿದದ್ದೇನಂದರೆ –

ಅಮಾಲೇಕ್ಯರು ಜನಾಂಗಗಳಲ್ಲಿ ಪ್ರಮುಖರಲ್ಲವೇ;
ಆದರೂ ನಾಶವೇ ಅವರ ಗತಿ.
 
21 ಬಳಿಕ ಅವನು ಕೇನ್ಯರನ್ನು ನೋಡಿ ಅವರ ವಿಷಯದಲ್ಲಿ ನುಡಿದದ್ದೇನಂದರೆ –
ನಿಮ್ಮ ನಿವಾಸಸ್ಥಳವು ಶಾಶ್ವತವಾಗಿಯೇ ತೋರುತ್ತದೆ;
ಬೆಟ್ಟದ ತುದಿಯಲ್ಲಿ ಗೂಡನ್ನು ಮಾಡಿಕೊಂಡಿದ್ದೀರಿ.
 
ವಿಮೋಚನಕಾಂಡ 17:8ಆಗ ಅಮಾಲೇಕ್ಯರು ರೆಫೀದೀಮಿನಲ್ಲಿ ಇಸ್ರಾಯೇಲ್ಯರ ಮೇಲೆ ಯುದ್ಧಮಾಡುವದಕ್ಕೆ ಬರಲು 
 
9 ಮೋಶೆಯು ಯೆಹೋಶುವನಿಗೆ – ನೀನು ಭಟರನ್ನು ಆದುಕೊಂಡು ನಾಳೆ ನಮ್ಮ ಮುಂದೆ ಹೊರಟು ಅಮಾಲೇಕ್ಯರೊಡನೆ ಯುದ್ಧಮಾಡಬೇಕು; ನಾನು ದೇವದಂಡವನ್ನು ಕೈಯಲ್ಲಿ ಹಿಡುಕೊಂಡು ಗುಡ್ಡದ ತುದಿಯಲ್ಲಿ ನಿಂತುಕೊಳ್ಳುವೆನು ಎಂದು ಹೇಳಿದನು. 
 
10 ಮೋಶೆಯ ಅಪ್ಪಣೆಯ ಮೇರೆಗೆ ಯೆಹೋಶುವನು ಅಮಾಲೇಕ್ಯರ ಸಂಗಡ ಯುದ್ಧಮಾಡುವದಕ್ಕೆ ಹೊರಟನು; ಮೋಶೆಯೂ ಆರೋನನೂ ಹೂರನೂ ಈ ಮೂವರು ಗುಡ್ಡದ ತುದಿಗೆ ಏರಿದರು. 
 
11 ಮೋಶೆಯು ತನ್ನ ಕೈಗಳನ್ನು ಮೇಲಕ್ಕೆ ಎತ್ತಿರುವಾಗ ಇಸ್ರಾಯೇಲ್ಯರು ಬಲವಾಗುವರು; ಇಳಿಸುವಾಗ ಅಮಾಲೇಕ್ಯರು ಬಲವಾಗುವರು. 
 
12 ಹೀಗಿರಲು ಮೋಶೆಯ ಕೈಗಳು ಭಾರವಾದದರಿಂದ ಆರೋನ ಹೂರರು ಒಂದು ಕಲ್ಲನ್ನು ತಂದಿಟ್ಟು ಅದರ ಮೇಲೆ ಅವನನ್ನು ಕೂಡ್ರಿಸಿ ಬಲಗಡೆ ಒಬ್ಬನು ಎಡಗಡೆ ಒಬ್ಬನು ಅವನ ಕೈಗಳಿಗೆ ಆಧಾರಕೊಟ್ಟರು. ಈ ರೀತಿಯಲ್ಲಿ ಅವನ ಕೈಗಳು ಹೊತ್ತು ಮುಣುಗುವ ತನಕ ಇಳಿಯದೆ ನಿಂತೇ ಇದ್ದವು. 
 
13 ಹೀಗಿರುವದರಿಂದ ಯೆಹೋಶುವನು ಅಮಾಲೇಕ್ಯರನ್ನೂ ಅವರ ಭಟರನ್ನೂ ಕತ್ತಿಯಿಂದ ಕೆಡವಿಬಿಟ್ಟನು.
 
14 ಆಗ ಯೆಹೋವನು ಮೋಶೆಗೆ – ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಇಲ್ಲದಂತೆ ಮಾಡುವೆನು; ಈ ಮಾತನ್ನು ಜ್ಞಾಪಕಾರ್ಥವಾಗಿ ಪುಸ್ತಕದಲ್ಲಿ ಬರೆ, ಮತ್ತು ಯೆಹೋಶುವನಿಗೆ ಮಂದಟ್ಟು ಮಾಡಿಕೊಡು ಎಂದು ಹೇಳಿದನು.
 
15 ಆ ಸ್ಥಳದಲ್ಲಿ ಮೋಶೆಯು ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಯೆಹೋವ ನಿಸ್ಸಿ ಎಂದು ಹೆಸರಿಟ್ಟು –
 
16 ಯಾಹುವಿನ ಸಿಂಹಾಸನದ ಆಣೆ, ಅಮಾಲೇಕ್ಯರ ಮೇಲೆ ಯೆಹೋವನಿಗೆ ತಲತಲಾಂತರಕ್ಕೂ ಯುದ್ಧವಿರುವದು ಅಂದನು.
 
ಧರ್ಮೋಪದೇಶಕಾಂಡ 25:17ನೀವು ಐಗುಪ್ತದೇಶದಿಂದ ಬರುವಾಗ ದಾರಿಯಲ್ಲಿ ಅಮಾಲೇಕ್ಯರು ನಿಮ್ಮನ್ನು ಎದುರಿಸಿದ್ದನ್ನು ಜ್ಞಾಪಿಸಿಕೊಳ್ಳಿರಿ. 
 
18 ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರಾಗಿ ನೀವು ದಣಿದು ಬಳಲಿ ಇದ್ದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರ ಮಾಡಿದರಲ್ಲಾ. 
 
19 ಆದಕಾರಣ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವದಕ್ಕೆ ಕೊಡುವ ದೇಶದಲ್ಲಿ ನಿಮ್ಮನ್ನು ಸೇರಿಸಿ ಸುತ್ತಲು ಯಾವ ಶತ್ರುಗಳೂ ಇಲ್ಲದಂತೆ ಮಾಡಿದಾಗ ಭೂಮಿಯ ಮೇಲೆ ಅಮಾಲೇಕ್ಯರ ಹೆಸರೇ ಉಳಿಯದಂತೆ ನೀವು ಮಾಡಬೇಕು; ಇದನ್ನು ಮರೆಯಬಾರದು.
 
ಧರ್ಮೋಪದೇಶಕಾಂಡ 23:3ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ ಯೆಹೋವನ ಸಭೆಗೆ ಎಂದೆಂದಿಗೂ ಸೇರಬಾರದು. ಅವರ ಸಂತತಿಯವರು ಹತ್ತನೆಯ ತಲೆಯವರಾದರೂ ಯೆಹೋವನ ಸಭೆಗೆ ಸೇರಬಾರದು. 
 
4 ಯಾಕಂದರೆ ನೀವು ಐಗುಪ್ತದೇಶದಿಂದ ಬಂದಾಗ [ಅಮ್ಮೋನಿಯರು] ಅನ್ನ ಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; [ಮೋವಾಬ್ಯರು] ನಿಮ್ಮನ್ನು ಶಪಿಸುವದಕ್ಕಾಗಿ ಬೆಯೋರನ ಮಗನಾದ ಬಿಳಾಮನಿಗೆ ಹಣ ಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರೂರಿನಿಂದ ಅವನನ್ನು ಕರಿಸಿದರು. 
 
5 (ಆದರೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸದೆ ಅವನಿಂದ ಶಾಪವನ್ನು ನುಡಿಸದೆ ಆಶೀರ್ವಾದವನ್ನೇ ಹೇಳಿಸಿದನು.) 
 
6 ನಿಮ್ಮ ಜೀವಮಾನಕಾಲವೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇ ಬಾರದು.
 
ಅಮ್ಮೋನಿಯರ ಮತ್ತು ಮೋವಾಬ್ಯರ ವಂಶಾವಳಿ
ಆದಿಕಾಂಡ 19:36ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ತಂದೆಯಿಂದ ಬಸುರಾದರು. 
 
37 ಹಿರಿಯವಳು ಗಂಡು ಮಗುವನ್ನು ಹೆತ್ತು ಅದಕ್ಕೆ ಮೋವಾಬ್ ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲ ಪುರುಷನು. 
 
38 ಕಿರೀ ಮಗಳು ಗಂಡು ಮಗುವನ್ನು ಹೆತ್ತು ಅದಕ್ಕೆ ಬೆನಮ್ಮಿ ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಅಮ್ಮೋನಿಯರಿಗೆ ಇವನೇ ಮೂಲ ಪುರುಷನು.}
 
4 ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನು ಕೂಡಿಸಿ ಲೆಕ್ಕಿಸಲು ಎರಡು ಲಕ್ಷ ಮಂದಿ ಕಾಲಾಳುಗಳು ಇದ್ದರು; ಯೆಹೂದ್ಯರು ಹತ್ತು ಸಾವಿರ ಮಂದಿ ಇದ್ದರು.
 
5 ಅವನು ಇವರೊಡನೆ ಅಮಾಲೇಕ್ಯರ ರಾಜಧಾನಿಯ ಬಳಿಗೆ ಹೋಗಿ ಅಲ್ಲಿನ ಒಂದು ತಗ್ಗಿನಲ್ಲಿ ಹೊಂಚಿ ನೋಡುತ್ತಿದ್ದನು. 
 
6 ಆದರೆ ಅವನು ಕೇನ್ಯರಿಗೆ – ನೀವು ಅಮಾಲೇಕ್ಯರನ್ನು ಬಿಟ್ಟು ಹೋಗಿರಿ; ಇಲ್ಲವಾದರೆ ನೀವೂ ಅವರೊಡನೆ ನಾಶವಾದೀರಿ; ಇಸ್ರಾಯೇಲ್ಯರು ಐಗುಪ್ತದಿಂದ ಬರುತ್ತಿದ್ದಾಗ ನೀವು ಅವರಿಗೆ ದಯೆತೋರಿಸಿದಿರಲ್ಲಾ ಎಂದು ಹೇಳಿ ಕಳುಹಿಸಿದನು. ಅದರಂತೆಯೇ ಅವರು ಅಮಾಲೇಕ್ಯರನ್ನು ಬಿಟ್ಟುಹೋದರು. 
 
7 ಆಗ ಸೌಲನು ಅಮಾಲೇಕ್ಯರನ್ನು ಹವೀಲಾ ಪ್ರಾಂತದಿಂದ ಐಗುಪ್ತದ ಪೂರ್ವದಿಕ್ಕಿನಲ್ಲಿರುವ ಶೂರಿನವರೆಗೂ ಹೊಡೆಯುತ್ತಾ ಹೋದನು. 

ಸೌಲನ ದಂಗೆ

8 ಅವರ ಅರಸನಾದ ಅಗಾಗನನ್ನು ಸಜೀವಿಯಾಗಿ ಹಿಡಿದು ಎಲ್ಲಾ ಜನರನ್ನು ಕತ್ತಿಯಿಂದ ಸಂಹರಿಸಿದನು. 
 
9 ಸೌಲನೂ ಇಸ್ರಾಯೇಲ್ಯರೂ ಅಗಾಗನನ್ನೂ ಮೇಲ್ತರದ ಕುರಿ ದನಗಳನ್ನೂ ಕುರಿಮರಿಗಳನ್ನೂ ಕೊಬ್ಬಿದ ಪಶುಗಳನ್ನೂ ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ ನಾಶಮಾಡ ಮನಸ್ಸಿಲ್ಲದೆ ಉಳಿಸಿ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ನಾಶಮಾಡಿಬಿಟ್ಟರು.

ಸಮುವೇಲನು ಸೌಲನನ್ನು ಗದರಿಸಿದ್ದು

10,11ಯೆಹೋವನು ಸಮುವೇಲನಿಗೆ – ಸೌಲನನ್ನು ಅರಸನನ್ನಾಗಿ ಮಾಡಿದ್ದಕ್ಕೆ ಈಗ ಪಶ್ಚಾತ್ತಾಪಪಡುತ್ತೇನೆ. ಅವನು ನನ್ನನ್ನು ಬಿಟ್ಟುಬಿಟ್ಟನು; ನನ್ನ ಆಜ್ಞೆಗಳನ್ನು ನೆರವೇರಿಸುವದಿಲ್ಲ ಎಂದು ಹೇಳಲು ಸಮುವೇಲನು ಕೋಪಗೊಂಡು ರಾತ್ರಿಯೆಲ್ಲಾ ಆತನಿಗೆ ಮೊರೆಯಿಟ್ಟನು. 
 
12 ಅವನು ಬೆಳಿಗ್ಗೆ ಎದ್ದು ಸೌಲನನ್ನು ನೋಡುವದಕ್ಕೆ ಹೊರಟಾಗ ಅವನಿಗೆ – ಸೌಲನು ಕರ್ಮೆಲಿಗೆ ಹೋಗಿ ಅಲ್ಲಿ ತನಗೋಸ್ಕರ ಒಂದು ಜ್ಞಾಪಕಸ್ತಂಭವನ್ನು ನಿಲ್ಲಿಸಿ ಅಲ್ಲಿಂದ ಗಟ್ಟಾ ಇಳಿದು ಗಿಲ್ಗಾಲಿಗೆ ಹೋದನೆಂಬ ವರ್ತಮಾನವು ಬಂದದರಿಂದ ಸಮುವೇಲನು ಅಲ್ಲಿಗೆ ಹೋದನು. 
 
13 ಸೌಲನು ಅವನನ್ನು ಕಂಡು – ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಆತನ ಅಪ್ಪಣೆಯನ್ನು ನೆರವೇರಿಸಿದೆನು ಅಂದನು. 
 
14 ಅದಕ್ಕೆ ಸಮುವೇಲನು – ಹಾಗಾದರೆ ಇದೇನು? ಕುರಿಗಳ ಕೂಗು ನನ್ನ ಕಿವಿಗೆ ಬೀಳುತ್ತದೆ, ದನಗಳ ಶಬ್ದವು ನನಗೆ ಕೇಳಿಸುತ್ತದೆ ಎನ್ನಲು 
 
15 ಸೌಲನು – ಜನರು ನಿನ್ನ ದೇವರಾದ ಯೆಹೋವನಿಗೋಸ್ಕರ ಯಜ್ಞಸಲ್ಲಿಸುವದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಮೇಲ್ತರದವುಗಳನ್ನು ಉಳಿಸಿ ತಂದಿದ್ದಾರೆ; ಮಿಕ್ಕಾದವುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು ಎಂದು ಉತ್ತರಕೊಟ್ಟನು. 
 
16 ಆಗ ಸಮುವೇಲನು ಅವನಿಗೆ – ಅದಿರಲಿ; ಯೆಹೋವನು ಕಳೆದ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ತಿಳಿಸುತ್ತೇನೆ ಕೇಳು ಎನ್ನಲು ಅವನು – ಹೇಳು ಅಂದನು. 
 
17 ಸಮುವೇಲನು – ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಯೆಹೋವನು ನಿನಗೆ ಇಸ್ರಾಯೇಲ್ಯರಲ್ಲಿ ರಾಜ್ಯಾಭಿಷೇಕಮಾಡಿದ್ದರಿಂದ ನೀನು ಎಲ್ಲಾ ಕುಲಗಳಿಗೆ ಶಿರಸ್ಸಾದಿ. 
 
18 ಆತನು ನಿನಗೆ – ಹೊರಟು ಹೋಗಿ ದುಷ್ಟರಾದ ಅಮಾಲೇಕ್ಯರೊಡನೆ ಯುದ್ಧಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಮಾಡು ಎಂದು ಹೇಳಿದನು. 
 
19 ಆದರೆ ನೀನು ಯೆಹೋವನ ಮಾತನ್ನು ಕೇಳದೆ ಕೊಳ್ಳೆಗಾಗಿ ಎರಗಿ ಆತನಿಗೆ ದ್ರೋಹಮಾಡಿದ್ದೇಕೆ ಅಂದನು. 
 
20 ಆಗ ಸೌಲನು ಸಮುವೇಲನಿಗೆ – ಏನು? ನಾನು ಯೆಹೋವನ ಮಾತನ್ನು ಕೇಳಲಿಲ್ಲವೋ? ಆತನು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರನ್ನೆಲ್ಲಾ ಸಂಹರಿಸಿ ಅವರ ಅರಸನಾದ ಅಗಾಗನನ್ನು ಹಿಡಿದು ತಂದೆನು. 
 
21 ಆದರೆ ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞಾರ್ಪಣೆಮಾಡುವದಕ್ಕಾಗಿ ಉಳಿಸಿ ತಂದರು ಎಂದು ಉತ್ತರಕೊಟ್ಟನು. 
 
22 ಅದಕ್ಕೆ ಸಮುವೇಲನು –
ಯೆಹೋವನು ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ?
ಯಜ್ಞವನ್ನರ್ಪಿಸುವದಕ್ಕಿಂತ ಮಾತು ಕೇಳುವದು ಉತ್ತಮವಾಗಿದೆ;
ಟಗರುಗಳ ಕೊಬ್ಬಿಗಿಂತ ವಿಧೇಯತ್ವವು ವಿಶೇಷವಾಗಿದೆ.
 
23 ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವದು;
ಹಟವು ಮಿಥ್ಯಾಭಕ್ತಿಗೂ ವಿಗ್ರಹಾರಾಧನೆಗೂ ಸಮಾನವಾಗಿರುವದು.
ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟದ್ದರಿಂದ
ಆತನು ನಿನ್ನನ್ನು ಅರಸುತನದಿಂದ ತಳ್ಳಿಬಿಟ್ಟಿದ್ದಾನೆ ಎಂದು ನುಡಿದನು. 
 
24 ಸೌಲನು ಸಮುವೇಲನಿಗೆ – ನಾನು ಯೆಹೋವನ ಮತ್ತು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿದ್ದೇನೆ; ಜನರಿಗೆ ಹೆದರಿ ಅವರ ಮಾತನ್ನು ಕೇಳಿದೆನು. 
 
25 ನೀನು ದಯವಿಟ್ಟು ನನ್ನ ಪಾಪವನ್ನು ಕ್ಷಮಿಸು; ನಾನು ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ ಎಂದು ಅವನನ್ನು ಬೇಡಿಕೊಂಡನು. 
 
26 ಅದಕ್ಕೆ ಸಮುವೇಲನು – ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವದಿಲ್ಲ; ನೀನು ಯೆಹೋವನ ಮಾತನ್ನು ತಳ್ಳಿಬಿಟ್ಟದ್ದರಿಂದ ಆತನು ನಿನ್ನನ್ನು ಇಸ್ರಾಯೇಲ್ಯರ ಅರಸುತನದಿಂದ ತಳ್ಳಿಬಿಟ್ಟಿದ್ದಾನೆ ಎಂದು ಹೇಳಿ ತಿರುಗಿಕೊಂಡು ಹೊರಡಲು 
 
27 ಸೌಲನು ಅವನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು; ಅದು ಹರಿದುಹೋಯಿತು. 
 
28 ಆಗ ಸಮುವೇಲನು ಅವನಿಗೆ – ಯೆಹೋವನು ಈ ಹೊತ್ತು ಇಸ್ರಾಯೇಲ್‍ರಾಜ್ಯವನ್ನು ನಿನ್ನಿಂದ ಕಿತ್ತು ನಿನಗಿಂತ ಉತ್ತಮನಾದ ಇನ್ನೊಬ್ಬನಿಗೆ ಕೊಟ್ಟಿದ್ದಾನೆ. 
 
29 ಇಸ್ರಾಯೇಲ್ಯರ ನಿತ್ಯಾಧಾರನು ಸುಳ್ಳಾಡುವವನಲ್ಲ; ಪಶ್ಚಾತ್ತಾಪಪಡುವವನಲ್ಲ; ಯಾಕಂದರೆ ಅವನು ಪಶ್ಚಾತ್ತಾಪಪಡ ಮನುಷ್ಯನಲ್ಲ ಎಂದು ಹೇಳಿದನು. 
 
30 ಅದಕ್ಕೆ ಸೌಲನು – ನಾನು ಪಾಪ ಮಾಡಿದ್ದೇನೆ; ದಯವಿಟ್ಟು ಇಸ್ರಾಯೇಲ್ಯರ ಮುಂದೆಯೂ ಜನರ ಹಿರಿಯರ ಮುಂದೆಯೂ ನನ್ನ ಮಾನವನ್ನುಳಿಸು; ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸುವದಕ್ಕಾಗುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ ಎಂದು ಬೇಡಿಕೊಳ್ಳಲು ಅವನು ಹಿಂದಿರುಗಿ ಸೌಲನ ಜೊತೆಯಲ್ಲಿ ಹೋದನು. 
 
31 ಆಗ ಸೌಲನು ದೇವರನ್ನು ಆರಾಧಿಸಿದನು.
 
32 ತರುವಾಯ ಸಮುವೇಲನು ಅಮಾಲೇಕ್ಯರ ಅರಸನಾದ ಅಗಾಗನನ್ನು ತನ್ನ ಬಳಿಗೆ ತರ ಹೇಳಿದನು. ಅಗಾಗನು ಮರಣಭಯ ತಪ್ಪಿತೆಂದು ನೆನಸಿಕೊಂಡು ಸಂತೋಷದಿಂದ ಅವನ ಹತ್ತಿರ ಬಂದನು. 
 
33 ಆದರೆ ಸಮುವೇಲನು ಅವನಿಗೆ –
ನಿನ್ನ ಕತ್ತಿಯು ಅನೇಕ ಸ್ತ್ರೀಯರಿಗೆ ಪುತ್ರ ಶೋಕವನ್ನುಂಟುಮಾಡಿತು;
ನಿನ್ನ ತಾಯಿಯು ಎಲ್ಲರಿಗಿಂತಲೂ ಹೆಚ್ಚಾಗಿ ಪುತ್ರಶೋಕವನ್ನು ಅನುಭವಿಸಲಿ
ಎಂದು ಹೇಳಿ ಅವನನ್ನು ಗಿಲ್ಗಾಲಿನಲ್ಲಿ ಯೆಹೋವನ ಸನ್ನಿಧಿಯಲ್ಲೇ ಕಡಿದು ಹಾಕಿದನು. 
 
34 ಅನಂತರ ಸಮುವೇಲನು ರಾಮಕ್ಕೆ ಹೋದನು; ಸೌಲನು ತನ್ನ ಊರಾದ ಗಿಬೆಯದಲ್ಲಿರುವ ಮನೆಗೆ ಹೋದನು. 
 
35 ಸಮುವೇಲನು ಜೀವದಿಂದಿರುವವರೆಗೂ ಸೌಲನನ್ನು ನೋಡುವದಕ್ಕೆ ಹೋಗಲಿಲ್ಲ; ಆದರೆ ಯೆಹೋವನು ಸೌಲನನ್ನು ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದ್ದಕ್ಕೋಸ್ಕರ ಪಶ್ಚಾತ್ತಾಪಪಟ್ಟದರಿಂದ ಸಮುವೇಲನು ಅವನ ವಿಷಯದಲ್ಲಿ ದುಃಖಪಡುತ್ತಿದ್ದನು.

1ಸಮುವೇಲ 16

ಸಮುವೇಲನು ಬೆತ್ಲಹೇಮಿಗೆ ಹೋದದ್ದು

1 ಯೆಹೋವನು ಸಮುವೇಲನಿಗೆ – ನಾನು ಸೌಲನನ್ನು ಇಸ್ರಾಯೇಲ್ಯರ ಅರಸನಾಗಿರುವದಕ್ಕೆ ಅಯೋಗ್ಯನೆಂದು ತಳ್ಳಿ ಬಿಟ್ಟೆನಲ್ಲಾ; ನೀನು ಅವನಿಗೋಸ್ಕರ ಎಷ್ಟರವರೆಗೆ ದುಃಖಿಸುತ್ತಿರುವಿ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೇತ್ಲೆಹೇಮಿನವನಾದ ಇಷಯನ ಬಳಿಗೆ ಕಳುಹಿಸುತ್ತೇನೆ; ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ ಎಂದು ಹೇಳಿದನು. 
 
2 ಅದಕ್ಕೆ ಸಮುವೇಲನು – ನಾನು ಹೋಗುವದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದುಹಾಕುವನಲ್ಲವೇ ಅನ್ನಲು ಆತನು – ನೀನು ಒಂದು ಕಡಸನ್ನು ತೆಗೆದುಕೊಂಡು ಹೋಗಿ ಯೆಹೋವನಿಗೋಸ್ಕರ ಯಜ್ಞಮಾಡುವದಕ್ಕೆ ಬಂದಿದ್ದೇನೆಂದು ಹೇಳಿ ಇಷಯನನ್ನು ಅದಕ್ಕೆ ಕರೆ. 
 
3 ಆಮೇಲೆ ನೀನು ಮಾಡಬೇಕಾದದ್ದನ್ನು ನಾನೇ ತಿಳಿಸುತ್ತೇನೆ; ನಾನು ಯಾವನನ್ನು ತೋರಿಸುತ್ತೇನೋ ಅವನನ್ನು ನೀನು ಅಭಿಷೇಕಿಸಬೇಕು ಎಂದನು. 
 
4 ಯೆಹೋವನು ಹೇಳಿದಂತೆಯೇ ಸಮುವೇಲನು ಬೇತ್ಲೆಹೇಮಿಗೆ ಹೋದನು. ಆ ಊರಿನ ಹಿರಿಯರು ನಡುಗುತ್ತಾ ಬಂದು ಅವನನ್ನು ಎದುರುಗೊಂಡು ನಿನ್ನ ಆಗಮನವು ನಮಗೆ ಶುಭಕರವಾಗಿದೆಯೇ ಎಂದು ಕೇಳಲು ಅವನು
 
5 ಹೌದು, ಶುಭಕರವಾಗಿದೆ; ಯೆಹೋವನಿಗೆ ಯಜ್ಞವನ್ನರ್ಪಿಸುವದಕ್ಕೆ ಬಂದಿದ್ದೇನೆ. ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ನನ್ನ ಜೊತೆಯಲ್ಲಿ ಯಜ್ಞಕ್ಕೆ ಬನ್ನಿರಿ ಎಂದು ಹೇಳಿ ಇಷಯನನ್ನೂ ಅವನ ಮಕ್ಕಳನ್ನೂ ಶುದ್ಧೀಕರಿಸಿ ಅವರನ್ನೂ ಯಜ್ಞಕ್ಕೆ ಕರೆದನು. 
 
6 ಅವರು ಬರಲು ಅವನು ಎಲೀಯಾಬನನ್ನು ನೋಡಿ – ನಿಶ್ಚಯವಾಗಿ ಯೆಹೋವನು ಅಭಿಷೇಕಕ್ಕೆ ಆರಿಸಿಕೊಂಡವನು ಆತನ ಮುಂದೆ ಇದ್ದಾನೆ ಎಂದುಕೊಂಡನು. 
 
7 ಆದರೆ ಯೆಹೋವನು ಸಮುವೇಲನಿಗೆ – ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ ಅಂದನು. 
 
8 ಇಷಯನು ಅಬೀನಾದಾಬನನ್ನು ಸಮುವೇಲನು ಬಳಿಗೆ ಬರಮಾಡಲು ಸಮುವೇಲನು – ಯೆಹೋವನು ಇವನನ್ನು ಆರಿಸಿಕೊಳ್ಳಲಿಲ್ಲ ಎಂದನು. 
 
9 ತರುವಾಯ ಇಷಯನು ಶಮ್ಮ ಎಂಬವನನ್ನು ಬರಮಾಡಲು ಸಮುವೇಲನು – ಯೆಹೋವನು ಇವನನ್ನು ಆರಿಸಿಕೊಳ್ಳಲಿಲ್ಲ ಎಂದು ಹೇಳಿದನು. 
 
10 ಹೀಗೆ ಇಷಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನು ಅವನ ಬಳಿಗೆ ಬರಮಾಡಿದರೂ ಅವನು – ಯೆಹೋವನು ಇವರನ್ನು ಆರಿಸಿಕೊಳ್ಳಲಿಲ್ಲ ಎಂದು ನುಡಿದನು. 

ದಾವೀದನ್ನನ್ನು ಅಭಿಷೇಕಿಸಿದ್ದು

11 ಅನಂತರ ಸಮುವೇಲನು ಇಷಯನನ್ನು – ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ ಎಂದು ಕೇಳಲು ಅವನು – ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿರುತ್ತಾನೆ; ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ ಎಂದು ಉತ್ತರಕೊಟ್ಟನು. ಆಗ ಸಮುವೇಲನು – ಅವನನ್ನು ಕರೇಕಳುಹಿಸು; ಅವನು ಬರುವವರೆಗೂ ನಾವು ಊಟಕ್ಕೆ ಕೂತುಕೊಳ್ಳಬಾರದು ಎಂದು ಹೇಳಲು ಇಷಯನು ಅವನನ್ನು ಕರತರಿಸಿದನು. 
 
12 ಅವನು ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು. ಯೆಹೋವನು ಸಮುವೇಲನಿಗೆ – ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ ಎಂದು ಆಜ್ಞಾಪಿಸಲು 
 
13 ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಕ್ಕೆ ಹೊರಟು ಹೋದನು.
ದುರಾತ್ಮ ಪೀಡಿತನಾದ ಸೌಲನು ದಾವೀದನನ್ನು ಕಿನ್ನರಿಬಾರಿಸುವದಕ್ಕೆ ಹಚ್ಚಿದ್ದು
 
14 ಯೆಹೋವನ ಆತ್ಮವು ಸೌಲನನ್ನು ಬಿಟ್ಟುಹೋಯಿತು; ಯೆಹೋವನು ಕಳುಹಿಸಿದ ದುರಾತ್ಮವು ಬಂದು ಅವನನ್ನು ಪೀಡಿಸುತ್ತಿದ್ದದರಿಂದ 
 
15 ಅವನ ಸೇವಕರು ಅವನಿಗೆ – ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಪೀಡಿಸುತ್ತಾ ಇದೆ. 
 
16 ಸ್ವಾಮೀ, ಅಪ್ಪಣೆಯಾಗಲಿ; ನಿನ್ನ ಸನ್ನಿಧಿಯಲ್ಲಿ ನಿಂತಿರುವ ನಿನ್ನ ಸೇವಕರಾದ ನಾವು ಹೋಗಿ ಕಿನ್ನರಿಬಾರಿಸುವವರಲ್ಲಿ ನಿಪುಣನಾದ ಒಬ್ಬನನ್ನು ಹುಡುಕಿ ತರುತ್ತೇವೆ. ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ನಿನ್ನ ಮೇಲೆ ಬರುವಾಗ ಅವನು ಬಾರಿಸಿದರೆ ನಿನಗೆ ಉಪಶಮನವಾಗುವದು ಎಂದು ಹೇಳಿದರು. 
 
17 ಸೌಲನು ಅವರಿಗೆ – ಚೆನ್ನಾಗಿ ಬಾರಿಸಬಲ್ಲವನಾದ ಒಬ್ಬನನ್ನು ನನಗೋಸ್ಕರ ಹುಡುಕಿ ಕರಕೊಂಡು ಬನ್ನಿರಿ ಎಂದು ಆಜ್ಞಾಪಿಸಲು 
 
18 ಸೇವಕರಲ್ಲೊಬ್ಬನು ಅವನಿಗೆ – ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದ್ದೇನೆ; ಅವನು ಚೆನ್ನಾಗಿ ಬಾರಿಸಬಲ್ಲವನೂ ಪರಾಕ್ರಮಶಾಲಿಯೂ ರಣಶೂರನೂ ವಾಕ್ಚತುರನೂ ಸುಂದರನೂ ಯೆಹೋವನ ಅನುಗ್ರಹವನ್ನು ಹೊಂದಿದವನೂ ಆಗಿದ್ದಾನೆಂದು ತಿಳಿಸಿದನು. 
 
19 ಕೂಡಲೆ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ – ಕುರಿಗಳನ್ನು ಮೇಯಿಸುತ್ತಿರುವ ನಿನ್ನ ಮಗನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು ಎಂದು ಹೇಳಿಸಿದನು. 
 
20 ಇಷಯನು ರೊಟ್ಟಿಯನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಒಂದು ಹೋತಮರಿಯನ್ನೂ ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮುಖಾಂತರ ಸೌಲನಿಗೆ ಕಳುಹಿಸಿದನು. 
 
21 ಹೀಗೆ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು; ಸೌಲನು ಅವನನ್ನು ಬಹಳವಾಗಿ ಪ್ರೀತಿಸಿ ತನ್ನ ಆಯುಧಗಳನ್ನು ಹೊರುವದಕ್ಕೆ ನೇಮಿಸಿಕೊಂಡನು. 
 
22 ತರುವಾಯ ಸೌಲನು ಇಷಯನ ಬಳಿಗೆ ದೂತರನ್ನು ಅಟ್ಟಿ ಅವನಿಗೆ – ನಾನು ದಾವೀದನನ್ನು ಮೆಚ್ಚಿದ್ದೇನೆ; ಅವನು ನನ್ನ ಸನ್ನಿಧಿಯಲ್ಲಿ ಸೇವೆಮಾಡಲಿ ಎಂದು ತಿಳಿಸಿದನು. 
 
23 ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ಬಾರಿಸುವನು; ಅದರಿಂದ ದುರಾತ್ಮವು ಸೌಲನನ್ನು ಬಿಟ್ಟುಹೋಗುವದು; ಅವನು ಉಪಶಮನಹೊಂದಿ ಚೆನ್ನಾಗಿರುವನು.
1 ಸಮುವೇಲನು 28

ಸೌಲ ಮತ್ತು ಆತ್ಮ ಮಾದ್ಯಮ

1 ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರೊಡನೆ ಯುದ್ಧಮಾಡುವದಕ್ಕಾಗಿ ಸೈನ್ಯವನ್ನು ಕೂಡಿಸತೊಡಗಿದರು. ಆಗ ಆಕೀಷನು ದಾವೀದನಿಗೆ – ನೀನೂ ನಿನ್ನ ಜನರೂ ಯುದ್ಧಕ್ಕೆ ನನ್ನ ಜೊತೆಯಲ್ಲೇ ಬರಬೇಕೆಂದು ನಿನಗೆ ಗೊತ್ತಿರುತ್ತದಲ್ಲವೋ ಎನ್ನಲು ದಾವೀದನು – 
 
2 ಹೌದು, ನಿನ್ನ ದಾಸನ ಸಾಹಸವು ಗೊತ್ತಾಗುವದು ಅಂದನು. ಆಕೀಷನು ಅವನಿಗೆ – ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇಮಿಸಿಕೊಳ್ಳುವೆನು ಅಂದನು.
ಫಿಲಿಷ್ಟಿಯರು ಯುದ್ಧಕ್ಕೆ ಬಂದಲ್ಲಿ ಸೌಲನು ಅದರ ಫಲವೇನಾಗುವದೆಂದು ಏಂದೋರಿನ ಒಬ್ಬ ಯಕ್ಷಿಣಿಯನ್ನು ವಿಚಾರಿಸಿದ್ದು.
 
3 ಸಮುವೇಲನು ಮೃತಿಹೊಂದಿದ್ದನು. ಇಸ್ರಾಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಅವನ ಸ್ವಂತ ಊರಾದ ರಾಮದಲ್ಲಿ ಸಮಾಧಿಮಾಡಿದ್ದರು. ಸೌಲನು ಸತ್ತವರಲ್ಲಿ ವಿಚಾರಿಸುವವರನ್ನೂ ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟಿದ್ದನು. 
 
4 ಫಿಲಿಷ್ಟಿಯರು ಸೈನ್ಯಕೂಡಿಸಿಕೊಂಡು ಬಂದು ಶೂನೇಮಿನಲ್ಲಿ ಪಾಳೆಯಮಾಡಿಕೊಂಡಿದ್ದರು. ಸೌಲನು ಎಲ್ಲಾ ಇಸ್ರಾಯೇಲ್ಯರೊಡನೆ ಬಂದು ಗಿಲ್ಬೋವದಲ್ಲಿ ಇಳುಕೊಂಡನು. 
 
5 ಅವನು ಫಿಲಿಷ್ಟಿಯರ ಪಾಳೆಯವನ್ನು ಕಂಡು ಬಹಳ ಭಯದಿಂದ ಎದೆಯೊಡೆದವನಾದನು. 
 
6 ಅವನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದರೂ ಆತನು ಅವನಿಗೆ ಕನಸುಗಳಿಂದಾಗಲಿ ಊರೀಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಉತ್ತರಕೊಡಲೇ ಇಲ್ಲ. 
 
7 ಆದದರಿಂದ ಅವನು ತನ್ನ ಸೇವಕರಿಗೆ – ಸತ್ತವರಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿರಿ; ನಾನು ಆಕೆಯ ಹತ್ತಿರ ಹೋಗಿ ವಿಚಾರಿಸುವೆನು ಎಂದು ಹೇಳಲಾಗಿ ಅವರು – ಅಂಥವಳೊಬ್ಬಳು ಏಂದೋರಿನಲ್ಲಿದ್ದಾಳೆ ಅಂದರು. 
 
8 ಆಗ ಸೌಲನು ವಸ್ತ್ರಾದಿಗಳಿಂದ ತನ್ನನ್ನು ಮಾರ್ಪಡಿಸಿಕೊಂಡು ಇಬ್ಬರು ಸೇವಕರೊಡನೆ ಹೊರಟು ರಾತ್ರಿಯಲ್ಲಿ ಆಕೆಯ ಮನೆ ಸೇರಿ – ದಯವಿಟ್ಟು ನನಗೋಸ್ಕರ ಸತ್ತವರಲ್ಲಿ ವಿಚಾರಿಸಿ ಕಣಿಹೇಳು; ನಾನು ಯಾವನ ಹೆಸರನ್ನು ಹೇಳುತ್ತೇನೋ ಅವನನ್ನು ಇಲ್ಲಿಗೆ ಬರಮಾಡು ಎಂದು ಆಕೆಯನ್ನು ಬೇಡಿಕೊಂಡನು. 
 
9 ಆಗ ಆಕೆಯು ಅವನಿಗೆ – ಸೌಲನು ಮಾಡಿದ್ದು ನಿನಗೆ ಗೊತ್ತುಂಟು; ಅವನು ಸತ್ತವರಲ್ಲಿ ವಿಚಾರಿಸುವವರನ್ನೂ ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟನಲ್ಲಾ; ಹೀಗಿದ್ದರೂ ನಾನು ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರಲೊಡ್ಡುವದೇಕೆ ಅಂದಳು. 
 
10 ಅದಕ್ಕೆ ಸೌಲನು – ಯೆಹೋವನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವದಿಲ್ಲ ಎಂದು ಆಕೆಗೆ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದನು. 
 
11 ಆಗ ಸ್ತ್ರೀಯು – ನಿನಗೆ ಯಾರನ್ನು ಬರಮಾಡಬೇಕು ಎನ್ನಲು – ಸಮುವೇಲನನ್ನು ಎಂದು ಉತ್ತರಕೊಟ್ಟನು. 
 
12 ಆ ಸ್ತ್ರೀಯು ಸಮುವೇಲನನ್ನು ಕಂಡ ಕೂಡಲೆ ಗಟ್ಟಿಯಾಗಿ ಕೂಗಿ ಸೌಲನಿಗೆ – ನೀನು ನನ್ನನ್ನು ವಂಚಿಸಿದ್ದೇಕೆ? ನೀನು ಸೌಲನಲ್ಲವೋ ಅಂದಳು. 
 
13 ಅರಸನು – ಹೆದರಬೇಡ; ನಿನಗೇನು ಕಾಣಿಸುತ್ತದೆ ಎಂದು ಆಕೆಯನ್ನು ಕೇಳಲು – ಭೂಮಿಯೊಳಗಿಂದ ಒಬ್ಬ ದೇವನು ಬರುತ್ತಿರುವದನ್ನು ನೋಡುತ್ತೇನೆ ಎಂದು ಉತ್ತರಕೊಟ್ಟಳು. 
 
14 ಅವನು ತಿರಿಗಿ – ಅವನ ರೂಪ ಹೇಗಿದೆ ಎಂದು ಕೇಳಲು ಆಕೆಯು – ನಿಲುವಂಗಿಯನ್ನು ತೊಟ್ಟುಕೊಂಡ ಒಬ್ಬ ಮುದುಕನು ಬರುತ್ತಾನೆ ಎಂದು ಹೇಳಿದಳು. ಅವನು ಸಮುವೇಲನೇ ಎಂದು ಸೌಲನು ತಿಳಿದು ನೆಲದ ಮಟ್ಟಿಗೂ ಬೊಗ್ಗಿ ನಮಸ್ಕರಿಸಿದನು. 
 
15 ಆಗ ಸಮುವೇಲನು ಸೌಲನನ್ನು – ನೀನು ನನ್ನ ವಿಶ್ರಾಂತಿಯನ್ನು ಕೆಡಿಸಿದ್ದೇಕೆ? ನನ್ನನ್ನು ಇಲ್ಲಿಗೆ ಯಾಕೆ ಬರಮಾಡಿದಿ ಎಂದು ಕೇಳಿದನು. ಅದಕ್ಕೆ ಸೌಲನು – ನಾನು ಬಲು ಇಕ್ಕಟ್ಟಿನಲ್ಲಿದ್ದೇನೆ; ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಕ್ಕೆ ಬಂದಿದ್ದಾರೆ; ದೇವರು ನನ್ನನ್ನು ಬಿಟ್ಟು ದೂರಹೋಗಿದ್ದಾನೆ; ಆತನು ನನಗೆ ಪ್ರವಾದಿಗಳಿಂದಾಗಲಿ ಕನಸುಗಳಿಂದಾಗಲಿ ಉತ್ತರಕೊಡಲೊಲ್ಲನು. ಆದದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವಿಯೆಂದು ನಿನ್ನನ್ನು ಇಲ್ಲಿಗೆ ಬರಮಾಡಿದೆನು ಅಂದನು. 
 
16 ಆಗ ಸಮುವೇಲನು – ಯೆಹೋವನು ನಿನ್ನನ್ನು ಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವದೇಕೆ? 
 
17 ಆತನು ನನ್ನ ಮುಖಾಂತರ ನಿನಗೆ ಹೇಳಿದ್ದನ್ನು ನೆರವೇರಿಸಿದ್ದಾನೆ; ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟಿದ್ದಾನೆ. 
 
18 ನೀನು ಯೆಹೋವನ ಮಾತನ್ನು ಕೇಳಲಿಲ್ಲ; ಆತನು ಅಮಾಲೇಕ್ಯರ ಮೇಲೆ ಉಗ್ರಕೋಪಗೊಂಡು ಮಾಡಿದ ಕೋಪಾಜ್ಞೆಯನ್ನು ನೀನು ನೆರವೇರಿಸಲಿಲ್ಲ. ಆದದರಿಂದಲೇ ಯೆಹೋವನು ಈಗ ನಿನಗೆ ಹೀಗೆ ಮಾಡುತ್ತಾನೆ. 
 
19 ಆತನು ನಿನ್ನ ಕೂಡ ಇಸ್ರಾಯೇಲ್ಯರನ್ನೂ ಫಿಲಿಷ್ಟಿಯರ ಕೈಗೆ ಒಪ್ಪಿಸುವನು. ನಾಳೆ ನೀನೂ ನಿನ್ನ ಮಕ್ಕಳೂ ನಾನಿರುವಲ್ಲಿಗೆ ಬರುವಿರಿ; ಆತನು ಇಸ್ರಾಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವನು ಎಂದು ಹೇಳಿದನು. 
 
20 ಸೌಲನು ಸಮುವೇಲನ ಮಾತುಗಳನ್ನು ಕೇಳಿದ ಕೂಡಲೆ ಭಯಭ್ರಾಂತನಾಗಿ ನೆಲದ ಮೇಲೆ ಉದ್ದಕ್ಕೆ ಬಿದ್ದನು. ಅವನು ಇಡೀ ದಿವಸ ಊಟ ಮಾಡಿರಲಿಲ್ಲವಾದದರಿಂದ ಅವನಲ್ಲಿ ಬಲವೇ ಇರಲಿಲ್ಲ. 
 
21 ಆ ಸ್ತ್ರೀಯು ಸೌಲನ ಹತ್ತಿರ ಬಂದು ಅವನು ಬಹು ಭೀತನಾಗಿದ್ದಾನೆಂದು ಕಂಡು ಅವನಿಗೆ – ನಿನ್ನ ದಾಸಿಯಾದ ನಾನು ನಿನ್ನ ಮಾತು ಕೇಳಿದೆನು; ಕೈಯಲ್ಲಿ ಜೀವಹಿಡಿದವಳಾಗಿ ನಿನ್ನ ಅಪ್ಪಣೆಯನ್ನು ನೆರವೇರಿಸಿದೆನು. 
 
22 ಆದದರಿಂದ ಈಗ ನೀನು ದಯವಿಟ್ಟು ನಿನ್ನ ದಾಸಿಯ ಮಾತನ್ನು ಕೇಳಬೇಕು; ಸ್ವಲ್ಪ ಆಹಾರ ತರುತ್ತೇನೆ, ಪ್ರಯಾಣಕ್ಕೆ ಬಲಬರುವ ಹಾಗೆ ಅದನ್ನು ಊಟಮಾಡು ಎಂದು ಹೇಳಿದಳು. 
 
23 ಅವನು – ಒಲ್ಲೆನು; ಊಟಮಾಡುವದಿಲ್ಲ ಅಂದನು. ಆದರೆ ಅವನ ಸೇವಕರೂ ಆ ಸ್ತ್ರೀಯೂ ಬಹಳವಾಗಿ ಬೇಡಿಕೊಂಡದರಿಂದ ಅವನು ಕಡೆಗೆ ಅವರ ಮಾತಿಗೆ ಒಪ್ಪಿ ನೆಲದಿಂದೆದ್ದು ಮಂಚದ ಮೇಲೆ ಕೂತುಕೊಂಡನು. 
 
24 ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರುವಿತ್ತು. ಆಕೆಯು ಶೀಘ್ರವಾಗಿ ಅದನ್ನು ಕೊಯ್ದು ಪಕ್ವಮಾಡಿ ಹಿಟ್ಟನ್ನು ತೆಗೆದುಕೊಂಡು ನಾದಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಸೌಲನಿಗೂ ಅವನ ಸೇವಕರಿಗೂ ಬಡಿಸಿದಳು. 
 
25 ಅವರು ಊಟಮಾಡಿ ಅದೇ ರಾತ್ರಿ ಹೊರಟುಹೋದರು.
1 ಸಮುವೇಲನು 31

ಸೌಲನ ಮತ್ತು ಅವನ ಮಕ್ಕಳ ಮರಣ

1 ಫಿಲಿಷ್ಟಿಯರು ಇಸ್ರಾಯೇಲ್ಯರೊಡನೆ ಯುದ್ಧಮಾಡಿದರು. ಇಸ್ರಾಯೇಲ್ಯರು ಅವರಿಂದ ಅಪಜಯ ಹೊಂದಿ ಗಿಲ್ಬೋವ ಬೆಟ್ಟದಲ್ಲಿ ಹತರಾದರು. 
 
2 ಫಿಲಿಷ್ಟಿಯರು ಸೌಲನನ್ನೂ ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು. 
 
3 ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹುಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು. 
 
4 ಆದದರಿಂದ ಸೌಲನು ಬಹುಭೀತನಾಗಿ ತನ್ನ ಆಯುಧವಾಹಕನಿಗೆ – ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು; ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನ್ನನ್ನು ತಿವಿದು ಅಪಕೀರ್ತಿಯನ್ನುಂಟುಮಾಡಾರು ಎಂದು ಹೇಳಲು ಅವನು ಹೆದರಿ ಒಲ್ಲೆನು ಅಂದನು. ಆದದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು ಅದರ ಮೇಲೆ ಬಿದ್ದನು. 
 
5 ಸೌಲನು ಸತ್ತದ್ದನ್ನು ಆಯುಧವಾಹಕನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಅಲ್ಲಿಯೇ ಸತ್ತನು. 
 
6 ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಅವನ ಆಯುಧವಾಹಕನೂ ಎಲ್ಲಾ ಆಳುಗಳೂ ಅದೇ ದಿವಸದಲ್ಲಿ ಸತ್ತರು. 
 
7 ಇಸ್ರಾಯೇಲ್ ಭಟರು ಸೋತರು, ಸೌಲನೂ ಅವನ ಮಕ್ಕಳೂ ಸತ್ತರು ಎಂಬ ವರ್ತಮಾನವನ್ನು ತಗ್ಗಿನ ಆಚೆಯಲ್ಲಿಯೂ ಯೊರ್ದನಿನ ಆಚೆಯಲ್ಲಿಯೂ ವಾಸವಾಗಿದ್ದ ಇಸ್ರಾಯೇಲ್ಯರು ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು; ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
 
8 ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲುಕೊಳ್ಳುವದಕ್ಕೆ ಬಂದಾಗ ಸೌಲನೂ ಅವನ ಮೂರು ಮಂದಿ ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವದನ್ನು ಕಂಡು 
 
9 ಸೌಲನ ತಲೆಯನ್ನು ಕಡಿದು ಅವನ ಆಯುಧಗಳನ್ನು ತೆಗೆದುಕೊಂಡು ಅವುಗಳನ್ನು ತಮ್ಮ ದೇಶದ ಎಲ್ಲಾ ಕಡೆಗೂ ಕಳುಹಿಸಿ ತಮ್ಮ ಎಲ್ಲಾ ಜನರಿಗೂ ದೇವಸ್ಥಾನಗಳಿಗೂ ಜಯವಾರ್ತೆಯನ್ನು ಮುಟ್ಟಿಸಿದರು. 
 
10 ಅವನ ಆಯುಧಗಳನ್ನು ಅಷ್ಟೋರೆತ್ ದೇವತೆಯ ಗುಡಿಯಲ್ಲಿಟ್ಟರು; ಅವನ ಶವವನ್ನು ಬೇತ್ಷೆಯಾನಿನ ಕೋಟೆ ಗೋಡೆಗೆ ನೇತುಹಾಕಿದರು. 
 
11 ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನವು ಯಾಬೆಷ್ ಗಿಲ್ಯಾದಿನವರಿಗೆ ಮುಟ್ಟಿದಾಗ 
 
12 ಅವರಲ್ಲಿದ್ದ ಶೂರರೆಲ್ಲರೂ ಹೊರಟು ರಾತ್ರಿಯೆಲ್ಲಾ ನಡೆದುಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಬೇತ್ಷೆಯಾನಿನ ಗೋಡೆಯಿಂದ ಇಳಿಸಿ ಯಾಬೇಷಿಗೆ ತೆಗೆದುಕೊಂಡು ಬಂದು ಅಲ್ಲಿ ಅವುಗಳನ್ನು ಸುಟ್ಟುಬಿಟ್ಟರು. 
 
13 ಅವರ ಎಲುಬುಗಳನ್ನು ಯಾಬೇಷಿನಲ್ಲಿದ್ದ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ ಏಳು ದಿವಸ ಉಪವಾಸವಾಗಿದ್ದರು.
2 ಸಮುವೇಲನು 1

ಸೌಲ ಮರಣದ ಸುದ್ದಿಯು ದಾವೀದನಿಗೆ ಮುಟ್ಟಿದ್ದು

1 ಸೌಲನು ಸತ್ತನಂತರ ಸಂಭವಿಸಿದ್ದು. ದಾವೀದನು ಅಮಾಲೇಕ್ಯರನ್ನು ಹೊಡೆದು ಬಂದು ಚಿಕ್ಲಗಿನಲ್ಲಿ ಎರಡು ದಿವಸ ಇದ್ದನು. 
 
2 ಮೂರನೆಯ  ದಿನ ಸೌಲನ ಪಾಳೆಯದಿಂದ ಒಬ್ಬ ಮನುಷ್ಯನು ದಾವೀದನ ಬಳಿಗೆ ಬಂದು ನೆಲದ ಮಟ್ಟಿಗೆ ಬಾಗಿ ನಮಸ್ಕರಿಸಿದನು. ಅವನು ವಸ್ತ್ರಗಳನ್ನು ಹರಿದುಕೊಂಡು ತಲೆಯ ಮೇಲೆ ಮಣ್ಣು ಹಾಕಿಕೊಂಡಿದ್ದನು.
 
3 ದಾವೀದನು ಅವನನ್ನು – ನೀನು ಎಲ್ಲಿಂದ ಬಂದಿ ಎಂದು ಕೇಳಲು ಅವನು – ನಾನು ಇಸ್ರಾಯೇಲ್ಯರ ಪಾಳೆಯದಿಂದ ತಪ್ಪಿಸಿಕೊಂಡು ಬಂದೆನು ಎಂದು ಉತ್ತರಕೊಟ್ಟನು. 
 
4 ಆಗ ದಾವೀದನು – ದಯವಿಟ್ಟು ಕಾರ್ಯವೇನಾಯಿತೆಂದು ತಿಳಿಸು ಅನ್ನಲು ಆ ಮನುಷ್ಯನು – ಇಸ್ರಾಯೇಲ್ಯರು ರಣರಂಗದಿಂದ ಓಡಿಹೋದರು. ಅನೇಕರು ಮಡಿದರು. ಸೌಲನೂ ಅವನ ಮಗನಾದ ಯೋನಾತಾನನೂ ಮೃತಿ ಹೊಂದಿದರು ಎಂದು ತಿಳಿಸಿದನು. 
 
5 ದಾವೀದನು ವರ್ತಮಾನತಂದ ಆ ಪ್ರಾಯಸ್ಥನಿಗೆ – ಸೌಲನೂ ಅವನ ಮಗನಾದ ಯೋನಾತಾನನೂ ಸತ್ತಿರುವದು ನಿನಗೆ ಹೇಗೆ ಗೊತ್ತಾಯಿತು ಎಂದು ಪ್ರಶ್ನಿಸಲು ಅವನು – 
 
6 ನಾನು ಅಕಸ್ಮಾತ್ತಾಗಿ ಗಿಲ್ಬೋವಪರ್ವತ ಪ್ರದೇಶಕ್ಕೆ ಬಂದಾಗ ಸೌಲನು ತನ್ನ ಬರ್ಜಿಯನ್ನೂರಿಕೊಂಡು ನಿಂತಿರುವದನ್ನೂ ರಥಿಕರೂ ರಾಹುತರೂ ಅವನನ್ನು ಹಿಂದಟ್ಟಿ ಬರುತ್ತಿರುವದನ್ನೂ ಕಂಡೆನು. 
 
7 ಅವನು ತಿರುಗಿಕೊಂಡು ನನ್ನನ್ನು ಕಂಡು ಕರೆದನು. 
 
8 ನಾನು – ಇಗೋ, ಬಂದೆನು ಎಂದು ಹೇಳಿ ಹೋದಾಗ ಅವನು – ನೀನಾರು ಎಂದು ಕೇಳಿದ್ದಕ್ಕೆ – ಅಮಾಲೇಕ್ಯನೆಂದು ಉತ್ತರ ಕೊಟ್ಟೆನು. 
 
9 ಆಗ ಅವನು ನನಗೆ – ನೀನು ಕೃಪೆಮಾಡಿ ಹತ್ತಿರ ಬಂದು ನನ್ನನ್ನು ಕೊಂದುಹಾಕು; ಯಾಕಂದರೆ ನನ್ನಲ್ಲಿ ಜೀವವು ಇನ್ನೂ ಪೂರ್ಣವಾಗಿರುವದರಿಂದ ನನಗೆ ಸಂಕಟ ಹಿಡಿದದೆ ಎಂದು ಹೇಳಿದನು. 
 
10 ನಾನು ಹತ್ತಿರ ಹೋಗಿ ಅವನು ಬಿದ್ದು ಬಿಟ್ಟರೆ ಬದುಕಲಾರನೆಂದು ನೆನಸಿ ಅವನನ್ನು ಕೊಂದುಹಾಕಿ ಅವನ ತಲೆಯ ಮೇಲಣ ಕಿರೀಟವನ್ನೂ ರಟ್ಟೆಯಲ್ಲಿದ್ದ ಬಳೆಯನ್ನೂ ತೆಗೆದುಕೊಂಡು ಅವುಗಳನ್ನು ನನ್ನ ಒಡೆಯನಾದ ನಿನಗೆ ತಂದಿದ್ದೇನೆ ಅಂದನು. 
 
11 ಸೌಲನೂ ಅವನ ಮಗನಾದ ಯೋನಾತಾನನೂ ಯೆಹೋವನ ಪ್ರಜೆಗಳಾದ ಇಸ್ರಾಯೇಲ್ಯರೂ ಕತ್ತಿಯಿಂದ ಸಂಹೃತರಾದದ್ದಕ್ಕಾಗಿ 
 
12 ದಾವೀದನೂ ಅವನ ಜನರೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಗೋಳಾಡಿ ಅತ್ತು ಸಾಯಂಕಾಲದವರೆಗೆ ಉಪವಾಸ ಮಾಡಿದರು. 
 
13 ದಾವೀದನು ವರ್ತಮಾನ ತಂದ ಪ್ರಾಯಸ್ಥನನ್ನು – ನೀನೆಲ್ಲಿಯವನು ಎಂದು ಕೇಳಿದ್ದಕ್ಕೆ ಅವನು – ನಾನು ಇಸ್ರಾಯೇಲ್ಯರಲ್ಲಿ ಪ್ರವಾಸಿಯಾಗಿರುವ ಅಮಾಲೇಕ್ಯನ ಮಗನು ಎಂದು ಉತ್ತರಕೊಟ್ಟನು. 
 
14 ದಾವೀದನು ಅವನಿಗೆ – ನೀನು ಕೈಯೆತ್ತಿ ಯೆಹೋವನ ಅಭಿಷಿಕ್ತನನ್ನು ಕೊಲ್ಲುವದಕ್ಕೆ ಏಕೆ ಭಯಪಡಲಿಲ್ಲ ಎಂದು ಹೇಳಿ 
 
15 ತನ್ನ ಆಳುಗಳಲ್ಲಿ ಒಬ್ಬನನ್ನು ಕರೆದು – ಇವನ ಮೇಲೆ ಬಿದ್ದು ಹೊಡಿ ಎಂದು ಆಜ್ಞಾಪಿಸಲು ಅವನು ಇವನನ್ನು ಹೊಡೆದು ಕೊಂದನು. 
 
16 ದಾವೀದನು – ರಕ್ತಾಪರಾಧವು ನಿನ್ನ ತಲೆಯ ಮೇಲೆಯೇ ಇರಲಿ; ಯೆಹೋವನ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯೇ ನಿನಗೆ ವಿರೋಧವಾಗಿ ಸಾಕ್ಷಿ ಹೇಳಿತು ಅಂದನು.

Related Quiz Articles