ದೇವರು ಬೈಬಲಿನಲ್ಲಿ ನ್ಯಾಯಾಧಿಪತಿಗಳ ಮೂಲಕ ಮನುಷ್ಯರ ವ್ಯವಹಾರಗಳ ಬಗ್ಗೆ ಮದ್ಯಪ್ರವೇಶಿಸಿ ತಿಳಿಸಿದ್ದು

ನ್ಯಾಯಸ್ಥಾಪಕರು 2:10 ಅವನ ಕಾಲದವರೆಲ್ಲರೂ ಪಿತೃಗಳ ಬಳಿಗೆ ಸೇರಿದ ಮೇಲೆ ಯೆಹೋವನನ್ನೂ ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.

ನ್ಯಾಯಸ್ಥಾಪಕರು 2:16 ಆಗ ಯೆಹೋವನು ಅವರನ್ನು ಸೂರೆ ಮಾಡುವವರ ಕೈಯಿಂದ ತಪ್ಪಿಸುವದಕ್ಕೋಸ್ಕರ ನ್ಯಾಯಸ್ಥಾಪಕರನ್ನು ಕಳುಹಿಸಿದರೂ 

ಇವರೇ ಪ್ರಮುಖ 12 ನ್ಯಾಯಸ್ಥಾಪಕರು

1.ಒತ್ನೀಯೇಲ್
2. ಏಹೂದ್
3.ಶಮ್ಗರ
4.ದೆಬೋರಾ
5. ಗಿದ್ಯೋನ
6.ತೋಲಾ
7.ಯಾಯೀರ್
8.ಯೆಪ್ತಾಹನು
9. ಜೆಬಹ
10. ಎಲೋನ್
11. ಎಬ್ದೋನ್
12.ಸಾಮ್ಸನ್

1 ಸಮುವೇಲ ಅಧ್ಯಾಯದಲ್ಲಿ ನ್ಯಾಯಾಸ್ದಾಪಕರು

1 ಸಮುವೇಲನು 4:8 ಮುದುಕನೂ ಸ್ಥೂಲಕಾಯನೂ ಆದ ಏಲಿಯು ದೇವರ ಒಡಂಬಡಿಕೆಯ ಮಂಜೂಷದ ವರ್ತಮಾನವನ್ನು ಕೇಳಿದೊಡನೆ ಪೀಠದಿಂದ ಹಿಂದಕ್ಕೆ ಬಾಗಲಿನ ಕಡೆಗೆ ಬಿದ್ದು ಕುತ್ತಿಗೆ ಮುರಿದು ಸತ್ತನು. ಅವನು ಇಸ್ರಾಯೇಲ್ಯರನ್ನು ನಾಲ್ವತ್ತು ವರುಷ ಪಾಲಿಸಿದನು.

1 ಸಮುವೇಲನು 7:15ಸಮುವೇಲನು ಜೀವದಿಂದಿರುವವರೆಗೆ ಇಸ್ರಾಯೇಲ್ಯರನ್ನು ಪಾಲಿಸುತ್ತಿದ್ದನು.

1 ಸಮುವೇಲನು 8:1ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಾಯೇಲ್ಯರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು. 

2ಅವನ ಚೊಚ್ಚಲ ಮಗನ ಹೆಸರು ಯೋವೇಲ್, ಮರಚಲ ಮಗನ ಹೆಸರು ಅಬೀಯ. 

3ಇವರ ನ್ಯಾಯಾಸನವು ಬೇರ್ಷೆಬದಲ್ಲಿತ್ತು. ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚತೆಗೆದುಕೊಂಡು ನ್ಯಾಯವಿರುದ್ಧವಾದ ತೀರ್ಪುಮಾಡುತ್ತಿದ್ದದರಿಂದ

ನ್ಯಾಯಸ್ಥಾಪಕರು 1
 
1ಯೆಹೋಶುವನು ಮರಣಹೊಂದಿದ ನಂತರ ಇಸ್ರಾಯೇಲ್ಯರು – ಕಾನಾನ್ಯರೊಡನೆ ಯುದ್ಧಮಾಡುವದಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು ಎಂದು ಯೆಹೋವನನ್ನು ಕೇಳಲು 
 
2ಆತನು ಅವರಿಗೆ – ಯೆಹೂದ್ಯರು ಹೋಗಲಿ; ಇಗೋ, ದೇಶವನ್ನು ಅವರಿಗೆ ಒಪ್ಪಿಸಿದ್ದೇನೆ ಅಂದನು.
 
4ಅವರು ಒಪ್ಪಿ ಯೆಹೂದ್ಯರ ಜೊತೆಯಲ್ಲಿ ಯುದ್ಧಕ್ಕೆ ಹೋದರು. ಆಗ ಯೆಹೋವನು ಕಾನಾನ್ಯರನ್ನೂ ಪೆರಿಜ್ಜೀಯರನ್ನೂ ಅವರ ಕೈಗೆ ಒಪ್ಪಿಸಿದ್ದರಿಂದ ಅವರು ಅವರಲ್ಲಿ ಹತ್ತು ಸಾವಿರ ಮಂದಿಯನ್ನು ಬೆಜೆಕಿನಲ್ಲಿ ಹತಮಾಡಿದರು.
 
8ಯೆಹೂದ್ಯರು ಯೆರೂಸಲೇಮಿನವರೊಡನೆ ಯುದ್ಧಮಾಡಿ ಅದನ್ನು ಹಿಡಿದು ಜನರನ್ನು ಕತ್ತಿಯಿಂದ ಸಂಹರಿಸಿ ಪಟ್ಟಣಕ್ಕೆ ಬೆಂಕಿಹೊತ್ತಿಸಿದರು. 
 
9ತರುವಾಯ ಅವರು ಹೋಗಿ ಪರ್ವತಪ್ರದೇಶ, ದಕ್ಷಿಣ ಸೀಮೆ, ಇಳಕಲಿನ ಪ್ರದೇಶ ಇವುಗಳಲ್ಲಿದ್ದ ಕಾನಾನ್ಯರೊಡನೆ ಯುದ್ಧಮಾಡಿದರು.
 
10ಅವರು ಮುಂಚೆ ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ಬಿದ್ದು ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬವರನ್ನು ಹೊಡೆದು ಬಿಟ್ಟರು. 
 
11ಅಲ್ಲಿಂದ ದೆಬೀರಿನವರಿಗೆ ವಿರೋಧವಾಗಿ ಹೋದರು; ದೆಬೀರಕ್ಕೆ ಮುಂಚೆ ಕಿರ್ಯತ್‍ಸೇಫೆರ್ ಎಂಬ ಹೆಸರಿತ್ತು. 
 
12ಕಿರ್ಯತ್‍ಸೇಫೆರನ್ನು ಹಿಡಿದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆಮಾಡಿಕೊಡುತ್ತೇನೆಂದು ಕಾಲೇಬನು ಹೇಳಲು 
 
13ಅವನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನು ಅದನ್ನು ಹಿಡಿದನು. ಆಗ ಕಾಲೇಬನು ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಅವನಿಗೆ ಮದುವೆಮಾಡಿಕೊಟ್ಟನು.
 
ದೇವರ ಮೊದಲ ಸೂಚನೆ ಮತ್ತು ಎಚ್ಚರಿಕೆ : ದೇಶಗಳನ್ನು ಓಡಿಸಿದ್ದು 
1ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಸೇರಿಸಿ ಸಂಖ್ಯೆಯಲ್ಲಿಯೂ ಬಲದಲ್ಲಿಯೂ ನಿಮಗೆ ಮೀರುವ ಹಿತ್ತಿಯರು, ಗಿರ್ಗಾಷಿಯರು, ಅಮೋರಿಯರು, ಕಾನಾನ್ಯರು, ಪೆರಿಜ್ಜೀಯರು, ಹಿವ್ವಿಯರು, ಯೆಬೂಸಿಯರು ಎಂಬ ಏಳು ಜನಾಂಗಗಳನ್ನು 
 
2ನಿಮ್ಮ ಎದುರಿನಿಂದ ಹೊರಡಿಸುವವನಾಗಿ ಅವರನ್ನು ನಿಮ್ಮಿಂದ ಪರಾಜಯಪಡಿಸುವಾಗ ನೀವು ಅವರನ್ನು ನಿಶ್ಶೇಷವಾಗಿ ಸಂಹರಿಸಬೇಕು. ಅವರ ಸಂಗಡ ಒಡಂಬಡಿಕೆಮಾಡಿಕೊಳ್ಳಬಾರದು, ಅವರನ್ನು ಕನಿಕರಿಸಬಾರದು. 
 
3ಅವರೊಡನೆ ಬೀಗತನಮಾಡಬಾರದು; ಅವರ ಮಕ್ಕಳಿಗೆ ಹೆಣ್ಣುಗಳನ್ನು ಕೊಡಲೂಬಾರದು. ಅವರಿಂದ ತರಲೂಬಾರದು. 
 
4ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಯೆಹೋವನ ಸೇವೆಯಿಂದ ತಪ್ಪಿಸಿ ಇತರ ದೇವರುಗಳನ್ನು ಪೂಜಿಸುವದಕ್ಕೆ ತಿರುಗಿಸಾರು; ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶ ಮಾಡುವನು. 
 
5ಆದದರಿಂದ ನೀವು ಹೀಗೆ ಮಾಡಬೇಕು – ಅವರ ಬಲಿಪೀಠಗಳನ್ನು ಕೆಡವಬೇಕು; ಅವರ ಕಲ್ಲಿನ ಕಂಬಗಳನ್ನು ಒಡೆದು ಅಶೇರವೆಂಬ ವಿಗ್ರಹಸ್ತಂಭಗಳನ್ನು ಕಡಿದು ಅವರ ದೇವತಾಪ್ರತಿಮೆಗಳನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
 
6ಯಾಕಂದರೆ ನೀವು ನಿಮ್ಮ ದೇವರಾದ ಯೆಹೋವನಿಗೆ ಮೀಸಲಾದ ಜನರಾಗಿದ್ದೀರಲ್ಲವೇ; ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನವಾಗುವದಕ್ಕೆ ಆದುಕೊಂಡನು. 
 
7ನಿಮ್ಮನ್ನು ಎಲ್ಲಾ ಜನಾಂಗಗಳಲ್ಲಿ ಹೆಚ್ಚು ಮಂದಿ ಎಂದು ಇಷ್ಟಪಟ್ಟು ಆದುಕೊಳ್ಳಲಿಲ್ಲ; ನೀವು ಎಲ್ಲಾ ಜನಾಂಗಗಳಿಗಿಂತಲೂ ಸ್ವಲ್ಪಮಂದಿಯಷ್ಟೆ. 
 
8ಯೆಹೋವನು ನಿಮ್ಮನ್ನು ಪ್ರೀತಿಸಿ ತಾನು ನಿಮ್ಮ ಪಿತೃಗಳಿಗೆ ಮಾಡಿದ ಪ್ರಮಾಣವನ್ನು ನೆರವೇರಿಸಬೇಕೆಂದು ಐಗುಪ್ತ್ಯರ ಅರಸನಾದ ಫರೋಹನ ಕೈಕೆಳಗೆ ದಾಸರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿ ತನ್ನ ಭುಜಬಲವನ್ನು ಪ್ರಯೋಗಿಸಿ ಆ ದೇಶದೊಳಗಿಂದ ಬರಮಾಡಿದನು.
 
9ಆದದರಿಂದ ನಿಮ್ಮ ದೇವರಾದ ಯೆಹೋವನೊಬ್ಬನೇ ದೇವರೆಂದು ತಿಳಿದುಕೊಳ್ಳಬೇಕು. ಆತನು ನಂಬಿಗಸ್ತನಾದ ದೇವರು; ತನ್ನನ್ನು ಪ್ರೀತಿಸಿ ತನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ವಾಗ್ದಾನವನ್ನೂ ಕೃಪೆಯನ್ನೂ ಅವರ ಸಂತತಿಯವರಲ್ಲಿ ಸಾವಿರ ತಲೆಗಳವರೆಗೂ ನೆರವೇರಿಸುವವನಾಗಿಯೂ 
 
10ತನ್ನನ್ನು ತಿರಸ್ಕರಿಸಿದವರಿಗೆ ಪ್ರತಿಯಾಗಿ ನಾಶವನ್ನುಂಟುಮಾಡುವವನಾಗಿಯೂ ಇದ್ದಾನೆಂದು ತಿಳಿದುಕೊಳ್ಳಿರಿ. ಹಗೆಯವರ ವಿಷಯದಲ್ಲಿ ತಡಮಾಡದೆ ಆಗಲೇ ಮುಯ್ಯಿತೀರಿಸುವನು. 
 
11ಆದಕಾರಣ ನಾನು ಈಗ ನಿಮಗೆ ಬೋಧಿಸುವ ಧರ್ಮೋಪದೇಶವನ್ನೂ ಆಜ್ಞಾವಿಧಿಗಳನ್ನೂ ನೀವು ಅನುಸರಿಸುವವರಾಗಿರಬೇಕು.
 
12ನೀವು ಈ ವಿಧಿಗಳನ್ನು ಲಕ್ಷ್ಯವಿಟ್ಟು ಅನುಸರಿಸಿದರೆ ಅದಕ್ಕೆ ಪ್ರತಿಯಾಗಿ ನಿಮ್ಮ ದೇವರಾದ ಯೆಹೋವನು ನಿಮ್ಮ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ಮಾಡಿದ ವಾಗ್ದಾನವನ್ನೂ ಕೃಪೆಯನ್ನೂ ನಿಮ್ಮಲ್ಲಿ ನೆರವೇರಿಸುವವನಾಗಿ 
 
13ನಿಮ್ಮನ್ನು ಪ್ರೀತಿಸಿ ಅಭಿವೃದ್ಧಿಪಡಿಸಿ ಹೆಚ್ಚಿಸುವನು. ಆತನು ನಿಮ್ಮ ಪಿತೃಗಳಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮ ಸಂತಾನವನ್ನೂ ವ್ಯವಸಾಯವನ್ನೂ ನಿಮಗಿರುವ ಧಾನ್ಯದ್ರಾಕ್ಷಾರಸ, ಎಣ್ಣೆ ಇವುಗಳನ್ನೂ ನಿಮ್ಮ ದನಕುರಿಗಳಲ್ಲಿ ಹುಟ್ಟಿದ್ದನ್ನೂ ಅಭಿವೃದ್ಧಿಪಡಿಸುವನು. 
 
14ನೀವು ಎಲ್ಲಾ ಜನಗಳಿಗಿಂತಲೂ ಹೆಚ್ಚಾಗಿ ದೇವರ ಅನುಗ್ರಹವನ್ನು ಹೊಂದಿದವರಾಗಿರುವಿರಿ. ನಿಮ್ಮೊಳಗೆ ಸ್ತ್ರೀಪುರುಷರಲ್ಲಿಯಾಗಲಿ ಹೆಣ್ಣು ಗಂಡು ಪಶುಗಳಲ್ಲಿಯಾಗಲಿ ಬಂಜೆತನವು ಇರುವದಿಲ್ಲ. 
 
15ನಿಮ್ಮಲ್ಲಿ ಯಾವ ವ್ಯಾಧಿಯೂ ಉಂಟಾಗದಂತೆ ಯೆಹೋವನು ಮಾಡುವನು. ನಿಮ್ಮ ಅನುಭವಕ್ಕೆ ಬಂದ ಪ್ರಕಾರ ಐಗುಪ್ತದೇಶದಲ್ಲಿ ಪ್ರಬಲವಾಗಿರುವ ಕ್ರೂರವ್ಯಾಧಿಗಳನ್ನು ನಿಮಗೆ ಬರಗೊಡಿಸದೆ ಅವುಗಳನ್ನು ನಿಮ್ಮ ಶತ್ರುಗಳ ಮೇಲೆಯೇ ಬರಮಾಡುವನು.
 
16ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಪರಾಜಯಪಡಿಸುವ ಜನಾಂಗಗಳನ್ನೆಲ್ಲಾ ನೀವು ಕನಿಕರಿಸದೆ ನಾಶಮಾಡಬೇಕು. ಅವರ ದೇವರುಗಳನ್ನು ಪೂಜಿಸಲೇಬಾರದು; ಪೂಜಿಸಿದರೆ ಅವು ನಿಮಗೆ ಉರುಲಾಗುವವು.
 
17ಆ ಜನಗಳು ನಮಗಿಂತ ಹೆಚ್ಚು ಮಂದಿ; ಅವರನ್ನು ಹೊರಡಿಸುವದು ನಮ್ಮಿಂದ ಹೇಗಾದೀತು ಅಂದುಕೊಳ್ಳುತ್ತೀರೋ? ಅವರಿಗೆ ಹೆದರಬೇಡಿರಿ; 
 
18ನಿಮ್ಮ ದೇವರಾದ ಯೆಹೋವನು ಫರೋಹನಿಗೂ ಐಗುಪ್ತ್ಯರೆಲ್ಲರಿಗೂ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ. 
 
19ನೀವು ಆಗ ಕಣ್ಣಾರೆ ನೋಡಿದ ಪ್ರಕಾರ ಆತನು ವಿಶೇಷ ಮನಶ್ಶೋಧನೆ, ಮಹತ್ಕಾರ್ಯ, ಉತ್ಪಾತ, ಭುಜಪರಾಕ್ರಮ, ಶಿಕ್ಷೆ ಇವುಗಳನ್ನು ಪ್ರಯೋಗಿಸಿ ನಿಮ್ಮನ್ನು ಬಿಡುಗಡೆಮಾಡಿದನಲ್ಲಾ. ನೀವು ಹೆದರಿಕೊಳ್ಳುವ ಆ ಎಲ್ಲಾ ಜನಾಂಗಗಳಿಗೂ ಆತನು ಹಾಗೆಯೇ ಮಾಡುವನು. 
 
20ಅದು ಮಾತ್ರವಲ್ಲದೆ ನಿಮ್ಮ ದೇವರಾದ ಯೆಹೋವನು ಕಡಜದ ಹುಳಗಳನ್ನು ಅವರೊಳಗೆ ಕಳುಹಿಸುವನು; ಮರೆಯಾಗಿದ್ದು ಉಳುಕೊಂಡವರು ಆ ಹುಳಗಳ ದೆಸೆಯಿಂದ ನಾಶವಾಗಿ ನಿಮಗೆ ಕಾಣದೆ ಹೋಗುವರು. 
 
21ನೀವು ಅವರಿಗೆ ಹೆದರಿಕೊಳ್ಳಬೇಡಿರಿ; ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿದ್ದಾನೆ; ಆತನು ಭಯಂಕರನಾದ ಮಹಾದೇವರು. 
 
22ನಿಮ್ಮ ದೇವರಾದ ಯೆಹೋವನು ಆ ಜನಾಂಗಗಳನ್ನು ನಿಮ್ಮ ಎದುರಿನಿಂದ ಸ್ವಲ್ಪಸ್ವಲ್ಪವಾಗಿ ಹೊರಡಿಸುತ್ತಿರುವನು. ನೀವು ಬಹು ಶೀಘ್ರವಾಗಿ ಅವರನ್ನು ನಿರ್ಮೂಲಮಾಡಕೂಡದು; ಮಾಡಿದರೆ ಕಾಡುಮೃಗಗಳು ಹೆಚ್ಚಿ ನಿಮಗೆ ತೊಂದರೆಯನ್ನುಂಟುಮಾಡಾವು. 
 
23ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮಿಂದ ಸೋಲಿಸಿ ಬಹಳವಾಗಿ ಗಲಿಬಿಲಿಮಾಡಿ ಕಡೆಗೆ ಇಲ್ಲದಂತೆ ಮಾಡುವನು. 
 
24ಆತನು ಅವರ ಅರಸುಗಳನ್ನು ನಿಮ್ಮ ಕೈಗೆ ಸಿಕ್ಕುವಂತೆ ಮಾಡಲಾಗಿ ನೀವು ಅವರ ಹೆಸರುಗಳೇ ಭೂಮಿಯ ಮೇಲೆ ಉಳಿಯದಂತೆ ಮಾಡಬೇಕು. ಯಾರೂ ನಿಮ್ಮ ಮುಂದೆ ನಿಲ್ಲುವದಿಲ್ಲ; ಎಲ್ಲರನ್ನೂ ನಾಶಮಾಡುವಿರಿ.
 
25ಅವರು ದೇವರೆಂದು ಮಾಡಿಕೊಂಡ ಮರದ ವಿಗ್ರಹಗಳನ್ನು ನೀವು ಬೆಂಕಿಯಿಂದ ಸುಟ್ಟುಬಿಡಬೇಕು. ಆ ವಿಗ್ರಹಗಳ ಮೇಲಿರುವ ಬೆಳ್ಳಿಬಂಗಾರವನ್ನು ನೀವು ಆಶಿಸಬಾರದು; ಅದನ್ನು ತೆಗೆದುಕೊಂಡರೆ ಅದು ನಿಮಗೆ ಉರುಲಾಗುವದು. ಅದು ನಿಮ್ಮ ದೇವರಾದ ಯೆಹೋವನಿಗೆ ಹೇಯವಾದದ್ದು. 
 
ನ್ಯಾಯಸ್ಥಾಪಕರು 1 ಮುಂದುವರೆದ ಭಾಗ…. ಅಪೂರ್ಣ ಸ್ವಾಧೀನ ಮತ್ತು ಅವಿಧೇಯತ್ವ
 
27ಮನಸ್ಸೆಯವರು ಬೇತ್‍ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ಎಂಬ ಪಟ್ಟಣಗಳನ್ನೂ ಅವುಗಳ ಗ್ರಾಮಗಳನ್ನೂ ಸ್ವಾಧೀನಮಾಡಿಕೊಳ್ಳಲಿಲ್ಲ. ಆದದರಿಂದ ಕಾನಾನ್ಯರು ಆ ಪ್ರಾಂತಗಳಲ್ಲೇ ವಾಸಿಸುವದಕ್ಕೆ ದೃಢಮಾಡಿದರು. 
 
28ಇಸ್ರಾಯೇಲ್ಯರು ಬಲಗೊಂಡ ಮೇಲೆ ಅವರನ್ನು ದಾಸತ್ವಕ್ಕೆ ಹಚ್ಚಿದರೇ ಹೊರತು ಅಲ್ಲಿಂದ ಅಟ್ಟಿಬಿಡಲಿಲ್ಲ.
 
29ಎಫ್ರಾಯೀಮ್ಯರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದದರಿಂದ ಅವರು ಅವರ ಮಧ್ಯದಲ್ಲೇ ವಾಸಿಸುವವರಾದರು.
 
30ಜೆಬುಲೂನ್ಯರು ಕಿಟ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಅಟ್ಟಿಬಿಡಲಿಲ್ಲ. ಆದರೆ ಆ ಕಾನಾನ್ಯರು ಅವರಿಗೆ ದಾಸರಾಗಿ ಅವರ ಮಧ್ಯದಲ್ಲೇ ವಾಸಮಾಡುವವರಾದರು.
 
31ಆಶೇರ್ಯರು ಅಕ್ಕೋ, ಚೀದೋನ್, ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಎಂಬ ಪಟ್ಟಣಗಳನ್ನು ಸ್ವಾಧೀನಮಾಡಿಕೊಳ್ಳಲಿಲ್ಲ; 
 
32ಅವರು ಆ ದೇಶದ ಕಾನಾನ್ಯರನ್ನು ಹೊರಡಿಸದೆ ಅವರ ಮಧ್ಯದಲ್ಲೇ ವಾಸಮಾಡಿದರು.
 
33ನಫ್ತಾಲ್ಯರು ಬೇತ್‍ಷೆಮೆಷ್, ಬೇತನಾತ್ ಎಂಬ ಊರುಗಳನ್ನು ಸ್ವತಂತ್ರಿಸಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು. ಮತ್ತು ಆ ಬೇತ್‍ಷೆಮೆಷ್ ಬೇತನಾತ್ ಊರುಗಳ ಜನರು ಅವರಿಗೆ ದಾಸರಾದರು.
 
34ಇದಲ್ಲದೆ ಅಮೋರಿಯರು ದಾನ್ ಕುಲದವರನ್ನು ತಗ್ಗಿನ ಪ್ರದೇಶಕ್ಕೆ ಇಳಿಯಗೊಡದೆ ಹಿಂದಟ್ಟಿ ಬೆಟ್ಟಗಳಿಗೆ ಓಡಿಸಿಬಿಟ್ಟರು. 
 
35ಹೀಗೆ ಅಮೋರಿಯರು ಹರ್‍ಹೆರೆಸ್, ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳಲ್ಲೇ ವಾಸಿಸ ದೃಢಮಾಡಿದರು. ಆದರೆ ಯೋಸೇಫ್ಯರ ಹಸ್ತವು ಭಾರವಾದ ಮೇಲೆ ಅವರಿಗೆ ದಾಸರಾದರು. 
 
36ಅಮೋರಿಯರ ಮೇರೆಯು ಅಕ್ರಬ್ಬೀಮ್ ಕಣಿವೆಯಲ್ಲಿರುವ ಬಂಡೆಯಿಂದ ಮೇಲಕ್ಕೆ ವಿಸ್ತರಿಸಿಕೊಂಡಿರುವದು.
ನ್ಯಾಯಸ್ಥಾಪಕರು 2
1ಯೆಹೋವನ ದೂತನು ಗಿಲ್ಗಾಲಿನಿಂದ ಬೋಕೀಮಿಗೆ ಬಂದು ಇಸ್ರಾಯೇಲ್ಯರಿಗೆ – ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶಕ್ಕೆ ಕರತಂದೆನು. ನಿಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಎಂದೂ ಭಂಗಪಡಿಸುವದಿಲ್ಲವೆಂದು ನಾನು ಮಾತು ಕೊಟ್ಟಾಗ – 
 
2ನೀವು ಈ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆ ಮಾಡಿಕೊಳ್ಳಬಾರದು; ಅವರ ಯಜ್ಞವೇದಿಗಳನ್ನು ಕೆಡವಿಬಿಡಬೇಕು ಎಂದು ಆಜ್ಞಾಪಿಸಿದೆನು. ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ಹೀಗೆ ಯಾಕೆ ಮಾಡಿದಿರಿ? 
 
3ನೀವು ಹೀಗೆ ಮಾಡುವದಾದರೆ ನಾನು ಈ ದೇಶ ನಿವಾಸಿಗಳನ್ನು ನಿಮ್ಮೆದುರಿನಿಂದ ಓಡಿಸಿ ಬಿಡುವದಿಲ್ಲ; ಅವರು ನಿಮ್ಮನ್ನು ಉಪದ್ರವಪಡಿಸುವರು; ಅವರ ದೇವತೆಗಳು ನಿಮಗೆ ಉರುಲಾಗುವವು ಎಂದು ಮೊದಲೇ ಹೇಳಿದೆನಲ್ಲಾ ಅಂದನು. 
 
4ಯೆಹೋವನ ದೂತನು ಈ ಮಾತುಗಳನ್ನು ಹೇಳಿದಾಗ ಇಸ್ರಾಯೇಲ್ಯರೆಲ್ಲರೂ ಗಟ್ಟಿಯಾಗಿ ಅತ್ತರು. 
 
5ಮತ್ತು ಆ ಸ್ಥಳಕ್ಕೆ ಬೋಕೀಮೆಂಬ ಹೆಸರಿಟ್ಟು ಅಲ್ಲಿಯೇ ಯೆಹೋವನಿಗೋಸ್ಕರ ಯಜ್ಞಮಾಡಿದರು.
ಇಸ್ರಾಯೇಲ್ಯರಿಗೆ ಸಂಭವಿಸಿದ ಸುಖದುಃಖಗಳ ಕಾರಣಗಳು
 
6ಯೆಹೋಶುವನು ಇಸ್ರಾಯೇಲ್ಯರನ್ನು ಕಳುಹಿಸಿದ ಮೇಲೆ ಅವರು ತಮ್ಮ ತಮ್ಮ ಪಾಲಿಗೆ ಬಂದ ಪ್ರದೇಶಗಳಿಗೆ ಹೋಗಿ ಅವುಗಳನ್ನು ಸ್ವತಂತ್ರಿಸಿಕೊಂಡರು. 
 
7ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲ್ಯರಿಗೋಸ್ಕರ ನಡಿಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಸೇವಿಸುತ್ತಿದ್ದರು. 
 
8ಯೆಹೋವನ ಸೇವಕನಾದ ನೂನನ ಮಗ ಯೆಹೋಶುವನು ನೂರಹತ್ತು ವರುಷದವನಾಗಿ ಮರಣಹೊಂದಿದನು. 
 
9ಅವನನ್ನು ಅವನ ಸ್ವಾಸ್ತ್ಯಭೂಮಿಯಾದ ತಿಮ್ನತ್‍ಹೆರೆಸ್ ಎಂಬಲ್ಲಿ ಸಮಾಧಿಮಾಡಿದರು; ಅದು ಎಫ್ರಾಯೀಮ್ ಪರ್ವತಪ್ರದೇಶದಲ್ಲಿರುವ ಗಾಷ್‍ಬೆಟ್ಟದ ಉತ್ತರದಿಕ್ಕಿನಲ್ಲಿರುತ್ತದೆ. 
 
10ಅವನ ಕಾಲದವರೆಲ್ಲರೂ ಪಿತೃಗಳ ಬಳಿಗೆ ಸೇರಿದ ಮೇಲೆ ಯೆಹೋವನನ್ನೂ ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು.
 
ಇಸ್ರಾಯೇಲರ ಅಪನಂಬಿಕೆ
 
11ಈ ಇಸ್ರಾಯೇಲ್ಯರು ಬಾಳನ ಪ್ರತಿಮೆಗಳನ್ನು ಪೂಜಿಸಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. 
 
12ತಮ್ಮ ಪಿತೃಗಳನ್ನು ಐಗುಪ್ತದಿಂದ ಕರತಂದ ದೇವರಾದ ಯೆಹೋವನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ ತಮ್ಮ ಸುತ್ತಣ ಜನಾಂಗಗಳ ದೇವರುಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಯೆಹೋವನನ್ನು ರೇಗಿಸಿದರು. 
 
13ಅವರು ಯೆಹೋವನನ್ನು ಬಿಟ್ಟು ಬಾಳ್ ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸುವವರಾದದರಿಂದ 
 
14ಯೆಹೋವನ ಕೋಪವು ಅವರ ಮೇಲೆ ಉರಿಯಹತ್ತಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು. ಆತನು ಅವರನ್ನು ಸುತ್ತಣ ವೈರಿಗಳಿಗೆ ಮಾರಿ ಬಿಟ್ಟನು; ಅವರು ಆ ಶತ್ರುಗಳ ಮುಂದೆ ನಿಲ್ಲಲಾರದವರಾದರು. 
 
15ಯೆಹೋವನು ತಾನು ಮೊದಲೇ ಆಣೆಯಿಟ್ಟು ಹೇಳಿದಂತೆ ಎಲ್ಲಿ ಹೋದರೂ ಆತನ ಕೈ ಅವರಿಗೆ ವಿರೋಧವಾಗಿಯೇ ಇತ್ತು; ಅವರಿಗೆ ಬಹುಸಂಕಟವಾಯಿತು. 
 
16ಆಗ ಯೆಹೋವನು ಅವರನ್ನು ಸೂರೆ ಮಾಡುವವರ ಕೈಯಿಂದ ತಪ್ಪಿಸುವದಕ್ಕೋಸ್ಕರ ನ್ಯಾಯಸ್ಥಾಪಕರನ್ನು ಕಳುಹಿಸಿದರೂ 
 
17ಇಸ್ರಾಯೇಲ್ಯರು ಅವರ ಮಾತನ್ನೂ ಕೇಳದೆ ಅನ್ಯದೇವತೆಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು ದೇವದ್ರೋಹಿಗಳಾದರು. ಯೆಹೋವನ ಆಜ್ಞೆಗಳನ್ನು ಕೈಕೊಳ್ಳುತ್ತಿದ್ದ ತಮ್ಮ ಪಿತೃಗಳ ಮಾರ್ಗವನ್ನು ಬೇಗನೆ ಬಿಟ್ಟುಬಿಟ್ಟರು; ಅವರಂತೆ ನಡೆಯಲೇ ಇಲ್ಲ. 
 
18ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಯೆಹೋವನು ಕೇಳಿ ಕನಿಕರಪಟ್ಟು ನ್ಯಾಯಸ್ಥಾಪಕರನ್ನು ಎಬ್ಬಿಸಿ ಅವರ ಜೀವಮಾನವೆಲ್ಲಾ ಅವರ ಸಂಗಡ ಇದ್ದು ಅವರ ಮೂಲಕವಾಗಿ ಇಸ್ರಾಯೇಲ್ಯರನ್ನು ಶತ್ರುಗಳಿಂದ ಬಿಡಿಸಿದನು. 
 
19ಅಂಥ ನ್ಯಾಯಸ್ಥಾಪಕರು ತೀರಿಹೋದನಂತರ ಇಸ್ರಾಯೇಲ್ಯರು ತಿರುಗಿಕೊಂಡು ತಮ್ಮ ಹಿರಿಯರಿಗಿಂತಲೂ ಭ್ರಷ್ಟರಾಗಿ ಅನ್ಯದೇವತೆಗಳನ್ನು ಅವಲಂಬಿಸಿ ಸೇವಿಸಿ ಅವುಗಳಿಗೆ ಅಡ್ಡಬಿದ್ದರು; ಅವರು ಈ ತಮ್ಮ ದುರ್ಮಾರ್ಗವನ್ನೂ ಮೊಂಡತನವನ್ನೂ ಬಿಡಲೇ ಇಲ್ಲ. 
 
20ಆದದರಿಂದ ಯೆಹೋವನ ಕೋಪವು ಇಸ್ರಾಯೇಲ್ಯರ ಮೇಲೆ ಉರಿಯಹತ್ತಿತು; ಆತನು – ಈ ಜನರ ಪಿತೃಗಳಿಗೆ ನಾನು ಕೊಟ್ಟ ನಿಬಂಧನೆಯನ್ನು ಇವರು ಕೈಕೊಳ್ಳಲಿಲ್ಲ; ನನ್ನ ಮಾತಿಗೆ ಕಿವಿಗೊಡಲಿಲ್ಲ. 
 
21ಹೀಗಿರುವದರಿಂದ ಯೆಹೋಶುವನು ಸಾಯುವ ಮೊದಲು ಹೊರಡಿಸದೆ ಬಿಟ್ಟ ಜನಾಂಗಗಳಲ್ಲಿ ನಾನೂ ಒಂದನ್ನಾದರೂ ಹೊರಡಿಸುವದಿಲ್ಲ. 
 
22ಇವರೂ ತಮ್ಮ ಹಿರಿಯರಂತೆ ಜಾಗರೂಕತೆಯಿಂದ ಯೆಹೋವನಾದ ನನ್ನ ಮಾರ್ಗದಲ್ಲಿ ನಡೆಯುವರೋ ಇಲ್ಲವೋ ಎಂದು ಈ ಜನಾಂಗಗಳ ಮೂಲಕವಾಗಿ ಪರೀಕ್ಷಿಸುವೆನು ಅಂದನು. 
 
23ಇದರಿಂದ ಯೆಹೋವನು ಯೆಹೋಶುವನ ಕೈಗೆ ಒಪ್ಪಿಸದೆ ಉಳಿಸಿದ್ದ ಜನಾಂಗಗಳನ್ನು ಬೇಗನೆ ಅಟ್ಟಿಬಿಡಲಿಲ್ಲ.
 
ನ್ಯಾಯಸ್ಥಾಪಕರು 3
 
5ಇಸ್ರಾಯೇಲ್ಯರು ಕಾನಾನ್ಯ, ಹಿತ್ತಿಯ, ಅಮೋರಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ ಎಂಬೀ ಜನಾಂಗಗಳ ಮಧ್ಯದಲ್ಲಿ ವಾಸಮಾಡುತ್ತಾ 
 
6ಅವರ ಕನ್ಯೆಯರನ್ನು ತಾವು ತಂದು ತಮ್ಮ ಕನ್ಯೆಯರನ್ನು ಅವರ ಕುಮಾರರಿಗೆ ಕೊಟ್ಟು ಅವರ ದೇವತೆಗಳನ್ನು ಸೇವಿಸಿದರು.
 
ಒತ್ನೀಯೇಲ್
 
7ಇಸ್ರಾಯೇಲ್ಯರು ಬಾಳ್, ಅಶೇರ ಎಂಬ ದೇವತೆಗಳನ್ನು ಪೂಜಿಸಿ ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟು ಆತನ ದೃಷ್ಟಿಯಲ್ಲಿ ದ್ರೋಹಿಗಳಾದರು.
 
8ಆದದರಿಂದ ಆತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಅವರನ್ನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮ್ ಎಂಬವನಿಗೆ ಮಾರಿಬಿಟ್ಟನು. ಅವರು ಎಂಟು ವರುಷಗಳವರೆಗೆ ಅವನಿಗೆ ದಾಸರಾಗಿದ್ದರು. 
 
9ಇಸ್ರಾಯೇಲ್ಯರು ಯೆಹೋವನಿಗೆ ಮೊರೆಯಿಟ್ಟಾಗ ಆತನು ಅವರನ್ನು ಬಿಡಿಸುವದಕ್ಕೋಸ್ಕರ ರಕ್ಷಕನನ್ನು ಎಬ್ಬಿಸಿದನು; ಕಾಲೇಬನ ತಮ್ಮನೂ ಕೆನಜನ ಮಗನೂ ಆದ ಒತ್ನೀಯೇಲನೇ ಆ ರಕ್ಷಕನು. 
 
10ಯೆಹೋವನ ಆತ್ಮವು ಅವನ ಮೇಲೆ ಬಂದದರಿಂದ ಅವನು ಇಸ್ರಾಯೇಲ್ಯರ ನ್ಯಾಯಸ್ಥಾಪನೆಗೋಸ್ಕರ ಯುದ್ಧಕ್ಕೆ ಹೊರಟನು. ಯೆಹೋವನು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ರಾಜ್ಯದ ಅರಸನಾದ ಕೂಷನ್ ರಿಷಾತಯಿಮನನ್ನು ಅವನ ಕೈಗೆ ಒಪ್ಪಿಸಿಕೊಟ್ಟದರಿಂದ ಅವನು ಅವನನ್ನು ಪೂರ್ಣವಾಗಿ ಸೋಲಿಸಿಬಿಟ್ಟನು. 
 
11ದೇಶದಲ್ಲಿ ನಾಲ್ವತ್ತು ವರುಷಗಳ ಪರ್ಯಂತರ ಸಮಾಧಾನವಿತ್ತು. ತರುವಾಯ ಕೆನಜನ ಮಗನಾದ ಒತ್ನೀಯೇಲನು ಮರಣಹೊಂದಿದನು.
 
ಏಹೂದ್
 
12ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಆತನು ಅವರ ದ್ರೋಹದ ನಿಮಿತ್ತ ಮೋವಾಬ್ಯರ ಅರಸನಾದ ಎಗ್ಲೋನನನ್ನು ಅವರಿಗೆ ವಿರೋಧವಾಗಿ ಬಲಪಡಿಸಿದನು. 
 
13ಇವನು ಅಮ್ಮೋನಿಯರನ್ನೂ ಅಮಾಲೇಕ್ಯರನ್ನೂ ಕೂಡಿಸಿಕೊಂಡು ಹೊರಟು ಬಂದು ಇಸ್ರಾಯೇಲ್ಯರನ್ನು ಸೋಲಿಸಿ ಖರ್ಜೂರನಗರವನ್ನು ಹಿಡಿದನು. 
 
14ಇಸ್ರಾಯೇಲ್ಯರು ಅವನಿಗೆ ಹದಿನೆಂಟು ವರುಷ ದಾಸರಾಗಿದ್ದರು. 
 
15ಅವರು ಯೆಹೋವನಿಗೆ ಮೊರೆಯಿಡಲು ಆತನು ಅವರನ್ನು ರಕ್ಷಿಸುವದಕ್ಕೋಸ್ಕರ ಬೆನ್ಯಾಮೀನ್ ಕುಲದ ಗೇರನ ಮಗನಾದ ಏಹೂದನನ್ನು ಎಬ್ಬಿಸಿದನು. ಅವನು ಎಡಚನಾಗಿದ್ದನು. ಇಸ್ರಾಯೇಲ್ಯರು ಅವನ ಮೂಲಕವಾಗಿ ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಕಳುಹಿಸಿದರು. 
 
16ಅವನು ತನಗೋಸ್ಕರ ಒಂದು ಗುದ್ದುಮೊಳ ಉದ್ದವಾದ ಇಬ್ಬಾಯಿಕತ್ತಿಯನ್ನು ಮಾಡಿ ಅದನ್ನು ಬಟ್ಟೆಗಳ ಕೆಳಗೆ ಬಲಗಡೆಯ ಸೊಂಟಕ್ಕೆ ಕಟ್ಟಿಕೊಂಡು ಹೋಗಿ 
 
17ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪವನ್ನು ಒಪ್ಪಿಸಿದನು. ಎಗ್ಲೋನನು ಬಲು ಕೊಬ್ಬಿದವನು. 
 
18ಏಹೂದನು ಕಪ್ಪವನ್ನು ಒಪ್ಪಿಸಿದ ಮೇಲೆ ಅದನ್ನು ಹೊತ್ತುಕೊಂಡು ಬಂದ ಆಳುಗಳನ್ನು ಕಳುಹಿಸಿಬಿಟ್ಟು 
 
19ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಿರುಗಿ ಎಗ್ಲೋನನ ಬಳಿಗೆ ಬಂದು – ಅರಸೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವದೆ ಅಂದನು. ಆಗ ಅರಸನು ನಿಶ್ಶಬ್ದ ಅನ್ನಲು ಅವನ ಸೇವಕರೆಲ್ಲರೂ ಹೊರಗೆ ಹೋದರು. 
 
20ಅರಸನು ತನ್ನ ತಂಪಾದ ಮೇಲುಪ್ಪರಿಗೆಯಲ್ಲಿ ಒಬ್ಬನೇ ಕೂತುಕೊಂಡಿದ್ದಾಗ ಏಹೂದನು ಅವನ ಬಳಿಗೆ ಹೋಗಿ – ನಿನಗೆ ಹೇಳಬೇಕಾದದ್ದೊಂದು ದೇವೋಕ್ತಿಯಿದೆ ಅನ್ನಲು ಅವನು ತನ್ನ ಸಿಂಹಾಸನದಿಂದೆದ್ದನು. 
 
21ಆಗ ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು. 
 
22ಅಲಗೂ ಹಿಡಿಯೂ ಹೊಟ್ಟೆಯೊಳಗೆ ಹೊಕ್ಕವು. ಅವನು ಕತ್ತಿಯನ್ನು ಹೊರಗೆ ತೆಗೆಯದ್ದರಿಂದ ಕೊಬ್ಬು ಅಲಗನ್ನು ಸುತ್ತಿಕೊಂಡಿತು; ಮಲವು ಹೊರಗೆ ಬಂದಿತು. 
 
23ಏಹೂದನು ಪಡಸಾಲೆಗೆ ಬಂದು ಆ ಮೇಲುಪ್ಪರಿಗೆಯ ಕದವನ್ನು ಮುಚ್ಚಿ ಬೀಗಹಾಕಿ ಹೊರಟು ಹೋದನು. 
 
24ತರುವಾಯ ಸೇವಕರು ಅಲ್ಲಿ ಬಂದು ಬಾಗಲಿಗೆ ಬೀಗಹಾಕಿರುವದನ್ನು ಕಂಡು – ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು ಅಂದುಕೊಂಡು 
 
25ತಮಗೆ ಬೇಸರವಾಗುವ ತನಕ ಕಾಯುತ್ತಾ ಇದ್ದರು. ಆದರೂ ಕದಗಳು ತೆರೆಯಲ್ಪಡದೆ ಇರುವದನ್ನು ನೋಡಿ ಬೀಗದ ಕೈಯನ್ನು ತೆಗೆದುಕೊಂಡು ಬಾಗಲನ್ನು ತೆರೆಯಲು ಇಗೋ ಅವರ ಒಡೆಯನು ಸತ್ತು ಬಿದ್ದಿದ್ದನು. 
 
26ಅವರು ತಡಮಾಡುವಷ್ಟರಲ್ಲಿ ಏಹೂದನು ತಪ್ಪಿಸಿಕೊಂಡು ವಿಗ್ರಹಗಳಿದ್ದ ಸ್ಥಳದಲ್ಲಿ ಹೊಳೆದಾಟಿ ಸೆಯೀರಾ ಎಂಬಲ್ಲಿಗೆ ಬಂದು 
 
27ಎಫ್ರಾಯೀಮ್ ಪರ್ವತಪ್ರದೇಶದಲ್ಲಿ ಕೊಂಬನ್ನು ಊದಿದನು. ಆಗ ಇಸ್ರಾಯೇಲ್ಯರು ಅವನ ಬಳಿಗೆ ಬಂದು ಗಟ್ಟಾ ಇಳಿದು ಅವನ ಸಂಗಡ ಹೊರಟರು. 
 
28ಅವನು ಅವರ ನಾಯಕನಾಗಿ – ನನ್ನನ್ನು ಹಿಂಬಾಲಿಸಿರಿ; ಯೆಹೋವನು ನಿಮ್ಮ ಶತ್ರುಗಳಾದ ಮೋವಾಬ್ಯರನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆಂದು ಹೇಳಲು ಅವರು ಅವನನ್ನು ಹಿಂಬಾಲಿಸಿ ಮೋವಾಬಿಗೆ ಹೋಗುವ ಹಾಯಗಡಗಳನ್ನೆಲ್ಲಾ ಹಿಡಿದರು; ಯಾರನ್ನೂ ದಾಟಗೊಡಲಿಲ್ಲ. 
 
29ಅವರು ಆ ಕಾಲದಲ್ಲಿ ಪುಷ್ಟರೂ ಪರಾಕ್ರಮಿಗಳೂ ಆದ ಸುಮಾರು ಹತ್ತು ಸಾವಿರ ಮಂದಿ ಮೋವಾಬ್ಯರನ್ನು ಒಬ್ಬನೂ ತಪ್ಪಿಸಿಕೊಳ್ಳದಂತೆ ಹತಮಾಡಿದರು. 
 
30ಆ ದಿವಸದಲ್ಲಿ ಮೋವಾಬ್ಯರು ಇಸ್ರಾಯೇಲ್ಯರಿಂದ ತಗ್ಗಿಸಲ್ಪಟ್ಟರು; ದೇಶದಲ್ಲಿ ಎಂಭತ್ತು ವರುಷ ಸಮಾಧಾನವಿತ್ತು.
 
ಶಮ್ಗರ
 
31ಏಹೂದನ ತರುವಾಯ ಅನಾತನ ಮಗನಾದ ಶಮ್ಗರನು ಎದ್ದು ಎತ್ತಿನ ಮುಳ್ಳುಗೋಲಿನಿಂದ ಆರುನೂರು ಮಂದಿ ಫಿಲಿಷ್ಟಿಯರನ್ನು ಹತಮಾಡಿ ಇಸ್ರಾಯೇಲ್ಯರನ್ನು ರಕ್ಷಿಸಿದನು.
ನ್ಯಾಯಸ್ಥಾಪಕರು 4
ದೆಬೋರಾ
 
1ಏಹೂದನು ಮರಣಹೊಂದಿದನಂತರ ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದದರಿಂದ 
 
2ಆತನು ಅವರನ್ನು ಹಾಚೋರಿನಲ್ಲಿ ಆಳುತ್ತಿದ್ದ ಕಾನಾನ್ಯರಾಜನಾದ ಯಾಬೀನನಿಗೆ ಮಾರಿಬಿಟ್ಟನು. ಮ್ಲೇಚ್ಫರ ಹರೋಷೆತ್ ಎಂಬ ಪಟ್ಟಣದಲ್ಲಿ ವಾಸವಾಗಿದ್ದ ಸೀಸೆರನು ಅವನ ಸೇನಾಪತಿಯಾಗಿದ್ದನು. 
 
3ಒಂಭೈನೂರು ಕಬ್ಬಿಣದ ರಥಗಳುಳ್ಳ ಇವನು ಇಸ್ರಾಯೇಲ್ಯರನ್ನು ಇಪ್ಪತ್ತು ವರುಷಗಳ ತನಕ ಬಲವಾಗಿ ಬಾಧಿಸುತ್ತಿರಲು ಅವರು ಯೆಹೋವನಿಗೆ ಮೊರೆಯಿಟ್ಟರು.
 
4ಆ ಕಾಲದಲ್ಲಿ ಲಪ್ಪೀದೋತನ ಹೆಂಡತಿಯಾದ ದೆಬೋರಳೆಂಬ ಪ್ರವಾದಿನಿಯು ಇಸ್ರಾಯೇಲ್ಯರಲ್ಲಿ ನ್ಯಾಯತೀರಿಸುತ್ತಿದ್ದಳು. 
 
5ಆಕೆಯು ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ರಾಮಕ್ಕೂ ಬೇತೇಲಿಗೂ ಮಧ್ಯದಲ್ಲಿರುವ ದೆಬೋರಳ ಖರ್ಜೂರವೃಕ್ಷವೆಂದು ಹೆಸರುಗೊಂಡ ಮರದ ಕೆಳಗೆ ಆಸೀನಳಾಗಿರುವಲ್ಲಿ ಇಸ್ರಾಯೇಲ್ಯರು ನ್ಯಾಯ ನಿರ್ಣಯಕ್ಕೋಸ್ಕರ ಆಕೆಯ ಬಳಿಗೆ ಬರುತ್ತಿದ್ದರು. 
 
6ಆಕೆಯು ನಫ್ತಾಲಿ ದೇಶದ ಕೆದೆಷ್ ಊರಿನಲ್ಲಿದ್ದ ಅಬೀನೋವಮನ ಮಗನಾದ ಬಾರಾಕನನ್ನು ಕರೇಕಳುಹಿಸಿ ಅವನಿಗೆ – ನಿಶ್ಚಯವಾಗಿ ಇಸ್ರಾಯೇಲ್ಯರ ದೇವರಾದ ಯೆಹೋವನು ನಿನಗೆ – ಎದ್ದು ನಫ್ತಾಲಿ ಜೆಬುಲೂನ್ ಕುಲಗಳಿಂದ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು; 
 
7ನಾನು ಯಾಬೀನನ ಸೇನಾಪತಿಯಾದ ಸೀಸೆರನನ್ನೂ ಅವನ ಸೈನ್ಯರಥಗಳನ್ನೂ ನಿನ್ನ ಬಳಿಗೆ ಕೀಷೋನ್ ಹಳ್ಳಕ್ಕೆ ಎಳೆದುಕೊಂಡು ಬಂದು ನಿನ್ನ ಕೈಗೆ ಒಪ್ಪಿಸುವೆನು ಎಂದು ಆಜ್ಞಾಪಿಸಿದ್ದಾನೆ ಅಂದಳು. 
 
8ಬಾರಾಕನು ಆಕೆಗೆ – ನೀನು ನನ್ನ ಸಂಗಡ ಬರುವದಾದರೆ ಹೋಗುವೆನು; ಇಲ್ಲವಾದರೆ ಹೋಗುವದಿಲ್ಲ ಅನ್ನಲು 
 
9ಆಕೆಯು – ನಾನು ಹೇಗೂ ನಿನ್ನ ಸಂಗಡ ಬರುವೆನು; ಆದರೆ ಈ ಯುದ್ಧಪ್ರಯಾಣದಲ್ಲುಂಟಾಗುವ ಮಾನವು ನಿನಗಲ್ಲ. ಯೆಹೋವನು ಸೀಸೆರನನ್ನು ಒಬ್ಬ ಸ್ತ್ರೀಗೆ ಒಪ್ಪಿಸಿಕೊಡುವನು ಎಂದು ಹೇಳಿ ಎದ್ದು ಬಾರಾಕನೊಡನೆ ಕೆದೆಷಿಗೆ ಹೋದಳು. 
 
10ಮತ್ತು ಬಾರಾಕನು ಜೆಬೂಲೂನ್ಯರನ್ನೂ ನಫ್ತಾಲ್ಯರನ್ನೂ ಕೆದೆಷಿಗೆ ಕರಿಸಿದನು; ಅವರಲ್ಲಿ ಹತ್ತು ಸಾವಿರ ಮಂದಿ ಅವನ ಹೆಜ್ಜೆ ಹಿಡಿದು ಯುದ್ಧಕ್ಕೆ ಹೋದರು; ದೆಬೋರಳೂ ಹೋದಳು. 
 
11(ಕೇನ್ಯನಾದ ಹೆಬೆರನು ಮೋಶೆಯ ಮಾವನಾದ ಹೋಬಾಬನ ವಂಶದ ಉಳಿದ ಕೇನ್ಯರನ್ನು ಅಗಲಿ ಕೆದೆಷಿನ ಹತ್ತಿರ ಇರುವ ಚಾನನ್ನೀಮೆಂಬ ಊರಿನ ಏಲೋನ್ ವೃಕ್ಷದವರೆಗೆ ಬಂದು ಅಲ್ಲಿ ಗುಡಾರಹಾಕಿಕೊಂಡಿದ್ದನು.) 
 
12ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟವನ್ನೇರಿ ಬಂದಿದ್ದಾನೆಂಬ ವರ್ತಮಾನವು ಸೀಸೆರನಿಗೆ ಮುಟ್ಟಿದಾಗ 
 
13ಅವನು ತನ್ನ ಒಂಭೈನೂರು ಕಬ್ಬಿಣದ ರಥಗಳನ್ನೂ ಎಲ್ಲಾ ಸೈನ್ಯವನ್ನೂ ತೆಗೆದುಕೊಂಡು ಮ್ಲೇಚ್ಫರ ಹರೋಷೆತಿನಿಂದ ಕೀಷೋನ್ ಹಳ್ಳಕ್ಕೆ ಬಂದನು. 
 
14ಆಗ ದೆಬೋರಳು ಬಾರಾಕನಿಗೆ – ಏಳು, ಯೆಹೋವನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸುವ ದಿನವು ಇದೇ; ನಿಶ್ಚಯವಾಗಿ ಆತನು ತಾನೇ ನಿನ್ನ ಮುಂದಾಗಿ ಯುದ್ಧಕ್ಕೆ ಹೊರಡುವನು ಅನ್ನಲು ಬಾರಾಕನು ಬೇಗನೆ ಹತ್ತು ಸಾವಿರ ಜನರ ಸಹಿತವಾಗಿ ತಾಬೋರ್ ಬೆಟ್ಟದಿಂದಿಳಿದನು. 
 
15ಯೆಹೋವನು ಸೀಸೆರನನ್ನೂ ಅವನ ಎಲ್ಲಾ ಸೈನ್ಯರಥಗಳನ್ನೂ ಬಾರಾಕನ ಮುಂದೆ ಗಲಿಬಿಲಿಪಡಿಸಿ ಕತ್ತಿಗೆ ಬಲಿಕೊಟ್ಟನು. ಸೀಸೆರನು ರಥದಿಂದ ಹಾರಿ ಓಡಿಹೋದನು. 
 
16ಬಾರಾಕನು ಅವನ ಸೈನ್ಯರಥಗಳನ್ನು ಮ್ಲೇಚ್ಫರ ಹರೋಷೆತಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲಾ ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.
 
17ಹಾಚೋರಿನ ಅರಸನಾದ ಯಾಬೀನನಿಗೂ ಕೇನ್ಯನಾದ ಹೆಬೆರನ ಮನೆಯವರಿಗೂ ಸಮಾಧಾನವಿದ್ದದರಿಂದ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರದ ಕಡೆಗೆ ಹೋದನು. 
 
18ಯಾಯೇಲಳು ಹೊರಗೆ ಹೋಗಿ ಸೀಸೆರನನ್ನು ಎದುರುಗೊಂಡು ಅವನಿಗೆ – ಸ್ವಾಮೀ, ಒಳಗೆ ಬನ್ನಿರಿ; ಹೆದರಬೇಡಿರಿ, ನಮ್ಮಲ್ಲಿ ಬನ್ನಿರಿ ಅನ್ನಲು ಅವನು ಗುಡಾರದೊಳಗೆ ಹೋದನು. ಆಗ ಆಕೆಯು ಅವನನ್ನು ಕಂಬಳಿಯಿಂದ ಮುಚ್ಚಿದಳು. 
 
19ಅವನು ಆಕೆಗೆ – ದಯವಿಟ್ಟು ಸ್ವಲ್ಪ ನೀರನ್ನು ಕೊಡು, ನನಗೆ ಬಹಳ ದಾಹವಾಗಿದೆ ಅಂದನು; 
 
20ಆಕೆಯು ಬುದ್ದಲಿಯನ್ನು ಬಿಚ್ಚಿ ಹಾಲನ್ನು ಕುಡಿಯಕೊಟ್ಟು ಅವನನ್ನು ತಿರಿಗಿ ಮುಚ್ಚಿದಳು. ಅವನು ಆಕೆಗೆ – ನೀನು ಗುಡಾರದ ಬಾಗಲಲ್ಲೇ ನಿಂತಿರು; ಯಾರಾದರೂ ಬಂದು ಇಲ್ಲಿ ಒಬ್ಬ ಮನುಷ್ಯನಿರುತ್ತಾನೋ ಎಂದು ವಿಚಾರಿಸಿದರೆ ಇಲ್ಲ ಅನ್ನು ಎಂದು ಹೇಳಿದನು. 
 
21ಹೆಬೆರನ ಹೆಂಡತಿಯಾದ ಯಾಯೇಲಳು ಕೈಯಲ್ಲಿ ಗುಡಾರದ ಗೂಟವನ್ನೂ ಒಂದು ಕೊಡತಿಯನ್ನೂ ತೆಗೆದುಕೊಂಡು ಅವನು ಆಯಾಸದಿಂದ ಗಾಢನಿದ್ರೆಯಲ್ಲಿದ್ದಾಗ ಮೆಲ್ಲಗೆ ಹತ್ತಿರ ಹೋಗಿ ಅವನ ಕಣತಲೆಯಲ್ಲಿ ಆ ಗೂಟವನ್ನು ಹೊಡೆದು ನೆಲಕ್ಕೆ ನಾಟಿಸಿದಳು; ಅವನು ಸತ್ತನು. 
 
22ಅದೇ ಕ್ಷಣದಲ್ಲಿ ಸೀಸೆರನನ್ನು ಹಿಂದಟ್ಟುತ್ತಿದ್ದ ಬಾರಾಕನು ಅಲ್ಲಿ ಬಂದನು. ಯಾಯೇಲಳು ಹೊರಗೆ ಹೋಗಿ ಅವನನ್ನು ಎದುರುಗೊಂಡು – ಬಾ, ನೀನು ಹುಡುಕುವ ಮನುಷ್ಯನನ್ನು ತೋರಿಸುತ್ತೇನೆಂದು ಹೇಳಲು ಅವನು ಒಳಗೆ ಹೋಗಿ ಸೀಸೆರನು ಸತ್ತು ಬಿದ್ದದ್ದನ್ನು ಕಂಡನು. ಅವನ ತಲೆಯಲ್ಲಿ ಗೂಟವು ಜಡಿಯಲ್ಪಟ್ಟಿತ್ತು. 
 
23ಆ ದಿನದಲ್ಲಿ ದೇವರು ಕಾನಾನ್ಯರಾಜನಾದ ಯಾಬೀನನನ್ನು ಇಸ್ರಾಯೇಲ್ಯರ ಮುಂದೆ ತಗ್ಗಿಸಿದನು. 
 
24ಇಸ್ರಾಯೇಲ್ಯರ ಹಸ್ತವು ಹೆಚ್ಚು ಹೆಚ್ಚು ಬಲಗೊಂಡದರಿಂದ ಕಾನಾನ್ಯರ ಅರಸನಾದ ಯಾಬೀನನು ಪೂರ್ಣವಾಗಿ ಸೋತು ನಿರ್ನಾಮವಾದನು.
 
ನ್ಯಾಯಸ್ಥಾಪಕರು 5: 31 ದೇಶದಲ್ಲಿ ನಾಲ್ವತ್ತು ವರುಷ ಸಮಾಧಾನವಿತ್ತು.
 
ನ್ಯಾಯಸ್ಥಾಪಕರು 6
ಗಿದ್ಯೋನ
1ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದದರಿಂದ ಆತನು ಅವರನ್ನು ಏಳು ವರುಷಗಳ ಪರ್ಯಂತರ ಮಿದ್ಯಾನ್ಯರ ಕೈಗೆ ಒಪ್ಪಿಸಿದನು. 
 
2ಮಿದ್ಯಾನ್ಯರ ಹಸ್ತವು ಬಲಗೊಂಡದರಿಂದ ಇಸ್ರಾಯೇಲ್ಯರು ಅವರಿಗೆ ಹೆದರಿ ಪರ್ವತಗಳಲ್ಲಿ ಕಂದರಗುಹೆದುರ್ಗಗಳನ್ನು ಮಾಡಿ ಸೇರಿಕೊಂಡರು. 
 
3ಇವರು ಬೀಜ ಬಿತ್ತಿದ ತರುವಾಯ ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣ ದೇಶದವರೂ ಇವರಿಗೆ ವಿರೋಧವಾಗಿ ದಂಡೆತ್ತಿ ಬಂದು ಇಳುಕೊಂಡು 
 
4ಗಾಜಾ ಪ್ರಾಂತದವರೆಗಿದ್ದ ಎಲ್ಲಾ ಭೂಮಿಯ ಹುಟ್ಟುವಳಿಯನ್ನು ಹಾಳುಮಾಡಿಬಿಟ್ಟದರಿಂದ ಇವರಿಗೆ ದವಸ ಧಾನ್ಯವಾಗಲಿ ಕುರಿದನಕತ್ತೆಗಳಾಗಲಿ ಉಳಿಯಲೇ ಇಲ್ಲ. 
 
5ಆ ಶತ್ರುಗಳು ತಮ್ಮ ಕುರಿದನ ಗುಡಾರಗಳ ಸಹಿತವಾಗಿ ಮಿಡಿತೆಗಳಂತೆ ಗುಂಪುಗುಂಪಾಗಿ ಬಂದರು; ಅವರೂ ಅವರ ಒಂಟೆಗಳೂ ಅಸಂಖ್ಯ. ಆ ಗುಂಪೆಲ್ಲಾ ಬಂದು ದೇಶವನ್ನು ಹಾಳುಮಾಡುತ್ತಿತ್ತು. 
 
6ಇಸ್ರಾಯೇಲ್ಯರು ಮಿದ್ಯಾನ್ಯರ ದೆಸೆಯಿಂದ ಬಲು ಕುಗ್ಗಿ ಹೋಗಿ ಯೆಹೋವನಿಗೆ ಮೊರೆಯಿಟ್ಟರು.
 
7ಇಸ್ರಾಯೇಲ್ಯರು ಮಿದ್ಯಾನ್ಯರ ಕಾಟವನ್ನು ಸಹಿಸಲಾರದೆ ಯೆಹೋವನಿಗೆ ಮೊರೆಯಿಟ್ಟಾಗ 
 
8ಆತನು ಅವರ ಬಳಿಗೆ ಒಬ್ಬ ಪ್ರವಾದಿಯನ್ನು ಕಳುಹಿಸಿದನು. ಅವನು ಬಂದು ಅವರಿಗೆ – ಇಸ್ರಾಯೇಲ್ಯರ ದೇವರಾದ ಯೆಹೋವನ ಮಾತನ್ನು ಕೇಳಿರಿ; ಆತನು ಹೇಳುವದೇನಂದರೆ – ನೀವು ದಾಸತ್ವದಲ್ಲಿದ್ದ ಐಗುಪ್ತದಿಂದ ನಿಮ್ಮನ್ನು ಕರತಂದೆನು. 
 
9ಐಗುಪ್ತ್ಯರಿಂದ ನಿಮ್ಮನ್ನು ಬಿಡಿಸಿದ್ದಲ್ಲದೆ ಬೇರೆ ಎಲ್ಲಾ ಬಾಧಕರಿಂದಲೂ ನಿಮ್ಮನ್ನು ಬಿಡಿಸಿ ಅವರನ್ನು ನಿಮ್ಮೆದುರಿನಿಂದ ಅಟ್ಟಿಬಿಟ್ಟು ಅವರ ದೇಶವನ್ನು ನಿಮಗೆ ಕೊಟ್ಟೆನು. 
 
10ಯೆಹೋವನೆಂಬ ನಾನೇ ನಿಮ್ಮ ದೇವರಾಗಿದ್ದೇನೆಂದೂ ನೀವು ಅಮೋರಿಯರ ಮಧ್ಯದಲ್ಲಿ ವಾಸಿಸುವಾಗ ಅವರ ದೇವತೆಗಳನ್ನು ಪೂಜಿಸಬಾರದೆಂದೂ ಹೇಳಿದೆನು; ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ ಎಂಬದೇ ಅಂದನು.
 
11ಆಮೇಲೆ ಯೆಹೋವನ ದೂತನು ಬಂದು ಒಫ್ರದಲ್ಲಿದ್ದ ಏಲಾವೃಕ್ಷದ ಅಡಿಯಲ್ಲಿ ಕೂತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗನಾದ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಅಲ್ಲಿನ ದ್ರಾಕ್ಷೆಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. 
 
12ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ – ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ ಅಂದನು. 
 
13ಆಗ ಗಿದ್ಯೋನನು ಅವನಿಗೆ – ಸ್ವಾಮೀ, ಯೆಹೋವನು ನಮ್ಮ ಸಂಗಡ ಇದ್ದರೆ ನಮಗೆ ಇದೆಲ್ಲಾ ಯಾಕೆ ಸಂಭವಿಸಿತು? ನಮ್ಮ ಹಿರಿಯರು, ಯೆಹೋವನು ಅದ್ಭುತಗಳನ್ನು ನಡಿಸಿ ತಮ್ಮನ್ನು ಐಗುಪ್ತದಿಂದ ಬಿಡಿಸಿದನೆಂಬದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಆತನು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿಬಿಟ್ಟಿದ್ದಾನಲ್ಲಾ ಅನ್ನಲು 
 
14ಯೆಹೋವನು ಅವನನ್ನು ಚೆನ್ನಾಗಿ ನೋಡಿ – ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸು ಎಂದು ಹೇಳಿದನು. 
 
15ಆಗ ಗಿದ್ಯೋನನು ಆತನಿಗೆ – ಸ್ವಾಮೀ, ನಾನು ಇಸ್ರಾಯೇಲ್ಯರನ್ನು ರಕ್ಷಿಸುವದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು ಅನ್ನಲು 
 
16ಯೆಹೋವನು ಅವನಿಗೆ – ನಾನು ನಿನ್ನ ಸಂಗಡ ಇರುವದರಿಂದ ನೀನು ಮಿದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ ಅಂದನು. 
 
17ಅವನು ಆತನಿಗೆ – ಸ್ವಾಮೀ, ದಯವಿರಲಿ; ನನ್ನೊಂದಿಗೆ ಮಾತಾಡುತ್ತಿರುವ ತಾವು ಸ್ವಾಮಿಯವರೇ ಆಗಿದ್ದೀರೆಂಬದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು. 
 
18ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವವರೆಗೆ ತಾವು ಈ ಸ್ಥಳವನ್ನು ಬಿಡಬಾರದು ಎಂದು ಬಿನ್ನವಿಸಲು ಆತನು – ನೀನು ತಿರಿಗಿ ಬರುವವರೆಗೆ ನಾನು ಇಲ್ಲೇ ಇರುವೆನು ಅಂದನು. 
 
19ಗಿದ್ಯೋನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ಪಕ್ವಮಾಡಿ ಒಂದು ಏಫಾ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಮಾಂಸವನ್ನು ಪುಟ್ಟಿಯಲ್ಲಿಟ್ಟು ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು ಎಲ್ಲವನ್ನೂ ಏಲಾ ಮರದ ಕೆಳಗೆ ಆತನ ಮುಂದೆ ತಂದಿಟ್ಟನು. 
 
20ಆಗ ದೇವದೂತನು ಅವನಿಗೆ – ಮಾಂಸವನ್ನೂ ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಹೊಯ್ಯಿ ಅನ್ನಲು ಅವನು ಹಾಗೆಯೇ ಮಾಡಿದನು. 
 
21ಅನಂತರ ಯೆಹೋವನ ದೂತನು ತನ್ನ ಕೈಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ ಮಾಂಸಕ್ಕೂ ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು; ಯೆಹೋವನ ದೂತನು ಅದೃಶ್ಯನಾದನು. 
 
22ಆತನು ಯೆಹೋವನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು – ಅಯ್ಯೋ ಕರ್ತನೇ, ಯೆಹೋವನೇ, ಯೆಹೋವನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ ಎಂದು ಕೂಗಿದನು. 
 
23ಆದರೆ ಯೆಹೋವನು ಅವನಿಗೆ – ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವದಿಲ್ಲ ಅಂದನು. 
 
24ಗಿದ್ಯೋನನು ಅಲ್ಲಿ ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ಷಾಲೋಮ್ ಎಂದು ಹೆಸರಿಟ್ಟನು. ಅದು ಈವರೆಗೂ ಅಬೀಯೆಜೆರ್ ಗೋತ್ರದವರ ಒಫ್ರದಲ್ಲಿರುತ್ತದೆ.
 
 
25ಅದೇ ದಿನ ರಾತ್ರಿಯಲ್ಲಿ ಯೆಹೋವನು ಅವನಿಗೆ – ನೀನು ನಿನ್ನ ತಂದೆಯ ಹೋರಿಗಳಲ್ಲಿ ಒಂದು ಚಿಕ್ಕ ಹೋರಿಯನ್ನೂ ಏಳು ವರುಷದ ಇನ್ನೊಂದು ಹೋರಿಯನ್ನೂ ತೆಗೆದುಕೊಂಡುಹೋಗಿ ನಿನ್ನ ತಂದೆಯು ಕಟ್ಟಿರುವ ಬಾಳನ ಯಜ್ಞವೇದಿಯನ್ನು ಕೆಡವಿ ಅದರ ಬಳಿಯಲ್ಲಿರುವ ಅಶೇರವೆಂಬ ವಿಗ್ರಹ ಸ್ತಂಭವನ್ನು ಕಡಿದುಹಾಕಿ 
 
26ಈ ಗುಡ್ಡದ ಶಿಖರದಲ್ಲಿ ಯೆಹೋವನಿಗೋಸ್ಕರ ನೇಮಕವಾದ ರೀತಿಯಿಂದ ಒಂದು ಯಜ್ಞವೇದಿಯನ್ನು ಕಟ್ಟಿಸಿ ನೀನು ಕಡಿದು ಹಾಕಿದ ಅಶೇರ ವಿಗ್ರಹಸ್ತಂಭದಿಂದ ಬೆಂಕಿಮಾಡಿ ಆ ಎರಡನೆಯ ಹೋರಿಯನ್ನೂ ಸರ್ವಾಂಗಹೋಮವಾಗಿ ಸಮರ್ಪಿಸು ಎಂದು ಹೇಳಿದನು. 
 
27ಆಗ ಗಿದ್ಯೋನನು ತನ್ನ ಸೇವಕರಲ್ಲಿ ಹತ್ತು ಮಂದಿಯನ್ನು ಕರೆದುಕೊಂಡು ಹೋಗಿ ಯೆಹೋವನು ಹೇಳಿದಂತೆಯೇ ಮಾಡಿದನು. ಆದರೆ ಅವನು ತನ್ನ ಮನೆಯವರಿಗೂ ಊರಿನವರಿಗೂ ಹೆದರಿಕೊಂಡದರಿಂದ ಅದನ್ನು ಹಗಲಿನಲ್ಲಿ ಮಾಡದೆ ರಾತ್ರಿಯಲ್ಲಿ ಮಾಡಿದನು. 
 
28ಊರಿನ ಜನರು ಹೊತ್ತಾರೆಯಲ್ಲೆದ್ದು ಬಾಳನ ಯಜ್ಞವೇದಿಯು ಕೆಡವಲ್ಪಟ್ಟದ್ದನ್ನೂ ಅದರ ಸಮೀಪದಲ್ಲಿದ್ದ ವಿಗ್ರಹ ಸ್ತಂಭವು ಕಡಿಯಲ್ಪಟ್ಟದ್ದನ್ನೂ ಹೊಸದಾಗಿ ಕಟ್ಟಿದ ಯಜ್ಞವೇದಿಯ ಮೇಲೆ ಎರಡನೆಯ ಹೋರಿಯು ಯಜ್ಞವಾದದ್ದನ್ನೂ ಕಂಡು 
 
29ಹೀಗೆ ಮಾಡಿದವರಾರು ಎಂದು ಒಬ್ಬರನ್ನೊಬ್ಬರು ವಿಚಾರಿಸುವಲ್ಲಿ ಯೋವಾಷನ ಮಗನಾದ ಗಿದ್ಯೋನನೇ ಎಂದು ಗೊತ್ತಾಗಲು 
 
30ಆ ಜನರು ಯೋವಾಷನಿಗೆ – ನಿನ್ನ ಮಗನನ್ನು ಹೊರಗೆ ತೆಗೆದುಕೊಂಡು ಬಾ; ಅವನು ಸಾಯಬೇಕು; ಯಾಕಂದರೆ ಬಾಳನ ಯಜ್ಞವೇದಿಯನ್ನು ಕೆಡವಿ ಅದರ ಬಳಿಯಲ್ಲಿದ್ದ ಅಶೇರವಿಗ್ರಹಸ್ತಂಭವನ್ನು ಕಡಿದು ಹಾಕಿದ್ದಾನೆ ಅಂದರು. 
 
31ಯೋವಾಷನು ತನಗೆ ವಿರೋಧವಾಗಿ ನಿಂತವರೆಲ್ಲರಿಗೆ – ಬಾಳನಿಗೋಸ್ಕರ ನೀವು ವ್ಯಾಜ್ಯವಾಡಬೇಕೋ? ನೀವು ಅವನನ್ನು ರಕ್ಷಿಸಬೇಕೋ? ಅವನಿಗಾಗಿ ವ್ಯಾಜ್ಯವಾಡುವವರು ಈ ಹೊತ್ತೇ ಕೊಲ್ಲಲ್ಪಡಲಿ. ಅವನು ದೇವನಾಗಿದ್ದರೆ ತನ್ನ ಯಜ್ಞವೇದಿಯನ್ನು ಕೆಡವಿ ಬಿಟ್ಟದ್ದಕ್ಕಾಗಿ ತಾನೇ ವ್ಯಾಜ್ಯವಾಡಲಿ ಎಂದನು. 
 
32ಆ ದಿವಸದಲ್ಲಿ ಅವನು – ಬಾಳನು ತನ್ನ ಯಜ್ಞವೇದಿಯನ್ನು ಕೆಡವಿದವನೊಡನೆ ತಾನೇ ವ್ಯಾಜ್ಯವಾಡಲಿ ಎಂದು ಹೇಳಿದ್ದರಿಂದ ಗಿದ್ಯೋನನಿಗೆ ಯೆರುಬ್ಬಾಳನೆಂಬ ಹೆಸರಾಯಿತು.
 
33ಇಷ್ಟರಲ್ಲಿ ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣ ದೇಶದವರೂ ಕೂಡಿ ಹೊಳೆದಾಟಿ ಬಂದು ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿಕೊಂಡರು. 
 
34ಆಗ ಗಿದ್ಯೋನನು ಯೆಹೋವನ ಆತ್ಮನ ಆವೇಶವುಳ್ಳವನಾಗಿ ಕೊಂಬನ್ನು ಊದಲು ಅಬೀಯೆಜೆರನ ಗೋತ್ರದವರು ಬಂದು ಅವನನ್ನು ಹಿಂಬಾಲಿಸಿದರು. 
 
35ಅವನು ಉಳಿದ ಮನಸ್ಸೆಯವರ ಬಳಿಗೆ ದೂತರನ್ನು ಕಳುಹಿಸಲಾಗಿ ಅವರೂ ಕೂಡಿಬಂದರು. ಆಶೇರ್ ಜೆಬುಲೂನ್ ನಫ್ತಾಲಿ ಕುಲಗಳವರ ಬಳಿಗೆ ದೂತರನ್ನು ಕಳುಹಿಸಲು ಅವರೂ ಬಂದು ಯುದ್ಧಪ್ರಯಾಣಕ್ಕೋಸ್ಕರ ಸೇರಿಕೊಂಡರು.
 
36ಮತ್ತು ಗಿದ್ಯೋನನು ದೇವರಿಗೆ – ನೀನು ಹೇಳಿದಂತೆ ಇಸ್ರಾಯೇಲ್ಯರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೋ ಇಲ್ಲವೋ ಎಂಬದನ್ನು ತಿಳಿಯಪಡಿಸು. 
 
37ಇಗೋ, ನಾನು ಕಣದಲ್ಲಿ ಕುರಿಯ ತುಪ್ಪಟವನ್ನು ಇಡುತ್ತೇನೆ, ಅದರಲ್ಲಿ ಮಾತ್ರ ಮಂಜುಬಿದ್ದು ನೆಲವೆಲ್ಲಾ ಒಣಗಿದ್ದರೆ ನೀನು ಹೇಳಿದಂತೆಯೇ ಇಸ್ರಾಯೇಲ್ಯರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೆಂದು ತಿಳಿಯುವೆನು ಎಂಬದಾಗಿ ವಿಜ್ಞಾಪಿಸಿದನು. 
 
38ಹಾಗೆಯೇ ಆಯಿತು; ಅವನು ಮರುದಿವಸ ಹೊತ್ತಾರೆಯಲ್ಲಿ ಎದ್ದು ತುಪ್ಪಟವನ್ನು ಒತ್ತಿ ಹಿಂಡಲು ಮಂಜಿನ ನೀರು ಒಂದು ಬಟ್ಟಲು ತುಂಬಾ ಆಯಿತು. 
 
39ಅವನು ತಿರಿಗಿ ದೇವರಿಗೆ – ಸ್ವಾಮೀ, ಸಿಟ್ಟಾಗಬಾರದು; ಇನ್ನೊಂದು ಸಾರಿ ಮಾತಾಡುತ್ತೇನೆ. ಇನ್ನು ಒಂದೇ ಸಾರಿ ಈ ತುಪ್ಪಟದಿಂದ ನಿನ್ನನ್ನು ಪರೀಕ್ಷಿಸುವದಕ್ಕೆ ಅಪ್ಪಣೆಯಾಗಲಿ; ಈ ತುಪ್ಪಟವು ಮಾತ್ರವೇ ಒಣಗಿದ್ದು ನೆಲದ ಮೇಲೆಲ್ಲಾ ಹನಿಬಿದ್ದಿರಲಿ ಅಂದನು. 
 
40ಆ ರಾತ್ರಿ ದೇವರು ಹಾಗೆಯೇ ಮಾಡಿದನು; ತುಪ್ಪಟವು ಮಾತ್ರ ಒಣಗಿತ್ತು, ನೆಲದ ಮೇಲೆಲ್ಲಾ ಹನಿ ಬಿದ್ದಿತ್ತು.
ನ್ಯಾಯಸ್ಥಾಪಕರು 7
ಗಿದ್ಯೋನನು ಮುನ್ನೂರು ಜನರಿಂದ ಮಿದ್ಯಾನ್ಯರನ್ನು ಸೋಲಿಸಿದ್ದು
 
1ಯೆರುಬ್ಬಾಳನೆನಿಸಿಕೊಳ್ಳುವ ಗಿದ್ಯೋನನೂ ಅವನ ಸಂಗಡ ಇದ್ದ ಜನರೂ ಬೆಳಿಗ್ಗೆ ಎದ್ದು ಹೊರಟುಹೋಗಿ ಹರೋದಿನ ಬುಗ್ಗೆಯ ಬಳಿಯಲ್ಲಿ ಇಳುಕೊಂಡರು. ಇವರಿಗೆ ಉತ್ತರದಿಕ್ಕಿನಲ್ಲಿ ಮೋರೆ ಗುಡ್ಡದ ಹಿಂದಿನ ತಗ್ಗಿನಲ್ಲಿ ಮಿದ್ಯಾನ್ಯರ ದಂಡಿಳಿದಿತ್ತು.
 
2ಆಗ ಯೆಹೋವನು ಗಿದ್ಯೋನನಿಗೆ – ನಿನ್ನ ಸಂಗಡ ಇರುವ ಜನರು ಹೆಚ್ಚಾಗಿದ್ದಾರೆ; ಇವರ ಕೈಗೆ ಮಿದ್ಯಾನ್ಯರನ್ನು ಒಪ್ಪಿಸುವದು ನನಗೆ ಸರಿಯಾಗಿ ಕಾಣುವದಿಲ್ಲ; ಒಪ್ಪಿಸಿಕೊಟ್ಟರೆ ಸ್ವಹಸ್ತದಿಂದಲೇ ನಮಗೆ ರಕ್ಷಣೆಯುಂಟಾಯಿತೆಂದು ಹೆಚ್ಚಳ ಪಟ್ಟು ನನ್ನನ್ನು ಅಲಕ್ಷ್ಯಮಾಡಾರು. 
 
3ಆದದರಿಂದ ಎಲ್ಲಾ ಜನರಿಗೆ ಕೇಳಿಸುವಂತೆ – ಧೈರ್ಯವಿಲ್ಲದವರೂ ಅಂಜುವವರೂ ಈ ಗಿಲ್ಯಾದ್ ಪರ್ವತವನ್ನು ಬಿಟ್ಟು ಮನೆಗೆ ಹೋಗಲಿ ಎಂದು ಪ್ರಕಟಿಸು ಅಂದನು. ಹಾಗೆ ಮಾಡಲು ಇಪ್ಪತ್ತೆರಡು ಸಾವಿರ ಮಂದಿ ಹಿಂದಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು.
 
4ಯೆಹೋವನು ತಿರಿಗಿ ಗಿದ್ಯೋನನಿಗೆ – ನಿನ್ನ ಬಳಿಯಲ್ಲಿರುವ ಜನರು ಇನ್ನೂ ಹೆಚ್ಚಾಗಿದ್ದಾರೆ; ನೀನು ಅವರನ್ನು ಹಳ್ಳಕ್ಕೆ ಕರೆದುಕೊಂಡು ಹೋಗು; ಅಲ್ಲಿ ಅವರನ್ನು ನಿನಗೋಸ್ಕರ ಪರೀಕ್ಷಿಸುವೆನು. ಯಾರು ನಿನ್ನ ಸಂಗಡ ಹೋಗಬಹುದೆಂದು ಹೇಳುವೆನೋ ಅವರು ಮಾತ್ರ ಹೋಗಲಿ; ಯಾರಿಗೆ ಹೋಗಬಾರದೆಂದು ಹೇಳುವೆನೋ ಅವರು ಹೋಗದಿರಲಿ ಅಂದನು. 
 
5ಗಿದ್ಯೋನನು ಜನರನ್ನು ಹಳ್ಳಕ್ಕೆ ಕರೆದುಕೊಂಡು ಬಂದಾಗ ಯೆಹೋವನು ಅವನಿಗೆ – ನಾಯಿಯಂತೆ ನೀರನ್ನು ನಾಲಿಗೆಯಿಂದ ನೆಕ್ಕುವವರನ್ನೂ ಮೊಣಕಾಲೂರಿ ಕುಡಿಯುವವರನ್ನೂ ಬೇರೆ ಬೇರೆಯಾಗಿ ನಿಲ್ಲುಸು ಎಂದು ಹೇಳಿದನು. 
 
6ಕೈಯಿಂದ ನೀರನ್ನು ಬಾಯಿಗೆ ತೆಗೆದುಕೊಂಡು ನೆಕ್ಕಿದವರ ಸಂಖ್ಯೆ ಮುನ್ನೂರು. ಇತರ ಜನರು ಮೊಣಕಾಲೂರಿ ಕುಡಿದವರು. 
 
7ಆಗ ಯೆಹೋವನು ಗಿದ್ಯೋನನಿಗೆ – ನೀರನ್ನು ನೆಕ್ಕಿದ ಆ ಮುನ್ನೂರು ಮಂದಿಯಿಂದಲೇ ನಿಮಗೆ ಜಯವನ್ನುಂಟುಮಾಡಿ ಮಿದ್ಯಾನ್ಯರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು; ಉಳಿದವರು ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ ಎಂದು ಆಜ್ಞಾಪಿಸಿದನು. 
 
8ಗಿದ್ಯೋನನು ಆ ಮುನ್ನೂರು ಜನರನ್ನು ಇಟ್ಟುಕೊಂಡು ಉಳಿದ ಇಸ್ರಾಯೇಲ್ಯರನ್ನು ಅವರವರ ಗುಡಾರಗಳಿಗೆ ಕಳುಹಿಸಿದನು. ಕಳುಹಿಸುವಾಗ ಅವರ ಹತ್ತಿರ ಇದ್ದ ಆಹಾರವನ್ನೂ ಕೊಂಬುಗಳನ್ನೂ ತನ್ನ ಜನರಿಗೋಸ್ಕರ ತೆಗೆದುಕೊಂಡನು. ಮಿದ್ಯಾನ್ಯರ ದಂಡು ಕೆಳಗೆ ತಗ್ಗಿನಲ್ಲಿ ಇಳುಕೊಂಡಿತ್ತು.
 
9ಅದೇ ದಿವಸ ರಾತ್ರಿಯಲ್ಲಿ ಯೆಹೋವನು ಅವನಿಗೆ – ನೀನು ಎದ್ದು ಹೋಗಿ ಶತ್ರುಗಳ ಪಾಳೆಯದ ಮೇಲೆ ಬೀಳು; ಅದನ್ನು ನಿನಗೆ ಒಪ್ಪಿಸಿಕೊಟ್ಟಿದ್ದೇನೆ. 
 
10ಅವರ ಮೇಲೆ ಬೀಳುವದಕ್ಕೆ ಹೆದರುತ್ತೀಯಾದರೆ ಮೊದಲು ನಿನ್ನ ಸೇವಕನಾದ ಪುರನ ಸಂಗಡ ಅಲ್ಲಿಗೆ ಹೋಗಿ ಅವರು ಮಾತಾಡಿಕೊಳ್ಳುವದನ್ನು ಲಾಲಿಸು; 
 
11ಆಗ ಅವರ ಮೇಲೆ ಬೀಳುವದಕ್ಕೆ ನಿನಗೆ ಧೈರ್ಯ ಬರುವದು ಅಂದನು. ಗಿದ್ಯೋನನು ಅದರಂತೆಯೇ ತನ್ನ ಸೇವಕನಾದ ಪುರನ ಸಂಗಡ ಶತ್ರುಸೈನಿಕರ ಪಾಳೆಯದ ಕಡೇ ಭಾಗಕ್ಕೆ ಹೋದನು. 
 
12ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣ ದೇಶದವರೂ ಮಿಡಿತೆಗಳಂತೆ ಗುಂಪಾಗಿ ತಗ್ಗಿನಲ್ಲಿ ಇಳುಕೊಂಡಿದ್ದರು. ಅವರ ಒಂಟೆಗಳು ಸಮುದ್ರತೀರದ ಮರಳಿನಂತೆ ಅಸಂಖ್ಯವಾಗಿದ್ದವು. 
 
13ಗಿದ್ಯೋನನು ಬಂದಾಗ ಅವರಲ್ಲೊಬ್ಬನು ತನ್ನ ಜೊತೆಗಾರನಿಗೆ ಒಂದು ಕನಸನ್ನು ತಿಳಿಸುತ್ತಿದ್ದನು. ಅವನು – ಇಗೋ, ನಾನು ಒಂದು ಕನಸು ಕಂಡೆನು; ಅದರಲ್ಲಿ ಒಂದು ಜವೆಗೋದಿಯ ರೊಟ್ಟಿಯು ಉರುಳುತ್ತಾ ಮಿದ್ಯಾನ್ಯರ ಪಾಳೆಯದೊಳಗೆ ಬಂದು ಒಂದು ಡೇರೆಗೆ ತಗಲಿ ಅದನ್ನು ಅಡಿಮೇಲು ಮಾಡಿ ಬೀಳಿಸಿ ಬಿಟ್ಟಿತು ಎಂದು ಹೇಳಲು 
 
14ಅವನ ಜೊತೆಗಾರನು – ಇದು ಇಸ್ರಾಯೇಲ್ಯನಾದ ಯೋವಾಷನ ಮಗ ಗಿದ್ಯೋನನ ಕತ್ತಿಯೇ ಹೊರತು ಮತ್ತೊಂದಲ್ಲ; ದೇವರು ಮಿದ್ಯಾನ್ಯರನ್ನೂ ಅವರ ಪಾಳೆಯಗಳನ್ನೂ ಅವನ ಕೈಗೆ ಒಪ್ಪಿಸಿದನು ಅಂದನು.
 
15ಗಿದ್ಯೋನನು ಆ ಕನಸನ್ನೂ ಅದರ ಅರ್ಥವನ್ನೂ ಕೇಳಿದಾಗ ಯೆಹೋವನಿಗೆ ಅಡ್ಡಬಿದ್ದು ಇಸ್ರಾಯೇಲ್ಯರ ಪಾಳೆಯಕ್ಕೆ ಹಿಂದಿರುಗಿ ಬಂದು ಅವರಿಗೆ – ಏಳಿರಿ, ಯೆಹೋವನು ಮಿದ್ಯಾನ್ಯರ ಪಾಳೆಯವನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ ಅಂದನು. 
 
16ಮತ್ತು ಅವನು ಆ ಮುನ್ನೂರು ಮಂದಿಯನ್ನು ಮೂರು ಗುಂಪು ಮಾಡಿ ಪ್ರತಿಯೊಬ್ಬನ ಕೈಯಲ್ಲಿ ಕೊಂಬನ್ನೂ ಉರಿಯುವ ಪಂಜಡಗಿರುವ ಬರಿಕೊಡವನ್ನೂ ಕೊಟ್ಟು 
 
17ಅವರಿಗೆ – ನನ್ನನ್ನೇ ನೋಡುತ್ತಾ ನಾನು ಮಾಡುವ ಹಾಗೆ ಮಾಡಿರಿ. ನಾನು ಪಾಳೆಯದ ಅಂಚಿಗೆ ಬಂದಾಗ ಹೇಗೆ ಮಾಡುತ್ತೇನೋ ಹಾಗೆ ನೀವೂ ಮಾಡಬೇಕು. 
 
18ನಾನೂ ನನ್ನ ಸಂಗಡ ಇದ್ದವರೂ ಕೊಂಬುಗಳನ್ನು ಊದಲು ನೀವೂ ಪಾಳೆಯದ ಸುತ್ತಲೂ ಕೊಂಬನ್ನು ಊದಿ – ಯೆಹೋವನಿಗೆ ಜಯ, ಗಿದ್ಯೋನನಿಗೆ ಜಯ ಎಂದು ಕೂಗಿರಿ ಎಂದು ಹೇಳಿದನು.
 
19ರಾತ್ರಿಯ ಮಧ್ಯಯಾಮವು ಪ್ರಾರಂಭಿಸಿ ಕಾವಲುಗಾರರು ಬದಲಾದ ಕೂಡಲೆ ಗಿದ್ಯೋನನೂ ಅವನ ಸಂಗಡ ಇದ್ದ ನೂರು ಮಂದಿಯೂ [ಶತ್ರುಗಳ] ಪಾಳೆಯದ ಅಂಚಿಗೆ ಬಂದು ಕೊಂಬುಗಳನ್ನು ಊದಿ ಕೈಯಲ್ಲಿದ್ದ ಕೊಡಗಳನ್ನು ಒಡೆದುಬಿಟ್ಟರು. 
 
20ಕೂಡಲೆ ಮೂರು ಗುಂಪಿನವರೂ ಕೊಂಬುಗಳನ್ನು ಊದಿ ಕೊಡಗಳನ್ನು ಒಡೆದುಬಿಟ್ಟು ಎಡಗೈಯಲ್ಲಿ ಪಂಜುಗಳನ್ನೂ ಬಲಗೈಯಲ್ಲಿ ಊದುವ ಕೊಂಬುಗಳನ್ನೂ ಹಿಡಿದು – ಯೆಹೋವನ ಕತ್ತಿ, ಗಿದ್ಯೋನನ ಕತ್ತಿ ಎಂದು ಕೂಗಿ 
 
21ಪಾಳೆಯದ ಸುತ್ತಲೂ ತಮ್ಮ ತಮ್ಮ ಸ್ಥಳದಲ್ಲಿ ನಿಂತರು; ಪಾಳೆಯದವರಾದರೋ ಭ್ರಾಂತರಾಗಿ ಕೂಗುತ್ತಾ ಓಡಿಹೋಗ ಪ್ರಾರಂಭಿಸಿದರು. 
 
22ಆ ಮುನ್ನೂರು ಮಂದಿಯು ಕೊಂಬುಗಳನ್ನು ಊದುತ್ತಿರುವಲ್ಲಿ ಪಾಳೆಯದವರು ಒಬ್ಬರನ್ನೊಬ್ಬರು ಹತಮಾಡಿಕೊಳ್ಳುವಂತೆ ಯೆಹೋವನು ಮಾಡಿದನು. ಪಾಳೆಯದವರು ಚೆರೇರದ ದಾರಿಯಲ್ಲಿರುವ ಬೇತ್‍ಷಿಟ್ಟದವರೆಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾ ಪ್ರಾಂತ್ಯದವರೆಗೂ ಓಡಿಹೋದರು. 
 
23ಇಸ್ರಾಯೇಲ್ಯರಾದ ನಫ್ತಾಲಿ ಆಶೇರ್ ಕುಲಗಳವರೂ ಮನಸ್ಸೆಕುಲದ ಎಲ್ಲಾ ಜನರೂ ಕೂಡಿ ಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು. 
 
24ಇದಲ್ಲದೆ ಗಿದ್ಯೋನನು ಎಫ್ರಾಯೀಮ್ ಪರ್ವತಪ್ರದೇಶಗಳಿಗೆ ದೂತರನ್ನು ಅಟ್ಟಿ ಅಲ್ಲಿನವರಿಗೆ – ನೀವು ಮಿದ್ಯಾನ್ಯರಿಗೆ ವಿರೋಧವಾಗಿ ಹೊರಟು ಅವರು ಬೇತ್‍ಬಾರದವರೆಗಿರುವ ಪ್ರವಾಹಗಳನ್ನೂ ಯೊರ್ದನ್ ಹೊಳೆಯನ್ನೂ ದಾಟಿ ಹೋಗದಂತೆ ಅಡ್ಡಗಟ್ಟಿರಿ ಎಂದು ಹೇಳಿಸಿದನು. ಆಗ ಎಫ್ರಾಯೀಮ್ಯರೆಲ್ಲರೂ ಬೇತ್‍ಬಾರದವರೆಗಿರುವ ಪ್ರವಾಹಗಳಿಗೂ ಯೊರ್ದನ್‍ಹೊಳೆಗೂ ಬಂದು ಅವುಗಳ ಹಾಯಗಡಗಳನ್ನೆಲ್ಲಾ ಹಿಡಿದರು. 
 
25ಇದಲ್ಲದೆ ಅವರು ಮಿದ್ಯಾನ್ಯರ ನಾಯಕರಾದ ಓರೇಬ್, ಜೇಬ್ ಎಂಬವರನ್ನು ಹಿಡಿದು ಓರೇಬನನ್ನು ಓರೇಬನ ಬಂಡೆಯ ಮೇಲೆಯೂ ಜೇಬನನ್ನು ಜೇಬನ ದ್ರಾಕ್ಷೆಯ ಆಲೆಯಲ್ಲಿಯೂ ಕೊಂದು ಅವರ ತಲೆಗಳನ್ನು ತೆಗೆದುಕೊಂಡು ಮಿದ್ಯಾನ್ಯರನ್ನು ಹಿಂದಟ್ಟುತ್ತಾ ಯೊರ್ದನಿನ ಆಚೆಗೆ ಹೋಗಿ ಅಲ್ಲಿದ್ದ ಗಿದ್ಯೋನನಿಗೆ ಅವುಗಳನ್ನು ಒಪ್ಪಿಸಿದರು.
ನ್ಯಾಯಸ್ಥಾಪಕರು 8
ಜೆಬಹ, ಚಲ್ಮುನ್ನ
1ಅನಂತರ ಎಫ್ರಾಯೀಮ್ಯರು ಗಿದ್ಯೋನನಿಗೆ – ನೀನು ಹೀಗೆ ಯಾಕೆ ಮಾಡಿದಿ? ಮಿದ್ಯಾನ್ಯರೊಡನೆ ಯುದ್ಧಮಾಡುವದಕ್ಕೆ ಹೊರಟಾಗ ನಮ್ಮನ್ನೇಕೆ ಕರೆಯಲಿಲ್ಲ ಎಂದು ಉಗ್ರದಿಂದ ಕಲಹಮಾಡಿದರು. 
 
2ಆಗ ಅವನು ಅವರಿಗೆ – ನೀವು ಮಾಡಿದ ಕಾರ್ಯಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದೆನು? ಅಬೀಯೆಜೆರನವರು ಸುಗ್ಗಿಯಲ್ಲಿ ಕೂಡಿಸಿದ್ದಕ್ಕಿಂತಲೂ ಎಫ್ರಾಯೀಮ್ಯರು ಹಕ್ಕಲಾಯ್ದು ಕೂಡಿಸಿದ್ದು ಹೆಚ್ಚಾಗಿದೆಯಲ್ಲವೇ. 
 
3ದೇವರು ನಿಮ್ಮ ಕೈಯಲ್ಲಿ ಮಿದ್ಯಾನ್ಯರ ನಾಯಕರಾದ ಓರೇಬ್ ಜೇಬರನ್ನು ಒಪ್ಪಿಸಿಕೊಟ್ಟಿದ್ದಾನಲ್ಲಾ! ಇದಕ್ಕೆ ಸಮಾನವಾದದ್ದನ್ನು ನಾನೇನು ಮಾಡಿದ್ದೇನೆ ಎಂದನು. ಈ ಮಾತುಗಳನ್ನು ಕೇಳಿದಾಗ ಅವರ ಸಿಟ್ಟಿಳಿಯಿತು.
ಗಿದ್ಯೋನನು ಯೊರ್ದನಿನ ಆಚೆಯಲ್ಲಿ ಮಿದ್ಯಾನ್ಯರನ್ನು ಸೋಲಿಸಿದ್ದು
 
4ಗಿದ್ಯೋನನೂ ಅವನ ಸಂಗಡ ಇದ್ದ ಮುನ್ನೂರು ಮಂದಿಯೂ ಬಹಳ ದಣಿದವರಾಗಿದ್ದರೂ ಹಿಂದಟ್ಟುತ್ತಾ ಯೊರ್ದನನ್ನು ದಾಟಿ [ಸುಖೋತಿಗೆ] ಬಂದರು. 
 
5ಗಿದ್ಯೋನನು ಸುಖೋತಿನವರಿಗೆ – ದಯವಿಟ್ಟು ನನ್ನ ಜೊತೆಯಲ್ಲಿ ಬಂದಿರುವವರಿಗೆ ಕೆಲವು ರೊಟ್ಟಿಗಳನ್ನು ಕೊಡಿರಿ, ಅವರು ಬಹಳ ದಣಿದಿದ್ದಾರೆ; ನಾನು ಮಿದ್ಯಾನ್ಯರ ಅರಸರಾದ ಜೆಬಹ, ಚಲ್ಮುನ್ನ ಎಂಬವರನ್ನು ಹಿಂದಟ್ಟುತ್ತಾ ಇದ್ದೇನೆ ಅಂದನು. 
 
6ಆದರೆ ಸುಖೋತಿನ ಮುಖಂಡರು ಅವನಿಗೆ – ನಾವು ನಿನ್ನ ಸೈನಿಕರಿಗೆ ರೊಟ್ಟಿಗಳನ್ನು ಕೊಡುವದಕ್ಕೆ ಜೆಬಹ, ಚಲ್ಮುನ್ನ ಎಂಬವರನ್ನು ಕೈಕಟ್ಟಿ ವಶಮಾಡಿಕೊಂಡಿದ್ದೀಯೋ ಎಂದು ಉತ್ತರಕೊಟ್ಟರು. 
 
7ಆಗ ಗಿದ್ಯೋನನು ಅವರಿಗೆ – ಒಳ್ಳೇದು, ಯೆಹೋವನು ಜೆಬಹ, ಚಲ್ಮುನ್ನ ಎಂಬವರನ್ನು ನನ್ನ ಕೈಗೆ ಒಪ್ಪಿಸಿ ಕೊಟ್ಟ ತರುವಾಯ ನಾನು ನಿಮ್ಮನ್ನು ಜಾಲಿಮುಳ್ಳುಗಳಿಂದಲೂ ಕಾರೆಗಿಡಗಳಿಂದಲೂ ಹೊಡಿಸುವೆನು ಎಂದು ಹೇಳಿದನು. 
 
8ಅವನು ಅಲ್ಲಿಂದ ಪೆನೂವೇಲಿಗೆ ಬಂದು ಅಲ್ಲಿನವರನ್ನು ಅದೇ ಪ್ರಕಾರ ಬಿನ್ನವಿಸಲು ಅವರೂ ಸುಖೋತಿನವರಂತೆಯೇ ಉತ್ತರಕೊಟ್ಟರು. 
 
9ಗಿದ್ಯೋನನು ಅವರಿಗೆ – ನಾನು ಸುರಕ್ಷಿತವಾಗಿ ಹಿಂದಿರುಗಿ ಬಂದಾಗ ಈ ಬುರುಜನ್ನು ಕೆಡವಿಬಿಡುವೆನು ಅಂದನು.
 
10ಜೆಬಹ, ಚಲ್ಮುನ್ನ ಎಂಬವರು ಸುಮಾರು ಹದಿನೈದು ಸಾವಿರ ಮಂದಿ ಸೈನಿಕರೊಡನೆ ಕರ್ಕೋರಿನಲ್ಲಿ ಇಳುಕೊಂಡಿದ್ದರು. ಮೂಡಣ ದೇಶದವರ ಸೈನ್ಯದಲ್ಲಿ ಲಕ್ಷದ ಇಪ್ಪತ್ತು ಸಾವಿರ ಭಟರು ಹತರಾಗಿ ಉಳಿದವರು ಇಷ್ಟೇ ಮಂದಿ. 
 
11ಗಿದ್ಯೋನನು ಕಾಡುಗೊಲ್ಲರ ಪ್ರದೇಶಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳುಕೊಂಡಿದ್ದ ಆ ಪಾಳೆಯದ ಮೇಲೆ ಬಿದ್ದನು. 
 
12ಜೆಬಹನೂ ಚಲ್ಮುನ್ನನೂ ಓಡಿ ಹೋಗಲಾಗಿ ಅವರನ್ನು ಹಿಂದಟ್ಟಿ ಹಿಡಿದು ಅವರ ಸೈನ್ಯವನ್ನು ಚದರಿಸಿ ಬಿಟ್ಟನು.
 
13ಯೋವಾಷನ ಮಗನಾದ ಗಿದ್ಯೋನನು ಯುದ್ಧದಿಂದ ಹೆರೆಸಿನ ಗಟ್ಟದ ಮಾರ್ಗವಾಗಿ ಹಿಂದಿರುಗಿ ಬಂದು 
 
14ಸುಖೋತಿನ ಒಬ್ಬ ಯೌವನಸ್ಥನನ್ನು ಹಿಡಿದು ಆ ಊರಿನ ಮುಖಂಡರೂ ಹಿರಿಯರೂ ಯಾರಾರೆಂದು ವಿಚಾರಿಸಿ ಎಪ್ಪತ್ತೇಳು ಮಂದಿಯ ಹೆಸರುಗಳನ್ನು ಬರಿಸಿಕೊಂಡನು. 
 
15ಅನಂತರ ಅವನು ಸುಖೋತಿನವರ ಬಳಿಗೆ ಹೋಗಿ ಅವರಿಗೆ – ನಾವು ದಣಿದಿರುವ ನಿನ್ನ ಸೈನಿಕರಿಗೋಸ್ಕರ ರೊಟ್ಟಿಗಳನ್ನು ಕೊಡುವದಕ್ಕೆ ಜೆಬಹ, ಚಲ್ಮುನ್ನ ಎಂಬವರನ್ನು ಕೈಕಟ್ಟಿ ಸ್ವಾಧೀನ ಮಾಡಿಕೊಂಡಿದ್ದೀಯೋ ಎಂದು ನನ್ನನ್ನು ನಿಂದಿಸಿದಿರಲ್ಲಾ; 
 
16ನೋಡಿರಿ, ಅವರು ಇಲ್ಲಿರುತ್ತಾರೆ ಅಂದು ಊರಿನ ಹಿರಿಯರನ್ನೂ ಮುಖಂಡರನ್ನೂ ಜಾಲಿ ಮುಳ್ಳುಗಳಿಂದಲೂ ಕಾರೆಗಿಡಗಳಿಂದಲೂ ಹೊಡಿಸಿ ಸುಖೋತಿನವರಿಗೆ ಬುದ್ಧಿಕಲಿಸಿದನು. 
 
17ಮತ್ತು ಪೆನೂವೇಲಿನ ಬುರುಜನ್ನು ಕೆಡವಿಬಿಟ್ಟು ಆ ಊರಿನ ಜನರನ್ನು ಹತಿಸಿದನು.
 
18ಮತ್ತು ಅವನು ಜೆಬಹ, ಚಲ್ಮುನ್ನ ಎಂಬವರನ್ನು – ನೀವು ತಾಬೋರದಲ್ಲಿ ಕೊಂದು ಹಾಕಿದ ಮನುಷ್ಯರು ಹೇಗಿದ್ದರು ಎಂದು ಕೇಳಲಾಗಿ ಅವರು ಅವನಿಗೆ – ನಿನ್ನ ಹಾಗೆಯೇ ಇದ್ದರು; ಎಲ್ಲರೂ ರೂಪದಲ್ಲಿ ರಾಜಪುತ್ರರಂತಿದ್ದರು ಎಂದು ಉತ್ತರಕೊಟ್ಟರು. 
 
19ಆಗ ಅವನು – ಅವರು ನನ್ನ ತಾಯಿಯ ಮಕ್ಕಳು; ನನ್ನ ಸಹೋದರರು; ಯೆಹೋವನಾಣೆ, ನೀವು ಅವರನ್ನು ಉಳಿಸಿದ್ದರೆ ನಾನು ನಿಮ್ಮನ್ನು ಕೊಲ್ಲುತ್ತಿದ್ದಿಲ್ಲ ಎಂದು ಹೇಳಿ 
 
20ತನ್ನ ಹಿರೀ ಮಗನಾದ ಎತೆರನಿಗೆ – ನೀನೆದ್ದು ಇವರನ್ನು ಕೊಂದುಹಾಕು ಅಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ. 
 
21ಆಗ ಜೆಬಹನೂ ಚಲ್ಮುನ್ನನೂ ಗಿದ್ಯೋನನಿಗೆ – ನೀನೇ ಎದ್ದು ಬಂದು ನಮ್ಮ ಮೇಲೆ ಬೀಳು; ಪ್ರಾಯಕ್ಕೆ ತಕ್ಕಂತೆ ಪುರುಷನಿಗೆ ಬಲವಿರುತ್ತದಲ್ಲಾ ಅನ್ನಲು ಅವನೆದ್ದು ಜೆಬಹ, ಚಲ್ಮುನ್ನ ಎಂಬವರನ್ನು ಕೊಂದುಹಾಕಿ, ಅವರ ಒಂಟೆಗಳ ಕೊರಳಲ್ಲಿದ್ದ ಅರ್ಧಚಂದ್ರಾಕಾರದ ಆಭರಣಗಳನ್ನು ತೆಗೆದುಕೊಂಡನು.
ಗಿದ್ಯೋನನ ಚರಿತ್ರೆಯ ಸಮಾಪ್ತಿ
 
ಗಿದ್ಯೂನನ ವಸ್ತ್ರ
22ತರುವಾಯ ಇಸ್ರಾಯೇಲ್ಯರು ಗಿದ್ಯೋನನಿಗೆ – ನೀನು ನಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದ್ದೀಯಲ್ಲಾ; ನೀನೂ ನಿನ್ನ ಮಗನೂ ಮೊಮ್ಮಗನೂ ವಂಶಪಾರಂಪರ್ಯವಾಗಿ ನಮ್ಮ ಮೇಲೆ ಅರಸರಾಗಿರಬೇಕು ಅನ್ನಲು 
 
23ಅವನು ಅವರಿಗೆ – ನಾನಾಗಲಿ ನನ್ನ ಮಗನಾಗಲಿ ನಿಮ್ಮನ್ನು ಆಳುವದಿಲ್ಲ; ಯೆಹೋವನೇ ನಿಮ್ಮ ಅರಸನಾಗಿರುವನು. 
 
24ಆದರೆ ನಿಮಗೆ ಒಂದು ಬಿನ್ನಹ ಮಾಡುತ್ತೇನೆ; ಪ್ರತಿಯೊಬ್ಬನು ತಾನು ಕೊಳ್ಳೆ ಹೊಡೆದ ಮುರುವುಗಳನ್ನು ನನಗೆ ಕೊಡಲಿ ಅಂದನು. ಮಿದ್ಯಾನ್ಯರು ಇಷ್ಮಾಯೇಲ್ಯರಾಗಿದ್ದದರಿಂದ ಬಂಗಾರದ ಮುರುವುಗಳನ್ನು ಹಾಕಿಕೊಳ್ಳುತ್ತಿದ್ದರು. ಗಿದ್ಯೋನನ ಬಿನ್ನಹಕ್ಕೆ ಇಸ್ರಾಯೇಲ್ಯರು – 
 
25ನಾವು ಸಂತೋಷದಿಂದ ಕೊಡುವೆವು ಎಂದು ಹೇಳಿ ಅಲ್ಲಿ ಒಂದು ಬಟ್ಟೆಯನ್ನು ಹಾಸಿ ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಮುರುವುಗಳನ್ನು ಇಟ್ಟುಬಿಟ್ಟರು. 
 
26ಗಿದ್ಯೋನನಿಗೆ ಮೊದಲೇ ದೊರಕಿದ್ದ ಅರ್ಧಚಂದ್ರಾಕಾರದ ಆಭರಣ, ಕುಂಡಲ, ಮಿದ್ಯಾನ್ ರಾಜರು ಹೊದ್ದುಕೊಂಡಿದ್ದ ರಕ್ತಾಂಬರ, ಅವರ ಒಂಟೆಗಳ ಕಂಠಮಾಲೆ ಇವುಗಳ ಹೊರತಾಗಿ ಅವನು ಇಸ್ರಾಯೇಲ್ಯರಿಂದ ಕೇಳಿ ತೆಗೆದುಕೊಂಡ ಮುರುವುಗಳ ಬಂಗಾರವೇ ಸಾವಿರದ ಏಳುನೂರು ತೊಲೆ ತೂಕವಾಗಿತ್ತು. 
 
27ಈ ಬಂಗಾರದಿಂದ ಗಿದ್ಯೋನನು ಒಂದು ಏಫೋದನ್ನು ಮಾಡಿಸಿ ಅದನ್ನು ತನ್ನ ಊರಾದ ಒಫ್ರದಲ್ಲಿಟ್ಟನು. ಅದರಿಂದ ಇಸ್ರಾಯೇಲ್ಯರೆಲ್ಲರೂ ದೇವದ್ರೋಹಿಗಳಾದರು; ಅದು ಗಿದ್ಯೋನನಿಗೂ ಅವನ ಮನೆಯವರಿಗೂ ಉರುಲಾಯಿತು. 
 
ಗಿದ್ಯೂನನ ಮರಣ
 
28ಮಿದ್ಯಾನ್ಯರು ಇಸ್ರಾಯೇಲ್ಯರ ಮುಂದೆ ಬಹಳವಾಗಿ ತಗ್ಗಿಸಲ್ಪಟ್ಟರು; ಅವರು ತಿರಿಗಿ ತಲೆಯೆತ್ತಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಾಲ್ವತ್ತು ವರುಷಗಳ ಪರ್ಯಂತ ದೇಶದಲ್ಲಿ ಸಮಾಧಾನವಿತ್ತು.
 
29ಯೋವಾಷನ ಮಗ ಯೆರುಬ್ಬಾಳನು ಹೋಗಿ ತನ್ನ ಮನೆಯಲ್ಲಿ ವಾಸವಾಗಿದ್ದನು. 
 
30ಗಿದ್ಯೋನನಿಗೆ ಅನೇಕ ಮಂದಿ ಹೆಂಡತಿಯರಿದ್ದದರಿಂದ ಅವನಿಗೆ ಎಪ್ಪತ್ತು ಮಂದಿ ಗಂಡು ಮಕ್ಕಳು ಹುಟ್ಟಿದರು. 
 
31ಅವನು ಶೆಕೆಮಿನಲ್ಲಿದ್ದ ತನ್ನ ಉಪಪತ್ನಿಯಲ್ಲಿ ಇನ್ನೊಬ್ಬ ಮಗನು ಹುಟ್ಟಲು ಅವನಿಗೆ ಅಬೀಮೆಲೆಕನೆಂದು ಹೆಸರಿಟ್ಟನು. 
 
32ಯೋವಾಷನ ಮಗನಾದ ಗಿದ್ಯೋನನು ದಿನತುಂಬಿದ ಮುದುಕನಾಗಿ ಮರಣ ಹೊಂದಲು ಅವನ ಶವವನ್ನು ಅಬೀಯೆಜೆರೀಯರ ಒಫ್ರದಲ್ಲಿದ್ದ ಒಂದು ಸಮಾಧಿಯಲ್ಲಿ ಹೂಣಿಟ್ಟರು. ಆ ಸಮಾಧಿಯು ಅವನ ತಂದೆಯಾದ ಯೋವಾಷನದಾಗಿತ್ತು. 
 
33ಗಿದ್ಯೋನನು ಸತ್ತನಂತರ ಇಸ್ರಾಯೇಲ್ಯರು ದೇವದ್ರೋಹಿಗಳಾಗಿ ಬಾಳನ ಪ್ರತಿಮೆಗಳನ್ನು ಪೂಜಿಸಿದರು; ಬಾಳ್‍ಬೆರೀತನನ್ನು ತಮಗೆ ದೇವರು ಮಾಡಿಕೊಂಡರು. 
 
34ಸುತ್ತಣ ಎಲ್ಲಾ ಶತ್ರುಗಳಿಂದ ತಮ್ಮನ್ನು ಬಿಡಿಸಿದ ದೇವರಾದ ಯೆಹೋವನನ್ನು ಮರೆತುಬಿಟ್ಟರು. 
 
35ಯೆರುಬ್ಬಾಳನೆಂಬ ಗಿದ್ಯೋನನು ತಮಗೆ ಮಾಡಿದ ಉಪಕಾರಗಳನ್ನು ನೆನಸಲಿಲ್ಲ; ಅವನ ಮನೆಯವರಿಗೆ ದಯೆತೋರಿಸಲಿಲ್ಲ.
ನ್ಯಾಯಸ್ಥಾಪಕರು 10
ತೋಲಾ, ಯಾಯೀರ್ ಎಂಬ ನ್ಯಾಯಸ್ಥಾಪಕರು
 
1ಅಬೀಮೆಲೆಕನ ತರುವಾಯ ಇಸ್ಸಾಕಾರ್ ಕುಲದ ಪೂವನ ಮಗನೂ ದೋದೋವಿನ ಮೊಮ್ಮಗನೂ ಆಗಿದ್ದ ತೋಲನು ಎದ್ದು ಇಸ್ರಾಯೇಲ್ಯರನ್ನು ರಕ್ಷಿಸಿದನು. ಅವನು ಎಫ್ರಾಯೀಮ್ ಬೆಟ್ಟದ ಸೀಮೆಯ ಶಾಮೀರೆಂಬ ಊರಲ್ಲಿ ವಾಸವಾಗಿದ್ದನು. 
 
2ಇಪ್ಪತ್ತಮೂರು ವರುಷಗಳವರೆಗೆ ಇಸ್ರಾಯೇಲ್ಯರನ್ನು ಪಾಲಿಸಿದನಂತರ ಸತ್ತು ಶಾಮೀರಿನಲ್ಲಿ ಹೂಣಲ್ಪಟ್ಟನು. 
 
3ಅವನ ತರುವಾಯ ಗಿಲ್ಯಾದ್ಯನಾದ ಯಾಯೀರನು ಎದ್ದು ಇಸ್ರಾಯೇಲ್ಯರನ್ನು ಇಪ್ಪತ್ತೆರಡು ವರುಷ ಪಾಲಿಸಿದನು. 
 
4ಇವನಿಗೆ ಮೂವತ್ತು ಮಂದಿ ಮಕ್ಕಳಿದ್ದರು. ಇವರಿಗೆ ಮೂವತ್ತು ಸವಾರೀ ಕತ್ತೆಗಳೂ ಗಿಲ್ಯಾದ್ ದೇಶದಲ್ಲಿ ಮೂವತ್ತು ಊರುಗಳೂ ಇದ್ದವು. ಅವುಗಳಿಗೆ ಇಂದಿನವರೆಗೂ ಯಾಯೀರಿನ ಗ್ರಾಮಗಳೆಂದು ಹೆಸರಿದೆ. 
 
5ಯಾಯೀರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು.
ಅಮ್ಮೋನಿಯರ ಕಾಟವು
 
6ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು; ಅವರು ಆತನನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನೂ ಅರಾಮ್ಯರು, ಚೀದೋನ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಇವರ ದೇವತೆಗಳನ್ನೂ ಪೂಜಿಸಹತ್ತಿ ಯೆಹೋವನನ್ನು ಬಿಟ್ಟೇ ಬಿಟ್ಟರು. 
 
7ಆದದರಿಂದ ಆತನು ಇಸ್ರಾಯೇಲ್ಯರ ಮೇಲೆ ಕೋಪವುಳ್ಳವನಾಗಿ ಅವರನ್ನು ಫಿಲಿಷ್ಟಿಯರ ಮತ್ತು ಅಮ್ಮೋನಿಯರ ಕೈಗೆ ಒಪ್ಪಿಸಿಬಿಟ್ಟನು. 
 
8ಇವರು ಆ ವರುಷದಿಂದ ಹದಿನೆಂಟು ವರುಷಗಳವರೆಗೆ ಯೊರ್ದನಿನ ಆಚೆ ಗಿಲ್ಯಾದಿನಲ್ಲಿದ್ದ ಇಸ್ರಾಯೇಲ್ಯರನ್ನು ಬಹಳವಾಗಿ ಪೀಡಿಸುತ್ತಾ ಕುಗ್ಗಿಸುತ್ತಾ ಇದ್ದರು. ಈ ದೇಶವು ಮೊದಲು ಅಮೋರಿಯರದಾಗಿತ್ತು. 
 
9ಇದಲ್ಲದೆ ಅಮ್ಮೋನಿಯರು ಯೊರ್ದನ್ ಹೊಳೆಯನ್ನು ದಾಟಿ ಯೆಹೂದ ಬೆನ್ಯಾಮೀನ್ ಎಫ್ರಾಯೀಮ್ ಕುಲಗಳೊಡನೆ ಯುದ್ಧಮಾಡಿದ್ದರಿಂದ ಇಸ್ರಾಯೇಲ್ಯರಿಗೆ ಬಹಳ ಕಷ್ಟವಾಯಿತು. 
 
10ಆಗ ಅವರು ಯೆಹೋವನಿಗೆ – ನಾವು ನಮ್ಮ ದೇವರಾದ ನಿನ್ನನ್ನು ಬಿಟ್ಟು ಬಾಳನ ಪ್ರತಿಮೆಗಳನ್ನು ಪೂಜಿಸಿ ನಿನಗೆ ವಿರುದ್ಧವಾಗಿ ಪಾಪ ಮಾಡಿದ್ದೇವೆ ಎಂದು ಮೊರೆಯಿಡಲು ಆತನು ಅವರಿಗೆ – 
 
11ಐಗುಪ್ತ, ಅಮೋರಿಯ, ಅಮ್ಮೋನಿಯ, ಫಿಲಿಷ್ಟಿಯ, ಚೀದೋನ್ಯ, ಅಮಾಲೇಕ್ಯ, ಮಾವೋನ್ಯ 
 
12ಇವೇ ಮೊದಲಾದ ಜನಾಂಗಗಳು ನಿಮ್ಮನ್ನು ಪೀಡಿಸಿದಾಗ ನೀವು ನನಗೆ ಮೊರೆಯಿಟ್ಟಿರಿ; ನಾನು ಅವುಗಳಿಂದ ನಿಮ್ಮನ್ನು ಬಿಡಿಸಿದರೂ 
 
13ನೀವು ತಿರಿಗಿ ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುತ್ತಾ ಬಂದಿರಿ; ಆದದರಿಂದ ನಾನು ಇನ್ನು ಮುಂದೆ ನಿಮ್ಮನ್ನು ರಕ್ಷಿಸುವದೇ ಇಲ್ಲ. 
 
14ಹೋಗಿ ನೀವು ಆರಿಸಿಕೊಂಡ ದೇವತೆಗಳಿಗೆ ಮೊರೆಯಿಡಿರಿ; ಅವು ನಿಮ್ಮ ಈ ಇಕ್ಕಟ್ಟಿನಲ್ಲಿ ಸಹಾಯ ಮಾಡಲಿ ಅಂದನು. 
 
15ಇಸ್ರಾಯೇಲ್ಯರು ತಿರಿಗಿ ಯೆಹೋವನಿಗೆ – ನಾವು ಪಾಪ ಮಾಡಿದ್ದೇವೆ; ನಿನಗೆ ಸರಿ ಕಾಣುವ ಪ್ರಕಾರ ನಮಗೆ ಮಾಡು; ಆದರೆ ಈ ಸಾರಿ ಹೇಗೂ ನಮ್ಮನ್ನು ರಕ್ಷಿಸಬೇಕು ಎಂದು ಮೊರೆಯಿಟ್ಟು ಅನ್ಯದೇವತೆಗಳನ್ನು ತಮ್ಮಲ್ಲಿಂದ ತೆಗೆದುಹಾಕಿ ಯೆಹೋವನನ್ನು ಸೇವಿಸುವವರಾದರು. 
 
16ಆಗ ಆತನ ಮನಸ್ಸು ಇಸ್ರಾಯೇಲ್ಯರ ಸಂಕಟದ ನಿಮಿತ್ತ ಬಲು ನೊಂದಿತು.
 
17ಅಮ್ಮೋನಿಯರು ದಂಡೆತ್ತಿ ಬಂದು ಗಿಲ್ಯಾದಿನಲ್ಲಿ ಇಳುಕೊಳ್ಳಲು ಇಸ್ರಾಯೇಲ್ಯರು ಕೂಡಿ ಮಿಚ್ಪೆಯಲ್ಲಿ ಪಾಳೆಯಮಾಡಿಕೊಂಡರು. 
 
18ಗಿಲ್ಯಾದಿನ ಜನರೂ ಅಧಿಪತಿಗಳೂ – ನಮ್ಮಲ್ಲಿ ಅಮ್ಮೋನಿಯರೊಡನೆ ಯುದ್ಧಕ್ಕೆ ಕೈಹಾಕುವವನಾವನು? ಅಂಥವನನ್ನು ಗಿಲ್ಯಾದಿನವರೆಲ್ಲರ ಮೇಲೆ ನಾಯಕನನ್ನಾಗಿ ಮಾಡೇವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು.
ನ್ಯಾಯಸ್ಥಾಪಕರು 11
1ಗಿಲ್ಯಾದ್ಯನಾದ ಯೆಪ್ತಾಹನು ಮಹಾಪರಾಕ್ರಮಿಯಾಗಿದ್ದನು. ಅವನು ಗಿಲ್ಯಾದನಿಗೆ ಒಬ್ಬ ಸೂಳೆಯಲ್ಲಿ ಹುಟ್ಟಿದವನು. 
 
2ಗಿಲ್ಯಾದನಿಗೆ ಹೆಂಡತಿಯಲ್ಲಿಯೂ ಮಕ್ಕಳು ಹುಟ್ಟಿದರು. ಇವರು ದೊಡ್ಡವರಾದ ಮೇಲೆ ಯೆಪ್ತಾಹನಿಗೆ – ನೀನು ಪರಸ್ತ್ರೀಯಿಂದ ಹುಟ್ಟಿದವನು; ಆದದರಿಂದ ನಿನಗೆ ನಮ್ಮ ತಂದೆಯ ಮನೆಯಲ್ಲಿ ಬಾಧ್ಯತೆ ಸಿಕ್ಕಲಾರದು ಎಂದು ಹೇಳಿ ಅವನನ್ನು ಹೊರಗೆ ಹಾಕಿದರು. 
 
3ಅವನು ತನ್ನ ಸಹೋದರರನ್ನು ಬಿಟ್ಟು ಟೋಬ್ ದೇಶಕ್ಕೆ ಹೋಗಲು ಅಲ್ಲಿನ ಕಾಕಪೋಕರು ಕೂಡಿ ಅವನನ್ನು ಹಿಂಬಾಲಿಸಿದರು.
 
4ಇಸ್ರಾಯೇಲ್ಯರಿಗೆ ವಿರೋಧವಾಗಿ ಬಂದ ಅಮ್ಮೋನಿಯರು ಸ್ವಲ್ಪದಿನಗಳಾದ ಮೇಲೆ ಯುದ್ಧವನ್ನು ಪ್ರಾರಂಭಿಸಿದರು. 
 
5ಆಗ ಗಿಲ್ಯಾದಿನ ಹಿರಿಯರು ಯೆಪ್ತಾಹನನ್ನು ಟೋಬ್‍ದೇಶದಿಂದ ಕರೆದುಕೊಂಡು ಬರುವದಕ್ಕಾಗಿ ಅಲ್ಲಿಗೆ ಹೋಗಿ ಅವನಿಗೆ – 
 
6ನಾವು ಅಮ್ಮೋನಿಯರೊಡನೆ ಯುದ್ಧಮಾಡುವ ಹಾಗೆ ನೀನು ಬಂದು ನಮ್ಮ ನಾಯಕನಾಗು ಎಂದು ಬೇಡಿಕೊಂಡರು. 
 
7ಅವನು ಅವರಿಗೆ – ನನ್ನನ್ನು ಹಗೆಮಾಡಿ ನನ್ನ ತಂದೆಯ ಮನೆಯಿಂದ ಅಟ್ಟಿಬಿಟ್ಟವರು ನೀವೇ ಅಲ್ಲವೋ? ನಿಮಗೆ ಕಷ್ಟ ಬಂದಾಗ ನನ್ನ ಬಳಿಗೆ ಯಾಕೆ ಬಂದಿರಿ ಅನ್ನಲು 
 
8ಅವರು – ಆದದರಿಂದಲೇ ಈಗ ತಿರಿಗಿ ನಿನ್ನ ಬಳಿಗೆ ಬಂದಿದ್ದೇವೆ; ನಮ್ಮ ಸಂಗಡ ಬಂದು ಅಮ್ಮೋನಿಯರೊಡನೆ ಯುದ್ಧಮಾಡುವಿಯಾದರೆ ಗಿಲ್ಯಾದಿನವರಿಗೆಲ್ಲಾ ನೀನೇ ಶಿರಸ್ಸಾಗಿರುವಿ ಎಂದು ಹೇಳಿದರು. 
 
9ಆಗ ಯೆಪ್ತಾಹನು ಅವರಿಗೆ – ನೀವು ನನ್ನನ್ನು ಅಮ್ಮೋನಿಯರೊಡನೆ ಯುದ್ಧಮಾಡುವದಕ್ಕೋಸ್ಕರ ಕರೆದುಕೊಂಡು ಹೋಗುವಲ್ಲಿ ಯೆಹೋವನು ಅವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟರೆ ನಿಜವಾಗಿ ನನ್ನನ್ನು ಅಧಿಪತಿಯನ್ನಾಗಿ ಮಾಡುವಿರೋ ಎಂದು ಕೇಳಲು 
 
10ಅವರು ಅವನಿಗೆ – ಹಾಗೆಯೇ ಮಾಡುವೆವು; ಉಭಯತರ ಮಾತುಗಳಿಗೆ ಯೆಹೋವನೇ ಸಾಕ್ಷಿ ಎಂದು ಉತ್ತರಕೊಟ್ಟರು. 
 
11ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು; ಜನರು ಅವನನ್ನು ಅಧಿಪತಿಯನ್ನಾಗಿಯೂ ನಾಯಕನನ್ನಾಗಿಯೂ ನೇಮಿಸಿದರು. ಮತ್ತು ಯೆಪ್ತಾಹನು ತನ್ನ ಸಂಗತಿಗಳನ್ನೆಲ್ಲಾ ಮಿಚ್ಪೆಯಲ್ಲಿ ಯೆಹೋವನ ಮುಂದೆ ಅರಿಕೆಮಾಡಿದನು.
 
12ಯೆಪ್ತಾಹನು ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ ಅವನನ್ನು – ನನಗೂ ನಿನಗೂ ಏನಿದೆ? ನೀನು ನನ್ನ ದೇಶಕ್ಕೆ ವಿರೋಧವಾಗಿ ಯುದ್ಧಮಾಡುವದಕ್ಕೇನು ಕಾರಣ ಎಂದು ಕೇಳಿದನು. 
 
13ಆ ಅರಸನು ದೂತರಿಗೆ – ಇಸ್ರಾಯೇಲ್ಯರು ಐಗುಪ್ತದಿಂದ ಬಂದಾಗ ಅರ್ನೋನಿನಿಂದ ಯಬ್ಬೋಕ್, ಯೊರ್ದನ್ ಹೊಳೆಗಳವರೆಗೂ ಇದ್ದ ನನ್ನ ದೇಶವನ್ನು ಕಸಕೊಂಡರಲ್ಲಾ; ನೀನು ಈಗ ಅದನ್ನು ಸಮಾಧಾನದಿಂದ ಹಿಂದಕ್ಕೆ ಕೊಡು ಎಂದು ಹೇಳಿ ಕಳುಹಿಸಿದನು. 
 
14ಯೆಪ್ತಾಹನು ಇನ್ನೊಂದು ಸಾರಿ ಅಮ್ಮೋನಿಯರ ಅರಸನ ಬಳಿಗೆ ದೂತರನ್ನು ಕಳುಹಿಸಿ 
 
15ಅವನಿಗೆ – ಯೆಪ್ತಾಹನಾದ ನನ್ನ ಮಾತನ್ನು ಕೇಳು; ಇಸ್ರಾಯೇಲ್ಯರು ಮೋವಾಬ್ಯರ ಮತ್ತು ಅಮ್ಮೋನಿಯರ ದೇಶವನ್ನು ತೆಗೆದುಕೊಳ್ಳಲೇ ಇಲ್ಲ. 
 
16ಅವರು ಐಗುಪ್ತವನ್ನು ಬಿಟ್ಟನಂತರ ಅರಣ್ಯದಲ್ಲಿ ಸಂಚರಿಸಿ ಕೆಂಪುಸಮುದ್ರಕ್ಕೂ ಅನಂತರ ಕಾದೇಶಿಗೂ ಬಂದರು. 
 
17ಅವರು ಅಲ್ಲಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ – ನಿನ್ನ ದೇಶವನ್ನು ದಾಟಿಹೋಗುವದಕ್ಕೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳಲು ಅವನು ಒಪ್ಪಿಕೊಳ್ಳಲಿಲ್ಲ. ತರುವಾಯ ಮೋವಾಬ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಲು ಅವನೂ ಒಪ್ಪಿಕೊಳ್ಳಲಿಲ್ಲ; ಆದದರಿಂದ ಅವರು ಕಾದೇಶಿನಲ್ಲಿಯೇ ನಿಂತರು. 
 
18ಅನಂತರ ಅವರು ಅರಣ್ಯದಲ್ಲಿ ಪ್ರಯಾಣಮಾಡಿ ಎದೋಮ್ ಮೋವಾಬ್ ದೇಶಗಳನ್ನು ಸುತ್ತಿಕೊಂಡು ಮೋವಾಬ್ ದೇಶದ ಪೂರ್ವದಿಕ್ಕಿಗೆ ಬಂದು ಅದರ ಮೇರೆಯಾಗಿರುವ ಅರ್ನೋನ್ ಹೊಳೆಯ ಆಚೆಯಲ್ಲಿ ಇಳುಕೊಂಡರು; ಮೋವಾಬ್ಯರ ಮೇರೆಯೊಳಗೆ ಕಾಲಿಡಲಿಲ್ಲ. 
 
19ತರುವಾಯ ಅವರು ಹೆಷ್ಬೋನನ್ನು ರಾಜಧಾನಿಮಾಡಿಕೊಂಡಿದ್ದ ಅಮೋರಿಯರ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ – ನಿನ್ನ ದೇಶವನ್ನು ದಾಟಿ ನಮ್ಮ ಸ್ಥಳಕ್ಕೆ ಹೋಗುವದಕ್ಕೆ ಅಪ್ಪಣೆಕೊಡು ಎಂದು ಅವನನ್ನು ಬೇಡಿಕೊಂಡರು. 
 
20ಆದರೆ ಸೀಹೋನನು ಅವರನ್ನು ನಂಬದವನಾಗಿ ತನ್ನ ಸೀಮೆಯನ್ನು ದಾಟಿಹೋಗುವದಕ್ಕೆ ಅಪ್ಪಣೆಕೊಡದೆ ತನ್ನ ಜನರನ್ನು ಕೂಡಿಸಿಕೊಂಡು ಯಹಚಕ್ಕೆ ಬಂದು ಅವರೊಡನೆ ಯುದ್ಧಮಾಡಿದನು. 
 
21ಇಸ್ರಾಯೇಲ್ಯರ ದೇವರಾದ ಯೆಹೋವನು ಸೀಹೋನನನ್ನೂ ಅವನ ಜನರೆಲ್ಲರನ್ನೂ ಇಸ್ರಾಯೇಲ್ಯರ ಕೈಗೆ ಒಪ್ಪಿಸಿದ್ದರಿಂದ ಅವರು ಈ ದೇಶದ ನಿವಾಸಿಗಳಾದ ಅಮೋರಿಯರನ್ನು ಹೊಡೆದು ಅವರ ದೇಶವನ್ನೆಲ್ಲಾ ಸ್ವತಂತ್ರಿಸಿಕೊಂಡರು. 
 
22ಹೀಗೆ ಇಸ್ರಾಯೇಲ್ಯರು ಅರ್ನೋನಿನಿಂದ ಯಬ್ಬೋಕಿನವರೆಗೂ ಅರಣ್ಯದಿಂದ ಯೊರ್ದನಿನವರೆಗೂ ಇದ್ದ ಅಮೋರಿಯರ ಪ್ರಾಂತವನ್ನೆಲ್ಲಾ ವಶಮಾಡಿಕೊಂಡರು. 
 
23ಇಸ್ರಾಯೇಲ್‍ದೇವರಾದ ಯೆಹೋವನು ಈ ದೇಶವನ್ನು ಅಮೋರಿಯರಿಂದ ತೆಗೆದು ತನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಕೊಟ್ಟ ಮೇಲೆ ನೀನು ಅದನ್ನು ತೆಗೆದುಕೊಳ್ಳುವದು ಹೇಗೆ? 
 
24ನಿನ್ನ ದೇವನಾದ ಕೆಮೋಷನು ನಿನಗೆ ಕೊಡುವ ದೇಶಗಳನ್ನು ನೀನು ಸ್ವತಂತ್ರಿಸಿಕೊಳ್ಳುವದಿಲ್ಲವೋ? ಹಾಗೆಯೇ ನಮ್ಮ ದೇವರಾದ ಯೆಹೋವನು ನಮಗೆ ಒಪ್ಪಿಸಿಕೊಡುವದನ್ನು ನಾವು ಸ್ವತಂತ್ರಿಸಿಕೊಳ್ಳುವದು ನ್ಯಾಯವಾಗಿದೆ. 
 
25ಚಿಪ್ಪೋರನ ಮಗನೂ ಮೋವಾಬ್ಯರ ಅರಸನೂ ಆದ ಬಾಲಾಕನಿಗಿಂತ ನೀನು ಹೆಚ್ಚಿನವನೋ? ಅವನು ಇಸ್ರಾಯೇಲ್ಯರೊಡನೆ ಎಂದಾದರೂ ವಿವಾದಮಾಡಿದನೋ? ಅಥವಾ ಅವರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನೋ? 
 
26ಇಸ್ರಾಯೇಲ್ಯರು ಮುನ್ನೂರು ವರುಷಗಳಿಂದ ಹೆಷ್ಬೋನ್, ಅರೋಯೇರ್ ಎಂಬ ಪಟ್ಟಣಗಳಲ್ಲಿಯೂ ಅವುಗಳ ಗ್ರಾಮಗಳಲ್ಲಿಯೂ ಅರ್ನೋನ್ ತೀರದ ಎಲ್ಲಾ ಪಟ್ಟಣಗಳಲ್ಲಿಯೂ ವಾಸಿಸುತ್ತಿದ್ದಾರಲ್ಲಾ; ಇಷ್ಟು ದಿವಸಗಳವರೆಗೆ ನೀನು ಅದನ್ನು ಬಿಡಿಸಿಕೊಳ್ಳದೆ ಇದ್ದದ್ದೇಕೆ? 
 
27ನಾನು ನಿನಗೆ ಯಾವ ಅನ್ಯಾಯವನ್ನೂ ಮಾಡಲಿಲ್ಲ. ನೀನು ಈಗ ನನಗೆ ವಿರೋಧವಾಗಿ ಯುದ್ಧಕ್ಕೆ ಬಂದದರಿಂದ ನೀನೇ ಅನ್ಯಾಯಮಾಡಿದ ಹಾಗಾಯಿತು. ನ್ಯಾಯಸ್ಥಾಪಕನಾದ ಯೆಹೋವನೇ ಈ ಹೊತ್ತು ಇಸ್ರಾಯೇಲ್ಯರಿಗೂ ಅಮ್ಮೋನಿಯರಿಗೂ ಮಧ್ಯದಲ್ಲಿ ನ್ಯಾಯತೀರಿಸಲಿ ಎಂದು ಹೇಳಿಸಿದನು. 
 
28ಆದರೆ ಯೆಪ್ತಾಹನು ಹೇಳಿಕಳುಹಿಸಿದ ಮಾತುಗಳಿಗೆ ಅಮ್ಮೋನಿಯರ ಅರಸನು ಕಿವಿಗೊಡಲಿಲ್ಲ.
 
29ಆಗ ಯೆಹೋವನ ಆತ್ಮವು ಯೆಪ್ತಾಹನ ಮೇಲೆ ಬಂದಿತು. ಅವನು ಗಿಲ್ಯಾದ್ ಪ್ರಾಂತ, ಮನಸ್ಸೆಯ ದೇಶ ಇವುಗಳಲ್ಲಿ ಸಂಚರಿಸಿ ತಿರಿಗಿ ಗಿಲ್ಯಾದಿನ ಮಿಚ್ಪೆಗೆ ಬಂದು ಅಲ್ಲಿಂದ ಅಮ್ಮೋನಿಯರ ಮೇಲೆ ಯುದ್ಧಕ್ಕೆ ಹೋದನು. 
 
30ಇದಲ್ಲದೆ ಅವನು ಯೆಹೋವನಿಗೆ – ನೀನು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವದಾದರೆ 
 
31ನಾನು ಸುರಕ್ಷಿತನಾಗಿ ಮನೆಗೆ ಮುಟ್ಟಿದಾಗ ನನ್ನನ್ನು ಎದುರುಗೊಳ್ಳುವದಕ್ಕಾಗಿ ನನ್ನ ಮನೆಯ ಬಾಗಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಹೋಮಮಾಡುವೆನು ಎಂದು ಹರಕೆಮಾಡಿದನು. 
 
32ಯೆಪ್ತಾಹನು ಅಮ್ಮೋನಿಯರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗಲು ಯೆಹೋವನು ಅವರನ್ನು ಅವನ ಕೈಗೆ ಒಪ್ಪಿಸಿದನು. 
 
33ಅವನು ಅವರನ್ನು ಸೋಲಿಸಿ ಅರೋಯೇರಿನಿಂದ ಮಿನ್ನೀತಿನ ದಾರಿಯವರೆಗೂ ಆಬೇಲ್ ಕೆರಾಮೀಮಿನವರೆಗೂ ಇಪ್ಪತ್ತು ಪಟ್ಟಣಗಳನ್ನು ಹಾಳುಮಾಡಿಬಿಟ್ಟನು. ಹೀಗೆ ದೊಡ್ಡ ಜಯವಾಗಿ ಅಮ್ಮೋನಿಯರು ಇಸ್ರಾಯೇಲ್ಯರ ಮುಂದೆ ತಗ್ಗಿಸಲ್ಪಟ್ಟರು.
 
ಯೆಪ್ತಾಹನು ತನ್ನ ಮಗಳನ್ನು ಯಜ್ಞಮಾಡಿದ್ದು
 
34ಯೆಪ್ತಾಹನು ಮಿಚ್ಪೆಯಲ್ಲಿದ್ದ ತನ್ನ ಮನೆಯನ್ನು ಸಮೀಪಿಸಿದಾಗ ಅವನ ಮಗಳು ದಮ್ಮಡಿಬಡಿಯುತ್ತಾ ನಾಟ್ಯವಾಡುತ್ತಾ ಅವನನ್ನು ಎದುರುಗೊಳ್ಳುವದಕ್ಕಾಗಿ ಬಂದಳು. ಆಕೆಯು ಅವನ ಒಬ್ಬಳೇ ಮಗಳು. ಆಕೆಯ ಹೊರತು ಅವನಿಗೆ ಬೇರೆ ಗಂಡು ಹೆಣ್ಣು ಮಕ್ಕಳೇ ಇರಲಿಲ್ಲ. 
 
35ಆಕೆಯನ್ನು ಕಾಣುತ್ತಲೆ ಅವನು ತನ್ನ ಬಟ್ಟೆಯನ್ನು ಹರಿದುಕೊಂಡು – ಅಯ್ಯೋ ನನ್ನ ಮಗಳೇ, ಮಗಳೇ, ನೀನು ನನ್ನನ್ನು ಕುಗ್ಗಿಸೇ ಬಿಟ್ಟಿಯಲ್ಲಾ; ನನಗೆ ಮಹಾಸಂಕಟವನ್ನುಂಟುಮಾಡಿದಿ. ನಾನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾರೆನು ಎಂದು ಕೂಗಿಕೊಳ್ಳಲು 
 
36ಆಕೆಯು ಅವನಿಗೆ – ನನ್ನ ತಂದೆಯೇ, ನೀನು ಬಾಯ್ದೆರೆದು ಯೆಹೋವನಿಗೆ ಹರಕೆ ಮಾಡಿದ ಮೇಲೆ ಆತನು ನಿನ್ನ ಶತ್ರುಗಳಾದ ಅಮ್ಮೋನಿಯರಿಗೆ ಮುಯ್ಯಿತೀರಿಸಿದದರಿಂದ ನಿನ್ನ ಬಾಯಿಂದ ಹೊರಟದ್ದನ್ನೇ ನೆರವೇರಿಸು ಅಂದಳು. 
 
37ಆಕೆಯು ತಿರಿಗಿ ತನ್ನ ತಂದೆಗೆ – ನನ್ನ ಬಿನ್ನಹವನ್ನು ಲಾಲಿಸು; ಎರಡು ತಿಂಗಳುಗಳವರೆಗೆ ನನ್ನನ್ನು ಬಿಡು. ನಾನು ನನ್ನ ಗೆಳತಿಯರೊಡನೆ ಬೆಟ್ಟದ ಪ್ರದೇಶಗಳಿಗೆ ಹೋಗಿ ನನ್ನ ಕನ್ಯಾವಸ್ಥೆಗೋಸ್ಕರ ಗೋಳಾಡುವೆನು ಅನ್ನಲು ಅವನು – 
 
38ಎರಡು ತಿಂಗಳ ತನಕ ಹೋಗಿ ಬಾ ಎಂದು ಕಳುಹಿಸಿದನು. ಆಕೆಯು ಸಖಿಯರ ಸಹಿತವಾಗಿ ಬೆಟ್ಟದ ಪ್ರದೇಶಗಳಿಗೆ ಹೋಗಿ ತನ್ನ ಕನ್ಯಾವಸ್ಥೆಗೋಸ್ಕರ ಗೋಳಾಡಿದಳು. 39ಎರಡು ತಿಂಗಳು ಕಳೆದನಂತರ ಆಕೆಯು ತಿರಿಗಿ ತಂದೆಯ ಹತ್ತಿರ ಬರಲು ಅವನು ತನ್ನ ಹರಕೆಯನ್ನು ತೀರಿಸಿದನು. ಆಕೆಯು ಪುರುಷನನ್ನರಿಯದವಳು. 
 
40ಇಸ್ರಾಯೇಲ್ಯರ ಹೆಣ್ಣುಮಕ್ಕಳು ಪ್ರತಿವರುಷದಲ್ಲಿಯೂ ನಾಲ್ಕು ದಿವಸ ಗಿಲ್ಯಾದ್ಯನಾದ ಯೆಪ್ತಾಹನ ಮಗಳನ್ನು ವರ್ಣಿಸುತ್ತಾರೆ. ಇದು ಅವರಲ್ಲಿ ಒಂದು ಪದ್ಧತಿ.
 
ಎಫ್ರಾಯೀಮ್ಯ & ಯೆಪ್ತಾಹ
ನ್ಯಾಯಸ್ಥಾಪಕರು 12
1ಎಫ್ರಾಯೀಮ್ಯರು ಕೂಡಿಕೊಂಡು ಯೊರ್ದನನ್ನು ದಾಟಿ ಉತ್ತರದಿಕ್ಕಿಗೆ ಯೆಪ್ತಾಹನಿದ್ದಲ್ಲಿಗೆ ಹೋಗಿ ಅವನಿಗೆ – ನೀನು ಅಮ್ಮೋನಿಯರ ಸಂಗಡ ಯುದ್ಧಕ್ಕೆ ಹೋಗುವಾಗ ನಮ್ಮನ್ನು ಯಾಕೆ ಕರೆಯಲಿಲ್ಲ? ಈಗ ನಾವು ನಿನ್ನನ್ನೂ ನಿನ್ನ ಮನೆಯನ್ನೂ ಸುಟ್ಟುಬಿಡುತ್ತೇವೆ ಅಂದರು. 
 
2ಆಗ ಅವನು ಅವರಿಗೆ – ನನಗೂ ನನ್ನ ಜನರಿಗೂ ಅಮ್ಮೋನಿಯರೊಡನೆ ವ್ಯಾಜ್ಯವಿದ್ದಾಗ ನಾನು ನಿಮ್ಮನ್ನು ಕರೆದೆನು; ಆದರೆ ನೀವು ಬಂದು ನನ್ನನ್ನು ಅವರ ಕೈಯಿಂದ ಬಿಡಿಸಲಿಲ್ಲ. 
 
3ನೀವು ಸಹಾಯಮಾಡುವದಿಲ್ಲವೆಂದು ತಿಳಿದು ಜೀವವನ್ನು ಕೈಯಲ್ಲಿ ಹಿಡಿದು ಅಮ್ಮೋನಿಯರೊಡನೆ ಯುದ್ಧಕ್ಕೆ ಹೋದೆನು; ಯೆಹೋವನು ಅವರನ್ನು ನನ್ನ ಕೈಗೆ ಒಪ್ಪಿಸಿದನು. ಹೀಗಿರಲು ನೀವು ಈಗ ಬಂದು ನನ್ನೊಡನೆ ಕಲಹಮಾಡುವದೇಕೆ ಎಂದು ಉತ್ತರಕೊಟ್ಟು 
 
4ಗಿಲ್ಯಾದಿನವರೆಲ್ಲರನ್ನೂ ಕೂಡಿಸಿ ಎಫ್ರಾಯೀಮ್ಯರಿಗೆ ವಿರೋಧವಾಗಿ ಯುದ್ಧಕ್ಕೆ ನಿಂತನು. ಗಿಲ್ಯಾದ್ಯರಾದ ನೀವು ನಮ್ಮ ಮತ್ತು ಮನಸ್ಸೆಯವರ ಮಧ್ಯದಲ್ಲಿದ್ದು ಸ್ವಕುಲವನ್ನು ಬಿಟ್ಟು ಇಲ್ಲಿಗೆ ಓಡಿ ಬಂದಿರಿ ಎಂದು ಎಫ್ರಾಯೀಮ್ಯರು ಅಂದದರಿಂದ ಗಿಲ್ಯಾದ್ಯರು [ಕೋಪಗೊಂಡು] ಅವರನ್ನು ಪೂರ್ಣವಾಗಿ ಸೋಲಿಸಿಬಿಟ್ಟರು. 
 
5ಇದಲ್ಲದೆ ಅವರು ಎಫ್ರಾಯೀಮಿಗೆ ಹೋಗುವ ಯೊರ್ದನಿನ ಹಾಯಗಡಗಳನ್ನೆಲ್ಲಾ ಹಿಡಿದರು. ತಪ್ಪಿಸಿಕೊಂಡ ಎಫ್ರಾಯೀಮ್ಯರಲ್ಲೊಬ್ಬನು ಅಲ್ಲಿಗೆ ಬಂದು ನನ್ನನ್ನು ದಾಟಗೊಡಿರಿ ಎಂದು ಅವರನ್ನು ಕೇಳಿದರೆ ಅವರು – ನೀನು ಎಫ್ರಾಯೀಮ್ಯನೋ ಎಂದು ಕೇಳುವರು. 
 
6ಅವನು ಅಲ್ಲವೆಂದರೆ ಅವನಿಗೆ – ನೀನು ಷಿಬ್ಬೋಲೆತ್ ಅನ್ನು ಎಂದು ಹೇಳುವರು. ಹಾಗೆ ಅನ್ನಲಿಕ್ಕೆ ಬಾರದೆ ಅವನು ಸಿಬ್ಬೋಲೆತ್ ಅನ್ನುವನು. ಕೂಡಲೆ ಅವರು ಅವನನ್ನು ಹಿಡಿದು ಯೊರ್ದನಿನ ಹಾಯಗಡಗಳ ಬಳಿಯಲ್ಲೇ ಕೊಂದುಹಾಕುವರು. ಹೀಗೆ ಆ ಕಾಲದಲ್ಲಿ ಎಫ್ರಾಯೀಮ್ಯರೊಳಗೆ ನಾಲ್ವತ್ತೆರಡು ಸಾವಿರ ಜನರು ಹತರಾದರು.
 
7ಗಿಲ್ಯಾದ್ಯನಾದ ಯೆಪ್ತಾಹನು ಇಸ್ರಾಯೇಲ್ಯರನ್ನು ಆರು ವರುಷ ಪಾಲಿಸಿದನಂತರ ಸತ್ತನು; ಅವನ ಶವವನ್ನು ಗಿಲ್ಯಾದಿನ ಪಟ್ಟಣಗಳಲ್ಲೊಂದರಲ್ಲಿ ಸಮಾಧಿ ಮಾಡಿದರು.
ಇಬ್ಚಾನ್, ಏಲೋನ್, ಅಬ್ದೋನ್ ಎಂಬ ನ್ಯಾಯಸ್ಥಾಪಕರು
 
8ಅವನ ತರುವಾಯ ಬೇತ್ಲೆಹೇಮಿನವನಾದ ಇಬ್ಚಾನನು ಇಸ್ರಾಯೇಲ್ಯರ ಪಾಲಕನಾದನು. 9ಅವನಿಗೆ ಮೂವತ್ತು ಮಂದಿ ಗಂಡುಮಕ್ಕಳೂ ಮೂವತ್ತು ಮಂದಿ ಹೆಣ್ಣುಮಕ್ಕಳೂ ಇದ್ದರು; ತನ್ನ ಹೆಣ್ಣು ಮಕ್ಕಳನ್ನು ಬೇರೆಯವರಿಗೆ ಕೊಟ್ಟು ಗಂಡು ಮಕ್ಕಳಿಗೋಸ್ಕರ ಹೊರಗಿನ ಮೂವತ್ತು ಮಂದಿ ಕನ್ಯೆಯರನ್ನು ತಂದನು. 
 
10ಇವನು ಇಸ್ರಾಯೇಲ್ಯರನ್ನು ಏಳು ವರುಷ ಪಾಲಿಸಿದನಂತರ ಮೃತನಾಗಲು ಅವನ ಶವವನ್ನು ಬೇತ್ಲೆಹೇಮಿನಲ್ಲಿ ಸಮಾಧಿಮಾಡಿದರು.
 
11ಇವನ ತರುವಾಯ ಜೆಬುಲೂನ್ಯನಾದ ಏಲೋನನು ಇಸ್ರಾಯೇಲ್ಯರ ಪಾಲಕನಾಗಿ ಹತ್ತು ವರುಷಗಳವರೆಗೆ 
 
12ಅವರನ್ನು ಪಾಲಿಸಿದನಂತರ ಮರಣ ಹೊಂದಿದನು. ಅವನ ಶವವನ್ನು ಜೆಬುಲೂನ್ ದೇಶದ ಅಯ್ಯಾಲೋನಿನಲ್ಲಿ ಸಮಾಧಿಮಾಡಿದರು.
 
13ಇವನ ತರುವಾಯ ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಾಯೇಲ್ಯರ ಪಾಲಕನಾದನು. 
 
14ಇವನಿಗೆ ನಾಲ್ವತ್ತು ಮಂದಿ ಮಕ್ಕಳೂ ಮೂವತ್ತು ಮಂದಿ ಮೊಮ್ಮಕ್ಕಳೂ ಇದ್ದರು. ಇವರೆಲ್ಲರಿಗೆ ಸವಾರಿಮಾಡುವದಕ್ಕೋಸ್ಕರ ಎಪ್ಪತ್ತು ಕತ್ತೆಗಳಿದ್ದವು. ಪಿರಾತೋನಿನವನೂ ಹಿಲ್ಲೇಲನ ಮಗನೂ ಆದ ಅಬ್ದೋನನು ಇಸ್ರಾಯೇಲ್ಯರನ್ನು ಎಂಟು ವರುಷ ಪಾಲಿಸಿದನಂತರ ಮರಣಹೊಂದಿದನು; 
 
15ಅವನ ಶವವನ್ನು ಎಫ್ರಾಯೀಮ್ ದೇಶದಲ್ಲಿ ಅಮಾಲೇಕ್ಯರ ಬೆಟ್ಟದ ಮೇಲಿರುವ ಪಿರಾತೋನಿನಲ್ಲಿ ಸಮಾಧಿಮಾಡಿದರು.

Related Quiz Articles