ಪ್ರವಾದಿಗಳು ಮತ್ತು ಅರಸುಗಳು

ಭಾಗ 2

2 ಸಮುವೇಲ 6

ದಾವೀದನು ಯೆಹೋವನ ಮಂಜೂಷವನ್ನು ಚೀಯೋನಿಗೆ ತಂದದ್ದು

1 ಅನಂತರ ದಾವೀದನು ಇಸ್ರಾಯೇಲ್ಯರಲ್ಲಿ ಮೂವತ್ತುಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು 
 
2 ದೇವರ ಮಂಜೂಷವನ್ನು ತರುವದಕ್ಕಾಗಿ ಅವರೆಲ್ಲರ ಸಹಿತ ಯೆಹೂದದೇಶದ ಬಾಳಾ ಎಂಬಲ್ಲಿಗೆ ಹೋದನು. ಆ ಮಂಜೂಷವು ದೇವನಾಮದಿಂದ ಅಂದರೆ ಕೆರೂಬಿಯರ ನಡುವೆ ಆಸೀನನಾಗಿರುವ ಸೇನಾಧೀಶ್ವರನಾದ ಯೆಹೋವನ ನಾಮದಿಂದ ಪ್ರಸಿದ್ಧವಾದದ್ದು. 
 
3 ಅವರು ದೇವರ ಮಂಜೂಷವನ್ನು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯಿಂದ ಹೊರಗೆ ತಂದು ಅದನ್ನು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನೂ ಅಹಿಯೋವನೂ ಬಂಡಿಯನ್ನು ಹೊಡೆದರು. 
 
4 ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಿಂದ ತೆಗೆಯಲ್ಪಟ್ಟ ದೇವರ ಮಂಜೂಷದ ಮುಂದೆ ಅಹಿಯೋವನು ಹೋಗುತ್ತಿದ್ದನು. 
 
5 ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಕಿನ್ನರಿ, ಸ್ವರಮಂಡಲ, ದಮ್ಮಡಿ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು ಪೂರ್ಣಾಸಕ್ತಿಯಿಂದ ಗೀತಗಳನ್ನು ಹಾಡುತ್ತಾ ಯೆಹೋವನ ಮುಂದೆ ನರ್ತನಮಾಡುತ್ತಾ ಹೋದರು. 
 
6 ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು. 
 
7 ಆಗ ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಈ ತಪ್ಪಿನ ಸಲವಾಗಿ ಅವನನ್ನು ಹತಮಾಡಿದನು; ಅವನು ಅಲ್ಲೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು. 
 
8 ಯೆಹೋವನು ಉಜ್ಜನನ್ನು ಮುರಿದುಬಿಟ್ಟದ್ದರಿಂದ ದಾವೀದನು ಉರಿಗೊಂಡು ಆ ಸ್ಥಳಕ್ಕೆ ಪೆರೆಚುಜ್ಜಾ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ. 
 
9 ಆ ದಿವಸ ದಾವೀದನು ಯೆಹೋವನಿಗೆ ಭಯಪಟ್ಟು – ಯೆಹೋವನ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವದು ಹೇಗೆ ಎಂದುಕೊಂಡು 
 
10 ಅದನ್ನು ದಾವೀದ ನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು. 
 
11 ಯೆಹೋವನ ಮಂಜೂಷವು ಗತ್ ಊರಿನ ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ಕಾಲದಲ್ಲಿ ಯೆಹೋವನು ಅವನನ್ನೂ ಅವನ ಮನೆಯವರನ್ನೂ ಆಶೀರ್ವದಿಸಿದನು.
 
12 ಯೆಹೋವನು ಹೀಗೆ ತನ್ನ ಮಂಜೂಷದ ದೆಸೆಯಿಂದ ಓಬೇದೆದೋಮನನ್ನೂ ಅವನಿಗಿರುವದೆಲ್ಲವನ್ನೂ ಆಶೀರ್ವದಿಸಿದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದನಗರಕ್ಕೆ ತಂದನು. 
 
13 ಯೆಹೋವನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ ದಾವೀದನು ಒಂದು ಎತ್ತನ್ನೂ ಕೊಬ್ಬಿದ ಕರುವನ್ನೂ ಯಜ್ಞಮಾಡಿದನು. 
 
14 ದಾವೀದನು ನಾರಿನ ಏಫೋದನ್ನು ಧರಿಸಿಕೊಂಡವನಾಗಿ ಯೆಹೋವನ ಸನ್ನಿಧಿಯಲ್ಲಿ ಪೂರ್ಣಾಸಕ್ತಿಯಿಂದ ಕುಣಿದಾಡಿದನು. 
 
15 ಹೀಗೆ ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಆರ್ಭಟಿಸುತ್ತಾ ತುತೂರಿ ಊದುತ್ತಾ ಯೆಹೋವನ ಮಂಜೂಷವನ್ನು ತಂದರು. 
 
16 ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹಣಿಕಿ ನೋಡಿ ದಾವೀದನು ಯೆಹೋವನ ಮುಂದೆ ಜಿಗಿಯುತ್ತಾ ಕುಣಿಯುತ್ತಾ ಇರುವದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು. 
 
17 ಜನರು ಯೆಹೋವನ ಮಂಜೂಷವನ್ನು ತಂದು ದಾವೀದನು ಹಾಕಿಸಿದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿಟ್ಟರು; ಆಗ ದಾವೀದನು ಯೆಹೋವನಿಗೋಸ್ಕರ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದನು. 
 
18 ಇದಾದ ಮೇಲೆ ಅವನು ಸೇನಾಧೀಶ್ವರನಾದ ಯೆಹೋವನ ಹೆಸರಿನಿಂದ ಎಲ್ಲರನ್ನೂ ಆಶೀರ್ವದಿಸಿ 
 
19 ಸಭೆಯಾಗಿ ನೆರೆದು ಬಂದಿರುವ ಇಸ್ರಾಯೇಲ್ಯರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನೂ ಒಂದು ತುಂಡು ಮಾಂಸವನ್ನೂ ದ್ರಾಕ್ಷೇ ಹಣ್ಣಿನ ಉಂಡೆಯನ್ನೂ ಕೊಡಿಸಿದನು. ತರುವಾಯ ಜನರೆಲ್ಲರೂ ತಮ್ಮತಮ್ಮ ಮನೆಗಳಿಗೆ ಹೋದರು.
 
20 ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವದಕ್ಕೆ ಹೋದಾಗ ಸೌಲನ ಮಗಳಾದ ಮೀಕಲಳು ಅವನೆದುರಿಗೆ ಬಂದು – ಈ ಹೊತ್ತು ಇಸ್ರಾಯೇಲ್ಯರ ಅರಸನು ಎಂಥ ಗೌರವದಿಂದ ನಡೆದುಕೊಂಡನು! ನೀಚರಲ್ಲೊಬ್ಬನಂತೆ ತನ್ನ ಜನರ ದಾಸಿಯರ ಮುಂದೆ ಬೆತ್ತಲೆಯಾಗಿದ್ದನಲ್ಲಾ ಅಂದಳು. ಆಗ ದಾವೀದನು ಆಕೆಗೆ – 
 
21 ಯೆಹೋವನ ಸನ್ನಿಧಿಯಲ್ಲಿಯಷ್ಟೆ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟು ನನ್ನನ್ನೇ ಆರಿಸಿಕೊಂಡು ತನ್ನ ಪ್ರಜೆಗಳಾದ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದ ಯೆಹೋವನ ಮುಂದೆ ಇನ್ನೂ ಕುಣಿದಾಡುವೆನು. 
 
22 ಇದಕ್ಕಿಂತ ಇನ್ನೂ ಹೆಚ್ಚಾಗಿ ತಿರಸ್ಕಾರಹೊಂದುವದಕ್ಕೂ ನನ್ನನ್ನು ಅಲ್ಪನೆಂದು ಭಾವಿಸಿಕೊಳ್ಳುವದಕ್ಕೂ ಸಿದ್ಧನಾಗಿದ್ದೇನೆ. ನೀನು ಹೇಳಿದ ದಾಸಿಯರಾದರೋ ಹೇಗೂ ನನ್ನನ್ನು ಸನ್ಮಾನಿಸುವರು ಅಂದನು. 23ಸೌಲನ ಮಗಳಾದ ಮೀಕಲಳಿಗೆ ಜೀವದಿಂದಿರುವವರೆಗೂ ಮಕ್ಕಳೇ ಆಗಲಿಲ್ಲ.
1 ಪೂರ್ವಕಾಲವೃತ್ತಾಂತ 13

ಮಂಜೂಷವನ್ನು ಮತ್ತೆ ತಂದದ್ದು

1 ದಾವೀದನು ಸಹಸ್ರಾಧಿಪತಿ ಶತಾಧಿಪತಿ ಮೊದಲಾದ ಸರ್ವಪ್ರಭುಗಳೊಡನೆ ಮಾತಾಡಿದನಂತರ 
 
2 ಇಸ್ರಾಯೇಲ್ ಸಮಸ್ತಸಮೂಹದವರಿಗೆ – ನಿಮ್ಮ ಸಮ್ಮತಿಯೂ ನಮ್ಮ ದೇವರಾದ ಯೆಹೋವನ ಚಿತ್ತವೂ ಇರುವದಾದರೆ ನಾವು ಎಲ್ಲಾ ಇಸ್ರಾಯೇಲ್‍ಪ್ರಾಂತಗಳಲ್ಲಿರುವ ನಮ್ಮ ಸಹೋದರರನ್ನೂ ಗೋಮಾಳಸಹಿತವಾದ ತಮ್ಮ ಪಟ್ಟಣಗಳಲ್ಲಿರುವ ಯಾಜಕ ಲೇವಿಯರನ್ನೂ ಶೀಘ್ರವಾಗಿ ಕರೇಕಳುಹಿಸೋಣ. 
 
3 ಅವರು ನಮ್ಮ ಬಳಿಗೆ ಕೂಡಿಬಂದ ಮೇಲೆ ನಾವು ಸೌಲನ ಕಾಲದಲ್ಲಿ ಅಲಕ್ಷ್ಯಮಾಡಿದ ನಮ್ಮ ದೇವಮಂಜೂಷವನ್ನು ತೆಗೆದುಕೊಂಡು ಬರೋಣ ಅನ್ನಲು 
 
4 ಅವರೆಲ್ಲರೂ ಆ ಮಾತಿಗೆ ಮೆಚ್ಚಿ ಅದರಂತೆ ಮಾಡಬೇಕೆಂದು ಹೇಳಿದರು. 
 
5 ಆಗ ದಾವೀದನು ದೇವಮಂಜೂಷವನ್ನು ಕಿರ್ಯತ್ಯಾರೀಮಿನಿಂದ ತರುವದಕ್ಕೋಸ್ಕರ ಐಗುಪ್ತದ ಶೀಹೋರ್ ಹಳ್ಳದಿಂದ ಹಮಾತಿನ ದಾರಿಯವರೆಗೂ ವಾಸಿಸುತ್ತಿದ್ದ ಎಲ್ಲಾ ಇಸ್ರಾಯೇಲ್ಯರನ್ನೂ ಕೂಡಿಸಿ 
 
6 ಅವರೆಲ್ಲರೊಡನೆ ಯೆಹೂದ ದೇಶದ ಬಾಳಾ ಎನಿಸಿಕೊಳ್ಳುತ್ತಿದ್ದ ಕಿರ್ಯತ್ಯಾರೀಮಿಗೆ ಹೋದನು; ಆ ಮಂಜೂಷವು ಕೆರೂಬಿಯರ ನಡುವೆ ಆಸೀನನಾಗಿರುವ ಯೆಹೋವದೇವರ ನಾಮದಿಂದ ಪ್ರಸಿದ್ಧವಾದದ್ದು. 
 
7 ಅವರು ದೇವಮಂಜೂಷವನ್ನು ಅಬೀನಾದಾಬನ ಮನೆಯಿಂದ ಹೊರಗೆ ತಂದು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಉಜ್ಜನೂ ಅಹಿಯೋವನೂ ಬಂಡಿಯನ್ನು ಹೊಡೆದರು. 
 
8 ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಕಿನ್ನರಿ, ಸ್ವರಮಂಡಲ, ದಮ್ಮಡಿ, ತಾಳ, ತುತೂರಿ ಇವುಗಳ ಧ್ವನಿಯೊಡನೆ ಪೂರ್ಣಾಸಕ್ತಿಯಿಂದ ಗೀತಗಳನ್ನು ಹಾಡುತ್ತಾ ದೇವರ ಮುಂದೆ ನರ್ತನ ಮಾಡುತ್ತಾ ಹೋದರು. 
 
9 ಅವರು ಕೀದೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವಮಂಜೂಷವನ್ನು ಹಿಡಿದನು. 
 
10 ಉಜ್ಜನು ಮಂಜೂಷದ ಮೇಲೆ ಕೈ ಹಾಕಿದ್ದರಿಂದ ಯೆಹೋವನು ಅವನ ಮೇಲೆ ಕೋಪಗೊಂಡು ಅವನನ್ನು ಹತಮಾಡಿದನು; ಅವನು ಅಲ್ಲೇ ದೇವರ ಮುಂದೆ ಸತ್ತನು. 
 
11 ಯೆಹೋವನು ಉಜ್ಜನನ್ನು ಮುರಿದುಬಿಟ್ಟದ್ದರಿಂದ ದಾವೀದನು ಉರಿಗೊಂಡು ಆ ಸ್ಥಳಕ್ಕೆ ಪೆರೆಚ್ಉಜ್ಜ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ. 
 
12 ಆ ದಿವಸ ದಾವೀದನು ದೇವರಿಗೆ ಭಯಪಟ್ಟು – ದೇವರ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವದು ಹೇಗೆ ಎಂದುಕೊಂಡು 
 
13 ಅದನ್ನು ದಾವೀದನಗರಕ್ಕೆ ತಾರದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು. 
 
14 ದೇವರ ಮಂಜೂಷವು ಓಬೇದೆದೋಮನ ಮನೆಯ ಬಳಿಯಲ್ಲಿ ಸ್ವಂತ ಆಲಯದೊಳಗೆ ಮೂರು ತಿಂಗಳು ಇತ್ತು. ಆ ಕಾಲದಲ್ಲಿ ಯೆಹೋವನು ಓಬೇದೆದೋಮನ ಮನೆಯನ್ನೂ ಅವನಿಗಿದ್ದದ್ದೆಲ್ಲವನ್ನೂ ಆಶೀರ್ವದಿಸಿದನು.
2 ಸಮುವೇಲ 7

ದಾವೀದನ ರಾಜ್ಯಸಂತಾನಗಳನ್ನು ಶಾಶ್ವತವಾಗಿರಿಸುವೆನೆಂದು ಯೆಹೋವನು ವಾಗ್ದಾನಮಾಡಿದ್ದು

1 ಯೆಹೋವನ ಅನುಗ್ರಹದಿಂದ ಸುತ್ತಣ ವೈರಿಗಳ ಭಯವೆಲ್ಲಾ ತಪ್ಪಿಹೋಗಿ ಅರಸನು ಅರಮನೆಯಲ್ಲಿ ಸಮಾಧಾನದಿಂದ ವಾಸಿಸುತ್ತಿದ್ದಾಗ 
 
2 ಒಂದು ದಿವಸ ಪ್ರವಾದಿಯಾದ ನಾತಾನನಿಗೆ – ನೋಡು, ನಾನು ದೇವದಾರುಮರದ ಮನೆಯಲ್ಲಿ ವಾಸವಾಗಿದ್ದೇನೆ; ದೇವರ ಮಂಜೂಷವಾದರೋ ಬಟ್ಟೆಯ ಮನೆಯಲ್ಲಿ ಇರುತ್ತದೆ ಎಂದು ಹೇಳಿದನು. 
 
3 ನಾತಾನನು ಅರಸನಿಗೆ – ಆಗಲಿ ಮನಸ್ಸಿದ್ದಂತೆ ಮಾಡು, ಯೆಹೋವನು ನಿನ್ನ ಸಂಗಡ ಇರುತ್ತಾನೆ ಅಂದನು.
 
4 ಅದೇ ರಾತ್ರಿಯಲ್ಲಿ ಯೆಹೋವನು ನಾತಾನನಿಗೆ ಆಜ್ಞಾಪಿಸಿದ್ದೇನಂದರೆ – 
 
5 ಹೋಗಿ ನನ್ನ ಸೇವಕನಾದ ದಾವೀದನಿಗೆ – ನೀನು ನನಗೋಸ್ಕರ ಮನೆಯನ್ನು ಕಟ್ಟಬೇಕೋ? 
 
6 ನಾನು ಇಸ್ರಾಯೇಲ್ಯರನ್ನು ಐಗುಪ್ತ ದೇಶದಿಂದ ಬರಮಾಡಿದಂದಿನಿಂದ ಇಂದಿನವರೆಗೂ ಮನೆಯಲ್ಲಿ ವಾಸಮಾಡಲಿಲ್ಲ. ಗುಡಾರದಲ್ಲೇ ವಾಸಿಸುತ್ತಾ [ಅವರೊಡನೆ] ಸಂಚರಿಸಿದೆನು. 
 
7 ನಾನು ಇಸ್ರಾಯೇಲ್ಯರ ಮಧ್ಯದಲ್ಲಿ ಸಂಚರಿಸುತ್ತಿದ್ದಾಗ ನನ್ನ ಜನರಾದ ಇಸ್ರಾಯೇಲ್ಯರನ್ನು ಪಾಲಿಸುವದಕ್ಕೋಸ್ಕರ ನನ್ನಿಂದ ನೇಮಿಸಲ್ಪಟ್ಟ ಯಾವ ಕುಲದವರನ್ನಾದರೂ – ನೀವು ನನಗೋಸ್ಕರ ದೇವದಾರುಮರದ ಮನೆಯನ್ನೇಕೆ ಕಟ್ಟಲಿಲ್ಲವೆಂದು ಕೇಳಿದೆನೋ ಎಂಬದಾಗಿ ಯೆಹೋವನು ಅನ್ನುತ್ತಾನೆ ಎಂದು ಹೇಳು. 
 
8 ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನಂದರೆ – ಸೇನಾಧೀಶ್ವರನಾದ ಯೆಹೋವನು ಹೀಗನ್ನುತ್ತಾನೆ – ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ತೆಗೆದುಕೊಂಡು ನನ್ನ ಪ್ರಜೆಗಳಾದ ಇಸ್ರಾಯೇಲ್ಯರ ಮೇಲೆ ನಾಯಕನನ್ನಾಗಿ ನೇಮಿಸಿದೆನು. 
 
9 ನೀನು ಹೋದಲ್ಲೆಲ್ಲಾ ನಿನ್ನ ಸಂಗಡ ಇದ್ದೆನು; ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ದೊಡ್ಡದುಮಾಡುವೆನು. 
 
10 ನನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ಕೊಟ್ಟು ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಅವರು ಇನ್ನು ಮೇಲೆ ಯಾವ ಭಯವೂ ಇಲ್ಲದೆ ಅಲ್ಲಿ ವಾಸಿಸುವರು. 
 
11 ಪೂರ್ವಕಾಲದಲ್ಲೂ ನಾನು ನನ್ನ ಜನರಾದ ಇಸ್ರಾಯೇಲ್ಯರ ಮೇಲೆ ನೇಮಿಸಿದ ನ್ಯಾಯಸ್ಥಾಪಕರ ಕಾಲದಿಂದೀಚೆಗೂ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವದಿಲ್ಲ. ನೀನು ಶತ್ರು ಭಯವಿಲ್ಲದೆ ಸುಖದಿಂದಿರುವಂತೆ ಮಾಡುವೆನು. ಇದಲ್ಲದೆ ಯೆಹೋವನಾದ ನಾನು ನಿನಗೋಸ್ಕರ ಒಂದು ಮನೆಯನ್ನು ಕಟ್ಟುವೆನೆಂದು ಮಾತುಕೊಡುತ್ತೇನೆ. 
 
12 ನಿನ್ನ ಆಯುಷ್ಕಾಲವು ಮುಗಿದು ನೀನು ಪಿತೃಗಳ ಬಳಿಗೆ ಸೇರಿದ ಮೇಲೆ ನಿನ್ನಿಂದ ಹುಟ್ಟುವವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. 
 
13 ಅವನು ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.

ದಾವೀದನ ಪ್ರಾರ್ಥನೆ 

14 ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು; ಅವನು ತಪ್ಪುಮಾಡಿದರೆ ಅವನಿಗೆ ಮನುಷ್ಯಶಿಕ್ಷೆಯನ್ನು ಕೊಡುವೆನು, ನರಪುತ್ರರಂತೆ ಅವನನ್ನು ದಂಡಿಸುವೆನು. 

15 ಆದರೂ ನನ್ನ ಕೃಪೆಯು ಸೌಲನನ್ನು ಬಿಟ್ಟುಹೊದ ಹಾಗೆ ಅವನನ್ನು ಬಿಟ್ಟುಹೋಗುವದಿಲ್ಲ. ನಾನು ಸೌಲನನ್ನು ನಿನ್ನೆದುರಿನಿಂದ ಹೊರಡಿಸಿಬಿಟ್ಟೆನಲ್ಲಾ! 
 
16 ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು ಎಂಬದೇ. 
 
17 ನಾತಾನನು ತನಗುಂಟಾದ ದರ್ಶನದ ಈ ಎಲ್ಲಾ ಮಾತುಗಳನ್ನು ದಾವೀದನಿಗೆ ಹೇಳಿದನು.
 
18 ಅನಂತರ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕೂತುಕೊಂಡು – ಕರ್ತನೇ, ಯೆಹೋವನೇ, ನಾನೆಷ್ಟರವನು? ನನ್ನ ಮನೆ ಎಷ್ಟರದು? ನೀನು ನನ್ನನ್ನು ಇಲ್ಲಿಯವರೆಗೂ ತಂದಿದ್ದೀಯಲ್ಲಾ; 
 
19 ಕರ್ತನೇ, ಯೆಹೋವನೇ, ಇದು ಸಾಲದೆಂದೆಣಿಸಿ ನಿನ್ನ ಸೇವಕನ ಬಹುದೂರಸಂತಾನದ ವಿಷಯದಲ್ಲಿಯೂ ವಾಗ್ದಾನಮಾಡಿದಿ. ಕರ್ತನೇ, ಯೆಹೋವನೇ, ನೀನು ನರಪ್ರಾಣಿಯನ್ನು ಹೀಗೆ ನಡಿಸಿದ್ದು ಆಶ್ಚರ್ಯ. 
 
20 ಕರ್ತನೇ, ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ; ನಾನು ಇನ್ನೇನು ಹೇಳಲಿ? 
 
21 ನೀನು ನಿನ್ನ ವಾಗ್ದಾನಗಳನ್ನು ನೆರವೇರಿಸುವದಕ್ಕೋಸ್ಕರ ನಿನ್ನ ಇಷ್ಟಾನುಸಾರವಾಗಿ ಈ ಎಲ್ಲಾ ಮಹತ್ಕಾರ್ಯಗಳನ್ನು ನಡಿಸಿ ಅವುಗಳ ಅನುಭವವನ್ನು ನಿನ್ನ ಸೇವಕನಿಗೆ ಉಂಟುಮಾಡಿದ್ದೀ. 
 
22 ದೇವರೇ, ಯೆಹೋವನೇ, ನೀನೇ ದೊಡ್ಡವನು; ನಿನ್ನ ಸಮಾನರು ಯಾರೂ ಇಲ್ಲ. ನಾವು ಕೇಳಿದವುಗಳನ್ನೆಲ್ಲಾ ಆಲೋಚಿಸಿ ನೋಡಿದರೆ ನಿನ್ನ ಹೊರತು ದೇವರೇ ಇಲ್ಲವೆಂಬದು ನಿಶ್ಚಯ. 
 
23 ನಿನ್ನ ಇಸ್ರಾಯೇಲ್ ಪ್ರಜೆಗೆ ಸಮಾನವಾದ ಜನಾಂಗವು ಲೋಕದಲ್ಲಿ ಯಾವದಿರುತ್ತದೆ? ನೀನೇ ಹೋಗಿ ಅದನ್ನು ವಿಮೋಚಿಸಿ ಸ್ವಪ್ರಜೆಯನ್ನಾಗಿ ಮಾಡಿಕೊಂಡು ನಿನ್ನ ಹೆಸರನ್ನು ಪ್ರಸಿದ್ಧಪಡಿಸಿದಿ. ಐಗುಪ್ತ್ಯರು ಮೊದಲಾದ ಅನ್ಯಜನರ ಕೈಗೂ ಅವರ ದೇವತೆಗಳ ಕೈಗೂ ಸಿಕ್ಕದಂತೆ ತಪ್ಪಿಸಿ ರಕ್ಷಿಸಿ ಅದರ ಎದುರಿನಲ್ಲೇ ನಿನ್ನ ದೇಶಕ್ಕೋಸ್ಕರ ಭಯಂಕರವಾದ ಮಹತ್ಕಾರ್ಯಗಳನ್ನು ನಡಿಸಿದಿ. 
 
24 ಇಸ್ರಾಯೇಲ್ಯರು ಸದಾಕಾಲವೂ ನಿನ್ನ ಪ್ರಜೆಗಳಾಗಿರಬೇಕೆಂದು ನಿರ್ಣಯಿಸಿದಿ; ಯೆಹೋವನೇ, ನೀನು ಅವರಿಗೆ ದೇವರಾದಿ. 
 
25 ದೇವರೇ, ಯೆಹೋವನೇ, ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನೂ ಕುರಿತು ಮಾಡಿದ ವಾಗ್ದಾನವನ್ನು ನೆರವೇರಿಸು. ಅದು ಸದಾ ಸ್ಥಿರವಾಗಿರಲಿ. 
 
26 ಸೇನಾಧೀಶ್ವರನಾದ ಯೆಹೋವನು, ಇಸ್ರಾಯೇಲ್‍ದೇವರು ಎಂಬ ನಿನ್ನ ನಾಮಧೇಯಗಳಿಗೆ ಸದಾಕಾಲವೂ ಮಹಿಮೆಯುಂಟಾಗಲಿ. ನಿನ್ನ ಸೇವಕನಾದ ದಾವೀದನ ಮನೆಯು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರಲಿ. 
 
27 ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲ್‍ದೇವರೇ, ನೀನು ನಿನ್ನ ಸೇವಕನಿಗೆ – ನಾನು ನಿನಗೋಸ್ಕರ ಮನೆ ಕಟ್ಟುವೆನೆಂದು ವಾಗ್ದಾನ ಮಾಡಿದ್ದರಿಂದ ಅವನು ಈ ಪ್ರಕಾರ ನಿನ್ನನ್ನು ಪ್ರಾರ್ಥಿಸುವದಕ್ಕೆ ಧೈರ್ಯಗೊಂಡನು. 
 
28 ಕರ್ತನೇ, ಯೆಹೋವನೇ, ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ದೇವರಾಗಿರುತ್ತೀ; ನಿನ್ನ ವಾಕ್ಯವು ಸತ್ಯವಾದದ್ದು. 
 
29 ಆದದರಿಂದ ನೀನು ನಿನ್ನ ಸೇವಕನ ಮನೆಯನ್ನು ಆಶೀರ್ವದಿಸು; ಸದಾಕಾಲವೂ ಅದರ ಮೇಲೆ ನಿನ್ನ ಕಟಾಕ್ಷವಿರಲಿ. ಕರ್ತನೇ, ಯೆಹೋವನೇ, ವಾಗ್ದಾನಮಾಡಿದವನು ನೀನೇ. ನಿನ್ನ ಆಶೀರ್ವಾದದಿಂದ ನಿನ್ನ ಸೇವಕನ ಮನೆಯಲ್ಲಿ ನಿತ್ಯ ಸೌಭಾಗ್ಯವಿರಲಿ ಎಂದನು.
1 ಪೂರ್ವಕಾಲವೃತ್ತಾಂತ 15

ದಾವೀದನು ಯೆಹೋವನ ಮಂಜೂಷವನ್ನು ಚೀಯೋನಿಗೆ ತಂದದ್ದು

1 ದಾವೀದನು ತನ್ನ ನಗರದಲ್ಲಿ ತನಗೋಸ್ಕರ ಮನೆಗಳನ್ನು ಕಟ್ಟಿಸಿದ್ದಲ್ಲದೆ ದೇವಮಂಜೂಷಕ್ಕೋಸ್ಕರವೂ ಸ್ಥಳವನ್ನು ಸಿದ್ಧಮಾಡಿ ಗುಡಾರವನ್ನು ಹಾಕಿಸಿದನು. 
 
2 ಆ ಕಾಲದಲ್ಲಿ ದಾವೀದನು – ಲೇವಿಯರು ಹೊರತಾಗಿ ಯಾರೂ ದೇವಮಂಜೂಷವನ್ನು ಹೊರಬಾರದು; ಅದನ್ನು ಹೊರುವದಕ್ಕೂ ಸದಾಕಾಲ ತನ್ನ ಸೇವೆಮಾಡುವದಕ್ಕೂ ಯೆಹೋವನು ಅವರನ್ನೇ ಆರಿಸಿಕೊಂಡಿದ್ದಾನೆಂದು ಹೇಳಿ 
 
3 ಯೆಹೋವನ ಮಂಜೂಷವನ್ನು ತಾನು ಸಿದ್ಧಮಾಡಿದ ಸ್ಥಳಕ್ಕೆ ತರುವದಕ್ಕೋಸ್ಕರ ಎಲ್ಲಾ ಇಸ್ರಾಯೇಲ್ಯರನ್ನು ಯೆರೂಸಲೇಮಿಗೆ ಕರಸಿದನು. 
 
4 ಅವನು ಕರಸಿದ ಆರೋನನ ವಂಶದವರೂ ಲೇವಿಯರೂ – 
 
5 ಕೆಹಾತ್ಯರಲ್ಲಿ ಊರೀಯೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ನೂರಿಪ್ಪತ್ತು ಮಂದಿಯೂ; 
 
6 ಮೆರಾರೀಯರಲ್ಲಿ ಅಸಾಯನೆಂಬ ಪ್ರಧಾನನೂ ಅವನ ಕುಟುಂಬದವರಾದ ಇನ್ನೂರಿಪ್ಪತ್ತು ಮಂದಿಯೂ; 
 
7 ಗೇರ್ಷೋಮ್ಯರಲ್ಲಿ ಯೋವೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ನೂರ ಮೂವತ್ತು ಮಂದಿಯೂ; 
 
8 ಎಲೀಚಾಫಾನ್ಯರಲ್ಲಿ ಶೆಮಾಯನೆಂಬ ಪ್ರಧಾನನೂ ಅವನ ಕುಟುಂಬದವರಾದ ಇನ್ನೂರು ಮಂದಿಯೂ; 
 
9 ಹೆಬ್ರೋನ್ಯರಲ್ಲಿ ಎಲೀಯೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ಎಂಭತ್ತು ಮಂದಿಯೂ; 
 
10 ಉಜ್ಜೀಯೇಲ್ಯರಲ್ಲಿ ಅಮ್ಮೀನಾದಾಬನೆಂಬ ಪ್ರಧಾನನೂ ಅವನ ಕುಟಂಬದವರಾದ ನೂರ ಹನ್ನೆರಡು ಮಂದಿಯೂ.
 
11 ಆಮೇಲೆ ದಾವೀದನು ಚಾದೋಕ್ ಎಬ್ಯಾತಾರರೆಂಬ ಯಾಜಕರನ್ನೂ ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್, ಅಮ್ಮೀನಾದಾಬ್ ಎಂಬ ಲೇವಿಯರನ್ನೂ ಕರೆದು ಅವರಿಗೆ
 
12 ಲೇವಿಯರಲ್ಲಿ ಗೋತ್ರಪ್ರಧಾನರಾದ ನೀವೂ ನಿಮ್ಮ ಸಹೋದರರೂ ನಿಮ್ಮನ್ನು ಶುದ್ಧಿಪಡಿಸಿಕೊಂಡು
ಇಸ್ರಾಯೇಲ್ ದೇವರಾದ ಯೆಹೋವನ ಮಂಜೂಷವನ್ನು ನಾನು ಸಿದ್ಧಮಾಡಿರುವ ಸ್ಥಳಕ್ಕೆ ತೆಗೆದುಕೊಂಡು ಬನ್ನಿರಿ. 
 
13 ನೀವು ಮೊದಲನೆಯ ಸಾರಿ ಇರಲಿಲ್ಲವಾದದರಿಂದ ನಮ್ಮ ದೇವರಾದ ಯೆಹೋವನು ತನ್ನ ಸನ್ನಿಧಿಗೆ ಧರ್ಮವಿಧಿ ವಿರೋಧವಾಗಿ ಬಂದ ನಮ್ಮಲ್ಲಿ ಒಬ್ಬನನ್ನು ಸಂಹರಿಸಿದನಷ್ಟೆ ಎಂದು ಹೇಳಲು 
 
14 ಯಾಜಕರೂ ಲೇವಿಯರೂ ಇಸ್ರಾಯೇಲ್ ದೇವರಾದ ಯೆಹೋವನ ಮಂಜೂಷವನ್ನು ತರುವದಕ್ಕೋಸ್ಕರ ತಮ್ಮನ್ನು ಶುದ್ಧಿಪಡಿಸಿಕೊಂಡರು. 
 
15 ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಆಜ್ಞಾನುಸಾರವಾಗಿ ಲೇವಿಯರು ದೇವಮಂಜೂಷಕ್ಕೆ ಕೋಲುಗಳನ್ನು ಸಿಕ್ಕಿಸಿ ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡರು.
 
16 ಆಗ ದಾವೀದನು ಲೇವಿಯರ ಪ್ರಧಾನರಿಗೆ – ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ ಕಿನ್ನರಿ ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹ ಧ್ವನಿಮಾಡುವದಕ್ಕಾಗಿ ನೇಮಿಸಿರಿ ಎಂದು ಆಜ್ಞಾಪಿಸಲು 
 
17 ಅವರು ಯೋವೇಲನ ಮಗನಾದ ಹೇಮಾನ್, ಅವನ ಗೋತ್ರ ಬಂಧುವೂ ಬೆರೆಕ್ಯನ ಮಗನೂ ಆದ ಆಸಾಫ್, ತಮ್ಮ ಸಹೋದರರಾದ ಮೆರಾರೀಯರ ಕುಟುಂಬಕ್ಕೆ ಸೇರಿದ ಕೂಷಾಯನ ಮಗನಾದ ಏತಾನ್ ಎಂಬವರನ್ನಲ್ಲದೆ 
 
18 ತಮ್ಮ ಸಹೋದರರೊಳಗೆ ಎರಡನೆಯ ತರಗತಿಯವರಾದ ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ದ್ವಾರಪಾಲಕರಾದ ಓಬೇದೆದೋಮ್ ಯೆಗೀಯೇಲರು ಇವರನ್ನು ನೇಮಿಸಿದರು. 
 
19 ಗಾಯಕರಾದ ಹೇಮಾನ್ ಆಸಾಫ್ ಏತಾನರು ಗಟ್ಟಿಯಾಗಿ ಕಂಚಿನ ತಾಳಗಳನ್ನು ಹೊಡೆಯುವವರು. 
 
20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ, ಬೆನಾಯ ಎಂಬವರು ತಾರಕ ಸ್ಥಾಯಿಯ ಸ್ವರಮಂಡಲಗಳನ್ನು ಬಾರಿಸುವವರು. 
 
21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದೆದೋಮ್, ಯೆಗೀಯೇಲ್, ಅಜಜ್ಯ ಎಂಬವರು ಗಾಯನ ನಾಯಕರಾಗಿದ್ದು ಮಂದರಸ್ಥಾಯಿಯ ಕಿನ್ನರಿಗಳನ್ನು ಬಾರಿಸುವವರು. 
 
22 ಬುದ್ಧಿವಂತನೂ ಹೊರೆಹೊರುವವರ ನಾಯಕನೂ ಆದ ಕೆನನ್ಯನು ಮಂಜೂಷ ಹೊತ್ತವರನ್ನು ನಡಿಸುವವನು. 
 
23 ಬೆರೆಕ್ಯ, ಎಲ್ಕಾನ ಇವರು ಮಂಜೂಷಾಲಯದ ದ್ವಾರಪಾಲಕರು. 
 
24 ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ, ಎಲೀಯೆಜೆರ್ ಎಂಬ ಯಾಜಕರು ತುತೂರಿಗಳನ್ನು ಊದುತ್ತಾ ದೇವಮಂಜೂಷದ ಮುಂದೆ ಹೋಗುವವರು. ಓಬೇದೆದೋಮ್, ಯೆಹೀಯ ಎಂಬವರು ಮಂಜೂಷಾಲಯದ ದ್ವಾರಪಾಲಕರು.
 
25 ದಾವೀದನೂ ಇಸ್ರಾಯೇಲ್ಯರ ಹಿರಿಯರೂ ಸಹಸ್ರಾಧಿಪತಿಗಳೂ ಓಬೇದೆದೋಮನ ಮನೆಯಲ್ಲಿದ್ದ ಯೆಹೋವನ ನಿಬಂಧನ ಮಂಜೂಷವನ್ನು 
 
26 ಉತ್ಸವದಿಂದ ತರುತ್ತಿರುವಾಗ ಅದನ್ನು ಹೊತ್ತ ಲೇವಿಯರಿಗೆ ದೇವರ ಸಹಾಯ ದೊರೆತದರಿಂದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಯಜ್ಞಮಾಡಿದರು. 
 
27 ದಾವೀದನೂ ಮಂಜೂಷವನ್ನು ಹೊತ್ತ ಮತ್ತು ವಾದ್ಯಮಾಡುವ ಎಲ್ಲಾ ಲೇವಿಯರೂ ಹೊರುವವರ ಮುಖ್ಯಸ್ಥನಾದ ಕೆನನ್ಯನೂ ನೂಲಿನ ನಿಲುವಂಗಿಗಳನ್ನು ಧರಿಸಿಕೊಂಡಿದ್ದರು. ದಾವೀದನು ಇದರ ಹೊರತಾಗಿ ನಾರಿನ ಏಫೋದನ್ನೂ ಧರಿಸಿಕೊಂಡಿದ್ದನು. 
 
28 ಹೀಗೆ ಎಲ್ಲಾ ಇಸ್ರಾಯೇಲ್ಯರು ಆರ್ಭಟಿಸುತ್ತಾ ಕೊಂಬು ತುತೂರಿಗಳನ್ನು ಗಟ್ಟಿಯಾಗಿ ಊದುತ್ತಾ ತಾಳಹೊಡೆಯುತ್ತಾ ಕಿನ್ನರಿ ಸ್ವರಮಂಡಲಗಳನ್ನು ಬಾರಿಸುತ್ತಾ ಯೆಹೋವನ ನಿಬಂಧನಮಂಜೂಷವನ್ನು ತಂದರು. 
 
29 ಯೆಹೋವನ ನಿಬಂಧನ ಮಂಜೂಷವು ದಾವೀದನಗರಕ್ಕೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹಣಕಿನೋಡಿ ದಾವೀದನು ಕುಣಿಯುತ್ತಾ ಹಾರುತ್ತಾ ಇರುವದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು.

2 ಸಮುವೇಲ 11

ದಾವೀದನು ಮತ್ತು ಬತ್ಷೆಬೆ

1 ಮರುವರುಷ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ದಾವೀದನು ಯೋವಾಬನನ್ನೂ ತನ್ನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತಗಳನ್ನು ಹಾಳುಮಾಡಿ ರಬ್ಬಕ್ಕೆ ಮುತ್ತಿಗೆಹಾಕಿದರು. ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು.
 
2 ಅವನು ಒಂದು ದಿವಸ ಸಂಜೇ ಹೊತ್ತಿನಲ್ಲಿ ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿರುವಾಗ ಅಲ್ಲಿಂದ ಬಹುಸುಂದರಿಯಾದ ಒಬ್ಬ ಸ್ತ್ರೀ ಸ್ನಾನಮಾಡುವದನ್ನು ಕಂಡನು. 
 
3 ಕೂಡಲೆ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಲು ಅವನು – ಆಕೆಯು ಎಲೀಯಾಮನ ಮಗಳೂ ಹಿತ್ತಿಯನಾದ ಊರೀಯನ ಹೆಂಡತಿಯೂ ಆಗಿರುವ ಬತ್ಷೆಬೆಯಲ್ಲವೋ ಎಂದು ಉತ್ತರ ಕೊಟ್ಟನು. 
 
4 ಆಗ ದಾವೀದನು ಆಗಲೇ ಋತುಸ್ನಾನಮಾಡಿಕೊಂಡಿದ್ದ ಆಕೆಯನ್ನು ದೂತರ ಮುಖಾಂತರವಾಗಿ ಕರೇಕಳುಹಿಸಿದನು; ಆಕೆಯು ಬರಲು ಆಕೆಯನ್ನು ಕೂಡಿದನು. 
 
5 ಅನಂತರ ಆಕೆಯು ತನ್ನ ಮನೆಗೆ ಹೋದಳು. ಆಕೆಯು ತಾನು ಗರ್ಭಧರಿಸಿದ್ದು ಗೊತ್ತಾದಾಗ ದಾವೀದನಿಗೆ ವರ್ತಮಾನ ಕಳುಹಿಸಿದಳು.
 
6 ಒಡನೆ ದಾವೀದನು ದೂತರ ಮುಖಾಂತರವಾಗಿ ಯೋವಾಬನಿಗೆ – ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು ಎಂದು ಆಜ್ಞಾಪಿಸಿದನು. ಅವನು ಊರೀಯನನ್ನು ಕಳುಹಿಸಿದನು. 
 
7 ಊರೀಯನು ಬಂದಾಗ ದಾವೀದನು – ಯೋವಾಬನೂ ಸೈನ್ಯದವರೂ ಹೇಗಿರುತ್ತಾರೆ? ಯುದ್ಧವು ಹೇಗೆ ನಡೆದದೆ ಎಂದು ವಿಚಾರಿಸಿದನಂತರ ಅವನಿಗೆ – 
 
8 ಮನೆಗೆ ಹೋಗಿ ಕೈಕಾಲು ತೊಳೆದುಕೋ ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೆ ಅವನ ಹಿಂದೆಯೇ ಅರಸನ ಭೋಜನ ಪದಾರ್ಥಗಳೂ ಹೋದವು. 
 
9 ಆದರೆ ಊರೀಯನು ತನ್ನ ಮನೆಗೆ ಹೋಗದೆ ಅರಸನ ಸೇವಕರೊಡನೆ ಅರಮನೆಯ ಬಾಗಲಲ್ಲೇ ಮಲಗಿಕೊಂಡನು. 
 
10 ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಇವನು ಅವನಿಗೆ – ನೀನು ಪ್ರಯಾಣಮಾಡಿಕೊಂಡು ಬಂದಿಯಲ್ಲಾ; ಯಾಕೆ ಮನೆಗೆ ಹೋಗಲಿಲ್ಲ ಅಂದನು. 
 
11 ಅದಕ್ಕೆ ಊರೀಯನು – ಒಡಂಬಡಿಕೆಯ ಮಂಜೂಷವೂ ಇಸ್ರಾಯೇಲ್ಯರೂ ಯೆಹೂದ್ಯರೂ ಗುಡಾರಗಳಲ್ಲಿ ವಾಸವಾಗಿದ್ದಾರೆ. ನನ್ನ ಒಡೆಯನಾದ ಯೋವಾಬನೂ ಅವನ ಸೇವಕರೂ ಬೈಲಿನಲ್ಲಿ ಪಾಳೆಯ ಮಾಡಿಕೊಂಡಿದ್ದಾರೆ. ಹೀಗಿರುವಲ್ಲಿ ನಾನು ನನ್ನ ಮನೆಗೆ ಹೋಗಿ ಉಂಡು ಕುಡಿದು ಹೆಂಡತಿಯೊಡನೆ ಮಲಗಿಕೊಳ್ಳುವದು ಹೇಗೆ? ನಿನ್ನಾಣೆ, ನಿನ್ನ ಜೀವದ ಆಣೆ, ನಾನು ಇಂಥದನ್ನು ಮಾಡುವದೇ ಇಲ್ಲ ಎಂದು ಉತ್ತರಕೊಟ್ಟನು. 
 
12 ಆಗ ದಾವೀದನು ಅವನಿಗೆ – ನೀನು ಈ ಹೊತ್ತು ಇಲ್ಲೇ ಇರು, ನಾಳೆ ನಿನ್ನನ್ನು ಕಳುಹಿಸುತ್ತೇನೆ ಎಂದು ಆಜ್ಞಾಪಿಸಿದನು. ಆದದರಿಂದ ಊರೀಯನು ಆ ದಿನ ಯೆರೂಸಲೇಮಿನಲ್ಲೇ ಇದ್ದನು. 
 
13 ಮರುದಿನ ದಾವೀದನು ಅವನನ್ನು ಅನ್ನಪಾನತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರಕೊಂಡುಹೋಗಿ ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯಲ್ಲಿಯೂ ಅವನು ಹೋಗಿ ತನ್ನ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿ ಮಲಗಿಕೊಂಡನೇ ಹೊರತು ತನ್ನ ಮನೆಗೆ ಹೋಗಲಿಲ್ಲ.
 
14 ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟು ಕಳುಹಿಸಿದನು. 
 
15 ಅದರಲ್ಲಿದ್ದದ್ದೇನಂದರೆ – ಊರೀಯನು ಗಾಯಹೊಂದಿ ಸಾಯುವಂತೆ ಅವನನ್ನು ಘೋರಯುದ್ಧ ನಡೆಯುತ್ತಿರುವ ಕಡೆಗೆ ಮುಂಭಾಗದಲ್ಲಿ ನಿಲ್ಲಿಸಿ ನೀವು ಹಿಂದಕ್ಕೆ ಸರಿದುಕೊಳ್ಳಿರಿ ಎಂಬದೇ. 
 
16 ಯೋವಾಬನು ಪಟ್ಟಣಕ್ಕೆ ಮುತ್ತಿಗೆಹಾಕುವಾಗ ಶೂರರಾದ ಶತ್ರುಸೈನಿಕರೆಲ್ಲಿರುತ್ತಾರೆಂದು ಗೊತ್ತುಮಾಡಿಕೊಂಡು ಊರೀಯನನ್ನು ಅಲ್ಲಿ ನಿಲ್ಲಿಸಿದನು. 
 
17 ಆ ಊರಿನ ಜನರು ಹೊರಗೆ ಬಂದು ಯೋವಾಬನೊಡನೆ ಕಾದಿದಾಗ ದಾವೀದನ ಸೇವಕರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ಊರೀಯನೂ ಮಡಿದನು.
 
18 ಅನಂತರ ಯೋವಾಬನು ಒಬ್ಬ ದೂತನನ್ನು ಕರೆದು ಅವನಿಗೆ – ನೀನು ಹೋಗಿ ದಾವೀದನಿಗೆ ಯುದ್ಧ ವರ್ತಮಾನವನ್ನೆಲ್ಲಾ ತಿಳಿಸು. 
 
19 ನೀನು ಯುದ್ಧ ಸಮಾಚಾರವನ್ನು ಹೇಳಿ ಮುಗಿಸಿದನಂತರ ಅರಸನು ಮುನಿದು ನಿನ್ನನ್ನು – 
 
20 ನೀವು ಯುದ್ಧಮಾಡುವದಕ್ಕಾಗಿ ಪಟ್ಟಣದ ಸಮೀಪಕ್ಕೆ ಹೋದದ್ದೇಕೆ? ಶತ್ರುಗಳು ಊರುಗೋಡೆಯ ಮೇಲಣಿಂದ ಏನಾದರೂ ಬೀಸಾಡಬಹುದಲ್ಲವೋ? 
 
21 ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಕೊಂದವರಾರೆಂದು ನಿಮಗೆ ಗೊತ್ತಿಲ್ಲವೋ? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಣಿಂದ ಒಂದು ಬೀಸುವ ಕಲ್ಲನ್ನು ಅವನ ಮೇಲೆ ಎತ್ತಿಹಾಕಿ ಅವನನ್ನು ಕೊಂದಳಲ್ಲವೇ. ಹೀಗಿರುವದರಿಂದ ನೀವು ಗೋಡೆಯ ಸಮೀಪಕ್ಕೆ ಹೋದದ್ದೇನು ಎಂದು ಕೇಳಿದರೆ ನೀನು – ಹಿತ್ತಿಯನಾದ ನಿನ್ನ ಸೇವಕ ಊರೀಯನೂ ಮೃತಿಹೊಂದಿದನೆಂದು ಹೇಳು ಎಂಬದಾಗಿ 
 
22 ಆಜ್ಞಾಪಿಸಿ ಅವನನ್ನು ಕಳುಹಿಸಿದನು. ಆ ದೂತನು ಹೋಗಿ 
 
23 ಯೋವಾಬನ ಆಜ್ಞೆಯಂತೆ ದಾವೀದನಿಗೆ ತಿಳಿಸಿದ್ದೇನಂದರೆ – ಆ ಊರಿನವರು ಮಹಾಬಲದೊಡನೆ ಯುದ್ಧಮಾಡುವದಕ್ಕೆ ಬೈಲಿಗೆ ಬಂದರು; ನಾವು ಅವರನ್ನು ಊರುಬಾಗಲಿನವರೆಗೆ ಹಿಂದಟ್ಟಿದೆವು. 
 
24 ಆಗ ಬಿಲ್ಲುಗಾರರು ಗೋಡೆಯ ಮೇಲಣಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಎಸೆದದರಿಂದ ಅವರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ನಿನ್ನ ಸೇವಕ ಊರೀಯನೂ ಮಡಿದನು ಎಂಬದೇ. 
 
25 ಆಗ ದಾವೀದನು ದೂತನಿಗೆ ನೀನು ಹೋಗಿ – ಇದಕ್ಕೋಸ್ಕರವಾಗಿ ವ್ಯಸನ ಪಡಬೇಡ; ಕತ್ತಿಯು ಈ ಹೊತ್ತು ಒಬ್ಬನನ್ನು ನುಂಗಿದರೆ ನಾಳೆ ಇನ್ನೊಬ್ಬನನ್ನು ನುಂಗುವದು. ಮತ್ತಷ್ಟು ಶೂರತನದಿಂದ ಯುದ್ಧಮಾಡಿ ಪಟ್ಟಣವನ್ನು ಕೆಡವಿಬಿಡಿರಿ ಎಂಬದಾಗಿ ಅರಸನು ಆಜ್ಞಾಪಿಸುತ್ತಾನೆಂದು ಯೋವಾಬನಿಗೆ ಹೇಳಿ ಅವನನ್ನು ಧೈರ್ಯಪಡಿಸು ಅಂದನು.
 
26 ಊರೀಯನ ಮರಣವಾರ್ತೆಯನ್ನು ಅವನ ಹೆಂಡತಿಯು ಕೇಳಿ ಗಂಡನಿಗೋಸ್ಕರ ಗೋಳಾಡಿದಳು. 
 
27 ದುಃಖಕಾಲ ತೀರಿದನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರತರಿಸಿ ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು; ಆಕೆಯು ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನ ಈ ಕೃತ್ಯವು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.
2 ಸಮುವೇಲ 12

ದೇವರು ನಾತಾನನ ಮುಖಾಂತರವಾಗಿ ದಾವೀದನಿಗೆ ಶಿಕ್ಷೆಯನ್ನು ಮುಂತಿಳಿಸಿದ್ದೂ ಸೊಲೊಮೋನನ ಜನನವೂ

1 ಯೆಹೋವನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಇವನ ಹತ್ತಿರ ಬಂದು ಹೇಳಿದ್ದೇನಂದರೆ – ಒಂದು ಊರಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಇನ್ನೊಬ್ಬನು ಬಡವನು. 

2 ಐಶ್ವರ್ಯವಂತನಿಗೆ ಬಹಳ ಕುರಿದನಗಳಿದ್ದವು. 

3 ಬಡವನಿಗೆ ಒಂದು ಕುರಿಮರಿಯ ಹೊರತು ಬೇರೇನೂ ಇರಲಿಲ್ಲ. ಅವನು ಅದನ್ನು ಕೊಂಡುಕೊಂಡು ಸಾಕುತ್ತಿದ್ದನು. ಅದು ದೊಡ್ಡದಾಗುವವರೆಗೆ ಮಗಳಂತೆ ಅವನ ಸಂಗಡಲೂ ಅವನ ಮಕ್ಕಳ ಸಂಗಡಲೂ ಇದ್ದುಕೊಂಡು ಅವನೊಡನೆ ರೊಟ್ಟಿ ತಿನ್ನುತ್ತಾ ಅವನ ಪಾತ್ರೆಯಲ್ಲೇ ನೀರು ಕುಡಿಯುತ್ತಾ ಇತ್ತು; ಅವನ ಎದೆಯ ಮೇಲೆಯೇ ಒರಗಿಕೊಂಡು ನಿದ್ರೆ ಮಾಡುತ್ತಿತ್ತು. 

4 ಒಂದು ದಿವಸ ಐಶ್ವರ್ಯವಂತನ ಮನೆಗೆ ಒಬ್ಬ ಪ್ರಯಾಣಿಕನು ಬಂದನು. ಆಗ ಐಶ್ವರ್ಯವಂತನು ತನ್ನ ಕುರಿದನಗಳಿಂದ ಏನೂ ತೆಗೆದುಕೊಳ್ಳಮನಸ್ಸಿಲ್ಲದೆ ಆ ಬಡವನ ಕುರಿಮರಿಯನ್ನು ಹಿಡಿದು ಅತಿಥಿಗೋಸ್ಕರ ಅದನ್ನು ಅಡಿಗೆ ಮಾಡಿಸಿದನು ಎಂಬದೇ. 

5 ಇದನ್ನು ಕೇಳಿ ದಾವೀದನು ಆ ಮನುಷ್ಯನ ಮೇಲೆ ಬಹಳವಾಗಿ ಕೋಪಗೊಂಡು ನಾತಾನನಿಗೆ – ಯೆಹೋವನಾಣೆ, ಆ ಮನುಷ್ಯನು ಸಾಯಲೇ ಬೇಕು. 

6 ಅವನು ಕರುಣೆಯಿಲ್ಲದೆ ಹೀಗೆ ಮಾಡಿದ್ದರಿಂದ ಆ ಕುರಿಮರಿಗಾಗಿ ನಾಲ್ಕರಷ್ಟು ಹಿಂದಕ್ಕೆ ಕೊಡಬೇಕು ಅಂದನು.

7 ಆಗ ನಾತಾನನು ದಾವೀದನನ್ನು ನೋಡಿ – ಆ ಮನುಷ್ಯನು ನೀನೇ. ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ ಹೇಳುವದೇನಂದರೆ – ನಿನ್ನನ್ನು ಅಭಿಷೇಕಿಸಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದವನೂ ಸೌಲನ ಕೈಗೆ ಸಿಕ್ಕದಂತೆ ತಪ್ಪಿಸಿದವನೂ ನಾನೇ. 

8 ಇದಲ್ಲದೆ ನಾನು ನಿನಗೆ ನಿನ್ನ ಯಜಮಾನನ ಮನೆಯನ್ನು ಒಪ್ಪಿಸಿದೆನು; ಅವನ ಹೆಂಡತಿಯರನ್ನು ನಿನ್ನ ಮಗ್ಗಲಿಗೆ ಕೊಟ್ಟೆನು. ಇಸ್ರಾಯೇಲ್ ಮತ್ತು ಯೆಹೂದ ಕುಲಗಳನ್ನು ನಿನಗೆ ವಶಪಡಿಸಿದೆನು. ಇದು ಸಾಕಾಗಿರದಿದ್ದರೆ ನಾನು ನಿನಗೆ ಇನ್ನೂ ಬೇಕಾದದ್ದನ್ನು ಕೊಡುತ್ತಿದ್ದೆನು. 

9 ಹೀಗಿರಲು ನೀನು ಯೆಹೋವನಾದ ನನ್ನ ಆಜ್ಞೆಯನ್ನು ತಿರಸ್ಕರಿಸಿ ನನ್ನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವದನ್ನು ಮಾಡಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡಿ. 

10 ನೀನು ನನ್ನ ಆಜ್ಞೆಯನ್ನು ತಿರಸ್ಕರಿಸಿದದರಿಂದಲೂ ಹಿತ್ತಿಯನಾದ ಊರೀಯನನ್ನು ಅಮ್ಮೋನಿಯರ ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿಯನ್ನು ನಿನ್ನ ಹೆಂಡತಿಯನ್ನಾಗಿ ತೆಗೆದುಕೊಂಡದರಿಂದಲೂ ಕತ್ತಿಯು ನಿನ್ನ ಮನೆಯನ್ನು ಬಿಟ್ಟು ಹೋಗುವದಿಲ್ಲ. 

11 ಯೆಹೋವನಾದ ನನ್ನ ಮಾತನ್ನು ಕೇಳು – ನಾನು ನಿನ್ನ ಮನೆಯವರಿಂದಲೇ ನಿನಗೆ ಕೇಡು ಉಂಟಾಗುವಂತೆ ಮಾಡುವೆನು. ನಿನ್ನ ಹೆಂಡತಿಯರನ್ನು ತೆಗೆದು ನಿನ್ನೆದುರಿನಲ್ಲಿಯೇ ಇನ್ನೊಬ್ಬನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಕೂಡ ಮಲಗುವನು. ನೀನು ಅದನ್ನು ಗುಪ್ತವಾಗಿ ಮಾಡಿದಿ; 

12 ನಾನು ಹೇಳುವ ಮಾತಾದರೋ ಎಲ್ಲಾ ಇಸ್ರಾಯೇಲ್ಯರ ಮುಂದೆ ಪ್ರಕಟವಾಗಿ ನೆರವೇರುವದು ಎಂಬದೇ ಅಂದನು. 

13 ಆಗ ದಾವೀದನು ನಾತಾನನಿಗೆ – ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ ಎಂದು ಹೇಳಿದನು. ನಾತಾನನು ಅವನಿಗೆ – ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ, ನೀನು ಸಾಯುವದಿಲ್ಲ; 

14 ಆದರೂ ನೀನು ಈ ಕೃತ್ಯದಿಂದ ಯೆಹೋವನ ವೈರಿಗಳು ಆತನನ್ನು ಬಹಳವಾಗಿ ನಿಂದಿಸುವದಕ್ಕೆ ಆಸ್ಪದ ಕೊಟ್ಟದರಿಂದ ನಿನ್ನಿಂದ ಹುಟ್ಟಿರುವ ಮಗುವು ಸತ್ತೇ ಹೋಗುವದು 

15 ಎಂದು ಹೇಳಿ ಮನೆಗೆ ಹೊರಟು ಹೋದನು. ಊರೀಯನ ಹೆಂಡತಿಯಲ್ಲಿ ದಾವೀದನಿಗೆ ಹುಟ್ಟಿದ ಮಗುವು ಯೆಹೋವನ ಪೆಟ್ಟಿನಿಂದ ಬಹುವಾಗಿ ಅಸ್ವಸ್ಥವಾಯಿತು. 

16 ಆದದರಿಂದ ದಾವೀದನು ಮಗುವಿಗೋಸ್ಕರ ದೇವರನ್ನು ಪ್ರಾರ್ಥಿಸುತ್ತಾ ಉಪವಾಸಮಾಡುತ್ತಾ ಒಳಕೋಣೆಯಲ್ಲಿ ನೆಲದ ಮೇಲೆಯೇ ಬಿದ್ದುಕೊಂಡು ರಾತ್ರಿಕಳೆಯುತ್ತಿದ್ದನು. 

17 ಅವನ ಮನೆಯ ಹಿರೀಸೇವಕರು ಅವನನ್ನು ಎಬ್ಬಿಸುವದಕ್ಕೆ ಹೋದರು. ಆದರೆ ಅವನು ಏಳಲೂ ಇಲ್ಲ. ಅವರೊಡನೆ ಆಹಾರ ತೆಗೆದುಕೊಳ್ಳಲೂ ಇಲ್ಲ. 

18 ಏಳನೆಯ ದಿನದಲ್ಲಿ ಮಗುವು ಸತ್ತಿತು; ಅವನ ಸೇವಕರು ಭಯಪಟ್ಟು ಈ ವರ್ತಮಾನವನ್ನು ದಾವೀದನಿಗೆ ತಿಳಿಸಲಿಲ್ಲ. ಅವರು – ಹುಡುಗನು ಜೀವದಿಂದಿದ್ದಾಗಲೇ ಅವನು ನಮ್ಮ ಸಂತೈಸುವಿಕೆಯನ್ನು ಲಕ್ಷಿಸಲಿಲ್ಲ. ಹೀಗಿರುವಲ್ಲಿ ಮಗುವಿನ ಮರಣವಾರ್ತೆಯನ್ನು ಅವನಿಗೆ ತಿಳಿಸಿದರೆ ಅವನು ತನಗೆ ಏನಾದರೂ ಕೇಡುಮಾಡಿಕೊಂಡಾನಲ್ಲವೇ ಎಂದು ಮಾತಾಡಿಕೊಳ್ಳುತ್ತಿದ್ದರು. 

19 ಸೇವಕರು ಈ ಪ್ರಕಾರ ಗುಜುಗುಜು ಮಾತಾಡುವದನ್ನು ದಾವೀದನು ಕಂಡು ಮಗುವು ಮೃತಿಹೊಂದಿತೆಂದು ತಿಳಿದು ಸೇವಕರನ್ನು – ಮಗುವು ಸತ್ತಿತೋ ಎಂದು ಕೇಳಿದನು. ಅವರು – ಹೌದು, ಸತ್ತಿತು ಎಂದು ಉತ್ತರಕೊಟ್ಟರು. 

20 ಆಗ ದಾವೀದನು ನೆಲದಿಂದೆದ್ದು ಸ್ನಾನಮಾಡಿ ತೈಲ ಹಚ್ಚಿಕೊಂಡು ತನ್ನ ಬಟ್ಟೆಗಳನ್ನು ಬದಲಿಸಿ ಯೆಹೋವನ ಮಂದಿರಕ್ಕೆ ಹೋಗಿ ಆರಾಧನೆ ಮಾಡಿದನು. ಅನಂತರ ಮನೆಗೆ ಬಂದು ಆಹಾರತರಿಸಿ ಊಟಮಾಡಿದನು. 

21 ಇದನ್ನು ನೋಡಿ ಅವನ ಸೇವಕರು ಅವನಿಗೆ – ಇದೇನು ನೀನು ಮಾಡಿದ್ದು? ಹುಡುಗನು ಜೀವದಿಂದಿದ್ದಾಗ ಅಳುತ್ತಾ ಉಪವಾಸವಾಗಿದ್ದಿ; ಹುಡುಗನು ಸತ್ತನಂತರ ಎದ್ದು ಊಟಮಾಡಿದಿ ಅಂದರು. 22ದಾವೀದನು ಅವರಿಗೆ – ಹುಡುಗನು ಜೀವದಿಂದಿದ್ದಾಗ ಒಂದು ವೇಳೆ ಯೆಹೋವನು ಕೃಪೆಮಾಡಿ ಅವನನ್ನು ಉಳಿಸಾನು ಅಂದುಕೊಂಡು ಉಪವಾಸಮಾಡಿದೆನು, ಅತ್ತೆನು.

23 ಈಗ ಸತ್ತಿದ್ದಾನಲ್ಲಾ, ನಾನೇಕೆ ಉಪವಾಸಮಾಡಬೇಕು? ಅವನನ್ನು ಹಿಂದಕ್ಕೆ ತರುವದು ನನ್ನಿಂದಾದೀತೇ? ನಾನಾಗಿ ಅವನ ಬಳಿಗೆ ಹೋಗಬೇಕೇ ಹೊರತು ಅವನು ನನ್ನ ಬಳಿಗೆ ಬರುವದಿಲ್ಲ ಎಂದು ಉತ್ತರ ಕೊಟ್ಟನು.

24 ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯ ಬಳಿಗೆ ಹೋಗಿ ಆಕೆಯನ್ನು ಸಂತೈಸಿ ಆಕೆಯ ಸಂಗಡ ಮಲಗಿದನು. ಆಕೆ ಮಗನನ್ನು ಹೆತ್ತಾಗ ಅವನಿಗೆ ಸೊಲಮೋನನೆಂದು ಹೆಸರಿಟ್ಟನು. ಯೆಹೋವನು ಹುಡುಗನನ್ನು ಪ್ರೀತಿಸಿದನು; 

25 ಪ್ರವಾದಿಯಾದ ನಾತಾನನು ಯೆಹೋವನು ತನಗೆ ಆಜ್ಞಾಪಿಸಿದಂತೆ ಆತನಿಗೋಸ್ಕರವಾಗಿ ಆ ಹುಡುಗನಿಗೆ ಯೆದೀದ್ಯನು ಎಂದು ಹೆಸರಿಟ್ಟನು.

26 ಯೋವಾಬನು ಅಮ್ಮೋನಿಯರ ಪಟ್ಟಣವಾದ ರಬ್ಬಕ್ಕೆ ಮುತ್ತಿಗೆಹಾಕಿ ಅರಮನೆಯಿದ್ದ ಭಾಗವನ್ನು ಸ್ವಾಧೀನಮಾಡಿಕೊಂಡು 

27 ದಾವೀದನಿಗೆ ದೂತರ ಮುಖಾಂತರವಾಗಿ – ನಾನು ರಬ್ಬಕ್ಕೆ ಮುತ್ತಿಗೆಹಾಕಿ ಹೊಳೆಯ ಬಳಿಯಲ್ಲಿರುವ ಭಾಗವನ್ನು ಸ್ವಾಧೀನ ಮಾಡಿಕೊಂಡಿದ್ದೇನೆ. 

28 ನೀನು ಬೇಗನೆ ಉಳಿದ ಸೈನ್ಯವನ್ನು ಕೂಡಿಸಿಕೊಂಡು ಬಂದು ಪಟ್ಟಣಕ್ಕೆ ಮುತ್ತಿಗೆ ಹಾಕಿ ಉಳಿದ ಭಾಗವನ್ನು ಸ್ವಾಧೀನಪಡಿಸಿಕೋ; ಅದನ್ನು ನಾನೇ ಹಿಡಿದರೆ ಅದಕ್ಕೆ ನನ್ನ ಹೆಸರು ಬರುವದು ಎಂದು ಹೇಳಿ ಕಳುಹಿಸಿದನು. 

29 ಆಗ ದಾವೀದನು ಜನರೆಲ್ಲರನ್ನೂ ಕೂಡಿಸಿಕೊಂಡು ಹೋಗಿ ರಬ್ಬಕ್ಕೆ ಮುತ್ತಿಗೆಹಾಕಿ ಅದನ್ನು ವಶಮಾಡಿಕೊಂಡನು. 

30 ಇದಲ್ಲದೆ ಅವನು ಅವರ ಮಲ್ಕಾಮಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ನಾಲ್ಕು ಸಾವಿರ ತೊಲೆ ತೂಕದ್ದು. ಅದರಲ್ಲಿದ್ದ ಮಣಿಯನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ಒಯ್ದನು. 

31 ಊರಿನ ನಿವಾಸಿಗಳನ್ನು ಹಿಡಿದು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸ ಮಾಡುವದಕ್ಕೂ ಇಟ್ಟಿಗೆಗಳನ್ನು ಮಾಡುವದಕ್ಕೂ ಹಚ್ಚಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ಇದೇ ಗತಿಯಾಯಿತು. ಅನಂತರ ದಾವೀದನು ಎಲ್ಲಾ ಸೈನಿಕರೊಡನೆ ಯೆರೂಸಲೇಮಿಗೆ ಬಂದನು.

2 ಸಮುವೇಲನು 15

ಅಬ್ಷಾಲೋಮನ ಪಿತೂರಿ

1 ಸ್ವಲ್ಪ ಕಾಲವಾದನಂತರ ಅಬ್ಷಾಲೋಮನು ತನಗೋಸ್ಕರ ಒಂದು ರಥವನ್ನೂ ಕುದುರೆಗಳನ್ನೂ ತೆಗೆದುಕೊಂಡು ತನ್ನ ಮುಂದೆ ಮೈಗಾವಲಾಗಿ ಓಡುವದಕ್ಕೆ ಐವತ್ತು ಮಂದಿಯನ್ನು ನೇಮಿಸಿದನು. 
 
2 ಅವನು ಹೊತ್ತಾರೆಯಲ್ಲೆದ್ದು ಊರುಬಾಗಲ ಬಳಿಯಲ್ಲಿ ನಿಂತುಕೊಳ್ಳುವನು. ಯಾವನಾದರೂ ತನ್ನ ವ್ಯಾಜ್ಯತೀರಿಸಿಕೊಳ್ಳುವದಕ್ಕಾಗಿ ಅರಸನ ಬಳಿಗೆ ಹೋಗುವದನ್ನು ಅಬ್ಷಾಲೋಮನು ಕಂಡರೆ ಅಂಥವನನ್ನು ತನ್ನ ಬಳಿಗೆ ಕರೆದು ನೀನು ಯಾವ ಊರಿನವನು ಎಂದು ಕೇಳುವನು. ಅವನು – ನಿನ್ನ ಸೇವಕನಾದ ನಾನು ಇಸ್ರಾಯೇಲ್ಯರ ಇಂಥ ಕುಲಕ್ಕೆ ಸೇರಿದವನು ಎಂದು ಉತ್ತರ ಕೊಡುವನು. 
 
3 ಆಗ ಅಬ್ಷಾಲೋಮನು – ನೋಡು, ನಿನ್ನ ಕಾರ್ಯವು ಒಳ್ಳೇದೂ ನ್ಯಾಯವಾದದ್ದೂ ಆಗಿದೆ; ಆದರೆ ವ್ಯಾಜ್ಯಗಳನ್ನು ವಿಚಾರಿಸುವದಕ್ಕೆ ಅರಸನಿಂದ ಒಬ್ಬನೂ ನೇಮಕವಾಗಿಲ್ಲ. 
 
4 ವ್ಯಾಜ್ಯವಾಗಲಿ ಬಿನ್ನಹವಾಗಲಿ ಉಳ್ಳವರು ಬಂದು ನ್ಯಾಯವನ್ನು ಪಡಕೊಳ್ಳುವ ಹಾಗೆ ನನ್ನನ್ನೇ ದೇಶದ ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು ಎಂದು ಹೇಳುವನು. 
 
5 ಯಾವನಾದರೂ ಅವನಿಗೆ ಸಾಷ್ಟಾಂಗನಮಸ್ಕಾರ ಮಾಡುವದಕ್ಕೆ ಬಂದರೆ ಅವನು ಕೂಡಲೆ ಕೈಚಾಚಿ ಅವನನ್ನು ಹಿಡಿದು ಮುದ್ದಿಡುವನು. 
 
6 ಅರಸನ ಬಳಿಗೆ ವ್ಯಾಜ್ಯಕ್ಕಾಗಿ ಬರುವ ಎಲ್ಲಾ ಇಸ್ರಾಯೇಲ್ಯರಿಗೆ ಅಬ್ಷಾಲೋಮನು ಹೀಗೆಯೇ ಮಾಡಿ ಎಲ್ಲರ ಮನಸ್ಸುಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡನು. 
 
7 ನಾಲ್ಕು ವರುಷಗಳಾದನಂತರ ಅಬ್ಷಾಲೋಮನು ಅರಸನಿಗೆ – ನಾನು ಯೆಹೋವನಿಗೆ ಹೊತ್ತ ಹರಕೆಗಳನ್ನು ಸಲ್ಲಿಸುವದಕ್ಕಾಗಿ ಹೆಬ್ರೋನಿಗೆ ಹೋಗಬೇಕಾಗಿದೆ, ಅಪ್ಪಣೆಯಾಗಲಿ. 
 
8 ನಿನ್ನ ಸೇವಕನಾದ ನಾನು ಅರಾಮ್‍ದೇಶದ ಗೆಷೂರಿನಲ್ಲಿದ್ದಾಗ – ಯೆಹೋವನು ನನ್ನನ್ನು ತಿರಿಗಿ ಯೆರೂಸಲೇಮಿಗೆ ಬರಮಾಡುವದಾದರೆ ಆತನಿಗೆ ಒಂದು ವಿಶೇಷವಾದ ಆರಾಧನೆ ಮಾಡಿಸುವೆನೆಂದು ಹರಕೆಮಾಡಿದ್ದೆನು ಎಂದು ವಿಜ್ಞಾಪಿಸಲು 
 
9 ಅರಸನು – ಹೋಗು, ನಿನಗೆ ಶುಭವಾಗಲಿ ಎಂದನು. ಅಬ್ಷಾಲೋಮನು ಹೆಬ್ರೋನಿಗೆ ಹೊರಟು ಹೋದನು. 
 
10 ಅವನು ಗೂಢಚಾರರನ್ನು ಕಳುಹಿಸಿ ಇಸ್ರಾಯೇಲ್ಯರ ಎಲ್ಲಾ ಕುಲದವರಿಗೆ – ನೀವು ತುತೂರಿಯ ಧ್ವನಿಯನ್ನು ಕೇಳುತ್ತಲೆ ಅಬ್ಷಾಲೋಮನು ಹೆಬ್ರೋನಿನಲ್ಲಿ ಅರಸನಾದನೆಂದು ಆರ್ಭಟಿಸಿರಿ ಎಂದು ಹೇಳಿಸಿದ್ದನು. 
 
11 ಅಬ್ಷಾಲೋಮನು ಯೆರೂಸಲೇಮಿನಿಂದ ಸಮಾರಾಧನೆಗೆಂದು ಇನ್ನೂರು ಜನರನ್ನು ಕರಕೊಂಡು ಹೋಗಿದ್ದನು. ಅವರು ಯಥಾರ್ಥ ಮನಸ್ಸಿನಿಂದ ಹೋದವರು; ಅವರಿಗೇನೂ ಗೊತ್ತಿರಲಿಲ್ಲ. 
 
12 ಇದಲ್ಲದೆ ಅವನು ಸಮಾಧಾನಯಜ್ಞವನ್ನು ಮಾಡುತ್ತಿರುವಾಗ ದಾವೀದನ ಮಂತ್ರಿಯಾಗಿದ್ದ ಗೀಲೋವಿನ ಅಹೀತೋಫೆಲನೆಂಬವನನ್ನು ಅವನ ಊರಾದ ಗೀಲೋವಿನಿಂದ ಕರೇಕಳುಹಿಸಿದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದದರಿಂದ ಒಳಸಂಚು ಬಲವಾಗುತ್ತಾ ಹೋಯಿತು.

ದಾವೀದನು ಓಡಿಹೋದದ್ದು

13 ಇಸ್ರಾಯೇಲ್ಯರ ಮನಸ್ಸು ಅಬ್ಷಾಲೋಮನ ಕಡೆಗೆ ತಿರುಗಿಕೊಂಡಿತೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ 
 
14 ಅವನು ಯೆರೂಸಲೇಮಿನಲ್ಲಿದ್ದ ತನ್ನ ಸೇವಕರಿಗೆ – ಏಳಿರಿ, ಓಡಿ ಹೋಗೋಣ; ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ; ಅವನು ಅಕಸ್ಮಾತ್ತಾಗಿ ನಮ್ಮ ಮೇಲೆ ಬಿದ್ದು ನಮಗೆ ದುರ್ಗತಿಯನ್ನುಂಟುಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸಾನು ಎಂದು ಹೇಳಿದನು. 
 
15 ಸೇವಕರು ಅರಸನಿಗೆ – ನಮ್ಮ ಒಡೆಯನಾದ ಅರಸನಿಗೆ ಸರಿತೋಚಿದ್ದನ್ನು ಮಾಡಸಿದ್ಧರಾಗಿದ್ದೇವೆ ಎಂದು ಉತ್ತರಕೊಟ್ಟರು. 
 
16 ಆಗ ಅರಸನು ಮನೆಕಾಯುವದಕ್ಕಾಗಿ ಹತ್ತು ಮಂದಿ ಉಪ ಪತ್ನಿಯರನ್ನು ಬಿಟ್ಟು ಉಳಿದವರನ್ನೆಲ್ಲಾ ಕರಕೊಂಡು ಹೊರಟನು. 
 
17 ಅರಸನೂ ಅವನ ಜೊತೆಯಲ್ಲಿ ಹೋದ ಜನರೆಲ್ಲರೂ ಪಟ್ಟಣದ ಕಡೇ ಮನೆಯ ಬಳಿಯಲ್ಲಿ ತುಸು ಹೊತ್ತು ನಿಂತರು. 
 
18 ದಾವೀದನ ಎಲ್ಲಾ ಸೇವಕರೂ ಕೆರೇತ್ಯ, ಪೆಲೇತ್ಯ ಎಂಬ ಕಾವಲುದಂಡುಗಳೂ ಗತ್ಊರಿನಿಂದ ಅರಸನ ಜೊತೆಯಲ್ಲಿ ಬಂದಿದ್ದ ಆರುನೂರು ಮಂದಿ ಗಿತ್ತೀಯರೂ ಅರಸನ ಮುಂದೆ ಹೋದರು.
 
19 ಆಗ ಅರಸನು ಗಿತ್ತೀಯನಾದ ಇತ್ತೈ ಎಂಬವನಿಗೆ – ನೀನೂ ನಮ್ಮ ಸಂಗಡ ಯಾಕೆ ಬರಬೇಕು? ನೀನು ಸ್ವದೇಶವನ್ನು ಬಿಟ್ಟು ನನ್ನ ಆಶ್ರಯಕ್ಕೆ ಬಂದವನಲ್ಲವೇ. ಹಿಂದಿರುಗಿ ಹೋಗಿ ಅರಸನ ಬಳಿಯಲ್ಲಿ ವಾಸಮಾಡು. 
 
20 ನಾನು ಎಲ್ಲೆಲ್ಲಿಯೋ ಅಲೆಯುತ್ತಿರಬೇಕಾಗುವದು; ಹೀಗಿರುವದರಿಂದ ನಿನ್ನೆ ಬಂದಂಥ ನಿನ್ನನ್ನು ಕರಕೊಂಡು ಹೋಗಿ ಸುಮ್ಮನೆ ಯಾಕೆ ತಿರುಗಾಡಲಿಕ್ಕೆ ಹಚ್ಚಬೇಕು? ನಿನ್ನ ಸಹೋದರರನ್ನು ಕರಕೊಂಡು ಹಿಂದಿರುಗಿಹೋಗು; ಕೃಪಾಸತ್ಯತೆಗಳು ನಿನ್ನ ಸಂಗಡ ಇರಲಿ ಎಂದು ಹೇಳಿದನು. 
 
21 ಅದಕ್ಕೆ ಇತ್ತೈ – ಯೆಹೋವನಾಣೆ, ನನ್ನ ಒಡೆಯನಾದ ಅರಸನ ಜೀವದಾಣೆ, ಜೀವಹೋದರೂ ಉಳಿದರೂ ನನ್ನ ಒಡೆಯನಾದ ಅರಸನಿರುವಲ್ಲಿಗೆ ಹೋಗುವೆನು ಎಂದು ಉತ್ತರಕೊಟ್ಟನು. 
 
22 ಆಗ ದಾವೀದನು ಅವನಿಗೆ – ಒಳ್ಳೇದು, ಮುಂದೆ ನಡೆ ಅಂದನು. ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೈನಿಕರನ್ನೂ ಪರಿಜನವನ್ನೂ ಕರಕೊಂಡು ಮುಂದೆ ನಡೆದನು. 
 
23 ಇವರೆಲ್ಲರೂ ಮುಂದೆ ನಡೆಯುವಾಗ ಸುತ್ತಣವರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲಾ ಜನರೂ ಕಿದ್ರೋನ್‍ಹಳ್ಳವನ್ನು ದಾಟಿ ಅರಣ್ಯಮಾರ್ಗ ಹಿಡಿದರು.
 
24 ಚಾದೋಕನೂ ಅವನ ವಶದಲ್ಲಿದ್ದ ಎಲ್ಲಾ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಅದನ್ನು ಜನರೆಲ್ಲರೂ ದಾಟಿಹೋಗುವವರೆಗೆ ಕೆಳಗಿಳಿಸಿದ್ದರು. ಎಬ್ಯಾತಾರನೂ ಬಂದಿದ್ದನು. 
 
25 ಅರಸನು ಚಾದೋಕನಿಗೆ – ನೀನು ದೇವರ ಒಡಂಬಡಿಕೆಯ ಮಂಜೂಷವನ್ನು ಹಿಂದಿರುಗಿ ತೆಗೆದುಕೊಂಡು ಹೋಗು; ಯೆಹೋವನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ಆತನನ್ನೂ ಆತನ ಆಲಯವನ್ನೂ ನೋಡುವ ಹಾಗೆ ತಾನೇ ನನ್ನನ್ನು ಹಿಂದಕ್ಕೆ ಬರಮಾಡುವನು. 
 
26 ಆತನು – ನಿನ್ನಲ್ಲಿ ನನಗೆ ಇಷ್ಟವಿಲ್ಲವೆಂದು ತೋರಿಸಿದರೆ ತನಗೆ ಸರಿಕಂಡಂತೆ ಮಾಡಲಿ, ಆತನ ಚಿತ್ತ ಅಂದನು. 
 
27 ಇದಲ್ಲದೆ ಅವನು ಯಾಜಕನಾದ ಚಾದೋಕನಿಗೆ – ನೀನು ದೇವದರ್ಶಿ; ನೀನು ನಿನ್ನ ಮಗನಾದ ಅಹೀಮಾಚನು, ಎಬ್ಯಾತಾರನ ಮಗನಾದ ಯೋನಾತಾನನು ಎಂಬ ಈ ಇಬ್ಬರು ಹುಡುಗರನ್ನು ಕರಕೊಂಡು ಸುರಕ್ಷಿತವಾಗಿ ಪಟ್ಟಣಕ್ಕೆ ಹೋಗಬೇಕು. 
 
28 ನಿಮ್ಮಿಂದ ವರ್ತಮಾನಬರುವ ತನಕ ನಾನು ಅಡವಿಯಲ್ಲಿ ಹೊಳೆದಾಟುವ ಸ್ಥಳದ ಹತ್ತಿರ ಇರುವೆನು ಎಂದು ಹೇಳಿದನು. 
 
29 ಆಗ ಚಾದೋಕನೂ ಎಬ್ಯಾತಾರನೂ ದೇವರ ಮಂಜೂಷವನ್ನು ಯೆರೂಸಲೇಮಿಗೆ ಒಯ್ದು ಅಲ್ಲೇ ವಾಸಿಸಿದರು.
 
30 ದಾವೀದನು ಮೋರೆಯನ್ನು ಮುಚ್ಚಿಕೊಂಡು ಅಳುತ್ತಾ ಬರಿಗಾಲಿನಿಂದ ಎಣ್ಣೇಮರಗಳ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಏರಿದರು. 
 
31 ಅಬ್ಷಾಲೋಮನ ಸಂಗಡ ಒಳಸಂಚುಮಾಡಿದವರಲ್ಲಿ ಅಹೀತೋಫೆಲನೂ ಇದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಅವನು – ಯೆಹೋವನೇ, ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು ಎಂದು ಪ್ರಾರ್ಥಿಸಿದನು. 
 
32 ಅವನು ಗುಡ್ಡದ ತುದಿಯಲ್ಲಿ ದೇವಾರಾಧನೆ ನಡೆಯುವ ಸ್ಥಳಕ್ಕೆ ಬಂದಾಗ ಅರ್ಕೀಯನಾದ ಹೂಷೈ ಎಂಬವನು ಅಂಗಿಯನ್ನು ಹರಕೊಂಡು ತಲೆಯ ಮೇಲೆ ಮಣ್ಣುಹಾಕಿಕೊಂಡು ಅರಸನ ಬಳಿಗೆ ಬಂದನು. 
 
33 ಅರಸನು ಅವನಿಗೆ – ನೀನು ನನ್ನ ಸಂಗಡ ಬರುವದಾದರೆ ನನಗೆ ಭಾರವಾಗುವಿಯಷ್ಟೆ. 
 
34 ಆದರೆ ನೀನು ಹಿಂದಿರುಗಿ ಪಟ್ಟಣಕ್ಕೆ ಹೋಗಿ ಅಬ್ಷಾಲೋಮನಿಗೆ – ಅರಸನೇ, ನಾನು ನಿನ್ನ ಸೇವಕನು; ಮುಂಚೆ ನಿನ್ನ ತಂದೆಯನ್ನು ಸೇವಿಸಿದಂತೆ ಈಗ ನಿನ್ನನ್ನು ಸೇವಿಸುತ್ತೇನೆ ಎಂದು ಹೇಳುವದಾದರೆ ನನಗೋಸ್ಕರ ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡುವದಕ್ಕೆ ನಿನಗೆ ಅನುಕೂಲವಾಗುವದು. 
 
35 ಅಲ್ಲಿ ನಿನ್ನ ಸಂಗಡ ಯಾಜಕರಾದ ಚಾದೋಕ್ ಎಬ್ಯಾತಾರರು ಇರುತ್ತಾರಲ್ಲಾ; ಅರಮನೆಯಲ್ಲಿ ನಿನಗೆ ಗೊತ್ತಾಗುವ ವರ್ತಮಾನವನ್ನೆಲ್ಲಾ ಆ ಇಬ್ಬರು ಯಾಜಕರಿಗೆ ತಿಳಿಸು. 
 
36 ಅವರ ಬಳಿಯಲ್ಲಿ ಇಬ್ಬರು ಹುಡುಗರಿದ್ದಾರೆ; ಒಬ್ಬನು ಚಾದೋಕನ ಮಗನಾದ ಅಹೀಮಾಚನು; ಇನ್ನೊಬ್ಬನು ಎಬ್ಯಾತಾರನ ಮಗನಾದ ಯೋನಾತಾನನು. ಇವರ ಮುಖಾಂತರವಾಗಿ ನೀನು ಎಲ್ಲಾ ವರ್ತಮಾನವನ್ನು ನನಗೆ ಮುಟ್ಟಿಸಬಹುದು ಎಂದು ಹೇಳಿ ಅವನನ್ನು ಕಳುಹಿಸಿದನು. 
 
37 ಅಬ್ಷಾಲೋಮನು ಯೆರೂಸಲೇಮನ್ನು ಪ್ರವೇಶಿಸುವಷ್ಟರಲ್ಲೇ ದಾವೀದನ ಸ್ನೇಹಿತನಾದ ಹೂಷೈಯು ಪಟ್ಟಣಕ್ಕೆ ಬಂದನು.
2 ಸಮುವೇಲನು 16

ಹೂಷೈಯು ಅಹೀತೋಫೆಲನ ಆಲೋಚನೆ

15 ಅಷ್ಟರಲ್ಲಿ ಅಬ್ಷಾಲೋಮನು ಎಲ್ಲಾ ಇಸ್ರಾಯೇಲ್ಯರೊಡನೆ ಯೆರೂಸಲೇಮಿಗೆ ಬಂದನು. ಅಹೀತೋಫೆಲನೂ ಅವನ ಸಂಗಡ ಇದ್ದನು. 
 
16 ಅರ್ಕೀಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು – ಅರಸನು ಚಿರಂಜೀವಿಯಾಗಿರಲಿ, ಅರಸನು ಚಿರಂಜೀವಿಯಾಗಿರಲಿ ಎಂದು ಕೂಗಿದನು. 
 
17 ಅಬ್ಷಾಲೋಮನು ಅವನಿಗೆ – ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ ಅಂದನು. 
 
18 ಅದಕ್ಕೆ ಹೂಷೈಯು – ಹಾಗಲ್ಲ, ಯೆಹೋವನೂ ಈ ಜನರೂ ಎಲ್ಲಾ ಇಸ್ರಾಯೇಲ್ಯರೂ ಯಾವನನ್ನು ಆರಿಸಿದ್ದಾರೋ ಅವನ ಪಕ್ಷದವನಾಗಿರುವೆನು; ಅವನ ಬಳಿಯಲ್ಲಿ ವಾಸಿಸುವೆನು. 
 
19 ಇದಲ್ಲದೆ ನಾನು ಈಗ ಸೇವಿಸಬೇಕೆಂದಿರುವದು ರಾಜಪುತ್ರನ ಸನ್ನಿಧಿಯಲ್ಲಿಯಲ್ಲವೇ. ನಿನ್ನ ತಂದೆಯ ಸನ್ನಿಧಿಯಲ್ಲಿ ಸೇವಿಸಿದಂತೆ ನಿನ್ನ ಸನ್ನಿಧಿಯಲ್ಲಿಯೂ ಸೇವಿಸುವೆನು ಎಂದು ಉತ್ತರಕೊಟ್ಟನು.
 
20 ಅನಂತರ ಅಬ್ಷಾಲೋಮನು – ನಾವು ಈಗ ಮಾಡತಕ್ಕದ್ದೇನು? ಆಲೋಚನೆ ಹೇಳು ಎಂಬದಾಗಿ ಅಹೀತೋಫೆಲನನ್ನು ಕೇಳಲು ಅವನು – 
 
21 ಹೋಗಿ ನಿನ್ನ ತಂದೆಯು ಮನೆಕಾಯುವದಕ್ಕೆ ಬಿಟ್ಟಿರುವ ಅವನ ಉಪಪತ್ನಿಗಳೊಡನೆ ಸಂಗಮಿಸು. ಹೀಗೆ ಮಾಡುವದಾದರೆ ನೀನು ನಿನ್ನ ತಂದೆಗೆ ಅಸಹ್ಯವಾದಿಯೆಂದು ಎಲ್ಲಾ ಇಸ್ರಾಯೇಲ್ಯರಿಗೆ ತಿಳಿಯುವದರಿಂದ ನಿನ್ನ ಪಕ್ಷದವರು ಬಲಗೊಳ್ಳುವರು ಎಂದು ಉತ್ತರ ಕೊಟ್ಟನು. 
 
22 ಆಗ ಅಬ್ಷಾಲೋಮನಿಗೋಸ್ಕರ ಮಾಳಿಗೆಯ ಮೇಲೆ ಗುಡಾರಹಾಕಿದರು. ಅವನು ಎಲ್ಲಾ ಇಸ್ರಾಯೇಲ್ಯರ ಮುಂದೆಯೇ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು. 
 
23 ಆ ಕಾಲದಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿಗಿರುವಷ್ಟು ಬೆಲೆಯಿತ್ತು. ದಾವೀದನೂ ಅಬ್ಷಾಲೋಮನೂ ಅವನ ಆಲೋಚನೆಗಳನ್ನು ಗೌರವಿಸುತ್ತಿದ್ದರು.
 
2 ಸಮುವೇಲನು 17
1 ತರುವಾಯ ಅಹೀತೋಫೆಲನು ಅಬ್ಷಾಲೋಮನಿಗೆ – ಅಪ್ಪಣೆಯಾಗಲಿ, ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು; 
 
2 ಅವನು ದಣಿದವನೂ ಧೈರ್ಯಗುಂದಿದವನೂ ಆಗಿರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗುವರು. 
 
3 ಅರಸನೊಬ್ಬನನ್ನೇ ಕೊಂದು ಎಲ್ಲಾ ಜನರನ್ನು ತಿರಿಗಿ ನಿನ್ನ ಬಳಿಗೆ ಬರಮಾಡುವೆನು. ನಿನ್ನ ಅಪೇಕ್ಷೆಯಂತೆ ಎಲ್ಲಾ ಜನರೂ ಹಿಂದಿರುಗಿ ಬಂದ ಮೇಲೆ ದೇಶದಲ್ಲೆಲ್ಲಾ ಸಮಾಧಾನವುಂಟಾಗುವದು ಎಂದು ಹೇಳಿದನು.
 
4 ಈ ಮಾತು ಅಬ್ಷಾಲೋಮನಿಗೂ ಇಸ್ರಾಯೇಲ್ಯರ ಎಲ್ಲಾ ಹಿರಿಯರಿಗೂ ಸರಿಯಾಗಿ ಕಂಡಿತು. 
 
5 ಆಮೇಲೆ ಅಬ್ಷಾಲೋಮನು – ಅರ್ಕೀಯನಾದ ಹೂಷೈಯನ್ನು ಕರೆದು ಅವನ ಅಭಿಪ್ರಾಯವನ್ನು ಕೇಳೋಣ ಎಂದು ಹೇಳಿ 
 
6 ಅವನು ತನ್ನ ಬಳಿಗೆ ಬಂದಾಗ ಅವನನ್ನು – ಅಹೀತೋಫೆಲನು ಹೀಗೆ ಹೀಗೆ ಹೇಳಿದ್ದಾನೆ; ಇದರಂತೆ ಮಾಡಿದರೆ ಒಳ್ಳೇದಾಗುವದೋ? ಇಲ್ಲವಾದರೆ ನಿನ್ನ ಅಭಿಪ್ರಾಯವೇನು ಎಂದು ಕೇಳಲು 
 
7 ಹೂಷೈಯು ಅಬ್ಷಾಲೋಮನಿಗೆ – ಈ ಸಾರಿ ಅಹೀತೋಫೆಲನು ಹೇಳಿದ ಅಲೋಚನೆ ಒಳ್ಳೇದಲ್ಲ; 
 
8 ನಿನ್ನ ತಂದೆಯೂ ಅವನ ಜನರೂ ಶೂರರಾಗಿದ್ದಾರೆಂದೂ ಈಗ ಅವರು ಮರಿಯನ್ನು ಕಳಕೊಂಡ ಕರಡಿಯಂತೆ ರೋಷವುಳ್ಳವರಾಗಿದ್ದಾರೆಂದೂ ನಿನಗೆ ಗೊತ್ತುಂಟಲ್ಲಾ; ಇದಲ್ಲದೆ ಅವನು ಯುದ್ಧನಿಪುಣನು; ಜನರ ಮಧ್ಯದಲ್ಲಿ ರಾತ್ರಿ ಕಳೆಯುವದಿಲ್ಲ. 
 
9 ಅವನು ಈಗ ಒಂದು ಗುಹೆಯಲ್ಲಾಗಲಿ ಬೇರೆ ಯಾವದಾದರೊಂದು ಸ್ಥಳದಲ್ಲಾಗಲಿ ಅಡಗಿಕೊಂಡಿರುವನು. ಮೊದಲು ನಮ್ಮವರಲ್ಲೇ ಕೆಲವರು ಮಡಿದರೆ ಜನರು ಇದನ್ನು ಕೇಳಿ ಅಬ್ಷಾಲೋಮನ ಪಕ್ಷದವರಿಗೆ ಮಹಾಪಜಯವಾಯಿತೆಂದು ಸುದ್ದಿ ಹಬ್ಬಿಸುವರು. 
 
10 ಆಗ ಸಿಂಹಹೃದಯರಾದ ಶೂರರ ಎದೆಯೂ ಕರಗಿ ನೀರಾಗುವದು. ನಿನ್ನ ತಂದೆಯು ರಣವೀರನೆಂದೂ ಅವನ ಸಂಗಡ ಇದ್ದವರು ಪರಾಕ್ರಮಶಾಲಿಗಳೆಂದೂ ಎಲ್ಲಾ ಇಸ್ರಾಯೇಲ್ಯರು ಬಲ್ಲರಷ್ಟೆ. 
 
11 ಹೀಗಿರುವದರಿಂದ ನನ್ನ ಆಲೋಚನೆಯನ್ನು ಕೇಳು – ದಾನಿನಿಂದ ಬೇರ್ಷೆಬದವರೆಗೆ ವಾಸವಾಗಿರುವ ಇಸ್ರಾಯೇಲ್ಯರೊಳಗಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ಕೂಡಿಸಿ ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗು. 
 
12 ನಾವು ಅವನಿರುವ ಸ್ಥಳವನ್ನು ಗೊತ್ತುಮಾಡಿಕೊಂಡು ಹೋಗಿ ಇಬ್ಬನಿಯು ನೆಲದ ಮೇಲೆ ಹೇಗೋ ಹಾಗೆಯೇ ನಾವು ಅವರ ಮೇಲೆ ಬೀಳೋಣ. ಆಗ ಅವನೂ ಅವನ ಜನರೂ ನಮ್ಮ ಕೈಗೆ ಸಿಕ್ಕುವರು; ಒಬ್ಬನೂ ತಪ್ಪಿಸಿಕೊಳ್ಳಲಾರನು. 
 
13 ಅವನು ಒಂದು ಪಟ್ಟಣವನ್ನು ಹೊಕ್ಕಿರುವದಾದರೆ ಇಸ್ರಾಯೇಲ್ಯರೆಲ್ಲರೂ ಹಗ್ಗಗಳನ್ನು ತೆಗೆದುಕೊಂಡು ಅಲ್ಲಿಗೆ ಬರಲಿ; ಆಗ ಆ ಊರನ್ನು ಒಂದು ಹರಳಾದರೂ ಉಳಿಯದಂತೆ ಹಗ್ಗಗಳಿಂದ ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿ ಬಿಡೋಣ ಅಂದನು. 
 
14 ಇದನ್ನು ಕೇಳಿ ಅಬ್ಷಾಲೋಮನೂ ಎಲ್ಲಾ ಇಸ್ರಾಯೇಲ್ಯರೂ ಅರ್ಕೀಯನಾದ ಹೂಷೈಯ ಆಲೋಚನೆಯು ಅಹೀತೋಫೆಲನ ಆಲೋಚನೆಗಿಂತ ಒಳ್ಳೇದಾಗಿದೆ ಎಂದರು. ಯೆಹೋವನು ಅಬ್ಷಾಲೋಮನಿಗೆ ಕೇಡನ್ನುಂಟು ಮಾಡಬೇಕೆಂದು ಅಹೀತೋಫೆಲನ ಆಲೋಚನೆಯನ್ನು ವ್ಯರ್ಥಮಾಡಿದನು.
 
15 ತರುವಾಯ ಹೂಷೈಯು ಯಾಜಕರಾದ ಚಾದೋಕ ಎಬ್ಯಾತಾರರಿಗೆ – ಅಹೀತೋಫೆಲನು ಅಬ್ಷಾಲೋಮನಿಗೂ ಇಸ್ರಾಯೇಲ್ಯರ ಹಿರಿಯರಿಗೂ ಇಂಥಿಂಥ ಆಲೋಚನೆಯನ್ನು ಹೇಳಿದನು; ನಾನು ಹೀಗೆ ಹೀಗೆ ಹೇಳಿದೆನು. 
 
16 ಆದದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ – ನೀನು ಈ ರಾತ್ರಿ ಅಡವಿಯಲ್ಲಿ ಹೊಳೆದಾಟುವ ಸ್ಥಳದ ಹತ್ತಿರ ಇಳುಕೊಳ್ಳಬೇಡ; ಶೀಘ್ರವಾಗಿ ಹೊಳೆದಾಟಿ ಮುಂದೆ ಹೋಗಿಬಿಡು; ಇಲ್ಲವಾದರೆ ನೀನೂ ನಿನ್ನ ಜನರೂ ನಾಶವಾಗುವಿರಿ ಎಂದು ಹೇಳಿಕಳುಹಿಸಿರಿ ಅಂದನು. 
 
17 ಯೋನಾತಾನ್ ಅಹೀಮಾಚರು ರೋಗೆಲಿನ ಬುಗ್ಗೆಯ ಬಳಿಯಲ್ಲಿದ್ದರು. ಇವರ ಮನೆಯ ದಾಸಿಯು ಎಲ್ಲಾ ವರ್ತಮಾನಗಳನ್ನು ಇವರಿಗೂ ಇವರು ಅರಸನಾದ ದಾವೀದನಿಗೂ ಮುಟ್ಟಿಸುವಂತೆ ಗೊತ್ತು ಮಾಡಿಕೊಂಡಿದ್ದರು. ತಮ್ಮನ್ನು ಯಾರೂ ನೋಡಬಾರದೆಂದು ಇವರು ತಾವಾಗಿ ಊರೊಳಗೆ ಬರಲಿಲ್ಲ. 
 
18 ಆದರೂ ಒಬ್ಬ ಯೌವನಸ್ಥನು ಅವರನ್ನು ನೋಡಿ ಅಬ್ಷಾಲೋಮನಿಗೆ ತಿಳಿಸಿದನು. ಅಷ್ಟರಲ್ಲಿ ಅವರಿಬ್ಬರೂ ಬಹುರೀಮಿಗೆ ಓಡಿ ಹೋಗಿ ಅಲ್ಲಿ ಒಬ್ಬನ ಮನೆಯನ್ನು ಹೊಕ್ಕರು. ಆ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಅವರು ಅದರಲ್ಲಿ ಇಳಿದರು. 
 
19 ಕೂಡಲೆ ಆ ಮನೆಯ ಹೆಂಗಸು ಅದರ ಮೇಲೆ ಒಂದು ಬಟ್ಟೆಯನ್ನು ಹಾಸಿ ಗೋದಿಯ ನುಚ್ಚನ್ನು ಹರವಿದಳು. ಆದದರಿಂದ ಸಂಗತಿಯು ಯಾರಿಗೂ ಗೊತ್ತಾಗಲಿಲ್ಲ. 
 
20 ಅಬ್ಷಾಲೋಮನ ಸೇವಕರು ಸ್ತ್ರೀಯ ಮನೆಗೆ ಹೋಗಿ – ಅಹೀಮಾಚ್ ಯೋನಾತಾನರೆಲ್ಲಿ ಎಂದು ಆಕೆಯನ್ನು ಕೇಳಿದ್ದಕ್ಕೆ ಆಕೆಯು – ಅವರು ಹಳ್ಳದಾಟಿ ಹೋಗಿ ಬಿಟ್ಟರು ಎಂದು ಉತ್ತರ ಕೊಟ್ಟಳು. ಅವರು ಅವರನ್ನು ಹುಡುಕುವದಕ್ಕೆ ಹೋಗಿ ಕಾಣದೆ ಯೆರೂಸಲೇಮಿಗೆ ಹಿಂದಿರುಗಿದರು. 
 
21 ಅವರು ಹೋದಕೂಡಲೆ ಇವರಿಬ್ಬರೂ ಬಾವಿಯಿಂದ ಮೇಲಕ್ಕೆ ಬಂದು ಅರಸನಾದ ದಾವೀದನ ಬಳಿಗೆ ಹೋಗಿ ಅವನಿಗೆ – ಅಹೀತೋಫೆಲನು ನಿನಗೆ ವಿರೋಧವಾಗಿ ಇಂಥಿಂಥ ಆಲೋಚನೆಯನ್ನು ಹೇಳಿದ್ದಾನೆ; ಆದದರಿಂದ ಬೇಗನೆ ಎದ್ದು ಹೊಳೆದಾಟಿ ಹೋಗು ಎಂದು ಹೇಳಿದರು. 
 
22 ಆಗ ದಾವೀದನೂ ಅವನ ಜೊತೆಯಲ್ಲಿದ್ದವರೆಲ್ಲರೂ ಯೊರ್ದನ್‍ಹೊಳೆಯನ್ನು ದಾಟಿದರು. ಉದಯವಾದಾಗ ದಾಟಬೇಕಾದವನೊಬ್ಬನೂ ಇರಲಿಲ್ಲ. 
 
23 ಅಹೀತೋಫೆಲನು ತನ್ನ ಆಲೋಚನೆಯು ನಡೆಯಲಿಲ್ಲವೆಂದು ತಿಳಿದು ಕತ್ತೆಗೆ ತಡಿಹಾಕಿಸಿ ಕೂತುಕೊಂಡು ತನ್ನ ಊರಿಗೆ ಹೋಗಿ ಮನೆಯಲ್ಲಿ ವ್ಯವಸ್ಥೆಮಾಡಿ ಉರ್ಲುಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಶ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.
ದಾವೀದನು ಮಹನಯಿಮಿಗೆ ಹೋದದ್ದೂ ಅಬ್ಷಾಲೋಮನು ಅವನಿಗೆ ವಿರೋಧವಾಗಿ ಯುದ್ಧಕ್ಕೆ ಹೋಗಿ ಕೊಲ್ಲಲ್ಪಟ್ಟದ್ದೂ

ಅಬ್ಷಾಲೋಮನ ಮರಣ

24 ದಾವೀದನು ಮಹನಯಿಮಿಗೆ ಹೋದನು. ಇಸ್ರಾಯೇಲ್ಯರನ್ನೆಲ್ಲಾ ಕೂಡಿಸಿಕೊಂಡು ಅಬ್ಷಾಲೋಮನು ಯೊರ್ದನ್‍ಹೊಳೆ ದಾಟಿದನು. 
 
25 ಅವನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೇನಾಪತಿಯನ್ನಾಗಿ ನೇಮಿಸಿದನು. ಇಸ್ರಾಯೇಲ್ಯನಾದ ಇತ್ರನು ನಾಹಾಷನ ಮಗಳೂ ಯೋವಾಬನ ತಾಯಿಯಾದ ಚೆರೂಯಳ ತಂಗಿಯೂ ಆದ ಅಬೀಗಲ್ ಎಂಬವಳನ್ನು ಕೂಡಿದ್ದರಿಂದ ಈ ಅಮಾಸನು ಹುಟ್ಟಿದನು. 
 
26 ಇಸ್ರಾಯೇಲ್ಯರೂ ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ಪಾಳೆಯಮಾಡಿಕೊಂಡರು.
 
27 ದಾವೀದನು ಮಹನಯಿಮಿಗೆ ಬಂದಾಗ ಅಮ್ಮೋನಿಯರ ರಬ್ಬಾ ಊರಿನವನಾದ ನಾಹಾಷನ ಮಗ ಶೋಬಿ, ಲೋದೆಬಾರಿನ ಅಮ್ಮೀಯೇಲನ ಮಗನಾದ ಮಾಕೀರ್, ರೋಗೆಲೀಮ್ ಊರಿನ ಗಿಲ್ಯಾದ್ಯನಾದ 
 
28 ಬರ್ಜಿಲ್ಲೈ ಎಂಬವರು ದಾವೀದನಿಗೂ ಅವನ ಜನರಿಗೂ ಹಾಸಿಗೆ, ಬಟ್ಟಲು, ಮಡಕೆ ಇವುಗಳನ್ನೂ ಊಟಕ್ಕಾಗಿ ಗೋದಿ ಜವೇಗೋದಿ ಹಿಟ್ಟು ಹುರಿಗಾಳು ಅವರೆ ಅಲಸಂದಿ ಬೇಳೆ ಜೇನುತುಪ್ಪ 
 
29 ಬೆಣ್ಣೆ ಕುರಿ ಹಸುವಿನ ಗಿಣ್ಣು ಇವುಗಳನ್ನೂ ತಂದು ಕೊಟ್ಟರು. ಜನರು ಅರಣ್ಯಪ್ರಯಾಣದಿಂದ ಹಸಿದವರೂ ದಣಿದವರೂ ಬಾಯಾರಿದವರೂ ಆಗಿದ್ದಾರೆ ಅಂದುಕೊಂಡು ಇವುಗಳನ್ನು ತಂದರು.
2 ಸಮುವೇಲನು 24

ಖಾನೇಷುಮಾರಿಯೂ ಅದರ ಫಲವೂ

1 ಯೆಹೋವನು ತಿರಿಗಿ ಇಸ್ರಾಯೇಲ್ಯರ ಮೇಲೆ ಕೋಪಗೊಂಡು ದಾವೀದನನ್ನು ಇಸ್ರಾಯೇಲ್ ಯೆಹೂದ್ಯ ಕುಲಗಳವರ ಖಾನೇಷುಮಾರಿಮಾಡುವದಕ್ಕೆ ಪ್ರೇರೇಪಿಸಿದನು. 
 
2 ಅರಸನು ತನ್ನ ಹತ್ತಿರದಲ್ಲಿದ್ದ ಸೇನಾಪತಿಯಾದ ಯೋವಾಬನಿಗೆ – ಜನಸಂಖ್ಯೆ ಗೊತ್ತಾಗುವ ಹಾಗೆ ನೀನು ದಾನ್ ಊರಿನಿಂದ ಬೇರ್ಷೆಬದವರೆಗೆ ಸಂಚರಿಸಿ ಇಸ್ರಾಯೇಲ್‍ಕುಲಗಳ ಎಲ್ಲಾ ಜನರನ್ನು ಲೆಕ್ಕಮಾಡಿಕೊಂಡು ಬಾ ಎಂದು ಅವನಿಗೆ ಆಜ್ಞಾಪಿಸಿದನು. 
 
3 ಆಗ ಯೋವಾಬನು ಅರಸನಿಗೆ – ನನ್ನ ಒಡೆಯನಾದ ನಿನ್ನ ಆಯುಷ್ಕಾಲದಲ್ಲೇ ದೇವರಾದ ಯೆಹೋವನು ನಿನ್ನ ಪ್ರಜೆಗಳನ್ನು ಈಗ ಇರುವದಕ್ಕಿಂತ ನೂರರಷ್ಟು ಹೆಚ್ಚಿಸಲಿ. ನನ್ನ ಒಡೆಯನಾದ ಅರಸನು ಈ ಕಾರ್ಯಕ್ಕೆ ಮನಸ್ಸು ಮಾಡಿದ್ದೇಕೆ ಅಂದನು. 
 
4 ಆದರೆ ಅರಸನು ಯೋವಾಬನಿಗೂ ಇತರ ಸೇನಾಪತಿಗಳಿಗೂ ಕಿವಿಗೊಡದೆ ತನ್ನ ಮಾತನ್ನೇ ಸಾಧಿಸಿದದರಿಂದ ಅವರು ಇಸ್ರಾಯೇಲ್ಯರನ್ನು ಲೆಕ್ಕಿಸುವದಕ್ಕಾಗಿ ಅರಸನ ಸನ್ನಿಧಿಯಿಂದ ಹೊರಟು ಹೋದರು. 
 
5 ಅವರು ಯೊರ್ದನ್ ಹೊಳೆಯನ್ನು ದಾಟಿ ಗಾದ್ ತಗ್ಗಿನಲ್ಲಿರುವ ಪಟ್ಟಣದ ಬಲಪಾರ್ಶ್ವದಲ್ಲಿರುವ ಅರೋಯೇರಿನಿಂದ ತೊಡಗಿ 
 
6 ಯಗ್ಜೇರಿಗೂ ಅಲ್ಲಿಂದ ಗಿಲ್ಯಾದ್ ಪ್ರಾಂತ, ತಖ್ತೀಮ್ ಹೊಜೀಪ್ರದೇಶ ಇವುಗಳ ಮೇಲೆ ಯಾನಿನ ದಾನ್ ಎಂಬಲ್ಲಿಗೂ ಬಂದರು. 
 
7 ಅಲ್ಲಿಂದ ತಿರುಗಿಕೊಂಡು ಚೀದೋನ್, ತೂರ್‍ಕೋಟೆ, ಹಿವ್ವಿಯರ ಮತ್ತು ಕಾನಾನ್ಯರ ಪಟ್ಟಣಗಳು ಇವುಗಳ ಮೇಲೆ ಯೆಹೂದ ಪ್ರಾಂತದ ದಕ್ಷಿಣ ದಿಕ್ಕಿನಲ್ಲಿರುವ ಬೇರ್ಷೆಬಕ್ಕೆ ಬಂದರು. 
 
8 ಹೀಗೆ ಒಂಭತ್ತು ತಿಂಗಳು ಇಪ್ಪತ್ತು ದಿವಸಗಳಲ್ಲಿ ದೇಶವನ್ನೆಲ್ಲಾ ಸಂಚರಿಸಿ ಯೆರೂಸಲೇಮಿಗೆ ಹಿಂದಿರುಗಿ ಬಂದರು. 
 
9 ಯೋವಾಬನು ಅರಸನಿಗೆ ಒಪ್ಪಿಸಿದ ಖಾನೇಷುಮಾರಿಯ ಸಂಖ್ಯೆಯು – ಇಸ್ರಾಯೇಲ್ಯರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಎಂಟು ಲಕ್ಷ; ಯೆಹೂದ್ಯರಲ್ಲಿ ಐದು ಲಕ್ಷ.
 
10 ಖಾನೇಷುಮಾರಿ ಮಾಡಿಸಿದನಂತರ ದಾವೀದನನ್ನು ಮನಸ್ಸಾಕ್ಷಿಯು ಹಂಗಿಸತೊಡಗಿತು. ಆದದರಿಂದ ಅವನು ಯೆಹೋವನನ್ನು – ಯೆಹೋವನೇ, ನಾನು ಬುದ್ಧಿಹೀನಕಾರ್ಯವನ್ನು ಮಾಡಿ ಪಾಪಿಯಾದೆನು; ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು ಎಂದು ಪ್ರಾರ್ಥಿಸಿದನು. 
 
11 ಅವನು ಮರುದಿನ ಬೆಳಿಗ್ಗೆ ಏಳುವಷ್ಟರಲ್ಲಿ ಅವನ ದರ್ಶಿಯಾದ ಗಾದ್ ಪ್ರವಾದಿಗೆ ಯೆಹೋವನು ದರ್ಶನದಲ್ಲಿ
 
12 ನೀನು ದಾವೀದನ ಹತ್ತಿರ ಹೋಗಿ ಅವನಿಗೆ – ನಾನು ಮೂರು ವಿಧವಾದ ಶಿಕ್ಷೆಗಳನ್ನು ನಿನ್ನ ಮುಂದೆ ಇಡುತ್ತೇನೆ; ಅವುಗಳಲ್ಲಿ ಯಾವದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂದು ಯೆಹೋವನು ಅನ್ನುತ್ತಾನೆ ಎಂಬದಾಗಿ ಹೇಳು ಎಂದು ಆಜ್ಞಾಪಿಸಿದನು. 
 
13 ಆಗ ಗಾದನು ದಾವೀದನ ಬಳಿಗೆ ಹೋಗಿ – ನಿನ್ನ ದೇಶದಲ್ಲಿ ಏಳು ವರುಷಗಳ ಬರವು ಉಂಟಾಗಬೇಕೋ, ಇಲ್ಲವೆ ನಿನ್ನ ಶತ್ರುಗಳು ನಿನ್ನನ್ನು ಸೋಲಿಸಿ ಮೂರು ತಿಂಗಳುಗಳವರೆಗೆ ಓಡಿಸಿ ಬಿಡಬೇಕೋ, ಇಲ್ಲವೆ ನಿನ್ನ ದೇಶದಲ್ಲಿ ಮೂರು ದಿನಗಳವರೆಗೂ ಘೋರವ್ಯಾಧಿ ಬರಬೇಕೋ? ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು ಅಂದನು. 
 
14 ಅದಕ್ಕೆ ದಾವೀದನು – ನಾನು ಬಲು ಇಕ್ಕಟ್ಟಿನಲ್ಲಿರುತ್ತೇನೆ. ಯೆಹೋವನ ಕೈಯಲ್ಲಿ ಬೀಳುತ್ತೇನೆ; ಆತನು ಕೃಪಾಪೂರ್ಣನು. ಮನುಷ್ಯರ ಕೈಯಲ್ಲಿ ಬೀಳಲೊಲ್ಲೆನು ಎಂದು ಹೇಳಿದನು.
 
15 ಆಗ ಯೆಹೋವನು ಇಸ್ರಾಯೇಲ್ಯರ ಮೇಲೆ ವ್ಯಾಧಿಯನ್ನು ಬರಮಾಡಿದನು. ಅದು ಹೊತ್ತಾರೆಯಿಂದ ನೇಮಕವಾದ ಹೊತ್ತಿನವರೆಗೂ ಇತ್ತು. ದಾನಿನಿಂದ ಬೇರ್ಷೆಬದವರೆಗೆ ವಾಸವಾಗಿರುವ ಇಸ್ರಾಯೇಲ್ಯರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು. 
 
16 ದೇವದೂತನು ಯೆರೂಸಲೇಮನ್ನೂ ಸಂಹರಿಸುವದಕ್ಕೆ ಕೈಚಾಚಿದಾಗ ಯೆಹೋವನು ಆ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಟ್ಟು ಸಂಹಾರಕದೂತನಿಗೆ – ಈಗ ಸಾಕು, ನಿನ್ನ ಕೈಯನ್ನು ಹಿಂದೆಗೆ ಎಂದು ಆಜ್ಞಾಪಿಸಿದನು. ಆಗ ಆ ದೂತನು ಯೆಬೂಸಿಯನಾದ ಅರೌನನ ಕಣದಲ್ಲಿದ್ದನು. 
 
17 ದಾವೀದನು ಜನಸಂಹಾರಕದೂತನನ್ನು ಕಂಡಾಗ ಯೆಹೋವನಿಗೆ – ಮೂರ್ಖತನದಿಂದ ಪಾಪಮಾಡಿದವನು ನಾನು; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ನಿನ್ನ ಕೈ ನನಗೂ ನನ್ನ ಮನೆಯವರಿಗೂ ವಿರೋಧವಾಗಿರಲಿ ಎಂದು ಬೇಡಿಕೊಂಡನು.
 

ದಾವೀದನು ಯಜ್ಞವೇದಿ ಕಟ್ಟಿದ್ದು

18 ಅದೇ ದಿನದಲ್ಲಿ ಗಾದನು ದಾವೀದನ ಬಳಿಗೆ ಬಂದು ಅವನಿಗೆ – ನೀನು ಹೋಗಿ ಯೆಬೂಸಿಯನಾದ ಅರೌನನ ಕಣದಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸು ಎಂದು ಹೇಳಿದನು. 
 
19 ದಾವೀದನು ಗಾದನ ಮುಖಾಂತರವಾಗಿ ತನಗಾದ ಯೆಹೋವನ ಅಪ್ಪಣೆಯಂತೆ ಹೊರಟನು. 
 
20 ದಾವೀದನೂ ಅವನ ಸೇವಕರೂ ತನ್ನ ಬಳಿಗೆ ಬರುವದನ್ನು ಅರೌನನು ಕಂಡು ಅವರ ಮುಂದೆ ಹೋಗಿ ಅರಸನಿಗೆ ಸಾಷ್ಟಾಂಗ ನಮಸ್ಕಾರಮಾಡಿ – 
 
21 ನನ್ನ ಒಡೆಯನಾದ ಅರಸನು ತನ್ನ ಸೇವಕನ ಬಳಿಗೆ ಬರುವದಕ್ಕೇನು ಕಾರಣ ಎಂದು ಕೇಳಿದನು. ದಾವೀದನು ಅವನಿಗೆ – ವ್ಯಾಧಿಯು ಜನರನ್ನು ಬಿಟ್ಟುಹೋಗುವಂತೆ ನಾನು ನಿನ್ನ ಕಣವನ್ನು ಕೊಂಡುಕೊಂಡು ಅದರಲ್ಲಿ ಯೆಹೋವನಿಗೋಸ್ಕರ ಒಂದು ವೇದಿಯನ್ನು ಕಟ್ಟುವದಕ್ಕೆ ಬಂದಿದ್ದೇನೆ ಎಂದು ಉತ್ತರಕೊಟ್ಟನು. 
 
22 ಆಗ ಅರೌನನು ದಾವೀದನಿಗೆ – ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಅರ್ಪಿಸೋಣವಾಗಲಿ; ಇಲ್ಲಿ ಯಜ್ಞಕ್ಕೆ ಹೋರಿಗಳೂ ಸೌದೆಗೆ ಹಂತೀಕುಂಟೆ ಮೊದಲಾದ ಎತ್ತಿನ ಸಾಮಾನುಗಳೂ ಇರುತ್ತವೆ. 
 
23 ಇವುಗಳನ್ನೆಲ್ಲಾ ಅರಸನ ಸೇವಕನಾದ ನಾನು ಅರಸನಿಗೆ ಕೊಡುತ್ತೇನೆ. ನಿನ್ನ ದೇವರಾದ ಯೆಹೋವನು ನಿನಗೆ ಪ್ರಸನ್ನನಾಗಲಿ ಎಂದು ಹೇಳಿದನು. 
 
24 ಅರಸನು ಅರೌನನಿಗೆ – ಹಾಗಲ್ಲ, ನಾನು ನಿನ್ನಿಂದ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ದೇವರಾದ ಯೆಹೋವನಿಗೆ ಸುಮ್ಮನೆ ಸಿಕ್ಕಿದ್ದನ್ನು ಯಜ್ಞವಾಗಿ ಅರ್ಪಿಸಲೊಲ್ಲೆನು ಎಂದು ಹೇಳಿ ಆ ಕಣವನ್ನೂ ಹೋರಿಗಳನ್ನೂ ಐವತ್ತು ರೂಪಾಯಿಗೆ ಕೊಂಡುಕೊಂಡು 
 
25 ಅಲ್ಲಿ ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಅದರ ಮೇಲೆ ಆತನಿಗೆ ಸರ್ವಾಂಗ ಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿದನು. ಹೀಗೆ ದೇಶದ ಮೇಲಿದ್ದ ಯೆಹೋವನ ಕೋಪವು ಶಾಂತವಾಯಿತು. ಇಸ್ರಾಯೇಲ್ಯರಲ್ಲಿದ್ದ ಸಂಹಾರಕವ್ಯಾಧಿಯು ನಿಂತುಹೋಯಿತು.
 
1 ಪೂರ್ವಕಾಲವೃತ್ತಾಂತ 29:26,27ಇಸ್ರಾಯೇಲ್ಯರೆಲ್ಲರ ಅರಸನಾಗಿದ್ದ ಇಷಯನ ಮಗನಾದ ದಾವೀದನು ಹೆಬ್ರೋನಿನಲ್ಲಿ ಏಳು ವರುಷವೂ ಯೆರೂಸಲೇಮಿನಲ್ಲಿ ಮೂವತ್ತಮೂರು ವರುಷವೂ ಒಟ್ಟಿಗೆ ನಾಲ್ವತ್ತು ವರುಷ ಆಳಿದನು. 
 
28 ಅವನು ಐಶ್ವರ್ಯ ಮಾನ ದೀರ್ಘಾಯುಷ್ಯ ಇವುಗಳನ್ನು ಅನುಭವಿಸಿದ ನಂತರ ತುಂಬಾ ವೃದ್ಧನಾಗಿ ಮರಣಹೊಂದಿದನು. ಅವನಿಗೆ ಬದಲಾಗಿ ಅವನ ಮಗನಾದ ಸೊಲೊಮೋನನು ಅರಸನಾದನು.
 
29 ದಾವೀದನ ಪೂರ್ವೋತ್ತರ ಚರಿತ್ರೆಯೂ ಅವನ ಆಳಿಕೆ, ಪರಾಕ್ರಮ, ಅವನಿಗೂ ಇಸ್ರಾಯೇಲ್ಯರಿಗೂ ಸುತ್ತಣ ರಾಜ್ಯಗಳಿಗೂ ಸಂಭವಿಸಿದ ಸುಖದುಃಖ ಇವುಗಳ ವೃತ್ತಾಂತವೂ 
 
30 ದರ್ಶಿಯಾದ ಸಮುವೇಲ, ಪ್ರವಾದಿಯಾದ ನಾತಾನ, ದರ್ಶಿಯಾದ ಗಾದ ಇವರ ಚರಿತ್ರೆಗಳಲ್ಲಿ ಬರೆದಿರುತ್ತವೆ.
 
1 ಪೂರ್ವಕಾಲವೃತ್ತಾಂತ 21:1ಸೈತಾನನು ಇಸ್ರಾಯೇಲ್ಯರಿಗೆ ವಿರೋಧವಾಗಿ ಎದ್ದು ಖಾನೇಷುಮಾರಿಮಾಡುವದಕ್ಕೆ ದಾವೀದನನ್ನು ಪ್ರೇರಿಸಿದನು. 
 
2 ದಾವೀದನು ಯೋವಾಬನನ್ನೂ ಜನಾಧಿಪತಿಗಳನ್ನೂ ಕರೆದು – ನನಗೆ ಜನರ ಲೆಕ್ಕ ಗೊತ್ತಾಗುವ ಹಾಗೆ ನೀವು ಬೇರ್ಷೆಬದಿಂದ ದಾನ್ ಊರಿನವರೆಗೂ ಸಂಚರಿಸಿ ಇಸ್ರಾಯೇಲ್ಯರನ್ನು ಲೆಕ್ಕಮಾಡಿಕೊಂಡು ಬನ್ನಿರಿ ಎಂದು ಆಜ್ಞಾಪಿಸಿದನು. 
 
3 ಆಗ ಯೋವಾಬನು – ನನ್ನ ಒಡೆಯನಾದ ಅರಸನೇ, ಯೆಹೋವನು ತನ್ನ ಪ್ರಜೆಗಳನ್ನು ನೂರರಷ್ಟು ಹೆಚ್ಚಿಸಲಿ. ಅವರೆಲ್ಲರೂ ನನ್ನ ಒಡೆಯನ ದಾಸರಷ್ಟೆ. ಒಡೆಯನು ಇಂಥದನ್ನು ಅಪೇಕ್ಷಿಸುವದೇನು? ಇಸ್ರಾಯೇಲ್ಯರನ್ನು ಅಪರಾಧಕ್ಕೆ ಗುರಿಮಾಡುವದೇಕೆ ಅಂದನು. 
 
4 ಆದರೆ ಅರಸನು ಯೋವಾಬನಿಗೆ ಕಿವಿಗೊಡದೆ ತನ್ನ ಮಾತನ್ನೇ ಸಾಧಿಸಿದ್ದರಿಂದ ಅವನು ಹೊರಟುಹೋಗಿ ಇಸ್ರಾಯೇಲ್ಯರ ಎಲ್ಲಾ ಪ್ರಾಂತಗಳಲ್ಲಿ ಸಂಚರಿಸಿ ಯೆರೂಸಲೇಮಿಗೆ ಹಿಂದಿರುಗಿದನು. 
 
5 ಯೋವಾಬನು ದಾವೀದನಿಗೆ ಒಪ್ಪಿಸಿದ ಖಾನೇಷುಮಾರಿಯ ಸಂಖ್ಯೆಯು – ಇಸ್ರಾಯೇಲ್ಯರಲ್ಲಿ ಯುದ್ಧಕ್ಕೆ ಹೋಗತಕ್ಕ ಸೈನಿಕರು ಹನ್ನೊಂದು ಲಕ್ಷ; ಯೆಹೂದರಲ್ಲಿ ನಾಲ್ಕು ಲಕ್ಷದ ಎಪ್ಪತ್ತು ಸಾವಿರ. 
 
6 ಅರಸನ ಅಪ್ಪಣೆಯು ಯೋವಾಬನಿಗೆ ಅಸಹ್ಯವಾಗಿದ್ದದರಿಂದ ಅವನು ಇವರೊಡನೆ ಲೇವಿ ಬೆನ್ಯಾಮೀನ್ ಕುಲಗಳವರ ಖಾನೇಷುಮಾರಿಯನ್ನು ಮಾಡಲಿಲ್ಲ.
 
7 ಖಾನೇಷುಮಾರಿಮಾಡಿದ್ದು ದೇವರಿಗೆ ಕೆಟ್ಟದ್ದೆಂದು ಕಂಡದರಿಂದ ಆತನು ಇಸ್ರಾಯೇಲ್ಯರನ್ನು ಬಾಧಿಸಿದನು. 
 
8 ಆಗ ದಾವೀದನು – ನಾನು ಬುದ್ಧಿಹೀನ ಕಾರ್ಯವನ್ನು ಮಾಡಿ ಪಾಪಿಯಾಗಿದ್ದೇನೆ; ದಯವಿಟ್ಟು ನಿನ್ನ ಸೇವಕನ ಅಪರಾಧವನ್ನು ಕ್ಷಮಿಸು ಎಂದು ದೇವರನ್ನು ಪ್ರಾರ್ಥಿಸಲು 
 
9 ಆತನು ದಾವೀದನ ದರ್ಶಿಯಾದ ಗಾದನಿಗೆ ಹೇಳಿದ್ದೇನಂದರೆ – 
 
10 ನೀನು ದಾವೀದನ ಹತ್ತಿರ ಹೋಗಿ ಅವನಿಗೆ – ನಾನು ಮೂರು ವಿಧವಾದ ಶಿಕ್ಷೆಯನ್ನು ನಿನ್ನ ಮುಂದೆ ಇಡುತ್ತೇನೆ. ಅವುಗಳಲ್ಲಿ ಯಾವದನ್ನು ನಿನ್ನ ಮೇಲೆ ಬರಮಾಡಬೇಕೋ ಆರಿಸಿಕೋ ಎಂದು ಯೆಹೋವನು ಅನ್ನುತ್ತಾನೆ ಎಂಬದಾಗಿ ಹೇಳು ಅಂದನು. 
 
11 ಆಗ ಗಾದನು ದಾವೀದನ ಬಳಿಗೆ ಹೋಗಿ ಅವನಿಗೆ – ಯೆಹೋವನು ಹೇಳುವದೇನಂದರೆ
 
12 ಮೂರುವರುಷಗಳ ಕಾಲ ಬರವು ಉಂಟಾಗಬೇಕೋ, ಇಲ್ಲವೆ ಮೂರು ತಿಂಗಳುಗಳವರೆಗೆ ನಿನ್ನ ಶತ್ರುಗಳ ಕತ್ತಿಗೆ ಬಲಿಯಾಗುವದು ಬೇಕೋ, ಇಲ್ಲವೆ ಇಸ್ರಾಯೇಲ್ಯರ ಸಮಸ್ತಪ್ರಾಂತಗಳಲ್ಲಿ ಯೆಹೋವನು ಕಳುಹಿಸಿದ ಸಂಹಾರಕದೂತನಿಂದುಂಟಾಗುವ ಮೂರು ದಿನಗಳ ಘೋರ ವ್ಯಾಧಿ ರೂಪವಾದ ಯೆಹೋವನ ಕತ್ತಿಯುಬೇಕೋ? ಈ ಮೂರರಲ್ಲಿ ಒಂದನ್ನು ಆರಿಸಿಕೋ ಎಂಬದೇ. ನನ್ನನ್ನು ಕಳುಹಿಸಿದವನಿಗೆ ಯಾವ ಉತ್ತರವನ್ನು ತೆಗೆದುಕೊಂಡು ಹೋಗಬೇಕು, ಆಲೋಚಿಸಿ ಹೇಳು ಎಂದು ಹೇಳಿದನು. 
 
13 ಅದಕ್ಕೆ ದಾವೀದನು – ನಾನು ಬಲು ಇಕ್ಕಟ್ಟಿನಲ್ಲಿರುತ್ತೇನೆ. ಯೆಹೋವನ ಹಸ್ತದಲ್ಲಿ ಬೀಳುತ್ತೇನೆ; ಆತನು ಕೃಪಾಪೂರ್ಣನು. ಮನುಷ್ಯರ ಕೈಯಲ್ಲಿ ಬೀಳಲೊಲ್ಲೆನು ಎಂದು ಹೇಳಿದನು.
 
14 ಆಗ ಯೆಹೋವನು ಇಸ್ರಾಯೇಲ್ಯರ ಮೇಲೆ ವ್ಯಾಧಿಯನ್ನು ಬರಮಾಡಿದನು; ಅವರಲ್ಲಿ ಎಪ್ಪತ್ತು ಸಾವಿರ ಜನರು ಸತ್ತರು. 
 
15 ದೇವರು ಯೆರೂಸಲೇಮನ್ನೂ ಸಂಹರಿಸುವದಕ್ಕೆ ದೂತನನ್ನು ಕಳುಹಿಸಿದನು; ಆದರೆ ಆ ದೂತನು ಸಂಹರಿಸುವದಕ್ಕಿದ್ದಾಗ ಯೆಹೋವನು ಅದನ್ನು ಕಂಡು ಆ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪ ಪಟ್ಟು ಸಂಹಾರಕದೂತನಿಗೆ – ಸಾಕು, ನಿನ್ನ ಕೈಯನ್ನು ಹಿಂದೆಗೆ ಎಂದು ಆಜ್ಞಾಪಿಸಿದನು. ಆಗ ಯೆಹೋವನ ದೂತನು ಯೆಬೂಸಿಯನಾದ ಒರ್ನಾನನ ಕಣದಲ್ಲಿ ನಿಂತನು. 
 
16 ದಾವೀದನು ಕಣ್ಣೆತ್ತಿ ನೋಡಿ ಯೆಹೋವನ ದೂತನು ಭೂಮ್ಯಾಕಾಶಗಳ ನಡುವೆ ನಿಂತಿರುವದನ್ನೂ ಚಾಚಿದ ಕೈಯಲ್ಲಿ ಯೆರೂಸಲೇಮಿಗೆ ವಿರೋಧವಾಗಿ ಹಿರಿದ ಕತ್ತಿಯಿರುವದನ್ನೂ ಕಂಡಾಗ ಅವನೂ ಹಿರಿಯರೂ ಗೋಣೀತಟ್ಟನ್ನು ಹೊದ್ದುಕೊಂಡವರಾಗಿ ಬೋರ್ಲಬಿದ್ದರು; 
 
17 ಮತ್ತು ದಾವೀದನು ದೇವರಿಗೆ – ಜನರನ್ನು ಲೆಕ್ಕಿಸಬೇಕೆಂದು ಆಜ್ಞಾಪಿಸಿದವನು ನಾನಲ್ಲವೋ! ಮಹಾಪಾಪಮಾಡಿದವನು ನಾನೇ; ಕುರಿಗಳಂತಿರುವ ಈ ಜನರು ಏನು ಮಾಡಿದ್ದಾರೆ? ಯೆಹೋವನೇ, ನನ್ನ ದೇವರೇ, ನಿನ್ನ ಹಸ್ತವು ನಿನ್ನ ಜನರನ್ನು ಬಾಧಿಸುವದಕ್ಕೆ ಅವರಿಗೆ ವಿರೋಧವಾಗಿರದೆ ನನಗೂ ನನ್ನ ಮನೆಯವರಿಗೂ ವಿರೋಧವಾಗಿರಲಿ ಎಂದು ಬೇಡಿಕೊಂಡನು.
 
18 ಆಗ ಯೆಹೋವನ ದೂತನು ಗಾದನಿಗೆ – ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸುವದಕ್ಕೆ ಹೋಗಬೇಕು ಎಂದು ದಾವೀದನಿಗೆ ಹೇಳು ಎಂಬದಾಗಿ ಆಜ್ಞಾಪಿಸಿದನು. 
 
19 ದಾವೀದನು ಗಾದನ ಮುಖಾಂತರವಾಗಿ ತನಗಾದ ಯೆಹೋವನ ಅಪ್ಪಣೆಯಂತೆ ಹೊರಟನು. 
 
20 ಅಷ್ಟರಲ್ಲಿ ಗೋದಿಯನ್ನು ತುಳಿಸುತ್ತಿದ್ದ ಒರ್ನಾನನು ತಿರುಗಿಕೊಂಡು ದೂತನನ್ನು ನೋಡಿದ್ದನು. ಅವನೊಡನಿದ್ದ ಅವನ ನಾಲ್ಕು ಮಂದಿ ಮಕ್ಕಳು ಅಡಗಿಕೊಂಡಿದ್ದರು. 
 
21 ದಾವೀದನು ತನ್ನ ಬಳಿಗೆ ಬರುವದನ್ನು ಒರ್ನಾನನು ಕಂಡು ಕಣವನ್ನು ಬಿಟ್ಟುಹೋಗಿ ಅವನಿಗೆ ಅಡ್ಡಬಿದ್ದನು. 
 
22 ದಾವೀದನು ಅವನಿಗೆ – ನಿನ್ನ ಕಣವನ್ನೂ ಭೂಮಿಯನ್ನೂ ನನಗೆ ಕೊಡು; ವ್ಯಾಧಿಯು ಜನರನ್ನು ಬಿಟ್ಟುಹೋಗುವಂತೆ ನಾನು ಅದರಲ್ಲಿ ಯೆಹೋವನಿಗೋಸ್ಕರ ಒಂದು ವೇದಿಯನ್ನು ಕಟ್ಟಿಸುತ್ತೇನೆ; ಪೂರ್ಣಕ್ರಯ ತೆಗೆದುಕೊಂಡು ಅದನ್ನು ಕೊಡು ಎಂದು ಹೇಳಿದನು. 
 
23 ಆಗ ಒರ್ನಾನನು ದಾವೀದನಿಗೆ – ನನ್ನ ಒಡೆಯನಾದ ಅರಸನು ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಯಜ್ಞಮಾಡೋಣವಾಗಲಿ. ಇಲ್ಲಿ ಯಜ್ಞಕ್ಕೆ ಹೋರಿಗಳೂ ಸೌದೆಗೆ ಹಂತೀಕುಂಟೆಗಳೂ ನೈವೇದ್ಯಕ್ಕೋಸ್ಕರ ಗೋದಿಯೂ ಇರುತ್ತವೆ; ಇವೆಲ್ಲವನ್ನೂ ಕೊಡುತ್ತೇನೆ ಎಂದು ಹೇಳಿದನು. 
 
24 ಅರಸನಾದ ದಾವೀದನು ಒರ್ನಾನನಿಗೆ – ಹಾಗಲ್ಲ, ನಾನು ನಿನ್ನಿಂದ ಪೂರ್ಣಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನಿನ್ನದನ್ನು ಕ್ರಯವಿಲ್ಲದೆ ತೆಗೆದುಕೊಂಡು ಯೆಹೋವನಿಗೆ ಯಜ್ಞವಾಗಿ ಅರ್ಪಿಸಲೊಲ್ಲೆನು ಎಂದು ಹೇಳಿ 
 
25 ಆ ಭೂಮಿಗೋಸ್ಕರ ಅವನಿಗೆ ಆರುನೂರು ತೊಲೆ ಬಂಗಾರವನ್ನು ಕೊಟ್ಟು 
 
26 ಅಲ್ಲಿ ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿಸಿ ಅದರ ಮೇಲೆ ಆತನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಅರ್ಪಿಸಿ ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ ಆಕಾಶದಿಂದ ಯಜ್ಞವೇದಿಯ ಮೇಲೆ ಬೆಂಕಿಯನ್ನು ಸುರಿಸಿ 
 
27 ಕತ್ತಿಯನ್ನು ಒರೆಯಲ್ಲಿ ಹಾಕಬೇಕೆಂದು ದೂತನಿಗೆ ಆಜ್ಞಾಪಿಸಿದನು. ಅವನು ಹಾಗೆಯೇ ಮಾಡಿದನು.
ದಾವೀದನು ದೇವಾಲಯಕ್ಕೋಸ್ಕರ ಸ್ಥಳವನ್ನು ಗೊತ್ತುಮಾಡಿದ್ದು
 
28 ಮೋಶೆಯು ಅರಣ್ಯದಲ್ಲಿ ಮಾಡಿಸಿದ ಯೆಹೋವನ ಗುಡಾರವೂ ಯಜ್ಞವೇದಿಯೂ ಆ ಕಾಲದಲ್ಲಿ ಗಿಬ್ಯೋನಿನ ಪೂಜಾಸ್ಥಳದಲ್ಲಿದ್ದವು. 
 
29 ಆದರೂ ದಾವೀದನು ಯೆಹೋವದೂತನ ಕತ್ತಿಗೆ ಹೆದರಿ ದೇವದರ್ಶನಕ್ಕೋಸ್ಕರ ಅಲ್ಲಿಗೆ ಹೋಗಲಾರದೆ ಯೆಬೂಸಿಯನಾದ ಒರ್ನಾನನ ಕಣದಲ್ಲಿಯೇ ಯಜ್ಞವನ್ನರ್ಪಿಸಿದನು. 
 
30 ಆ ಕಾಲದಲ್ಲಿ ದಾವೀದನಿಗೆ ಯೆಹೋವನಿಂದ ಸದುತ್ತರದೊರಕಿದ್ದರಿಂದ ಅವನು –
 

Related Quiz Articles