ಆಧ್ಯಾತ್ಮಿಕ ಕ್ಷೇತ್ರವು ಮನುಷ್ಯರ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿದ್ದು   

 

ಇಸ್ರಾಯೇಲಿನಲ್ಲಿ ಸಂಸೋನನ ಮತ್ತು ಹೊಸ ಒಡಂಬಡಿಕೆಯಲ್ಲಿ ಪೌಲನ

 

    ಸಂಸೋನನ ಜನನ
13 ಇಸ್ರಾಯೇಲ್ಯರು ತಿರಿಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದದರಿಂದ ಆತನು ಅವರನ್ನು ನಾಲ್ವತ್ತು ವರುಷಗಳ ತನಕ ಫಿಲಿಷ್ಟಿಯರ ಕೈಗೆ ಒಪ್ಪಿಸಿದನು.
2ಚೊರ್ಗಾ ಎಂಬ ಊರಲ್ಲಿ ದಾನ್ ಕುಲದವನಾದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿಯು ಬಂಜೆಯಾಗಿದ್ದದರಿಂದ ಅವನಿಗೆ ಮಕ್ಕಳಿರಲಿಲ್ಲ. 3ಒಂದಾನೊಂದು ದಿವಸ ಯೆಹೋವನ ದೂತನು ಆಕೆಗೆ ಪ್ರತ್ಯಕ್ಷನಾಗಿ – ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಮಗನನ್ನು ಹೆರುವಿ. 4ಆದದರಿಂದ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು; ಯಾವ ನಿಷಿದ್ಧಪದಾರ್ಥವನ್ನೂ ಊಟಮಾಡದಿರು. 5ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇಬಾರದು; ಅವನು ಹುಟ್ಟಿದಂದಿನಿಂದ ದೇವರಿಗೆ ಪ್ರತಿಷ್ಠಿತನಾಗಿರುವನು; ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವದಕ್ಕೆ ಪ್ರಾರಂಭಿಸುವನು ಅಂದನು. 6ತರುವಾಯ ಆ ಸ್ತ್ರೀಯು ತನ್ನ ಗಂಡನ ಬಳಿಗೆ ಹೋಗಿ – ಒಬ್ಬ ದೇವಪುರುಷನು ನನ್ನ ಹತ್ತಿರ ಬಂದಿದ್ದನು. ಅವನ ರೂಪವು ದೇವದೂತನ ರೂಪದಂತಿದ್ದು ಭಯಂಕರನಾಗಿದ್ದನು. ನೀನು ಎಲ್ಲಿಂದ ಬಂದಿ ಎಂದು ನಾನು ಅವನನ್ನು ಕೇಳಲಿಲ್ಲ; ಅವನೂ ತನ್ನ ಹೆಸರನ್ನು ತಿಳಿಸಲಿಲ್ಲ. 7ಆದರೆ ನನಗೆ – ನೀನು ಗರ್ಭವತಿಯಾಗಿ ಮಗನನ್ನು ಹೆರುವಿ; ಆದದರಿಂದ ನೀನು ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು, ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಹುಡುಗನು ಹುಟ್ಟಿದಂದಿನಿಂದ ಸಾಯುವವರೆಗೆ ದೇವರಿಗೆ ಪ್ರತಿಷ್ಠಿತನಾಗಿರುವನು ಎಂದು ಹೇಳಿದನು ಅಂದಳು.
8ಮಾನೋಹನು ಇದನ್ನು ಕೇಳಿ ಯೆಹೋವನಿಗೆ – ಸ್ವಾಮೀ, ದಯವಿರಲಿ; ನೀನು ಕಳುಹಿಸಿದ ದೇವಪುರುಷನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟಲಿಕ್ಕಿರುವ ಮಗುವಿಗೋಸ್ಕರ ಮಾಡಬೇಕಾದದ್ದನ್ನು ನಮಗೆ ಬೋಧಿಸಲಿ ಎಂದು ಬೇಡಿಕೊಳ್ಳಲು ದೇವರು ಅವನ ಮೊರೆಯನ್ನು ಕೇಳಿದನು; 9ಆ ಸ್ತ್ರೀಯು ಹೊಲದಲ್ಲಿ ಕೂತಿರುವಾಗ ದೇವದೂತನು ತಿರಿಗಿ ಬಂದನು. ಆಕೆಯ ಗಂಡನಾದ ಮಾನೋಹನು ಅಲ್ಲಿರಲಿಲ್ಲ. 10ಆದದರಿಂದ ಆಕೆಯು ಬೇಗನೆ ಗಂಡನ ಬಳಿಗೆ ಹೋಗಿ – ಮೊನ್ನೆ ನನಗೆ ಪ್ರತ್ಯಕ್ಷನಾದ ಪುರುಷನು ತಿರಿಗಿ ಬಂದಿದ್ದಾನೆಂದು ತಿಳಿಸಲು 11ಅವನೆದ್ದು ಹೆಂಡತಿಯೊಡನೆ ಬಂದು ಆ ಪುರುಷನಿಗೆ – ಮೊನ್ನೆ ಈಕೆಯೊಡನೆ ಮಾತಾಡಿದವನು ನೀನೋ ಎಂದು ಕೇಳಲು 12ಅವನು – ಹೌದು, ನಾನೇ ಅಂದನು. ಆಗ ಮಾನೋಹನು – ನೀನು ಹೇಳಿದ್ದು ನೆರವೇರಿದಾಗ ನಾವು ಆ ಮಗುವಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು ಎಂದು ಕೇಳಲು 13ಯೆಹೋವನ ದೂತನು ಮಾನೋಹನಿಗೆ – ನಾನು ಹೇಳಿದ್ದನ್ನೆಲ್ಲಾ ಈಕೆಯು ಜಾಗರೂಕತೆಯಿಂದ ಕೈಕೊಳ್ಳಲಿ. 14ದ್ರಾಕ್ಷಾಫಲವನ್ನು ತಿನ್ನದಿರಲಿ; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರಲಿ; ನಿಷಿದ್ಧಾಹಾರವನ್ನು ಮುಟ್ಟದಿರಲಿ; ಹೀಗೆ ನಾನು ಆಜ್ಞಾಪಿಸಿದ್ದನ್ನೆಲ್ಲಾ ಕೈಕೊಳ್ಳಲಿ ಅಂದನು. 15ಮತ್ತು ಮಾನೋಹನು ಯೆಹೋವನ ದೂತನನ್ನು – ನಾವು ನಿನಗೋಸ್ಕರ ಒಂದು ಹೋತಮರಿಯನ್ನು ಪಕ್ವಮಾಡಿ ತರುವವರೆಗೂ ದಯವಿಟ್ಟು ಇಲ್ಲೇ ನಿಲ್ಲಬೇಕೆಂದು ಬೇಡಿಕೊಳ್ಳಲು 16ಅವನು – ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ಆಹಾರವನ್ನು ಊಟಮಾಡುವದಿಲ್ಲ; ಯಜ್ಞಮಾಡಬೇಕೆಂದು ನಿನಗೆ ಮನಸ್ಸಿದ್ದರೆ ಅದನ್ನು ಯೆಹೋವನಿಗೆ ಸಮರ್ಪಿಸು ಅಂದನು. ಅವನು ಯೆಹೋವನ ದೂತನೆಂಬದು ಮಾನೋಹನಿಗೆ ಗೊತ್ತಿದ್ದಿಲ್ಲ. 17ಆದದರಿಂದ ಅವನು ಆ ದೂತನನ್ನು – ನೀನು ಹೇಳಿದ್ದು ನೆರವೇರಿದಾಗ ನಿನ್ನನ್ನು ಸನ್ಮಾನಿಸಬೇಕೆಂದಿರುತ್ತೇವೆ, ನಿನ್ನ ಹೆಸರೇನು ಎಂದು ಕೇಳಿದನು. 18ಯೆಹೋವನ ದೂತನು – ನನ್ನ ಹೆಸರನ್ನು ಕೇಳುವದೇಕೆ? ಅದು ಆಶ್ಚರ್ಯಕರವಾದದ್ದು ಅಂದನು. 19ಮಾನೋಹನು ಹೋತಮರಿಯನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಯೆಹೋವನಿಗೆ ಸಮರ್ಪಿಸಿದನು. ಮಾನೋಹನೂ ಅವನ ಹೆಂಡತಿಯೂ ನೋಡುತ್ತಿರುವಾಗಲೇ ಯೆಹೋವನ ದೂತನು ಆಶ್ಚರ್ಯವನ್ನು ನಡಿಸಿದನು. 20ಏನಂದರೆ ಅವನು ಯಜ್ಞವೇದಿಯಿಂದ ಆಕಾಶಕ್ಕೆ ಹೋಗುತ್ತಿರುವ ಅಗ್ನಿ ಜ್ವಾಲೆಯೊಳಗೆ ಮೇಲಕ್ಕೇರಿ ಹೋದನು. ಅವರು ಇದನ್ನು ನೋಡುತ್ತಲೆ ನೆಲದ ಮೇಲೆ ಬೋರಲ ಬಿದ್ದರು. 21ಯೆಹೋವನ ದೂತನು ಮಾನೋಹನಿಗೂ ಅವನ ಹೆಂಡತಿಗೂ ತಿರಿಗಿ ಕಾಣಿಸಲಿಲ್ಲ; ಆಗ ಮಾನೋಹನು ಆತನು ಯೆಹೋವನ ದೂತನೆಂದು ತಿಳಿದು ತನ್ನ ಹೆಂಡತಿಗೆ – 22ನಾವು ಸಾಯಬೇಕು. ದೇವರನ್ನು ಕಣ್ಣಾರೆ ಕಂಡೆವಲ್ಲಾ ಅನ್ನಲು 23ಆಕೆಯು ಅವನಿಗೆ – ಯೆಹೋವನು ನಮ್ಮನ್ನು ಕೊಲ್ಲಬೇಕೆಂದಿದ್ದರೆ ಆತನು ನಮ್ಮ ಕೈಯಿಂದ ಯಜ್ಞವನ್ನೂ ನೈವೇದ್ಯವನ್ನೂ ಸ್ವೀಕರಿಸುತ್ತಿದ್ದಿಲ್ಲ; ಈಗ ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿದ್ದಿಲ್ಲ, ಹೇಳುತ್ತಿದ್ದಿಲ್ಲ ಅಂದಳು.
24ಆ ಸ್ತ್ರೀಯು ಮಗನನ್ನು ಹೆತ್ತು ಅವನಿಗೆ ಸಂಸೋನನೆಂದು ಹೆಸರಿಟ್ಟಳು. ಹುಡುಗನು ದೊಡ್ಡವನಾದನು. ಯೆಹೋವನ ಆಶೀರ್ವಾದವು ಅವನ ಮೇಲಿತ್ತು. 25ಇದಲ್ಲದೆ ಅವನು ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿರುವ ದಾನ್‍ಕುಲದ ಪಾಳೆಯದಲ್ಲಿದ್ದಾಗ ಯೆಹೋವನ ಆತ್ಮವು ಅವನನ್ನು ಪ್ರೇರೇಪಿಸಹತ್ತಿತು.

 

ಸಂಸೋನನ ವಿವಾಹ

14ಸಂಸೋನನು ಗಟ್ಟಾ ಇಳಿದು ತಿಮ್ನಾ ಊರಿಗೆ ಹೋಗಿ ಅಲ್ಲಿನ ಫಿಲಿಷ್ಟಿಯರ ಹೆಣ್ಣುಗಳಲ್ಲಿ ಒಬ್ಬಳನ್ನು ನೋಡಿ 2ತಿರಿಗಿ ತಂದೆತಾಯಿಗಳ ಬಳಿಗೆ ಬಂದು ಅವರಿಗೆ – ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿರಿ ಎಂದು ಹೇಳಿದನು. 3ಆಗ ಅವರು ಅವನಿಗೆ – ಸುನ್ನತಿಯಿಲ್ಲದ ಫಿಲಿಷ್ಟಿಯರ ಹೆಣ್ಣನ್ನು ವರಿಸಬೇಕೆಂದಿರುತ್ತೀ; ನಿನ್ನ ಬಂಧುಗಳಲ್ಲಿಯೂ ನಮ್ಮ ಎಲ್ಲಾ ಜನರಲ್ಲಿಯೂ ನಿನಗೆ ಹೆಣ್ಣು ಸಿಕ್ಕುವದಿಲ್ಲವೋ ಎಂದು ಕೇಳಲು ಅವನು – ನನಗೋಸ್ಕರ ಆಕೆಯನ್ನೇ ತೆಗೆದುಕೊಳ್ಳಬೇಕು; ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ ಅಂದನು. 4ಫಿಲಿಷ್ಟಿಯರ ಕೇಡಿಗೆ ಕಾರಣ ಹುಡುಕುತ್ತಿದ್ದ ಯೆಹೋವನ ಪ್ರೇರಣೆಯಿಂದಲೇ ಈ ಸಂಗತಿ ಉಂಟಾಯಿತೆಂಬದು ಅವನ ತಂದೆತಾಯಿಗಳಿಗೆ ಗೊತ್ತಿದ್ದಿಲ್ಲ. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರ ಮೇಲೆ ದೊರೆತನ ನಡಿಸುತ್ತಿದ್ದರು.

5 ಸಂಸೋನನು ತನ್ನ ತಂದೆತಾಯಿಗಳ ಸಹಿತವಾಗಿ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷೇತೋಟಗಳ ಬಳಿಗೆ ಬಂದಾಗ ಒಂದು ಪ್ರಾಯದ ಸಿಂಹವು ಗರ್ಜಿಸುತ್ತಾ ಅವನೆದುರಿಗೆ ಬಂದಿತು. 6ಅವನ ಕೈಯಲ್ಲಿ ಏನೂ ಇಲ್ಲದಿದ್ದರೂ ಯೆಹೋವನ ಆತ್ಮವು ಅವನ ಮೇಲೆ ಫಕ್ಕನೆ ಬಂದದರಿಂದ ಆ ಸಿಂಹವನ್ನು ಹೋತ ಮರಿಯನ್ನೋ ಎಂಬಂತೆ ಸೀಳಿಬಿಟ್ಟನು. ಈ ಸಂಗತಿಯನ್ನು ತಂದೆತಾಯಿಗಳಿಗೆ ತಿಳಿಸಲಿಲ್ಲ. 7ಅನಂತರ ಅವನು ಊರೊಳಗೆ ಹೋಗಿ ಆ ಸ್ತ್ರೀಯನ್ನು ಮಾತಾಡಿಸಿ ಆಕೆಯನ್ನು ಮೆಚ್ಚಿಕೊಂಡನು. 8ಕೆಲವು ದಿವಸಗಳಾದ ಮೇಲೆ ಅವನು ಆಕೆಯನ್ನು ವರಿಸುವದಕ್ಕೋಸ್ಕರ ತಿರಿಗಿ ಆ ಊರಿಗೆ ಹೋಗುತ್ತಿದ್ದಾಗ ದಾರೀ ಬಿಟ್ಟು ಸಿಂಹದ ಹೆಣವನ್ನು ನೋಡುವದಕ್ಕೆ ಹೋಗಲು ಅದರ ಒಡಲಲ್ಲಿ ಜೇನುಹುಳಗಳನ್ನೂ ಜೇನನ್ನೂ ಕಂಡು 9ಆ ಜೇನನ್ನು ಕೈಯಲ್ಲಿ ತೆಗೆದುಕೊಂಡು ತಿನ್ನುತ್ತಾ ಹೋದನು; ತನ್ನ ತಂದೆತಾಯಿಗಳಿಗೂ ಕೊಟ್ಟನು; ಅವರು ತಿಂದರು. ಆದರೆ ಅದು ತನಗೆ ಸಿಂಹದ ಒಡಲಲ್ಲಿ ಸಿಕ್ಕಿತೆಂಬದನ್ನು ಅವರಿಗೆ ತಿಳಿಸಲಿಲ್ಲ.
10ಸಂಸೋನನ ತಂದೆಯು ಹೆಣ್ಣಿನ ಮನೆಗೆ ಬಂದ ಮೇಲೆ ಸಂಸೋನನು ಯೌವನಸ್ಥರ ಪದ್ಧತಿಯ ಪ್ರಕಾರ ಅಲ್ಲಿ ಔತಣವನ್ನು ಸಿದ್ಧಮಾಡಿಸಿದನು. 11ಅವರು ಅವನನ್ನು ನೋಡಿದಾಗ ತಮ್ಮಲ್ಲಿಂದ ಮೂವತ್ತು ಮಂದಿಯನ್ನು ಆರಿಸಿ ಅವನ ಜೊತೆಯಲ್ಲಿರಿಸಿದರು. 12ಸಂಸೋನನು ಇವರಿಗೆ – ನಾನು ನಿಮಗೆ ಒಂದು ಒಗಟನ್ನು ಹೇಳುತ್ತೇನೆ; ನೀವು ಔತಣದ ಏಳು ದಿನಗಳಲ್ಲಿಯೇ ಅದನ್ನು ಬಿಚ್ಚಿ ಅರ್ಥವನ್ನು ಹೇಳಿದರೆ ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷವಸ್ತ್ರಗಳನ್ನೂ ಕೊಡುವೆನು. 13ನಿಮ್ಮಿಂದ ಆಗದೆ ಹೋದರೆ ನೀವು ನನಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷವಸ್ತ್ರಗಳನ್ನೂ ಕೊಡಬೇಕು ಅನ್ನಲು ಅವರು ಅವನಿಗೆ – ನಿನ್ನ ಒಗಟನ್ನು ಹೇಳು, ಕೇಳೋಣ ಎಂದು ಹೇಳಿದರು. 14ಆಗ ಅವನು –
ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು;
ಕ್ರೂರವಾದದ್ದರಿಂದ ಮಧುರವಾದದ್ದು ಸಿಕ್ಕಿತು
ಎಂದು ಹೇಳಿದನು. ಮೂರು ದಿನಗಳಾದರೂ ಅವರು ಅದನ್ನು ಬಿಚ್ಚಲಾರದೆ ಹೋದರು. 15ಅವರು ಏಳನೆಯ ದಿನದಲ್ಲಿ ಸಂಸೋನನ ಹೆಂಡತಿಗೆ – ನಿನ್ನ ಗಂಡನನ್ನು ಮರುಳುಗೊಳಿಸಿ ಅವನಿಂದ ಒಗಟಿನ ಅರ್ಥವನ್ನು ತಿಳಿದುಕೋ; ಇಲ್ಲವಾದರೆ ನಾವು ನಿನ್ನನ್ನೂ ನಿನ್ನ ತಂದೆಯ ಮನೆಯವರನ್ನೂ ಬೆಂಕಿಯಿಂದ ಸುಟ್ಟುಬಿಡುವೆವು; ನಮಗಿರುವದೆಲ್ಲವನ್ನೂ ಕಸಕೊಳ್ಳುವದಕ್ಕೆ ನಮ್ಮನ್ನು ಇಲ್ಲಿಗೆ ಕರಿಸಿದಿರೋ ಅಂದರು. 16ಆಕೆಯು ಸಂಸೋನನ ಮುಂದೆ ಅಳುತ್ತಾ – ನೀನು ನನ್ನನ್ನು ಪ್ರೀತಿಸುವದಿಲ್ಲ, ದ್ವೇಷಿಸುತ್ತೀಯಷ್ಟೆ; ನನ್ನ ಜನರಿಗೆ ಒಗಟನ್ನು ಹೇಳಿದ್ದೀ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ ಎಂದು ತೊಂದರೆಪಡಿಸಿದಳು. ಅವನು ಆಕೆಗೆ – ಅದನ್ನು ನನ್ನ ತಂದೆತಾಯಿಗಳಿಗೇ ಹೇಳಲಿಲ್ಲ; ನಿನಗೆ ಹೇಳುವೆನೋ ಎಂದು ಉತ್ತರಕೊಟ್ಟನು. 17ಆಕೆಯು ಔತಣದ ಏಳು ದಿನಗಳಲ್ಲಿಯೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನದಲ್ಲಿ ಆಕೆಯು ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳಿಬಿಟ್ಟನು. ಆಕೆಯು ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು. 18ಅವರು ಏಳನೆಯ ದಿನ ಸೂರ್ಯಾಸ್ತಮಾನಕ್ಕೆ ಮೊದಲು ಅವನಿಗೆ –
ಜೇನಿಗಿಂತ ಸಿಹಿಯಾದದ್ದು ಯಾವದು?
ಸಿಂಹಕ್ಕಿಂತ ಕ್ರೂರವಾದದಾವದು
ಎಂದು ಹೇಳಲು ಅವನು –
ನೀವು ನನ್ನ ಕಡಸಿನಿಂದ ಉಳದಿದ್ದರೆ
ಒಗಟನ್ನು ಬಿಚ್ಚುವದು ನಿಮ್ಮಿಂದಾಗುತ್ತಿರಲಿಲ್ಲ
ಅಂದನು. 19ಯೆಹೋವನ ಆತ್ಮವು ಫಕ್ಕನೆ ಅವನ ಮೇಲೆ ಬಂದಿತು; ಅವನು ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು ಅವರ ವಸ್ತ್ರಗಳನ್ನು ಸುಲುಕೊಂಡು ಒಗಟನ್ನು ಬಿಚ್ಚಿದವರಿಗೆ ತಂದುಕೊಟ್ಟನು. ಮತ್ತು ರೇಗಿದವನಾಗಿ ತನ್ನ ತಂದೆಯ ಮನೆಗೆ ಹೋದನು. 20ಇತ್ತ ಸಂಸೋನನ ಹೆಂಡತಿಯನ್ನು ಆ [ಮೂವತ್ತು] ಮಂದಿಯಲ್ಲಿ ಅವನಿಗೆ ಸ್ನೇಹಿತನಾಗಿದ್ದವನಿಗೆ ಮದುವೆಮಾಡಿ ಕೊಟ್ಟರು.
 

 ಸಂಸೋನನು ಫಿಲಿಷ್ಟಿಯರ ಪೈರನ್ನು ಹಾಳುಮಾಡಿದ್ದು

15 ಕೆಲವು ದಿನಗಳಾದ ಮೇಲೆ ಗೋದಿಯ ಸುಗ್ಗಿಯಲ್ಲಿ ಸಂಸೋನನು ಒಂದು ಹೋತಮರಿಯನ್ನು ತೆಗೆದುಕೊಂಡು ತನ್ನ ಹೆಂಡತಿಯನ್ನು ನೋಡುವದಕ್ಕೋಸ್ಕರ ಹೊರಟುಹೋಗಿ ಆಕೆಯ ತಂದೆಗೆ – ನನ್ನನ್ನು ನನ್ನ ಹೆಂಡತಿಯ ಹತ್ತಿರ ಒಳಗಿನ ಕೋಣೆಗೆ ಹೋಗಗೊಡಿಸು ಅನ್ನಲು ಅವನು – ಹೋಗಬಾರದು; 2ನೀನು ನಿಜವಾಗಿ ಆಕೆಯನ್ನು ಹಗೆ ಮಾಡುತ್ತೀಯೆಂದು ನಿನ್ನ ಗೆಳೆಯರಲ್ಲೊಬ್ಬನಿಗೆ ಮದುವೆಮಾಡಿ ಕೊಟ್ಟೆನು. ಆಕೆಯ ತಂಗಿಯು ಆಕೆಗಿಂತ ಸುಂದರಿಯಾಗಿದ್ದಾಳಲ್ಲಾ; ಈಕೆಯು ನಿನಗಿರಲಿ ಅಂದನು. 3ಆಗ ಸಂಸೋನನು – ಈ ಸಾರಿ ನಾನು ಫಿಲಿಷ್ಟಿಯರಿಗೆ ಕೇಡುಮಾಡುವದಾದರೆ ತಪ್ಪು ನನ್ನದಲ್ಲ ಎಂದಂದುಕೊಂಡು ಹೋಗಿ 4ಮುನ್ನೂರು ನರಿಗಳನ್ನು ಹಿಡಿದು ಬಾಲಕ್ಕೆ ಬಾಲವನ್ನು ಸೇರಿಸಿ ಕಟ್ಟಿ ಅವುಗಳ ನಡುವೆ ಒಂದೊಂದು ಪಂಜನ್ನು ಸಿಕ್ಕಿಸಿ 5ಪಂಜುಗಳಿಗೆ ಬೆಂಕಿಹೊತ್ತಿಸಿ ಆ ನರಿಗಳನ್ನು ಫಿಲಿಷ್ಟಿಯರ ಪೈರುಗಳಲ್ಲಿ ಬಿಟ್ಟು ಅವರ ತೆನೆಗೂಡುಗಳನ್ನೂ ಇನ್ನೂ ಕೊಯ್ಯದೆ ಇದ್ದ ಪೈರುಗಳನ್ನೂ ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು. 6ಫಿಲಿಷ್ಟಿಯರು ಇದನ್ನು ಮಾಡಿದವರಾರೆಂದು ವಿಚಾರಿಸುವಲ್ಲಿ ತಿಮ್ನಾ ಊರಿನವನ ಅಳಿಯನಾದ ಸಂಸೋನನೆಂದು ಗೊತ್ತಾಯಿತು. ಅವನ ಮಾವನು ಅವನ ಹೆಂಡತಿಯನ್ನು ಬೇರೊಬ್ಬನಿಗೆ ಕೊಟ್ಟುಬಿಟ್ಟದ್ದೇ ಇದಕ್ಕೆ ಕಾರಣವೆಂದು ಅವರು ತಿಳಿದು ಬಂದು ಆಕೆಯನ್ನೂ ಆಕೆಯ ತಂದೆಯನ್ನೂ ಸುಟ್ಟುಬಿಟ್ಟರು. 7ಸಂಸೋನನು ಅವರಿಗೆ – ನೀವು ಹೀಗೆ ಮಾಡಿದ್ದರಿಂದ ನಾನು ನಿಮಗೆ ಮುಯ್ಯಿತೀರಿಸದೆ ಬಿಡುವದಿಲ್ಲ ಎಂದು ಹೇಳಿ 8ಅವರ ತೊಡೆ ಸೊಂಟಗಳನ್ನು ಮುರಿದು ಅವರನ್ನು ಸಂಹರಿಸಿ ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
 ಆಗ ಫಿಲಿಷ್ಟಿಯರು ಹೊರಟು ಯೆಹೂದಾ ಪ್ರಾಂತದ ಲೆಹೀ ಎಂಬಲ್ಲಿಗೆ ಹೋಗಿ ಪಾಳೆಯಮಾಡಿಕೊಂಡರು. 10ನೀವು ನಮಗೆ ವಿರೋಧವಾಗಿ ಯುದ್ಧಕ್ಕೆ ಬಂದದ್ದೇಕೆ ಎಂದು ಯೆಹೂದ್ಯರು ಅವರನ್ನು ಕೇಳಲು ಅವರು – ಸಂಸೋನನನ್ನು ಹಿಡಿದು ಕಟ್ಟಿ ಅವನು ನಮಗೆ ಮಾಡಿದಂತೆಯೇ ಅವನಿಗೂ ಮಾಡಬೇಕೆಂದು ಬಂದೆವು ಎಂದು ಉತ್ತರಕೊಟ್ಟರು. 11ಮೂರು ಸಾವಿರ ಮಂದಿ ಯೆಹೂದ್ಯರು ಏಟಾಮ್ ಗಿರಿಗೆ ಹೋಗಿ ಸಂಸೋನನಿಗೆ – ಫಿಲಿಷ್ಟಿಯರು ನಮ್ಮ ಮೇಲೆ ದೊರೆತನ ಮಾಡುತ್ತಿದ್ದಾರೆಂಬದು ನಿನಗೆ ಗೊತ್ತಿಲ್ಲವೋ? ಹೀಗೆ ಯಾಕೆ ಮಾಡಿದಿ ಎಂದು ಕೇಳಲು ಅವನು – ಅವರು ನನಗೆ ಮಾಡಿದಂತೆಯೇ ನಾನು ಅವರಿಗೆ ಮಾಡಿದ್ದೇನೆ ಅಂದನು. 12ಅವರು – ನಾವು ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸಬೇಕೆಂದು ಬಂದಿದ್ದೇವೆ ಅನ್ನಲು ಸಂಸೋನನು – ಹಾಗಾದರೆ ನೀವು ನನ್ನನ್ನು ಕೊಲ್ಲುವದಿಲ್ಲವೆಂದು ಆಣೆಮಾಡಿರಿ ಎಂದನು. 13ಅದಕ್ಕೆ ಅವರು – ನಾವು ಸತ್ಯವಾಗಿ ನಿನ್ನನ್ನು ಕೊಲ್ಲುವದಿಲ್ಲ; ನಿನ್ನನ್ನು ಕಟ್ಟಿ ಫಿಲಿಷ್ಟಿಯರ ಕೈಗೆ ಒಪ್ಪಿಸುತ್ತೇವೆ ಎಂದು ಹೇಳಿ ಅವನನ್ನು ಎರಡು ಹೊಸ ಹಗ್ಗಗಳಿಂದ ಕಟ್ಟಿ ಗಿರಿಯಿಂದ ತಂದರು.
14ಸಂಸೋನನು ಲೆಹೀಯ ಸಮೀಪಕ್ಕೆ ಬರಲು ಫಿಲಿಷ್ಟಿಯರು ಅವನನ್ನು ಕಂಡು ಆರ್ಭಟಿಸಿದರು. ಯೆಹೋವನ ಆತ್ಮವು ಅವನ ಮೇಲೆ ಬಂದದರಿಂದ ಅವನ ರಟ್ಟೆಗಳಿಗೆ ಸುತ್ತಲೂ ಕಟ್ಟಿದ್ದ ಹಗ್ಗಗಳು ಸುಟ್ಟ ಸೆಣಬಿನ ಹಾಗಾದವು; ಕೈಗೆ ಹಾಕಿದ ಬೇಡಿಗಳು ಕಳಚಿ ಬಿದ್ದವು. 
16ಕತ್ತೆಯ ದವಡೇ ಎಲುಬಿನಿಂದ ಸಾವಿರ ಜನರನ್ನು ವಧಿಸಿದೆನು;
ಕತ್ತೆಯ ದವಡೇ ಎಲುಬಿನಿಂದ ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು
17ಎಂದು ಹೇಳಿ ತನ್ನ ಕೈಯಲ್ಲಿದ್ದ ಎಲುಬನ್ನು ಬೀಸಾಡಿದನು. ಆ ಸ್ಥಳಕ್ಕೆ ರಾಮತ್ ಲೆಹೀ ಎಂದು ಹೆಸರಾಯಿತು.
18ಮತ್ತು ಅವನು ಬಹಳ ದಾಹವುಳ್ಳವನಾಗಿ ಯೆಹೋವನಿಗೆ – ನೀನು ನಿನ್ನ ಸೇವಕನ ಮೂಲಕವಾಗಿ ಈ ಮಹಾಜಯವನ್ನುಂಟು ಮಾಡಿದ ಮೇಲೆ ನಾನು ದಾಹದಿಂದ ಸತ್ತು ಸುನ್ನತಿಯಿಲ್ಲದವರ ಕೈಯಲ್ಲಿ ಬೀಳಬೇಕೋ ಎಂದು ಮೊರೆಯಿಡಲು 19ಆತನು ಲೆಹೀಯಲ್ಲಿ ಒರಳಬಂಡೆಯನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಲು ಅವನು ಕುಡಿದು ಪುನಃ ಚೈತನ್ಯ ಹೊಂದಿದನು. ಆದದರಿಂದ ಅದಕ್ಕೆ ಏನ್‍ಹಕ್ಕೋರೇ ಎಂದು ಹೆಸರಾಯಿತು; ಅದು ಇಂದಿನವರೆಗೂ ಲೆಹೀಯಲ್ಲಿರುತ್ತದೆ. 20ಫಿಲಿಷ್ಟಿಯರ ಪ್ರಾಬಲ್ಯದಲ್ಲಿ ಸಂಸೋನನು ಇಸ್ರಾಯೇಲ್ಯರನ್ನು ಇಪ್ಪತ್ತು ವರುಷಗಳವರೆಗೆ ಪಾಲಿಸಿದನು.
 

ಸಂಸೋನನು ಮತ್ತು ದೆಲೀಲಾ

 
16 ತರುವಾಯ ಸಂಸೋನನು ಗಾಜಕ್ಕೆ ಹೋಗಿ ಅಲ್ಲಿ ಒಬ್ಬ ಸೂಳೆಯನ್ನು ಕಂಡು ಅವಳ ಬಳಿಗೆ ಹೋದನು. 2ಸಂಸೋನನು ಬಂದಿರುವದು ಗಾಜದವರಿಗೆ ಗೊತ್ತಾಗಲು ಅವರು ಬಂದು ಅವನನ್ನು ಸುತ್ತಿಕೊಂಡರು; ಸೂರ್ಯೋದಯವಾಗುತ್ತಲೆ ಅವನನ್ನು ಕೊಂದುಹಾಕೋಣ ಎಂದುಕೊಂಡು ರಾತ್ರಿಯೆಲ್ಲಾ ಊರುಬಾಗಲಲ್ಲಿ ಹೊಂಚಿನೋಡುತ್ತಾ ಸುಮ್ಮನಿದ್ದರು. 3ಸಂಸೋನನು ಮಲಗಿ ಮಧ್ಯರಾತ್ರಿಯಲ್ಲೆದ್ದು ಊರುಬಾಗಲಿನ ಕದಗಳನ್ನೂ ಅದರ ಎರಡು ನಿಲುವು ಪಟ್ಟಿಗಳನ್ನೂ ಅಗುಳಿಗಳನ್ನೂ ಕಿತ್ತು ಹೆಗಲಮೇಲೆ ಹೊತ್ತುಕೊಂಡು ಹೋಗಿ ಹೆಬ್ರೋನಿನ ಎದುರಿಗಿರುವ ಪರ್ವತದ ಶಿಖರದ ಮೇಲೆ ಇಟ್ಟನು.
4ಅನಂತರ ಸಂಸೋನನು ಸೋರೇಕ್ ತಗ್ಗಿನಲ್ಲಿ ವಾಸವಾಗಿದ್ದ ದೆಲೀಲಾ ಎಂಬ ಹೆಸರುಳ್ಳ ಒಬ್ಬ ಸ್ತ್ರೀಯಲ್ಲಿ ಮೋಹಿತನಾದನು. 5ಫಿಲಿಷ್ಟಿಯ ಪ್ರಭುಗಳು ಅವಳ ಬಳಿಗೆ ಹೋಗಿ ಅವಳಿಗೆ – ನೀನು ಅವನನ್ನು ಮರುಳುಗೊಳಿಸಿ ಅವನ ಮಹಾಶಕ್ತಿಯ ಮೂಲ ಯಾವದೆಂಬದನ್ನೂ ನಾವು ಅವನನ್ನು ಗೆದ್ದು ಕಟ್ಟಿ ಕುಂದಿಸುವದು ಹೇಗೆಂಬದನ್ನೂ ಗೊತ್ತುಮಾಡಿಕೊಂಡು ನಮಗೆ ತಿಳಿಸು; ನಮ್ಮಲ್ಲಿ ಪ್ರತಿಯೊಬ್ಬನೂ ನಿನಗೆ ಸಾವಿರದ ನೂರು ರೂಪಾಯಿ ಕೊಡುವೆವು ಎಂದು ಹೇಳಿದರು. 6ದೆಲೀಲಳು ಸಂಸೋನನಿಗೆ – ನಿನಗೆ ಇಂಥ ಮಹಾಶಕ್ತಿ ಹೇಗೆ ಬಂದಿತು? ನಿನ್ನನ್ನು ಕಟ್ಟಿ ಕುಂದಿಸುವದು ಹೇಗೆ ಎಂಬದನ್ನು ದಯವಿಟ್ಟು ನನಗೆ ತಿಳಿಸು ಅನ್ನಲು 7ಅವನು – ಕರುಳಿನ ಏಳು ಹಸೀ ತಂತಿಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು ಎಂದು ಹೇಳಿದನು. 8ಫಿಲಿಷ್ಟಿಯ ಪ್ರಭುಗಳು ಅಂಥ ಏಳು ಹಸೀ ತಂತಿಗಳನ್ನು ಅವಳಿಗೆ ತಂದುಕೊಟ್ಟರು. 9ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿಟ್ಟು ಅವುಗಳಿಂದ ಅವನನ್ನು ಕಟ್ಟಿ – ಸಂಸೋನನೇ, ನಿನ್ನ ಮೇಲೆ ಫಿಲಿಷ್ಟಿಯರು ಬಂದರು ಎಂದು ಕೂಗಿದಳು. ಅವನು ಬೆಂಕಿತಗುಲಿದ ಸೆಣಬಿನ ದಾರವನ್ನೋ ಎಂಬಂತೆ ಆ ತಂತಿಗಳನ್ನು ಹರಿದುಬಿಟ್ಟನು; ಹೀಗೆ ಅವನ ಶಕ್ತಿಯ ರಹಸ್ಯವು ತಿಳಿಯದೆ ಹೋಯಿತು.
10ದೆಲೀಲಳು ತಿರಿಗಿ ಸಂಸೋನನಿಗೆ – ನೀನು ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವದರಿಂದ ಕಟ್ಟಬಹುದೆಂಬದನ್ನು ದಯವಿಟ್ಟು ನನಗೆ ತಿಳಿಸು ಎಂದಳು. 11ಅವನು ಅವಳಿಗೆ – ಯಾವದಕ್ಕೂ ಉಪಯೋಗಿಸದ ಹೊಸ ಹಗ್ಗಗಳಿಂದ ನನ್ನನ್ನು ಕಟ್ಟಿದರೆ ನಾನು ಬಲಹೀನನಾಗಿ ಬೇರೆ ಮನುಷ್ಯರಂತಾಗುವೆನು ಅಂದನು. 12ಅವಳು ಒಳಗಿನ ಕೋಣೆಯಲ್ಲಿ ಹೊಂಚುಗಾರರನ್ನಿರಿಸಿ ಹೊಸ ಹಗ್ಗಗಳನ್ನು ತೆಗೆದುಕೊಂಡು ಅವುಗಳಿಂದ ಅವನನ್ನು ಕಟ್ಟಿ – ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆಂದು ಕೂಗಲು ಅವನೆದ್ದು ತೋಳುಗಳಿಗೆ ಕಟ್ಟಿದ ಹಗ್ಗಗಳನ್ನು ದಾರವನ್ನೋ ಎಂಬಂತೆ ಹರಿದುಬಿಟ್ಟನು.
13ಆಗ ದೆಲೀಲಳು ಸಂಸೋನನಿಗೆ – ನೀನು ತಿರಿಗಿ ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವದರಿಂದ ಕಟ್ಟಬಹುದೆಂದು ತಿಳಿಸು ಅನ್ನಲು ಅವನು – ನನ್ನ ತಲೇಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯಿದರೆ ಸಾಕು ಎಂದು ಹೇಳಿದನು. 14ಅವಳು ಅವನ ತಲೇಕೂದಲಿನ ಏಳು ಜಡೆಗಳನ್ನು ಗೂಟಕ್ಕೆ ಭದ್ರಮಾಡಿ ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆ ಎಂದು ಕೂಗಿದಳು. ಅವನು ನಿದ್ರೆಯಿಂದ ಎಚ್ಚತ್ತು ಮಗ್ಗವನ್ನೂ ಮಗ್ಗದ ಗೂಟವನ್ನೂ ಕಿತ್ತುಕೊಂಡು ಹೋದನು.
15ಆಕೆಯು ತಿರಿಗಿ ಅವನಿಗೆ – ನಿನ್ನನ್ನು ಪ್ರೀತಿಸುತ್ತೇನೆಂದು ನೀನು ನನಗೆ ಹೇಗೆ ಹೇಳಬಹುದು? ನಿನ್ನ ಮನಸ್ಸು ನನ್ನ ಮೇಲೆ ಇಲ್ಲವಲ್ಲಾ; ಮೂರುಸಾರಿ ನನ್ನನ್ನು ವಂಚಿಸಿದಿ. ನಿನಗೆ ಇಂಥ ಮಹಾಶಕ್ತಿ ಯಾವದರಿಂದ ಬಂದಿತೆಂಬದನ್ನು ನನಗೆ ತಿಳಿಸಲಿಲ್ಲ ಅಂದಳು. 16ಇದಲ್ಲದೆ ಅವಳು ಅವನನ್ನು ದಿನ ದಿನವೂ ಮಾತಿನಿಂದ ಪೀಡಿಸಿದ್ದರಿಂದ ಅವನಿಗೆ ಸಾಯುವದು ಒಳ್ಳೇದನ್ನುವಷ್ಟು ಬೇಸರವಾಯಿತು. 17ಮತ್ತು ಅವನು – ಕ್ಷೌರಕತ್ತಿಯು ನನ್ನ ತಲೆಯ ಮೇಲೆ ಬಂದದ್ದಿಲ್ಲ; ನಾನು ಮಾತೃಗರ್ಭ ಬಿಟ್ಟಂದಿನಿಂದಲೇ ದೇವರಿಗೆ ಪ್ರತಿಷ್ಠಿತನಾದವನು. ನನ್ನ ತಲೆಯನ್ನು ಕ್ಷೌರಮಾಡುವದಾದರೆ ನನ್ನ ಶಕ್ತಿಯು ಹೋಗುವದು; ಮತ್ತು ನಾನು ಬಲಹೀನನಾಗಿ ಬೇರೆ ಮನುಷ್ಯನಂತಾಗುವೆನು ಎಂದು ತನ್ನ ಗುಟ್ಟನ್ನೆಲ್ಲಾ ಆಕೆಯ ಮುಂದೆ ಬಿಚ್ಚಿಹೇಳಿದನು. 18ಅವನು ಇದ್ದದ್ದನ್ನು ಇದ್ದ ಹಾಗೆಯೇ ಹೇಳಿದನೆಂದು ದೆಲೀಲಳು ತಿಳಿದು ಫಿಲಿಷ್ಟಿಯ ಪ್ರಭುಗಳ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ – ಇದೊಂದು ಸಾರಿ ಬನ್ನಿರಿ; ಅವನು ನನಗೆ ತನ್ನ ಹೃದಯವನ್ನೆಲ್ಲಾ ತಿಳಿಸಿದ್ದಾನೆ ಎಂದು ಹೇಳಿಸಿ ಕರಿಸಿದಳು. ಅವರು ಹಣವನ್ನು ತೆಗೆದುಕೊಂಡು ಆಕೆಯ ಬಳಿಗೆ ಬಂದರು. 19ಆಕೆಯು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನಿಗೆ ನಿದ್ರೆಹತ್ತಿದಾಗ ಒಬ್ಬ ಮನುಷ್ಯನಿಂದ ಅವನ ತಲೆಯ ಏಳು ಜಡೆಗಳನ್ನು ಬೋಳಿಸಿ ಅವನನ್ನು ದುರ್ಬಲಪಡಿಸಿದಳು. ಅವನ ಶಕ್ತಿಯು ಹೋಯಿತು, 20ಆಗ ಅವಳು – ಸಂಸೋನನೇ, ಫಿಲಿಷ್ಟಿಯರು ಬಂದಿದ್ದಾರೆಂದು ಕೂಗಲು ಅವನು ಎಚ್ಚತ್ತು – ಮುಂಚಿನಂತೆ ಈಗಲೂ ಕೊಸರಿಕೊಂಡು ಹೋಗುವೆನು ಅಂದುಕೊಂಡನು; ಆದರೆ ಯೆಹೋವನು ತನ್ನನ್ನು ಬಿಟ್ಟುಹೋಗಿದ್ದಾನೆಂಬದು ಅವನಿಗೆ ತಿಳಿಯಲಿಲ್ಲ. 21ಫಿಲಿಷ್ಟಿಯರು ಅವನನ್ನು ಹಿಡಿದು ಕಣ್ಣುಗಳನ್ನು ಕಿತ್ತು ಗಾಜಕ್ಕೆ ಒಯ್ದು ಕಬ್ಬಿಣದ ಬೇಡಿಗಳನ್ನು ಹಾಕಿ ಸೆರೆಮನೆಯಲ್ಲಿ ಬೀಸುವದಕ್ಕೆ ಹಚ್ಚಿದರು. 22ಅಷ್ಟರಲ್ಲಿ ಅವನ ತಲೆಗೂದಲುಗಳು ಬೆಳೆಯ ಹತ್ತಿದವು.
 
2 ಕೊರಿಂಥದವರಿಗೆ 6 14ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ. ಧರ್ಮಕ್ಕೂ ಅಧರ್ಮಕ್ಕೂ ಜೊತೆಯೇನು? 15ಬೆಳಕಿಗೂ ಕತ್ತಲೆಗೂ ಐಕ್ಯವೇನು? ಕ್ರಿಸ್ತನಿಗೂ ಸೈತಾನನಿಗೂ ಒಡನಾಟವೇನು? ನಂಬುವವನಿಗೂ ನಂಬದೆ ಇರುವವನಿಗೂ ಪಾಲುಗಾರಿಕೆ ಏನು? 16ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು? ನಾವು ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ. ಇದರ ಸಂಬಂಧವಾಗಿ ದೇವರು
ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು,
ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು
ಎಂದು ಹೇಳಿದ್ದಾನೆ. 17ಆದದರಿಂದ
ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ;
ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು ಹೇಳುತ್ತಾನೆ.
18ಇದಲ್ಲದೆ –
ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆ ತಂದೆಯಾಗಿರುವೆನು;
ನೀವು ನನಗೆ ಕುಮಾರ ಕುಮಾರಿಯರು ಆಗಿರುವಿರೆಂದು
ಸರ್ವಶಕ್ತನಾದ ಕರ್ತನು ಹೇಳುತ್ತಾನೆ.
 
 

ಸಂಸೋನನ ಮರಣ

23ಶತ್ರುವಾದ ಸಂಸೋನನನ್ನು ತಮ್ಮ ಕೈಗೆ ಒಪ್ಪಿಸಿದ ತಮ್ಮ ದೇವರಾದ ದಾಗೋನನಿಗೆ ಮಹಾಯಜ್ಞವನ್ನು ಸಮರ್ಪಿಸಿ ಸಂತೋಷಪಡಬೇಕೆಂದು ಫಿಲಿಷ್ಟಿಯ ಪ್ರಭುಗಳು ಕೂಡಿಬಂದರು. 24ಜನರು ಸಂಸೋನನನ್ನು ನೋಡಿ –
ನಮ್ಮ ದೇಶವನ್ನು ಹಾಳುಮಾಡಿ ನಮ್ಮಲ್ಲಿ ಅನೇಕರನ್ನು ಕೊಂದು ಹಾಕಿದ ಈ ಶತ್ರುವನ್ನು
ನಮ್ಮ ದೇವರು ನಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ
ಎಂದು ಗಾನಮಾಡಿದರು. 25ಅವರು ಆನಂದಲಹರಿಯಲ್ಲಿದ್ದಾಗ – ನಮ್ಮ ವಿನೋದಕ್ಕೋಸ್ಕರ ಸಂಸೋನನನ್ನು ಕರಕೊಂಡು ಬನ್ನಿರಿ ಅಂದರು; ಅದರಂತೆಯೇ ಸಂಸೋನನನ್ನು ಸೆರೆಮನೆಯಿಂದ ಕರಕೊಂಡು ಬಂದರು. ಅವನು ಎರಡು ಸ್ತಂಭಗಳ ನಡುವೆ ನಿಂತು ವಿನೋದಮಾಡಬೇಕಾಯಿತು. 26ಆಗ ಸಂಸೋನನು ತನ್ನನ್ನು ಕೈಹಿಡಿದು ನಡಿಸುವ ಹುಡುಗನಿಗೆ – ನನ್ನ ಕೈಗಳನ್ನು ಬಿಡು; ನಾನು ಕೈಯಾಡಿಸಿ ಮನೆಗೆ ಆಧಾರವಾಗಿರುವ ಸ್ತಂಭಗಳನ್ನು ಹುಡುಕಿ ಅವುಗಳಿಗೆ ಸ್ವಲ್ಪ ಒರಗಿಕೊಳ್ಳುತ್ತೇನೆ ಅಂದನು. 27ಆ ಮನೆಯು ಸ್ತ್ರೀಪುರುಷರಿಂದ ಕಿಕ್ಕಿರಿಯುತ್ತಿತ್ತು. ಫಿಲಿಷ್ಟಿಯರ ಅಧಿಪತಿಗಳೆಲ್ಲರೂ ಅಲ್ಲಿದ್ದರು; ಸಂಸೋನನ ವಿನೋದವನ್ನು ನೋಡುವದಕ್ಕಾಗಿ ಬಂದವರಲ್ಲಿ ಸುಮಾರು ಮೂರು ಸಾವಿರ ಮಂದಿ ಸ್ತ್ರೀಪುರುಷರು ಮಾಳಿಗೆಯ ಮೇಲಿದ್ದರು. 28ಆಗ ಸಂಸೋನನು ಯೆಹೋವನಿಗೆ – ಕರ್ತನೇ, ಯೆಹೋವನೇ, ಫಿಲಿಷ್ಟಿಯರು ಕಿತ್ತುಹಾಕಿದ ನನ್ನ ಎರಡೂ ಕಣ್ಣುಗಳಲ್ಲಿ ಒಂದಕ್ಕೋಸ್ಕರವಾದರೂ ನಾನು ಅವರಿಗೆ ಮುಯ್ಯಿತೀರಿಸುವ ಹಾಗೆ ನನ್ನನ್ನು ಈ ಸಾರಿ ಬಲಪಡಿಸು ಎಂದು ಮೊರೆಯಿಟ್ಟು 29ಮನೆಯ ಆಧಾರಸ್ತಂಭಗಳಲ್ಲಿ ಒಂದನ್ನು ಬಲಗೈಯಿಂದಲೂ ಇನ್ನೊಂದನ್ನು ಎಡಗೈಯಿಂದಲೂ ಹಿಡಿದು 30ಅವುಗಳನ್ನು ಒತ್ತಿ ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು ಎಂದು ಹೇಳಿ ಬಲವಾಗಿ ಬಾಗಿಕೊಳ್ಳಲು ಮನೆಯು ಅಧಿಪತಿಗಳ ಮೇಲೆಯೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೆಯೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಿತ್ತು.
31ಅವನ ಬಂಧುಗಳೂ ತಂದೆಯ ಮನೆಯವರೆಲ್ಲರೂ ಬಂದು ಅವನ ಶವವನ್ನು ಎತ್ತಿ ತೆಗೆದುಕೊಂಡು ಹೋಗಿ ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿದ್ದ ಅವನ ತಂದೆಯಾದ ಮಾನೋಹನ ಸಮಾಧಿಯಲ್ಲಿ ಹೂಣಿಟ್ಟರು. ಅವನು ಇಸ್ರಾಯೇಲ್ಯರನ್ನು ಇಪ್ಪತ್ತು ವರುಷ ಪಾಲಿಸಿದನು.
 

ಮೀಕನ ಮನೆಯ ವಿಗ್ರಹ

 

 1ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿ ಮೀಕನೆಂಬೊಬ್ಬ ಮನುಷ್ಯನಿದ್ದನು. 2ಅವನು ಒಂದಾನೊಂದು ದಿವಸ ತನ್ನ ತಾಯಿಗೆ – ಅಮ್ಮಾ, ಕಳವಾಗಿದ್ದ ನಿನ್ನ ಸಾವಿರದ ನೂರು ರೂಪಾಯಿಗಳಿಗೋಸ್ಕರ ನೀನು ನನಗೆ ಕೇಳಿಸುವಂತೆ ಶಪಿಸಿದಿಯಲ್ಲಾ; ಇಗೋ, ಆ ರೂಪಾಯಿಗಳು ನನ್ನ ಹತ್ತಿರ ಇವೆ; ನಾನು ತೆಗೆದುಕೊಂಡಿದ್ದೆನು ಎಂದು ಹೇಳಲು ಆಕೆಯು – ನನ್ನ ಮಗನೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ ಅಂದಳು. 3ಅವನು ಆ ಸಾವಿರದ ನೂರು ರೂಪಾಯಿಗಳನ್ನು ತನ್ನ ತಾಯಿಗೆ ಹಿಂದಕ್ಕೆ ಕೊಡಲು ಆಕೆಯು – ನನ್ನ ಮಗನಿಗೆ ಹಿತವಾಗಲೆಂದು ಈ ಹಣವನ್ನು ಯೆಹೋವನಿಗೆ ಹರಕೆ ಮಾಡಿದ್ದೇನೆ; ಇದರಿಂದ ಒಂದು ಎರಕದ ವಿಗ್ರಹವನ್ನು ಮಾಡಿಸಿ ನಿನ್ನ ವಶಕ್ಕೆ ಕೊಡುವೆನು ಎಂದು ಹೇಳಿ 4ಮಗನು ಹಿಂದಕ್ಕೆ ಕೊಟ್ಟ ರೂಪಾಯಿಗಳಲ್ಲಿ ಇನ್ನೂರು ರೂಪಾಯಿಗಳನ್ನು ತೆಗೆದು ಅಕ್ಕಸಾಲಿಗನಿಗೆ ಕೊಟ್ಟಳು. ಅವನು ಅವುಗಳಿಂದ ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನು ಮಾಡಿಕೊಟ್ಟನು. ಮೀಕನು ಅದನ್ನು ತನ್ನ ಮನೆಯಲ್ಲಿಟ್ಟುಕೊಂಡನು.

5ಈ ಮೀಕನು ಏಫೋದನ್ನೂ ವಿಗ್ರಹಗಳನ್ನೂ ಮಾಡಿಸಿ ಅವುಗಳನ್ನು ತಾನು ಕಟ್ಟಿಸಿದ ದೇವಸ್ಥಾನದಲ್ಲಿಟ್ಟು ತನ್ನ ಕುಮಾರರಲ್ಲೊಬ್ಬನನ್ನು ಅರ್ಚಕ ಸೇವೆಗೆ ಪ್ರತಿಷ್ಠಿಸಿದನು. 6ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ. ಪ್ರತಿಯೊಬ್ಬನೂ ಮನಸ್ಸಿಗೆ ಬಂದ ಹಾಗೆಯೇ ನಡೆಯುತ್ತಿದ್ದನು.
7ಯೆಹೂದದ ಬೇತ್ಲೆಹೇಮಿನವನೂ ಯೆಹೂದ ಕುಲದವನೂ ಆಗಿದ್ದ ಒಬ್ಬ ಯೌವನಸ್ಥನಾದ ಲೇವಿಯು 8ಉಪಜೀವನಕ್ಕೆ ಅನುಕೂಲವಾಗುವಲ್ಲಿ ವಾಸಿಸಬೇಕೆಂದು ಸ್ವಂತ ಊರನ್ನು ಬಿಟ್ಟು ಪ್ರಯಾಣ ಮಾಡುತ್ತಾ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದನು. 9ನೀನು ಎಲ್ಲಿಂದ ಬಂದಿ ಎಂದು ಮೀಕನು ಅವನನ್ನು ಕೇಳಲು ಅವನು – ನಾನು ಯೆಹೂದದ ಬೇತ್ಲೆಹೇಮಿನವನಾದ ಲೇವಿಯನು; ಉಪಜೀವನಕ್ಕೆ ಅನುಕೂಲವಾಗುವಲ್ಲಿ ವಾಸಿಸಬೇಕೆಂದು ಹೊರಟಿದ್ದೇನೆ ಎಂದು ಉತ್ತರಕೊಟ್ಟನು. 10ಮೀಕನು ಅವನಿಗೆ – ನೀನು ನಮ್ಮಲ್ಲಿರು; ನಮಗೆ ತಂದೆಯೂ ಯಾಜಕನೂ ಆಗು. ನಿನಗೆ ವರುಷಕ್ಕೆ ಹತ್ತು ರೂಪಾಯಿಗಳನ್ನೂ ಒಂದು ದುಸ್ತು ಬಟ್ಟೆಯನ್ನೂ ಆಹಾರವನ್ನೂ ಕೊಡುತ್ತೇನೆ ಅನ್ನಲು 11ಆ ಲೇವಿಯನು ಒಪ್ಪಿಕೊಂಡು ಅಲ್ಲೇ ವಾಸಮಾಡಿದನು; ಹೀಗೆ ಆ ಯೌವನಸ್ಥನು ಅವನ ಮಕ್ಕಳಲ್ಲೊಬ್ಬನಂತಾದನು. 12ಮೀಕನು ಯೌವನಸ್ಥನಾದ ಆ ಲೇವಿಯನನ್ನು ಯಾಜಕಸೇವೆಗೋಸ್ಕರ ಪ್ರತಿಷ್ಠಿಸಿ ತನ್ನ ಮನೆಯಲ್ಲಿಟ್ಟುಕೊಂಡು – 13ಒಬ್ಬ ಲೇವಿಯು ತನ್ನ ಮನೆಯಲ್ಲಿ ಯಾಜಕನಾಗಿರುವದರಿಂದ ಯೆಹೋವನು ನನ್ನನ್ನು ಆಶೀರ್ವದಿಸುವನೆಂದು ಬಲ್ಲೆನು ಅಂದುಕೊಂಡನು.
 

ದಾನ್ಯರು ಲಯಿಷ್ ದೇಶದಲ್ಲಿ ನೆಲೆಸಿದರು

18 ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ. ದಾನ್‍ಕುಲದವರಿಗೆ ಆವರೆಗೂ ಇಸ್ರಾಯೇಲ್ಯರಲ್ಲಿ ಸ್ವಾಸ್ತ್ಯವು ಸಿಕ್ಕದ್ದರಿಂದ ಅವರು ತಮಗೋಸ್ಕರ ವಾಸಸ್ಥಳವನ್ನು ಹುಡುಕುತ್ತಿದ್ದರು. 2ಮತ್ತು ಅವರು ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಿಂದ ತಮ್ಮ ಕುಲದಲ್ಲಿ ಐದು ಮಂದಿ ಪರಾಕ್ರಮ ಶಾಲಿಗಳಾದ ಗೂಢಚಾರರನ್ನು ಆರಿಸಿ ಅವರಿಗೆ – ನೀವು ಹೋಗಿ [ಲಯಿಷ್] ದೇಶವನ್ನು ಸಂಚರಿಸಿ ನೋಡಿರಿ ಎಂದು ಆಜ್ಞಾಪಿಸಿ ಕಳುಹಿಸಿದರು. ಇವರು ಪ್ರಯಾಣಮಾಡುತ್ತಾ ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿದ್ದ ಮೀಕನ ಮನೆಗೆ ಬಂದು ಇಳುಕೊಂಡರು. 3ಇವರು ಮೀಕನ ಮನೆಯ ಹತ್ತಿರದಲ್ಲಿ ಆ ಯೌವನಸ್ಥನಾದ ಲೇವಿಯನು ಮಾತಾಡುವದನ್ನು ಕೇಳಿ ಗುರುತುಹಿಡಿದು ಅವನ ಬಳಿಗೆ ಹೋಗಿ – ನಿನ್ನನ್ನು ಇಲ್ಲಿಗೆ ಕರತಂದವರಾರು? ಇಲ್ಲಿ ಏನು ಕೆಲಸ ಮಾಡುತ್ತೀ? ಏನು ಸಿಕ್ಕುತ್ತದೆ ಎಂದು ಅವನನ್ನು ಕೇಳಲು ಅವನು, 4ಮೀಕನು ತನಗೆ ಇಂಥಿಂಥವುಗಳನ್ನು ಸಂಬಳವಾಗಿ ಕೊಡುತ್ತಾನೆಂದೂ ತಾನು ಅವನ ಯಾಜಕನಾಗಿದ್ದೇನೆಂದೂ ಹೇಳಿದನು. 5ಆಗ ಅವರು ಅವನಿಗೆ – ದಯವಿಟ್ಟು ನಮ್ಮ ಪ್ರಯಾಣವು ಸಫಲವಾಗುವದೋ ಇಲ್ಲವೋ ಎಂಬದನ್ನು ದೇವರ ಸನ್ನಿಧಿಯಲ್ಲಿ ವಿಚಾರಿಸು ಎಂದು ಬೇಡಿಕೊಳ್ಳಲು 6ಅವನು – ಸಮಾಧಾನದಿಂದ ಹೋಗಿರಿ; ಯೆಹೋವನು ನಿಮ್ಮ ಪ್ರಯಾಣವನ್ನು ಕಟಾಕ್ಷಿಸುವನು ಅಂದನು.
7ಆ ಐದು ಮಂದಿ ಹೊರಟು ಲಯಿಷಿಗೆ ಬಂದು – ಅಲ್ಲಿನ ಜನರು ನಿರ್ಭೀತರಾಗಿ ಚೀದೋನ್ಯರಂತೆ ಸುಖ ಸಮಾಧಾನಗಳಿಂದ ಜೀವಿಸುತ್ತಾರೆ; ಅವರನ್ನು ತಗ್ಗಿಸುವ ಅಧಿಕಾರಿಗಳು ದೇಶದಲ್ಲಿಲ್ಲ; ಅವರು ಚೀದೋನ್ಯರಿಗೆ ದೂರವಾಗಿದ್ದು ಯಾರೊಡನೆಯೂ ಬಳಕೆಯಿಲ್ಲದವರು ಎಂಬದನ್ನು ತಿಳಿದುಕೊಂಡು 8ಹಿಂದಿರುಗಿ ಚೊರ್ಗಾ, ಎಷ್ಟಾವೋಲ್ ಎಂಬ ಊರುಗಳಲ್ಲಿರುವ ತಮ್ಮ ಬಂಧುಗಳ ಬಳಿಗೆ ಬಂದರು. ಅವರ ಬಂಧುಗಳು – ನೀವು ಯಾವ ವರ್ತಮಾನ ತಂದಿದ್ದೀರಿ ಎಂದು ಅವರನ್ನು ಕೇಳಲು 9ಅವರು – ಏಳಿರಿ, ಅವರಿಗೆ ವಿರೋಧವಾಗಿ ಯುದ್ಧಕ್ಕೆ ಹೋಗೋಣ. ನಾವು ಆ ದೇಶವನ್ನು ನೋಡಿದೆವು; ಅದು ಬಹು ಉತ್ತಮದೇಶ. ನೀವು ಸುಮ್ಮನೆ ಕೂತುಕೊಳ್ಳುವದೇಕೆ? ತಡಮಾಡದೆ ಹೊರಡಿರಿ; ಆ ದೇಶವನ್ನು ಸ್ವತಂತ್ರಿಸಿಕೊಳ್ಳೋಣ. 10ನೀವು ಅಲ್ಲಿಗೆ ಹೋಗುವದಾದರೆ ಅಲ್ಲಿನ ಜನರು ನಿರ್ಭಯದಿಂದ ಜೀವಿಸುವವರೆಂದೂ ಅವರ ದೇಶವು ಬಹು ವಿಸ್ತಾರವಾಗಿದೆಯೆಂದೂ ತಿಳಿದುಕೊಳ್ಳುವಿರಿ. ದೇವರು ಅದನ್ನು ನಿಮ್ಮ ಕೈಗೆ ಒಪ್ಪಿಸಿದ್ದಾನೆ; ಅದರಲ್ಲಿ ದೊರಕದಿರುವ ಪದಾರ್ಥಗಳು ಲೋಕದಲ್ಲೇ ಇಲ್ಲ ಅಂದರು.
11ಆಗ ಚೊರ್ಗಾ ಎಷ್ಟಾವೋಲ್ ಊರುಗಳಿಂದ ಆರುನೂರು ಮಂದಿ ದಾನ್‍ಕುಲದವರು ಯುದ್ಧ ಸನ್ನದ್ಧರಾಗಿ ಹೊರಟು 12ಗಟ್ಟಾಹತ್ತಿ ಯೆಹೂದದ ಕಿರ್ಯತ್ಯಾರೀಮಿನ ಬಳಿಯಲ್ಲಿ ಇಳುಕೊಂಡರು. ಆದದರಿಂದ ಆ ಸ್ಥಳಕ್ಕೆ ಇಂದಿನವರೆಗೂ ದಾನ್ಯರ ಪಾಳೆಯವೆಂಬ ಹೆಸರಿದೆ; ಅದು ಕಿರ್ಯತ್ಯಾರೀಮಿನ ಪಶ್ಚಿಮದಲ್ಲಿರುತ್ತದೆ. 13ಅವರು ಅಲ್ಲಿಂದ ಮುಂದೆ ಪ್ರಯಾಣಮಾಡಿ ಎಫ್ರಾಯೀಮ್ ಪರ್ವತಪ್ರದೇಶದಲ್ಲಿದ್ದ ಮೀಕನ ಮನೆಯ ಹತ್ತಿರ ಬಂದರು. 14ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡುವದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ – ಈ ಗ್ರಾಮದಲ್ಲಿ ಒಂದು ಏಫೋದೂ ದೇವತಾಪ್ರತಿಮೆಗಳೂ ಕೆತ್ತನೆಯ ಮತ್ತು ಎರಕದ ವಿಗ್ರಹಗಳೂ ಇರುತ್ತವೆಂಬದು ನಿಮಗೆ ಗೊತ್ತುಂಟೋ? 15ಈ ವಿಷಯದಲ್ಲಿ ಏನು ಮಾಡಬೇಕೆಂಬದನ್ನು ಆಲೋಚಿಸಿರಿ ಎಂದು ಹೇಳಿ ತಾವು ಅಲ್ಲಿಂದ ಮೀಕನ ಮನೆಯಲ್ಲಿದ್ದ ಆ ಯೌವನಸ್ಥನಾದ ಲೇವಿಯನ ಬಳಿಗೆ ಬಂದು ಅವನ ಕ್ಷೇಮಸಮಾಚಾರವನ್ನು ವಿಚಾರಿಸಹತ್ತಿದರು. 16ಇಷ್ಟರಲ್ಲಿ ಯುದ್ಧಸನ್ನದ್ಧರಾದ ಆರುನೂರು ಮಂದಿ ದಾನ್ಯರು ಬಂದು ಬಾಗಲಲ್ಲಿ ನಿಂತರು. 17ಯಾಜಕನೂ ಬಂದು ಇವರೊಡನೆ ಬಾಗಲಲ್ಲಿ ನಿಂತಿದ್ದಾಗ ಆ ಐದು ಮಂದಿ ಮನೆಯನ್ನು ಹೊಕ್ಕು ಕೆತ್ತನೆಯ ಮತ್ತು ಎರಕದ ವಿಗ್ರಹಗಳನ್ನೂ ಏಫೋದನ್ನೂ ದೇವತಾ ಪ್ರತಿಮೆಗಳನ್ನೂ ತೆಗೆದುಕೊಂಡರು. 18ಅವರು ಮೀಕನ ಮನೆಯನ್ನು ಹೊಕ್ಕು ಅವುಗಳನ್ನು ತೆಗೆದುಕೊಂಡು ಬರುವಾಗ ಯಾಜಕನು ಕಂಡು ಅವರಿಗೆ – ನೀವು ಮಾಡಿದ್ದೇನು ಅಂದನು. 19ಅವರು ಅವನಿಗೆ – ಸುಮ್ಮನಿರು; ಬಾಯಿ ಮುಚ್ಚು; ನಮ್ಮ ಜೊತೆಯಲ್ಲಿ ಬಂದು ನಮಗೆ ತಂದೆಯೂ ಯಾಜಕನೂ ಆಗಿರು. ಒಂದು ಮನೆಗೆ ಯಾಜಕನಾಗಿರುವದು ಉತ್ತಮವೋ ಅಥವಾ ಇಸ್ರಾಯೇಲ್ಯರ ಒಂದು ಕುಲಕ್ಕೂ ಗೋತ್ರಕ್ಕೂ ಯಾಜಕನಾಗಿರುವದು ಉತ್ತಮವೋ ಅಂದರು. 20ಯಾಜಕನು ಈ ಮಾತನ್ನು ಕೇಳಿ ಸಂತೋಷಪಟ್ಟು ಏಫೋದನ್ನೂ ದೇವತಾಪ್ರತಿಮೆಗಳನ್ನೂ ಕೆತ್ತನೆಯ ವಿಗ್ರಹವನ್ನೂ ತೆಗೆದುಕೊಂಡು ಅವರ ಬಳಿಗೆ ಬಂದನು. 21ತರುವಾಯ ಅವರು ತಮ್ಮ ಹೆಂಡರು ಮಕ್ಕಳನ್ನೂ ಕುರಿದನ ಮೊದಲಾದ ಸೊತ್ತನ್ನೂ ಮುಂದಾಗಿ ಕಳುಹಿಸಿ ತಾವು ಹಿಂದಿನಿಂದ ಹೊರಟರು.
22ಅವರು ಮೀಕನ ಮನೆಗೆ ದೂರವಾದ ಮೇಲೆ ಮೀಕನೂ ಅವನ ನೆರೆಹೊರೆಯವರೆಲ್ಲರೂ ದಾನ್ಯರನ್ನು ಹಿಂದಟ್ಟಿ 23ಅವರ ಸಮೀಪಕ್ಕೆ ಹೋಗಿ ಅವರನ್ನು ಕೂಗಿದರು. ದಾನ್ಯರು ಹಿಂದಿರುಗಿ ನೋಡಿ ಮೀಕನಿಗೆ – ನಿನಗೇನಾಯಿತು? ಗುಂಪನ್ನು ಕೂಡಿಸಿಕೊಂಡು ಬಂದದ್ದೇಕೆ ಎಂದು ಕೇಳಲು 24ಅವನು – ನೀವು ಯಾಜಕನನ್ನೂ ನಾನು ಮಾಡಿಸಿಕೊಂಡ ದೇವರುಗಳನ್ನೂ ಅಪಹರಿಸಿಕೊಂಡಿದ್ದೀರಿ ನನಗೆ ಇನ್ನೇನಿದೆ; ಹೀಗಿರಲಾಗಿ ನಿನಗೇನಾಯಿತೆಂದು ನೀವು ನನ್ನನ್ನು ಕೇಳುವದು ಹೇಗೆ ಅಂದನು. 25ದಾನ್ಯರು ಅವನಿಗೆ – ನಮ್ಮಲ್ಲಿ ಕೆಲವರು ಸಿಟ್ಟಿನವರಿದ್ದಾರೆ; ಅವರು ನಿಮ್ಮ ಮೇಲೆ ಬಿದ್ದರೆ ನೀನೂ ನಿನ್ನ ಮನೆಯವರೂ ಪ್ರಾಣನಷ್ಟಪಟ್ಟೀರಿ; ಆದದರಿಂದ ಬಾಯಿಮುಚ್ಚಿಕೊಂಡು ಹೋಗು ಎಂದು ಹೇಳಿ ಮುಂದೆ ನಡೆದರು. 26ಅವರು ತನಗಿಂತ ಬಲಿಷ್ಠರೆಂದು ಮೀಕನು ತಿಳಿದು ಹಿಂದಿರುಗಿ ಮನೆಗೆ ಹೋದನು.
27ದಾನ್ಯರು ಮೀಕನು ಮಾಡಿಸಿದ್ದ ವಿಗ್ರಹಗಳನ್ನೂ ಅವನ ಯಾಜಕನನ್ನೂ ಅಪಹರಿಸಿಕೊಂಡು ಲಯಿಷಿಗೆ ಹೋಗಿ ಸುಖದಿಂದಲೂ ನಿರ್ಭಯದಿಂದಲೂ ವಾಸವಾಗಿದ್ದ ಅಲ್ಲಿನ ಜನರ ಮೇಲೆ ಬಿದ್ದು ಅವರನ್ನು ಕತ್ತಿಯಿಂದ ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟರು. 28ಆ ಪಟ್ಟಣವು ಚೀದೋನಿಗೆ ದೂರವಾಗಿದ್ದದ್ದರಿಂದಲೂ ಸಮೀಪದಲ್ಲಿ ಪರಿಚಯಸ್ಥರಾರೂ ಇಲ್ಲದ್ದರಿಂದಲೂ ಅವರಿಗೆ ಸಹಾಯದೊರಕಲಿಲ್ಲ. ಬೇತ್‍ರೆಹೋಬಿನ ತಗ್ಗಿನಲ್ಲಿದ್ದ ಈ ಪಟ್ಟಣವನ್ನು ದಾನ್ಯರು ತಿರಿಗಿ ಕಟ್ಟಿಸಿ ಅದರಲ್ಲಿ ವಾಸಿಸಿದರು. 29ಮುಂಚೆ ಲಯಿಷ್ ಎಂಬ ಹೆಸರಿದ್ದ ಆ ಪಟ್ಟಣಕ್ಕೆ ಈಗ ದಾನ್ ಎಂದು ಹೆಸರಿಟ್ಟರು. ದಾನ್ ಎಂಬದು ಇವರ ಮೂಲಪುರುಷನೂ ಇಸ್ರಾಯೇಲನ ಮಗನೂ ಆದವನ ಹೆಸರು.
30ಇದಲ್ಲದೆ ದಾನ್ಯರು ಆ ವಿಗ್ರಹವನ್ನು ತಮ್ಮ ಪಟ್ಟಣದಲ್ಲಿಟ್ಟರು. ಇಸ್ರಾಯೇಲ್ಯರು ಸೆರೆಗೆ ಹೋಗುವವರೆಗೆ ಮೋಶೆಯ ಮೊಮ್ಮಗನೂ ಗೇರ್ಷೋಮನ ಮಗನೂ ಆದ ಯೆಹೋನಾತಾನನೂ ಅವನ ವಂಶದವರೂ ದಾನ್ಯರಿಗೆ ಯಾಜಕರಾಗಿದ್ದರು. 31ಶೀಲೋವಿನಲ್ಲಿ ದೇವಸ್ಥಾನವಿದ್ದ ಕಾಲದಲ್ಲೆಲ್ಲಾ ದಾನ್ಯರಲ್ಲಿ ಮೀಕನು ಮಾಡಿಸಿದ ವಿಗ್ರಹವಿತ್ತು.
 
ಅಪೊಸ್ತಲರ ಕೃತ್ಯಗಳು 14 ಪೋಸ್ತಲರ ಕೃತ್ಯಗಳಲ್ಲಿ ಪೌಲನ ಮೂಲಕ ಪವಿತ್ರಾತ್ಮನು
ಇಕೋನ್ಯ
14 ಇಕೋನ್ಯದಲ್ಲಿ ಪೌಲ ಬಾರ್ನಬರು ಅದೇ ಪ್ರಕಾರವಾಗಿ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಬಲವಾಗಿ ಮಾತಾಡಿದ್ದರಿಂದ ಯೆಹೂದ್ಯರಲ್ಲಿಯೂ ಗ್ರೀಕರಲ್ಲಿಯೂ ಬಹುಮಂದಿ ನಂಬುವವರಾದರು. 2ಆದರೆ ನಂಬದೆ ಹೋದ ಯೆಹೂದ್ಯರು ಅನ್ಯಜನರ ಮನಸ್ಸನ್ನು ಸಹೋದರರಿಗೆ ವಿರುದ್ಧವಾಗಿ ರೇಗಿಸಿ ಕೆಡಿಸಿದರು. 3ಹೀಗಿರಲಾಗಿ ಪೌಲ ಬಾರ್ನಬರು ಬಹುಕಾಲ ಅಲ್ಲಿದ್ದು ಕರ್ತನು ಅವರ ಕೈಯಿಂದ ಸೂಚಕ ಕಾರ್ಯಗಳೂ ಅದ್ಭುತಕಾರ್ಯಗಳೂ ಆಗುವಂತೆ ದಯಪಾಲಿಸಿ ತನ್ನ ಕೃಪಾವಾಕ್ಯಕ್ಕೆ ಸಾಕ್ಷಿಕೊಟ್ಟದ್ದರಿಂದ ಆತನ ಮೇಲೆ ಭರವಸವಿಟ್ಟು ಧೈರ್ಯದಿಂದ ಮಾತಾಡುತ್ತಿದ್ದರು. 4ಆಗ ಆ ಊರಿನ ಜನರಲ್ಲಿ ಭೇದವುಂಟಾಯಿತು; ಕೆಲವರು ಯೆಹೂದ್ಯರ ಪಕ್ಷದವರಾದರು, ಕೆಲವರು ಅಪೊಸ್ತಲರ ಪಕ್ಷದವರಾದರು. 5ಅನ್ಯಜನರೂ ಯೆಹೂದ್ಯರೂ ಕೂಡಿ ತಮ್ಮ ಅಧಿಪತಿಗಳ ಸಮ್ಮತಿಯಿಂದ ಅಪೊಸ್ತಲರನ್ನು ಅವಮಾನಪಡಿಸುವದಕ್ಕೂ ಕಲ್ಲೆಸೆದು ಕೊಲ್ಲುವದಕ್ಕೂ ಪ್ರವರ್ತಿಸಿದಾಗ 6ಅಪೊಸ್ತಲರು ಅದನ್ನು ತಿಳಿದು ಓಡಿಹೋಗಿ ಲುಕವೋನ್ಯದಲ್ಲಿದ್ದ ಲುಸ್ತ್ರ ದೆರ್ಬೆ ಎಂಬ ಊರುಗಳಿಗೂ 7ಅವುಗಳಿಗೆ ಸೇರಿರುವ ಸೀಮೆಗೂ ಹೋಗಿ ಅಲ್ಲಿ ಸುವಾರ್ತೆಯನ್ನು ಸಾರಿದರು.
ಲುಸ್ತ್ರ ಮತ್ತು ದೆರ್ಬೆ
8ಲುಸ್ತ್ರದೊಳಗೆ ಕಾಲುಗಳಲ್ಲಿ ಬಲವಿಲ್ಲದ ಒಬ್ಬ ಮನುಷ್ಯನು ಕೂತಿದ್ದನು. ಅವನು ಹುಟ್ಟುಕುಂಟನಾಗಿದ್ದು ಎಂದಿಗೂ ನಡೆಯದೆ ಇದ್ದವನು. 9ಪೌಲನು ಆಡುವ ಮಾತುಗಳನ್ನು ಅವನು ಕಿವಿಗೊಟ್ಟು ಕೇಳುತ್ತಿದ್ದನು. ಪೌಲನು ಅವನನ್ನು ಸ್ಥಿರವಾಗಿ ನೋಡಿ ವಾಸಿಯಾಗುವದಕ್ಕೆ ಬೇಕಾದ ನಂಬಿಕೆಯು ಅವನಲ್ಲಿ ಉಂಟೆಂದು ತಿಳಿದು – 10ನಿನ್ನ ಕಾಲೂರಿ ನೆಟ್ಟಗೆ ನಿಂತುಕೋ ಎಂದು ಮಹಾಧ್ವನಿಯಿಂದ ಹೇಳಿದನು. ಕೂಡಲೆ ಆ ಮನುಷ್ಯನು ಹಾರಿ ನಡೆದಾಡಿದನು. 11ಪೌಲನು ಮಾಡಿದ್ದನ್ನು ಗುಂಪುಕೂಡಿದ್ದ ಜನರು ನೋಡಿ – ದೇವತೆಗಳು ಮನುಷ್ಯರ ರೂಪದಿಂದ ನಮ್ಮ ಬಳಿಗೆ ಇಳಿದು ಬಂದರು ಎಂದು ಲುಕವೋನ್ಯ ಭಾಷೆಯಲ್ಲಿ ಕೂಗಾಡಿದರು. 12ಬಾರ್ನಬನನ್ನು ದ್ಯೌಸ್‍ದೇವರೆಂತಲೂ ಪೌಲನು ಮಾತಾಡುವದರಲ್ಲಿ ಮುಖ್ಯನಾದ್ದರಿಂದ ಅವನನ್ನು ಹೆರ್ಮೆದೇವರೆಂತಲೂ ಅಂದುಕೊಂಡರು. 13ಊರ ಮುಂದಿದ್ದ ದ್ಯೌಸ್‍ದೇವರ ದೇವಸ್ಥಾನದ ಪೂಜಾರಿಯು ಎತ್ತುಗಳನ್ನೂ ಹೂವಿನ ಹಾರಗಳನ್ನೂ ಊರ ಬಾಗಿಲಿನ ಹತ್ತರಕ್ಕೆ ತಂದು ಜನರೊಂದಿಗೆ ಅವರಿಗೆ ಬಲಿಕೊಡಬೇಕೆಂದಿದ್ದನು. 14ಇದನ್ನು ಕೇಳಿ ಅಪೊಸ್ತಲರಾದ ಬಾರ್ನಬ ಪೌಲರು ತಮ್ಮ ವಸ್ತ್ರಗಳನ್ನು ಹರಕೊಂಡು ಜನರ ಗುಂಪಿನೊಳಗೆ ಕೂಗುತ್ತಾ ನುಗ್ಗಿ – 15ಜನರೇ, ನೀವು ಮಾಡುವದು ಇದೇನು? ನಾವೂ ಮನುಷ್ಯರು, ನಿಮ್ಮಂಥ ಸ್ವಭಾವವುಳ್ಳವರು. ನೀವು ಈ ವ್ಯರ್ಥವಾದ ಕೆಲಸಗಳನ್ನು ಬಿಟ್ಟುಬಿಟ್ಟು ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣಮಾಡಿದ ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ಸುವಾರ್ತೆಯನ್ನು ನಿಮಗೆ ಸಾರಿಹೇಳುವವರಾಗಿದ್ದೇವೆ. 16ಗತಿಸಿಹೋದ ಕಾಲದಲ್ಲಿ ಆತನು ಎಲ್ಲಾ ಜನಾಂಗಗಳನ್ನು ತಮ್ಮ ತಮ್ಮ ಮನಸ್ಸಿಗೆ ತೋಚಿದ ಮಾರ್ಗಗಳಲ್ಲಿ ನಡೆಯುವದಕ್ಕೆ ಬಿಟ್ಟನು. 17ಆದರೂ ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರ ಮಾಡುತ್ತಾ ಬಂದವನು ಆತನೇ ಎಂದು ಹೇಳಿದರು. 18ಅವರು ಈ ಮಾತುಗಳನ್ನು ಹೇಳಿದರೂ ಜನರನ್ನು ತಮಗೆ ಬಲಿಕೊಡದಂತೆ ತಡೆಯುವದು ಕಷ್ಟವಾಗಿತ್ತು.
19ತರುವಾಯ ಅಂತಿಯೋಕ್ಯದಿಂದಲೂ ಇಕೋನ್ಯದಿಂದಲೂ ಯೆಹೂದ್ಯರು ಬಂದು ಜನರನ್ನು ಪ್ರೇರೇಪಿಸಿ ಪೌಲನನ್ನು ಕೊಲ್ಲುವದಕ್ಕೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಊರಹೊರಕ್ಕೆ ಎಳೆದುಬಿಟ್ಟರು. 20ಆದರೆ ಶಿಷ್ಯರು ಅವನ ಸುತ್ತಲು ನಿಂತುಕೊಂಡಿರುವಾಗ ಅವನು ಎದ್ದು ಊರೊಳಕ್ಕೆ ಹೋದನು. ಮರುದಿನ ಬಾರ್ನಬನ ಜೊತೆಯಲ್ಲಿ ದೆರ್ಬೆಗೆ ಹೊರಟನು.
 
ಸಿರಿಯಾದ ಅಂತಿಯೋಕ್ಯಗೆ  ಹಿಂತಿರುಗಿದ್ದು
21ಆ ಊರಿನಲ್ಲಿ ಅವರು ಸುವಾರ್ತೆಯನ್ನು ಸಾರಿ ಅನೇಕರನ್ನು ಶಿಷ್ಯರಾಗಿ ಮಾಡಿದ ಮೇಲೆ ಹಿಂತಿರಿಗಿ ಲುಸ್ತ್ರಕ್ಕೂ ಇಕೋನ್ಯಕ್ಕೂ ಅಂತಿಯೋಕ್ಯಕ್ಕೂ ಬಂದು ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿದರು. 22ನಾವು ಬಹು ಸಂಕಟಗಳನ್ನು ತಾಳಿ ದೇವರ ರಾಜ್ಯದೊಳಗೆ ಸೇರಬೇಕೆಂಬದಾಗಿ ಎಚ್ಚರಿಕೆಯ ಮಾತನ್ನು ಹೇಳಿ ಕ್ರಿಸ್ತನಂಬಿಕೆಯಲ್ಲಿ ಸ್ಥಿರವಾಗಿರ್ರಿ ಎಂದು ಅವರನ್ನು ಧೈರ್ಯಗೊಳಿಸಿದರು. 23ಇದಲ್ಲದೆ ಪ್ರತಿಸಭೆಯಲ್ಲಿ ಸಭೆಯವರ ಸಮ್ಮತಿಯಿಂದ ಹಿರಿಯರನ್ನು ಗೊತ್ತು ಮಾಡಿ ನೇಮಿಸಿ ಉಪವಾಸವಿದ್ದು ಪ್ರಾರ್ಥನೆ ಮಾಡಿ ಅವರು ನಂಬಿದ್ದ ಕರ್ತನ ಕೈಗೆ ಅವರನ್ನು ಒಪ್ಪಿಸಿದರು. 24ತರುವಾಯ ಪಿಸಿದ್ಯಸೀಮೆಯನ್ನು ಹಾದು ಪಂಫುಲ್ಯಸೀಮೆಗೆ ಬಂದು 25ಅದಕ್ಕೆ ಸೇರಿರುವ ಪೆರ್ಗೆಯಲ್ಲಿ ಕರ್ತನ ವಾಕ್ಯವನ್ನು ಹೇಳಿದ ಮೇಲೆ ಅತಾಲ್ಯಕ್ಕೆ ಇಳಿದು ಅಲ್ಲಿಂದ ಸಮುದ್ರಪ್ರಯಾಣವಾಗಿ ಅಂತಿಯೋಕ್ಯಕ್ಕೆ ಮುಟ್ಟಿದರು. 26ಅವರು ನೆರವೇರಿಸಿ ಬಂದ ಕೆಲಸಕ್ಕೋಸ್ಕರ ದೇವರ ಕೃಪಾಶ್ರಯಕ್ಕೆ ಒಪ್ಪಿಸಲ್ಪಟ್ಟವರಾಗಿ ಆ ಊರಿಂದಲೇ ಹೊರಟಿದ್ದರು. 27ಅಲ್ಲಿ ಸಭೆಯನ್ನು ಕೂಡಿಸಿ ದೇವರು ತಮ್ಮೊಂದಿಗಿದ್ದು ಮಾಡಿದ್ದೆಲ್ಲವನ್ನೂ ಆತನು ಅನ್ಯಜನರಿಗೆ ನಂಬಿಕೆಯ ಬಾಗಿಲನ್ನು ತೆರೆದದ್ದನ್ನೂ ವಿವರವಾಗಿ ಹೇಳಿದರು. 28ತರುವಾಯ ಅವರು ಅಲ್ಲಿ ಶಿಷ್ಯರ ಸಂಗಡ ಬಹುಕಾಲ ಇದ್ದರು.
 
ಥೆಸಲೋನಿಕದಲ್ಲಿ
17 ಮುಂದೆ ಅವರು ಮಾರ್ಗಹಿಡಿದು ಅಂಫಿಪೊಲಿ ಅಪೊಲೋನ್ಯ ಎಂಬ ಊರುಗಳನ್ನು ದಾಟಿ ಥೆಸಲೋನಿಕಕ್ಕೆ ಬಂದರು. ಅಲ್ಲಿ ಯೆಹೂದ್ಯರದೊಂದು ಸಭಾಮಂದಿರವಿತ್ತು. 2ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್‍ದಿನಗಳಲ್ಲಿ ಶಾಸ್ತ್ರಾಧಾರದಿಂದ ಅವರ ಸಂಗಡ ವಾದಿಸಿ 3ಆಯಾ ವಚನಗಳ ಅರ್ಥವನ್ನು ಬಿಚ್ಚಿ – ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತು ಎದ್ದುಬರುವದು ಅಗತ್ಯವೆಂತಲೂ ನಾನು ನಿಮಗೆ ಪ್ರಸಿದ್ಧಿಪಡಿಸುವ ಯೇಸುವೇ ಆ ಕ್ರಿಸ್ತನೆಂತಲೂ ಸ್ಥಾಪಿಸಿದನು. 4ಅವರಲ್ಲಿ ಕೆಲವರೂ ದೇವಭಕ್ತರಾದ ಗ್ರೀಕರಲ್ಲಿ ದೊಡ್ಡ ಗುಂಪೂ ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ಒಡಂಬಟ್ಟು ಪೌಲ ಸೀಲರನ್ನು ಸೇರಿಕೊಂಡರು. 5ಯೆಹೂದ್ಯರು ಹೊಟ್ಟೇಕಿಚ್ಚುಪಟ್ಟು ಪೇಟೆಯಲ್ಲಿ ತಿರುಗಾಡುವ ಕೆಲವು ಪೋಕರನ್ನು ಕರೆದುಕೊಂಡು ಬಂದು ಗುಂಪುಕೂಡಿಸಿ ಊರಲ್ಲಿ ಗದ್ದಲ ಎಬ್ಬಿಸಿ ಪೌಲ ಸೀಲರನ್ನು ಪಟ್ಟಣದ ಸಭೆಗೆದುರಿಗೆ ತರಬೇಕೆಂದು ಅವರನ್ನು ಹುಡುಕುತ್ತಾ ಯಾಸೋನನ ಮನೆಯ ಮೇಲೆ ಬಿದ್ದರು. 6ಅವರು ಸಿಕ್ಕದೆ ಹೋದದ್ದರಿಂದ ಆ ಜನರು ಯಾಸೋನನನ್ನೂ ಕೆಲವು ಮಂದಿ ಸಹೋದರರನ್ನೂ ಊರಿನ ಅಧಿಕಾರಿಗಳ ಬಳಿಗೆ ಎಳಕೊಂಡು ಹೋಗಿ – ಲೋಕವನ್ನು ಅಲ್ಲಕಲ್ಲೋಲ ಮಾಡಿದ ಆ ಮನುಷ್ಯರು ಇಲ್ಲಿಗೂ ಬಂದಿದ್ದಾರೆ, 7ಯಾಸೋನನು ಅವರನ್ನು ಸೇರಿಸಿಕೊಂಡಿದ್ದಾನೆ, ಅವರೆಲ್ಲರು ಯೇಸುವೆಂಬ ಬೇರೊಬ್ಬ ಅರಸನು ಇದ್ದಾನೆಂದು ಹೇಳಿ ಚಕ್ರವರ್ತಿಯ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಾರೆ ಎಂದು ಕೂಗಿದರು. 8ಪಟ್ಟಣದವರೂ ಪಟ್ಟಣದ ಅಧಿಕಾರಿಗಳೂ ಈ ಮಾತುಗಳನ್ನು ಕೇಳಿ ಕಳವಳಪಟ್ಟು 9ಯಾಸೋನ ಮೊದಲಾದವರಿಂದ ಹೊಣೆ ತೆಗೆದುಕೊಂಡರು; ತೆಗೆದುಕೊಂಡ ಮೇಲೆ ಅವರನ್ನು ಬಿಟ್ಟುಬಿಟ್ಟರು.
 
ಬೆರೋಯದಲ್ಲಿ
10ಕೂಡಲೇ ಸಹೋದರರು ರಾತ್ರಿಯಲ್ಲಿ ಪೌಲ ಸೀಲರನ್ನು ಬೆರೋಯಕ್ಕೆ ಕಳುಹಿಸಿಬಿಟ್ಟರು. ಅವರು ಅಲ್ಲಿಗೆ ಸೇರಿ ಯೆಹೂದ್ಯರ ಸಭಾಮಂದಿರದೊಳಕ್ಕೆ ಹೋದರು. 11ಆ ಸಭೆಯವರು ಥೆಸಲೋನಿಕದವರಿಗಿಂತ ಸದ್ಗುಣವುಳ್ಳವರಾಗಿದ್ದು ದೇವರ ವಾಕ್ಯವನ್ನು ಶುದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು. 12ಹೀಗಿರಲಾಗಿ ಅವರಲ್ಲಿ ಬಹಳ ಮಂದಿ ನಂಬಿದರು; ಅದಲ್ಲದೆ ಕುಲೀನರಾದ ಗ್ರೀಕ್‍ಹೆಂಗಸರಲ್ಲಿಯೂ ಗಂಡಸರಲ್ಲಿಯೂ ಅನೇಕರು ನಂಬಿದರು. 13ಆದರೆ ಪೌಲನು ಬೆರೋಯದಲ್ಲಿಯೂ ದೇವರ ವಾಕ್ಯವನ್ನು ಪ್ರಸಿದ್ಧಿಪಡಿಸುತ್ತಾನೆಂಬ ವರ್ತಮಾನವು ಥೆಸಲೋನಿಕದ ಯೆಹೂದ್ಯರಿಗೆ ತಿಳಿದುಬಂದಾಗ ಅವರು ಅಲ್ಲಿಗೂ ಬಂದು ಜನರ ಗುಂಪುಗಳನ್ನು ರೇಗಿಸಿ ಕಲಕಿದರು. 14ಕೂಡಲೇ ಸಹೋದರರು ಪೌಲನನ್ನು ಸಮುದ್ರದ ತನಕ ಹೋಗುವದಕ್ಕೆ ಕಳುಹಿಸಿಕೊಟ್ಟರು. ಆದರೆ ಸೀಲನೂ ತಿಮೊಥೆಯನೂ ಅಲ್ಲೇ ನಿಂತರು. 15ಪೌಲನನ್ನು ಸಾಗಕಳುಹಿಸಿದವರು ಅವನನ್ನು ಅಥೇನೆಯವರೆಗೂ ಕರೆದುಕೊಂಡುಹೋಗಿ – ಸೀಲನನ್ನೂ ತಿಮೊಥೆಯನನ್ನೂ ಕೂಡಿದ ಮಟ್ಟಿಗೆ ಬೇಗ ನನ್ನ ಬಳಿಗೆ ಬರಹೇಳಿರಿ ಎಂಬ ಅಪ್ಪಣೆಯನ್ನು ಅವನಿಂದ ಹೊಂದಿ ಹೊರಟುಬಂದರು.
 
ಅಥೇನೆಯಲ್ಲಿ
16ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣದಲ್ಲಿ ಎಲ್ಲೆಲ್ಲಿಯೂ ವಿಗ್ರಹಗಳೇ ಇರುವದನ್ನು ನೋಡಿ ಅವನ ಮನಸ್ಸು ಅವನೊಳಗೆ ಕುದಿಯಿತು. 17ಆದದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಮತ್ತು ಯೆಹೂದ್ಯ ಮತಾವಲಂಬಿಗಳ ಸಂಗಡಲೂ ಪ್ರತಿದಿನ ಪೇಟೆಯಲ್ಲಿ ಕಂಡುಬಂದವರ ಸಂಗಡಲೂ ವಾದಿಸಿದನು. 18ಇದಲ್ಲದೆ ಎಪಿಕೂರಿಯರು ಸ್ತೋಯಿಕರು ಎಂಬ ತತ್ವವಿಚಾರಕರಲ್ಲಿ ಕೆಲವರು ಅವನ ಸಂಗಡ ಚರ್ಚೆಮಾಡಿದರು. ಅವರಲ್ಲಿ ಕೆಲವರು – ಈ ಮಾತಾಳಿ ಏನು ಹೇಳಬೇಕೆಂದಿದ್ದಾನೆ? ಅಂದರು. ಅವನು ಯೇಸುವಿನ ವಿಷಯವಾಗಿಯೂ ಸತ್ತವರು ಎದ್ದುಬರುವರೆಂಬುವ ವಿಷಯವಾಗಿಯೂ ಸಾರುತ್ತಿದ್ದದರಿಂದ – ಇವನು ಅನ್ಯದೇಶದ ದೈವಗಳನ್ನು ಪ್ರಸಿದ್ಧಿಪಡಿಸುವವನಾಗಿ ತೋರುತ್ತಾನೆಂದು ಬೇರೆ ಕೆಲವರು ಹೇಳಿದರು. 19ಅವರು ಅವನನ್ನು ಹಿಡಿದು ಅರಿಯೊಪಾಗಕ್ಕೆ ಕರೆದುಕೊಂಡು ಹೋಗಿ – ನೀನು ಹೇಳುವ ಈ ನೂತನತರವಾದ ಉಪದೇಶವನ್ನು ನಾವು ತಿಳಿಯಬಹುದೇ? 20ಅಪೂರ್ವವಾದ ಸಂಗತಿಗಳನ್ನು ನಮಗೆ ಶ್ರುತಪಡಿಸುತ್ತೀಯಲ್ಲಾ; ಆದಕಾರಣ ಅವೇನಿದ್ದಾವು ತಿಳಿಯಬೇಕೆಂದು ನಮಗೆ ಅಪೇಕ್ಷೆಯದೆ ಅಂದರು. 21ಅಥೇನೆಯರೂ ಅಲ್ಲಿ ವಾಸವಾಗಿದ್ದ ಪರಸ್ಥಳದವರೂ ಹೊಸ ಹೊಸ ಸಂಗತಿಗಳನ್ನು ಹೇಳುವದಕ್ಕೂ ಕೇಳುವದಕ್ಕೂ ಹೊರತು ಬೇರೆ ಯಾವದಕ್ಕೂ ಸಮಯ ಕೊಡುತ್ತಿರಲಿಲ್ಲ. 22ಪೌಲನು ಅರಿಯೋಪಾಗದ ಮಧ್ಯದಲ್ಲಿ ನಿಂತುಕೊಂಡು ಹೇಳಿದ್ದೇನಂದರೆ –
ಅಥೇನೆಯ ಜನರೇ, ನೀವು ಎಲ್ಲಾದರಲ್ಲೂ ಅತಿಭಕ್ತಿವಂತರೆಂದು ನನಗೆ ತೋರುತ್ತದೆ. 23ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನೀವು ಪೂಜಿಸುವ ದೇವತಾಪ್ರತಿಮೆಗಳನ್ನು ಚೆನ್ನಾಗಿ ನೋಡುತ್ತಾ ಇದ್ದಾಗ ಒಂದು ಬಲಿಪೀಠವು ನನ್ನ ಕಣ್ಣಿಗೆ ಬಿತ್ತು; ಅದರ ಮೇಲೆ ತಿಳಿಯದ ದೇವರಿಗೆ ಎಂದು ಬರೆದಿತ್ತು. ಆದಕಾರಣ ನೀವು ಯಾವದನ್ನು ತಿಳಿಯದೆ ಪೂಜಿಸುತ್ತೀರೋ ಅದನ್ನೇ ನಿಮಗೆ ತಿಳಿಯಪಡಿಸುತ್ತೇನೆ, ಕೇಳಿರಿ. 24ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವದರಿಂದ ಆತನು ಕೈಯಿಂದ ಕಟ್ಟಿರುವ ಗುಡಿಗಳಲ್ಲಿ ವಾಸಮಾಡುವವನಲ್ಲ; 25ತಾನೇ ಎಲ್ಲರಿಗೂ ಜೀವಶ್ವಾಸ ಮುಂತಾದದ್ದೆಲ್ಲವನ್ನೂ ಕೊಡುವವನಾಗಿರಲಾಗಿ ಕೊರತೆಯಿದ್ದವನಂತೆ ಮನುಷ್ಯರ ಕೈಗಳಿಂದ ಸೇವೆಹೊಂದುವವನೂ ಅಲ್ಲ. 26ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ ಅವರವರು ಇರತಕ್ಕ ಕಾಲಗಳನ್ನೂ ಅವರವರ ನಿವಾಸಗಳ ಮೇರೆಗಳನ್ನೂ ನಿಷ್ಕರ್ಷಿಸಿ ಭೂಮಂಡಲದಲ್ಲೆಲ್ಲಾ ವಾಸಮಾಡಿ 27ಒಂದು ವೇಳೆ ಅವರು ತಡವಾಡಿ ಕಂಡುಕೊಂಡಾರೇನೋ ಎಂದು ತನ್ನನ್ನು ಹುಡುಕುವವರನ್ನಾಗಿ ಮಾಡಿದನು. ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ. 28ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ, ಇರುತ್ತೇವೆ. ನಿಮ್ಮ ಕವಿಗಳಲ್ಲಿಯೂ ಕೆಲವರು – ನಾವು ಆತನ ಸಂತಾನದವರೇ ಎಂಬದಾಗಿ ಹೇಳಿದ್ದಾರೆ. 29ನಾವು ದೇವರ ಸಂತಾನದವರಾಗಿದ್ದ ಮೇಲೆ ದೈವವು ಮನುಷ್ಯನ ಶಿಲ್ಪವಿದ್ಯೆಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲುಗಳಿಗೆ ಸಮಾನವೆಂದು ನಾವು ಭಾವಿಸಬಾರದು. 30ಆ ಅಜ್ಞಾನಕಾಲಗಳನ್ನು ದೇವರು ಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ನಾಲ್ಕು ದಿಕ್ಕಿನಲ್ಲಿರುವ ಮನುಷ್ಯರೆಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪ್ಪಣೆಕೊಡುತ್ತಾನೆ. 31ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು.
32ಸತ್ತವರು ಎದ್ದುಬರುವ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯಮಾಡಿದರು; ಬೇರೆ ಕೆಲವರು – ನೀನು ಈ ವಿಷಯದಲ್ಲಿ ಹೇಳುವದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಅಂದರು. 33ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು. 34ಕೆಲವರು ಅವನನ್ನು ಅಂಟಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೊಪಾಗದ ಸಭೆಯವನಾದ ದಿಯೊನುಸ್ಯನೂ ದಾಮರಿಯೆಂಬಾಕೆಯೂ ಇನ್ನು ಕೆಲವರೂ ಇದ್ದರು.
 
ಪೌಲನು ಎಫೆಸದಲ್ಲಿ
19 ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮಲೆನಾಡಿನಲ್ಲಿ ಸಂಚಾರಮಾಡಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡು – 2ನೀವು ನಂಬಿದಾಗ ಪವಿತ್ರಾತ್ಮವರವನ್ನು ಹೊಂದಿದಿರೋ ಎಂದು ಅವರನ್ನು ಕೇಳಲು ಅವರು ಅವನಿಗೆ – ಇಲ್ಲ, ಪವಿತ್ರಾತ್ಮವರವು ಉಂಟೆಂಬದನ್ನೇ ನಾವು ಕೇಳಲಿಲ್ಲ ಅಂದರು. 3ಅವನು – ನೀವು ಯಾವದನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ ಎಂದು ಕೇಳಿದ್ದಕ್ಕೆ ಅವರು – ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡೆವು ಅಂದರು. 4ಅದಕ್ಕೆ ಪೌಲನು – ಯೋಹಾನನು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರವಾತನಲ್ಲಿ ಅಂದರೆ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬದಾಗಿ ಜನರಿಗೆ ಹೇಳಿದನು ಎಂದು ಹೇಳಲು 5ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು. 6ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮವರವು ಅವರ ಮೇಲೆ ಬಂತು; ಅವರು ನಾನಾ ಭಾಷೆಗಳನ್ನಾಡಿದರು, ಪ್ರವಾದಿಸಿದರು. 7ಅವರು ಸುಮಾರು ಹನ್ನೆರಡು ಮಂದಿ ಗಂಡಸರು.
8ಪಟ್ಟಣದಲ್ಲಿ ಪೌಲನು ಸಭಾಮಂದಿರದೊಳಗೆ ಹೋಗಿ ಮೂರು ತಿಂಗಳು ಅಲ್ಲೇ ದೇವರ ರಾಜ್ಯದ ವಿಷಯಗಳನ್ನು ಕುರಿತು ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತಾಡಿದನು. 9ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು. 10ಇದು ಎರಡು ವರುಷಗಳವರೆಗೂ ನಡೆದದ್ದರಿಂದ ಆಸ್ಯಸೀಮೆಯಲ್ಲಿ ವಾಸವಾಗಿದ್ದ ಯೆಹೂದ್ಯರೂ ಗ್ರೀಕರೂ ಎಲ್ಲರೂ ಕರ್ತನ ವಾಕ್ಯವನ್ನು ಕೇಳಿದರು.
11ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದದರಿಂದ 12ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ ಉಡಿವಸ್ತ್ರಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರವರ ರೋಗಗಳು ವಾಸಿಯಾದವು, ದೆವ್ವಗಳೂ ಬಿಟ್ಟುಹೋದವು. 13ದೆವ್ವಬಿಡಿಸುವವರೆನಿಸಿಕೊಂಡು ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದೆವ್ವಹಿಡಿದವರ ಮೇಲೆ – ಪೌಲನು ಸಾರುವ ಯೇಸುವಿನ ಆಣೆ ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವದಕ್ಕೆ ತೊಡಗಿದರು. 14ಮಹಾಯಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳು ಹಾಗೆ ಮಾಡುತ್ತಿದ್ದರು. 15ಆದರೆ ದೆವ್ವವು ಅವರಲ್ಲಿ ಇಬ್ಬರಿಗೆ – ಯೇಸುವಿನ ಗುರುತು ನನಗುಂಟು, ಪೌಲನನ್ನೂ ಬಲ್ಲೆನು, ನೀವಾದರೆ ಯಾರು? ಎಂದು ಹೇಳಿತು; 16ಮತ್ತು ದೆವ್ವಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಬಿದ್ದು ಅವರಿಬ್ಬರನ್ನೂ ಸೋಲಿಸಿ ಬಲಾತ್ಕರಿಸಿದ್ದರಿಂದ ಅವರು ಬೆತ್ತಲೆಯಾಗಿಯೂ ಗಾಯವುಳ್ಳವರಾಗಿಯೂ ಆ ಮನೆಯೊಳಗಿಂದ ಓಡಿಹೋದರು. 17ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರಿಗೆ ಭಯಹಿಡಿಯಿತು. 18ಮತ್ತು ಕರ್ತನಾದ ಯೇಸುವಿನ ಹೆಸರು ಪ್ರಖ್ಯಾತಿಗೆ ಬಂತು. ಆತನನ್ನು ನಂಬಿದವರಲ್ಲಿ ಅನೇಕರು ಬಂದು ತಮ್ಮ ಕೃತ್ಯಗಳನ್ನು ಒಪ್ಪಿಕೊಂಡು ತಿಳಿಸಿದರು. 19ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಪುಸ್ತಕಗಳನ್ನು ತಂದು ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಕ್ರಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳೀ ನಾಣ್ಯ ಆಯಿತೆಂದು ತಿಳಿದುಕೊಂಡರು. 20ಈ ರೀತಿಯಾಗಿ ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.
21ಈ ಸಂಗತಿಗಳು ಆದ ಮೇಲೆ ಪೌಲನು ತಾನು ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಸಂಚಾರಮಾಡಿ ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸಿನಲ್ಲಿ ಉದ್ದೇಶಿಸಿ ಅಲ್ಲಿಗೆ ಹೋದ ಮೇಲೆ ರೋಮಾಪುರವನ್ನು ಸಹ ನೋಡಬೇಕೆಂದು ಹೇಳಿದನು. 22ಆದರೆ ಅವನು ತನಗೆ ಸೇವೆಮಾಡುವವರಲ್ಲಿ ಇಬ್ಬರಾದ ತಿಮೊಥೆಯನನ್ನೂ ಎರಸ್ತನನ್ನೂ ಮಕೆದೋನ್ಯಕ್ಕೆ ಕಳುಹಿಸಿ ತಾನು ಆಸ್ಯಸೀಮೆಯಲ್ಲಿ ಕೆಲವು ಕಾಲ ನಿಂತನು.
 
 
ಎಫೆಸದಲ್ಲಿ ಗಲಭೆ ಉಂಟಾದದ್ದು
23ಆ ಕಾಲದಲ್ಲಿ ಕ್ರಿಸ್ತ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು. 24ಹೇಗಂದರೆ ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಅರ್ತೆಮೀದೇವಿಯ ಗುಡಿಯಂತೆ ಸಣ್ಣ ಸಣ್ಣ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸಬಿನವರಿಗೆ ಬಹಳ ಕೆಲಸಕೊಡುತ್ತಿದ್ದನು. 25ಅವನು ಅವರನ್ನೂ ಆ ಕಸಬಿನ ಸಂಬಂಧವಾದ ಕೆಲಸದವರನ್ನೂ ಒಟ್ಟಿಗೆ ಕರಿಸಿ ಅವರಿಗೆ – ಜನರೇ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾಗುತ್ತದೆಂದು ನೀವು ಬಲ್ಲಿರಿ. 26ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಸ್ವಲ್ಪ ಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬದನ್ನು ನೀವು ನೋಡುತ್ತೀರಿ, ಕೇಳುತ್ತೀರಿ. 27ಇದರಿಂದ ನಮ್ಮ ಉದ್ಯೋಗಕ್ಕೆ ಅಪಕೀರ್ತಿ ಬರುವ ಹಾಗಿರುವದಲ್ಲದೆ ಅರ್ತೆಮೀ ಮಹಾದೇವಿಯ ದೇವಸ್ಥಾನವು ಗಣನೆಗೆ ಬಾರದೆಹೋಗುವ ಹಾಗೆಯೂ ಎಲ್ಲಾ ಆಸ್ಯಸೀಮೆಯೂ ಲೋಕವೂ ಪೂಜಿಸುವ ಈ ದೇವಿಯ ವೈಭವಕ್ಕೆ ಹಾನಿಬರುವ ಹಾಗೆಯೂ ಗಂಡಾಂತರವುಂಟೆಂದು ಹೇಳಿದನು. 28ಅವರು ಈ ಮಾತುಗಳನ್ನು ಕೇಳಿ ಕೋಪಾಕ್ರಾಂತರಾಗಿ – ಎಫೆಸದವರ ಅರ್ತೆಮೀದೇವಿ ಮಹಾದೇವಿ ಎಂದು ಆರ್ಭಟಿಸಿದರು. 29ಆಗ ಊರೆಲ್ಲಾ ಗಲಿಬಿಲಿಯಾಯಿತು. ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನೂ ಅರಿಸ್ತಾರ್ಕನನ್ನೂ ಜನರು ಹಿಡಿದುಕೊಂಡು ಒಗ್ಗಟ್ಟಾಗಿ ನಾಟಕಶಾಲೆಯೊಳಗೆ ನುಗ್ಗಿದರು. 30ಪೌಲನು ಜನರೊಳಗೆ ಹೋಗಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ. 31ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಅವನಿಗೆ ಸ್ನೇಹಿತರಾಗಿದ್ದದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ – ನೀನು ನಾಟಕಶಾಲೆಯೊಳಗೆ ಹೋಗಿ ನಿನ್ನನ್ನು ಅಪಾಯಕ್ಕೆ ಗುರಿಮಾಡಿಕೊಳ್ಳಬೇಡ ಎಂದು ಬೇಡಿಕೊಂಡರು. 32ಸಭೆಯು ಗಲಿಬಿಲಿಯಾಯಿತು, ಮತ್ತು ಹೆಚ್ಚಾದ ಜನರಿಗೆ ತಾವು ಕೂಡಿ ಬಂದಿದ್ದ ಕಾರಣವು ಗೊತ್ತಿರಲಿಲ್ಲ. ಕೆಲವರು ಒಂದು ಬಗೆಯಾಗಿ ಮತ್ತೆ ಕೆಲವರು ಇನ್ನೊಂದು ಬಗೆಯಾಗಿ ಕೂಗುತ್ತಿದ್ದರು. 33ಯೆಹೂದ್ಯರು ಅಲೆಕ್ಸಾಂದ್ರನನ್ನು ಮುಂದಕ್ಕೆ ನೂಕಲು ಗುಂಪಿನಲ್ಲಿ ಕೆಲವರು ಅವನಿಗೆ ಸೂಚನೆ ಕೊಟ್ಟರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಕೂಡಿದ್ದ ಜನರಿಗೆ ಪ್ರತಿವಾದ ಮಾಡಬೇಕೆಂದಿದ್ದನು. 34ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ – ಎಫೆಸದವರ ಅರ್ತೆಮೀದೇವಿ ಮಹಾದೇವಿ ಎಂದು ಎರಡು ಗಂಟೆ ಹೊತ್ತು ಕೂಗಿದರು. 35ಕಡೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ – ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ ಪಾಲಕರಾಗಿದ್ದಾರೆಂಬದನ್ನು ತಿಳಿಯದಿರುವ ಮನುಷ್ಯನು ಇದ್ದಾನೇ? 36ಈ ಸಂಗತಿ ಅಲ್ಲವೆನ್ನುವದಕ್ಕೆ ಯಾರಿಂದಲೂ ಆಗದಿರುವದರಿಂದ ನೀವು ಶಾಂತಿಯಿಂದಿರಬೇಕು; ದುಡುಕಿನಿಂದ ಏನೂ ಮಾಡಬಾರದು. 37ನೀವು ತಂದಿರುವ ಈ ಮನುಷ್ಯರು ದೇವಸ್ಥಾನದಲ್ಲಿ ಕಳ್ಳತನ ಮಾಡುವವರಲ್ಲ, ನಮ್ಮ ದೇವಿಯನ್ನು ದೂಷಿಸುವವರೂ ಅಲ್ಲ. 38ಹೀಗಿರುವದರಿಂದ ದೇಮೇತ್ರಿಯನಿಗೂ ಅವನ ಪಕ್ಷವನ್ನು ಹಿಡಿದಿರುವ ಕಸಬಿನವರಿಗೂ ಯಾವನ ಮೇಲಾದರೂ ಒಂದು ವ್ಯವಹಾರವಿದ್ದರೆ ನ್ಯಾಯಸ್ಥಾನಗಳುಂಟು, ಅಧಿಪತಿಗಳಿದ್ದಾರೆ, ಒಬ್ಬರ ಮೇಲೊಬ್ಬರು ವ್ಯಾಜ್ಯವಾಡಿಕೊಳ್ಳಲಿ. 39ಏನಾದರೂ ಹೆಚ್ಚು ವಿಚಾರಣೆ ಬೇಕಾದರೆ ಅದು ನ್ಯಾಯವಾಗಿ ನೆರೆದ ಸಭೆಯಲ್ಲಿ ತೀರ್ಮಾನಿಸಲ್ಪಡಬೇಕು. 40ಈ ದಿನದಲ್ಲಿ ನ್ಯಾಯವಾದ ಕಾರಣವಿಲ್ಲದೆ ನೆರೆದ ಕೂಟದ ವಿಷಯದಲ್ಲಿ ಇದು ಒಂದು ದಂಗೆ ಎಂಬದಾಗಿ ನಮ್ಮ ಮೇಲೆ ತಪ್ಪುಹೊರಿಸುವದಕ್ಕೆ ಆಸ್ಪದವಾಯಿತು. ಈ ದೊಂಬಿಯನ್ನು ಕುರಿತು ವಿಚಾರಣೆನಡೆದರೆ ನಮ್ಮಿಂದ ಉತ್ತರಕೊಡುವದಕ್ಕೆ ಆಗುವದೇ ಇಲ್ಲ ಎಂದು ಹೇಳಿದನು. 41ಈ ಮಾತುಗಳನ್ನು ಹೇಳಿ ಸಭೆಯನ್ನು ಮುರಿದನು.
 
ಪೌಲನು ಮಕೆದೋನ್ಯಕ್ಕೂ ಗ್ರೀಸ್‍ದೇಶಕ್ಕೂ ಹೋದದ್ದು
 20 ಗದ್ದಲವು ನಿಂತ ತರುವಾಯ ಪೌಲನು ಶಿಷ್ಯರನ್ನು ಕೂಡ ಕರೆಸಿ ಧೈರ್ಯಗೊಳಿಸಿ ಅವರ ಅಪ್ಪಣೆ ತೆಗೆದುಕೊಂಡು ಮಕೆದೋನ್ಯಕ್ಕೆ ಹೊರಟನು. 2ಆ ಸೀಮೆಯಲ್ಲಿ ಸಂಚಾರಮಾಡಿ ಅಲ್ಲಿಯವರನ್ನು ಅನೇಕ ಮಾತುಗಳಿಂದ ಧೈರ್ಯಪಡಿಸಿ ಗ್ರೀಸ್ ದೇಶಕ್ಕೆ ಬಂದನು. 3ಅಲ್ಲಿ ಮೂರು ತಿಂಗಳು ಕಳೆದ ಮೇಲೆ ಸಿರಿಯ ದೇಶಕ್ಕೆ ಸಮುದ್ರಮಾರ್ಗವಾಗಿ ಹೋಗಬೇಕೆಂದಿದ್ದಾಗ ಅವನಿಗೆ ವಿರುದ್ಧವಾಗಿ ಯೆಹೂದ್ಯರಲ್ಲಿ ಒಳಸಂಚು ಹುಟ್ಟಿದ್ದರಿಂದ ಅವನು ಮಕೆದೋನ್ಯದ ಮೇಲೆ ಹಿಂತಿರುಗಿ ಹೋಗುವದಕ್ಕೆ ತೀರ್ಮಾನಮಾಡಿದನು. 4ಪುರ್ರನ ಮಗನಾದ ಬೆರೋಯಪಟ್ಟಣದ ಸೋಪತ್ರನೂ ಥೆಸಲೋನಿಕದವರಲ್ಲಿ ಅರಿಸ್ತಾರ್ಕನೂ ಸೆಕುಂದನೂ ದೆರ್ಬೆಪಟ್ಟಣದ ಗಾಯನೂ ತಿಮೊಥೆಯನೂ ಆಸ್ಯಸೀಮೆಯವರಲ್ಲಿ ತುಖಿಕನೂ ತ್ರೊಫಿಮನೂ ಆಸ್ಯಸೀಮೆಯವರೆಗೆ ಅವನ ಜೊತೆಯಲ್ಲಿ ಹೋದರು. 5ಇವರು ಮುಂಚಿತವಾಗಿ ಹೋಗಿ ನಮಗೋಸ್ಕರ ತ್ರೋವದಲ್ಲಿ ಕಾದುಕೊಂಡರು. 6ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿವಸಗಳನ್ನು ಪೂರೈಸಿದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿವಸದಲ್ಲಿ ತ್ರೋವದಲ್ಲಿ ಬಂದು ಅವರನ್ನು ಸೇರಿದೆವು. ಅಲ್ಲಿ ಏಳು ದಿವಸಗಳಿದ್ದೆವು.
 
ತ್ರೋವದಲ್ಲಿ ಯೂತಿಖನು ಎಬ್ಬಿಸಲ್ಪಟ್ಟಿದ್ದು
7ವಾರದ ಮೊದಲನೆಯ ದಿವಸದಲ್ಲಿ ನಾವು ರೊಟ್ಟಿ ಮುರಿಯುವ ನಿಯಮಕ್ಕಾಗಿ ಕೂಡಿಬಂದಾಗ ಮರುದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಪ್ರಸಂಗಿಸುತ್ತಾ ಸರಿಹೊತ್ತಿನವರೆಗೂ ಉಪನ್ಯಾಸವನ್ನು ನಡಿಸಿದನು. 8ನಾವು ಕೂಡಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳಿದ್ದವು. 9ಯೂತಿಖನೆಂಬ ಒಬ್ಬ ಯೌನವಸ್ಥನು ಕಿಟಿಕಿಯಲ್ಲಿ ಕೂತುಕೊಂಡು ಗಾಢನಿದ್ರೆಯಿಂದ ತೂಕಡಿಸಿದನು. ಪೌಲನು ಇನ್ನೂ ಪ್ರಸಂಗ ಮಾಡುತ್ತಾ ಇದ್ದಾಗ ಆ ಯೌವನಸ್ಥನು ನಿದ್ರೆಯಿಂದ ತೂಕಡಿಕೆ ಹೆಚ್ಚಾಗಿ ಮೂರನೆಯ ಅಂತಸ್ತಿನಿಂದ ಕೆಳಕ್ಕೆ ಬಿದ್ದನು; ಅವನನ್ನು ಎತ್ತಿನೋಡುವಾಗ ಸತ್ತಿದ್ದನು. 10ಆದರೆ ಪೌಲನು ಇಳಿದುಹೋಗಿ ಅವನ ಮೇಲೆ ಬಿದ್ದು ತಬ್ಬಿಕೊಂಡು – ಗೋಳಾಡಬೇಡಿರಿ, ಅವನ ಪ್ರಾಣ ಅವನಲ್ಲಿ ಅದೆ ಎಂದು ಹೇಳಿದನು. 11ಆಗ ಅವನು ಮೇಲಕ್ಕೆ ಹೋಗಿ ರೊಟ್ಟಿ ಮುರಿದು ಊಟಮಾಡಿ ಬಹಳ ಹೊತ್ತು ಬೆಳಗಾಗುವ ತನಕ ಸಲ್ಲಾಪಮಾಡಿ ಹಾಗೆ ಹೊರಟುಹೋದನು. 12ಅವರು ಜೀವಿತನಾದ ಆ ಹುಡುಗನನ್ನು ಕರೆದುಕೊಂಡು ಬರಲು ಅವರಿಗೆ ಬಹಳ ಆದರಣೆ ಉಂಟಾಯಿತು.ಮಧ್ಯಪ್ರವೇಶಿಸಿದ್ದು

Related Quiz Articles